ಬೆಂಗಳೂರಿನಲ್ಲಿ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಯುವಕನೊಬ್ಬ ಯುವತಿಯೊಂದಿಗೆ ಅತ್ಯಂತ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದಾನೆ. ಹೆಲ್ಮೆಟ್ ಇಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ನಡೆಸಿದ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ವೀಲಿಂಗ್ ಪುಂಡರ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ತಮ್ಮದೇ ಜೀವಕ್ಕೂ ಹಾಗೂ ಇತರರ ಬದುಕಿಗೂ ಅಪಾಯ ಉಂಟುಮಾಡುವ ರೀತಿಯಲ್ಲಿ ಯುವಕರು ಅಪಾಯಕಾರಿ ಬೈಕ್ ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾನ್ಯತಾ ಟೆಕ್ ಪಾರ್ಕ್ ಬಳಿ ಅಪಾಯಕಾರಿ ವೀಲಿಂಗ್

ಇತ್ತೀಚೆಗೆ ನಗರದ ಜನನಿಬಿಡ ಪ್ರದೇಶವಾಗಿರುವ Manyata Tech Park ಸುತ್ತಮುತ್ತ ವೀಲಿಂಗ್ ಪುಂಡರ ಹುಚ್ಚಾಟ ತೀವ್ರವಾಗಿದೆ. ಯುವಕನೊಬ್ಬ ಯುವತಿಯನ್ನು ಹಿಂದೆ ಕೂರಿಸಿಕೊಂಡು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿರುವ ದೃಶ್ಯಗಳು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿವೆ. ವಿಶೇಷವೆಂದರೆ, ಹಿಂದೆ ಕುಳಿತಿದ್ದ ಯುವತಿ ಬುರ್ಕಾ ಧರಿಸಿಕೊಂಡಿದ್ದು, ಯುವಕ ಮಂಗನಂತೆ ಬೈಕ್ ಓಡಿಸುತ್ತಿದ್ದ ದೃಶ್ಯಗಳು ಜನರನ್ನು ಬೆಚ್ಚಿಬೀಳುವಂತೆ ಮಾಡಿವೆ. ಇವರಿಬ್ಬರೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ, ಹೆಲ್ಮೆಟ್ ಕೂಡ ಧರಿಸಿರಲಿಲ್ಲ.

ಪೊಲೀಸರ ಭಯವಿಲ್ಲ, ಕಾನೂನು ಉಲ್ಲಂಘನೆ

UP-07 J-62 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಈ ಯುವಕರು, ಪೊಲೀಸರ ಭಯವೇ ಇಲ್ಲದಂತೆ ಸಾರ್ವಜನಿಕ ರಸ್ತೆಯಲ್ಲಿ ಬಾಲ ಬಿಚ್ಚಿದ್ದಾರೆ. ತಮ್ಮ ಜೀವದ ಹಂಗು ಇಲ್ಲದೆ, ಇತರ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾವುದೇ ಅರಿವು ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ರೀತಿಯ ಅಪಾಯಕಾರಿ ಸ್ಟಂಟ್‌ಗಳಿಂದಾಗಿ ರಸ್ತೆ ಮೂಲಕ ಸಂಚರಿಸುವ ಇತರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅನಾಹುತ ಸಂಭವಿಸುವ ಭೀತಿ ಸದಾ ಕಾಡುತ್ತಿದೆ.

ನಾಗರಿಕರಲ್ಲಿ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ

ವೀಲಿಂಗ್ ಪುಂಡರ ಈ ನಿರಂತರ ಹುಚ್ಚಾಟದಿಂದ ಬೇಸತ್ತಿರುವ ನಗರದ ನಿವಾಸಿಗಳು, ಪೊಲೀಸರ ಹಾಗೂ ಸಂಚಾರ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇವರು ದಿನನಿತ್ಯ ಕಾನೂನು ಉಲ್ಲಂಘಿಸುತ್ತಿದ್ದರೂ, ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇಂತಹವರನ್ನು ತಕ್ಷಣವೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದ ಶಾಂತಿ, ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕರ ಜೀವ ರಕ್ಷಣೆಗೆ ಸಂಬಂಧಿಸಿದಂತೆ, ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದಿನೇದಿನೇ ಹೆಚ್ಚುತ್ತಿದೆ. ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಎಲ್ಲರ ಕುತೂಹಲವಾಗಿದೆ.