ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಹೆಚ್ಚಿದ ಕೂಗು..!
ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸಲು ಸುಸಜ್ಜಿತ ಆಸ್ಪತ್ರೆ ಇಲ್ಲದೆ ಜನರ ಜೀವಕ್ಕೆ ಮಾತ್ರ ಬೆಲೆ ಇಲ್ಲದಂತಾಗಿದೆ. ಜಿಲ್ಲಾದ್ಯಂತ ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೂಗು ಕೇಳಿ ಬರುತ್ತಲೇ ಇದೆ.
ವಸಂತಕುಮಾರ ಕತಗಾಲ
ಕಾರವಾರ(ಸೆ.14): ಉತ್ತರ ಕನ್ನಡ ಜಿಲ್ಲೆ ಕಾಡು, ಕಡಲು, ಮಲೆನಾಡು, ಬಯಲುಸೀಮೆ ಹೀಗೆ ಭೌಗೋಳಿಕವಾಗಿ ವಿಶಿಷ್ಟವಾಗಿದೆ. ವೈವಿಧ್ಯಮಯ ಜನಾಂಗ ಇದೆ. ನೈಸರ್ಗಿಕವಾಗಿ ಸಮೃದ್ಧವಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸಲು ಸುಸಜ್ಜಿತ ಆಸ್ಪತ್ರೆ ಇಲ್ಲದೆ ಜನರ ಜೀವಕ್ಕೆ ಮಾತ್ರ ಬೆಲೆ ಇಲ್ಲದಂತಾಗಿದೆ. ಜಿಲ್ಲಾದ್ಯಂತ ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೂಗು ಕೇಳಿ ಬರುತ್ತಲೇ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ! ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೆಚ್ಚು ಕಡಿಮೆ ಪ್ರತಿಯೊಬ್ಬರಿಂದಲೂ ಕೇಳಿ ಬರುವ ಬೇಡಿಕೆ. ಮೊದ ಮೊದಲು ಅಪಘಾತ, ಆಕಸ್ಮಿಕವಾಗಿ ಜನತೆ ಪ್ರಾಣ ಕಳೆದುಕೊಂಡಾಗೆಲ್ಲ ಕೇಳಿ ಬರುತ್ತಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಈಗ ಪ್ರತಿ ದಿನದ ಸುಪ್ರಭಾತವಾಗಿದೆ.
ಈಚೆಗಂತೂ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನವೇ ನಡೆಯಿತು. ಟ್ವಿಟರ್, ಫೇಸಬುಕ್, ಇನ್‌ಸ್ಟಾಗ್ರಾಮ…, ವಾಟ್ಸ್‌ಪ್‌ಗಳಲ್ಲಿ ಪೋಸ್ಟುಗಳು, ಕಾಮೆಂಟುಗಳು ಭಾರಿ ಸಂಖ್ಯೆಯಲ್ಲಿ ಹರಿದುಬಂದವು. ಎಲ್ಲೆಡೆ ವೈರಲ್ ಆಯಿತು.
Big 3 Impact: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ, ಗಣಿನಾಡಿನ ಜನತೆಯ ಕನಸು ನನಸು
ರಕ್ತದಲ್ಲಿ ಪತ್ರವನ್ನೂ ಬರೆದು ಕಳುಹಿಸಲಾಯಿತು.
ಜಿಲ್ಲೆಯ ಶಾಸಕರು ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆಗಳನ್ನು ಎದುರಿಸುವಂತಾಗಿದೆ. ಜತೆಗೆ ಉತ್ತರ ಕನ್ನಡಕ್ಕೆ ಯಾವುದೇ ಸಚಿವರು ಬರಲಿ ಇದೊಂದು ಪ್ರಶ್ನೆಗೆ ಉತ್ತರವನ್ನು ಹೇಳಲೇಬೇಕು. ಈ ಬಗ್ಗೆ ಜನತೆಯಿಂದ ಭಾರಿ ಒತ್ತಡ ಉಂಟಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ತಜ್ಞರಿಂದ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ತಜ್ಞರು ಯಾರು, ವರದಿ ಯಾವಾಗ ಸಿದ್ಧಪಡಿಸುತ್ತಾರೆ. ಯಾವಾಗ ನೀಡುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇಂತಹ ಉತ್ತರವನ್ನು ಸಿಎಂ ಹೇಳಿದರೆ ಅಥವಾ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿದೆಯೇ ಎನ್ನುವುದನ್ನು ಜಿಲ್ಲೆಯ ಜನತೆಯ ಮುಂದೆ ಇಡಬೇಕಾಗಿದೆ.
ಹೃದಯದ ಚಿಕಿತ್ಸೆ ಸಾಧ್ಯವಿಲ್ಲ. ಮಿದುಳಿಗೇನಾದರೂ ಏಟು ಬಿದ್ದರೆ, ಬ್ರೇನ್ ಹ್ಯಾಮರೇಜ್ ಆದರೆ ಚಿಕಿತ್ಸೆಗೆ ಇಲ್ಲೆಲ್ಲೂ ಆಸ್ಪತ್ರೆ ಇಲ್ಲ. ಕಿಡ್ನಿ ಸಮಸ್ಯೆ ಉಂಟಾಗಿದೆಯೇ ಆಸ್ಪತ್ರೆಯ ಚಾನ್ಸೇ ಇಲ್ಲ. ಕ್ಯಾನ್ಸರ್ ಕಾಯಿಲೆಯೇ ಇಲ್ಲೆಲ್ಲೂ ಟ್ರೀಟ್ ಮೆಂಟ್ ಸಿಗದು. ಅಪಘಾತದಲ್ಲಿ ಗಂಭೀರ ಗಾಯವಾಗಿದೆಯೇ ಇಲ್ಲೇನೂ ಮಾಡುವಂತಿಲ್ಲ. ಎಲ್ಲ ತುರ್ತು ಚಿಕಿತ್ಸೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರೆ ದೂರದ ಹೊರ ಜಿಲ್ಲೆಗಳಿಗೇ ಹೋಗಬೇಕು. ಹೀಗೆ ಹೋಗುವಾಗ ಗಾಯಾಳು ಅಥವಾ ಕಾಯಿಲೆಗೊಳಗಾದವರು ಮಾರ್ಗ ಮಧ್ಯೆಯೇ ಅಸುನೀಗಿದ ಉದಾಹರಣೆಗಳು ಸಾಕಷ್ಟಿವೆ. ಜೀವ ಕಾಪಾಡಪ್ಪಾ ಎಂದು ಹರಕೆ ಕಟ್ಟಿಕೊಳ್ಳಲು ದೇವಾಲಯಗಳು ಮಾತ್ರ ಸಾಕಷ್ಟಿವೆ. ಇಲ್ಲಿನ ಜನತೆಗೆ ಇದೊಂದೇ ಗತಿ.