ಉ.ಕನ್ನಡಕ್ಕಿಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ
ಒಪ್ಪಿಗೆ ಕೊಡದ ಆರ್ಥಿಕ ಇಲಾಖೆ, ಮತ್ತೆ ಪ್ರಸ್ತಾವನೆ ಸಲ್ಲಿಸಲು ಕ್ರಮ: ಸಚಿವ ಸುಧಾಕರ್, ಲಿಖಿತ ಉತ್ತರಕ್ಕೆ ರೂಪಾಲಿ ನಾಯ್ಕ್ ಆಕ್ರೋಶ
ವಿಧಾನಸಭೆ(ಸೆ.16): ಕಾರವಾರ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಅನುಮತಿ ದೊರೆತರೆ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸದನಕ್ಕೆ ಗೈರು ಹಾಜರಾಗಿರುವ ಸುಧಾಕರ್ ನೀಡಿರುವ ಲಿಖಿತ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ್, ‘ಕ್ಷೇತ್ರ ಹಾಗೂ ಜಿಲ್ಲೆಯ ಜನತೆ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವರು ಅನಾರೋಗ್ಯದ ಕಾರಣ ನೀಡಿ ಸದನಕ್ಕೆ ಗೈರು ಹಾಜರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೇರೊಬ್ಬರಿಗಾದರೂ ಉತ್ತರ ನೀಡುವ ಜವಾಬ್ದಾರಿಯನ್ನು ವಹಿಸಬೇಕಿತ್ತು. ಈಗ ಅವರು ನೀಡಿರುವ ಲಿಖಿತ ಉತ್ತರಕ್ಕೆ ಉಪ ಪ್ರಶ್ನೆ ಕೇಳಲು ಅವಕಾಶವಿಲ್ಲದಂತಾಗಿದೆ’ ಎಂದು ಕಿಡಿಕಾರಿದರು.
ಉತ್ತರ ಕನ್ನಡದಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ದೇವರೇ ಬದುಕಿಸಬೇಕು..!
ಈಗ ಅವರಿಗೆ ಅನಾರೋಗ್ಯ ಸಮಸ್ಯೆಯಿದೆ. ನಾಳೆ ಅವರು ಉತ್ತರ ನೀಡುವಾಗ ನಮಗೆ ಅನಾರೋಗ್ಯ ಉಂಟಾಗಬಹುದು. ಇದೇ ರೀತಿ ಮುಂದುವರೆದರೆ ನಮ್ಮ ಭಾಗದ ಜನರ ಅನಾರೋಗ್ಯ ಸಮಸ್ಯೆಗಳನ್ನು ಕೇಳುವವರಾರಯರು ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಥಿಕಯಿಂದ ಒಪ್ಪಿಗೆ ಸಿಕ್ಕಿಲ್ಲ- ಸುಧಾಕರ್:
ಸುಧಾಕರ್ ಅವರ ಲಿಖಿತ ಉತ್ತರದಲ್ಲಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಆರ್ಥಿಕ ಹೊರೆ ಬಗ್ಗೆ ವರದಿ ಪಡೆದು ಆರ್ಥಿಕ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಹೆಚ್ಚಿದ ಕೂಗು..!
ಇನ್ನು ಈ ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ಸೇವೆ ದೊರೆಯುವಂತೆ ಮಾಡಲು ಜಿಲ್ಲಾ ಆಸ್ಪತ್ರೆಗೆ ಕಾರ್ಡಿಯಾಲಜಿ, ನ್ಯೂರೋ ಸರ್ಜರಿ, ಪಿಡಿಯಾಟ್ರಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಯುರಾಲಜಿ, ನೆಫೆä್ರೕಲಾಜಿ, ನ್ಯೂರಾಲಜಿ ತಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ನೆಫೆä್ರೕಲಾಜಿ ವಿಭಾಗದ ಹುದ್ದೆಗೆ ಅಭ್ಯರ್ಥಿ ಸಂದರ್ಶನಕ್ಕೆ ಬಂದಿದ್ದು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳಿಗೆ ಯಾರೂ ಬಂದಿಲ್ಲ. ಹೀಗಾಗಿ ನ್ಯೂರಾಲಜಿ (ನರರೋಗ) ಹಾಗೂ ಕಾರ್ಡಿಯಾಲಜಿಗೆ (ಹೃದ್ರೋಗ) ತಜ್ಞರನ್ನು ತಾತ್ಕಾಲಿಕವಾಗಿ ಒದಗಿಸುವಂತೆ ನಿಮ್ಹಾನ್ಸ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯವರನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.
ಗೈರಿನಲ್ಲಿ ಬೇರೊಬ್ಬರಿಗೆ ಹೊಣೆ ನೀಡಿ: ಸ್ಪೀಕರ್
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತಮ್ಮ ಗೈರಿನಲ್ಲಿ ಬೇರೆ ಸಚಿವರಿಗೆ ಉತ್ತರ ನೀಡುವ ಜವಾಬ್ದಾರಿ ವಹಿಸದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು. ಅವರ ಸಿಬ್ಬಂದಿ ನನ್ನ ಕಚೇರಿಗೆ ಆಗಮಿಸಿ ಸಚಿವರು ಅನಾರೋಗ್ಯದಿಂದ ಸದನಕ್ಕೆ ಬರಲಾಗುತ್ತಿಲ್ಲ ಎಂದು ಹೇಳಿದ್ದರು. ಈ ವೇಳೆ ಕೂಡಲೇ ಅವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೋತ್ತರದ ಉತ್ತರಗಳನ್ನು ಬೇರೆ ಸಚಿವರಿಗೆ ನೀಡಿ ಉತ್ತರ ಕೊಡಿಸಲು ವ್ಯವಸ್ಥೆ ಮಾಡಿ ಎಂದು ಹೇಳಿದ್ದೆ. ಅವರ ಇಲಾಖೆಗೆ ಸಂಬಂಧಿಸಿದ ಮೂರ್ನಾಲ್ಕು ವಿಷಯ ಬಂದಿದ್ದರೂ ಯಾವೊಬ್ಬ ಸಚಿವರಿಗೂ ಜವಾಬ್ದಾರಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.