ಉತ್ತರ ಕನ್ನಡದಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ದೇವರೇ ಬದುಕಿಸಬೇಕು..!

3-4 ಗಂಟೆಗಳ ಪ್ರಯಾಣ ಮಾಡಿ ಹೊರ ಜಿಲ್ಲೆಗಳ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ಕರೆದೊಯ್ಯಬೇಕು. ಹಣ ಹೊಂದಿಸಬೇಕು. ಆಸ್ಪತ್ರೆ ತಲುಪುವುದರೊಳಗೆ ಅದೃಷ್ಟ ಇದ್ದವರು ಬದುಕುಳಿಯುತ್ತಾರೆ.

Wandering to the Hospital for Emergency Treatment in Uttara Kannada grg

ವಸಂತಕುಮಾರ ಕತಗಾಲ

ಕಾರವಾರ(ಸೆ.15): ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಜಿಲ್ಲೆಯ ರೋಗಿಗಳು, ಗಾಯಾಳುಗಳಿಗೆ ದೂರದ ಆಸ್ಪತ್ರೆಗಳಿಗೆ ಪ್ರಯಾಣವೇ ಮೃತ್ಯುಪಾಶವಾಗುತ್ತಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು ಬದುಕಿ ಬರಲೆಂದು ದೇವರ ಮೇಲೆ ಭಾರ ಹಾಕಬೇಕಾದ ಪರಿಸ್ಥಿತಿ ಜಿಲ್ಲೆಯ ಜನತೆಯದ್ದಾಗಿದೆ. ಅಪಘಾತ ಹಾಗೂ ಗಂಭೀರ ಕಾಯಿಲೆಗೊಳಗಾದವರಿಗೆ ಚಿಕಿತ್ಸೆ ಕೊಡಿಸುವುದೆಂದರೆ ಭಾರಿ ಪ್ರಯಾಸವನ್ನೇ ಪಡಬೇಕು. 3-4 ಗಂಟೆಗಳ ಪ್ರಯಾಣ ಮಾಡಿ ಹೊರ ಜಿಲ್ಲೆಗಳ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ಕರೆದೊಯ್ಯಬೇಕು. ಹಣ ಹೊಂದಿಸಬೇಕು. ಆಸ್ಪತ್ರೆ ತಲುಪುವುದರೊಳಗೆ ಅದೃಷ್ಟ ಇದ್ದವರು ಬದುಕುಳಿಯುತ್ತಾರೆ.

ಕಾರವಾರ ತಾಲೂಕಿನಲ್ಲಿ ಅಪಘಾತ ಉಂಟಾದಲ್ಲಿ ಅಥವಾ ಗಂಭೀರ ಕಾಯಿಲೆಗೆ ತುರ್ತು ಚಿಕಿತ್ಸೆ ಬೇಕಾದಲ್ಲಿ 100 ಕಿ.ಮೀ. ದೂರದ ಗೋವಾ ರಾಜ್ಯದ ಬಾಂಬೋಲಿಂ ಆಸ್ಪತ್ರೆಗೆ ಕರೆದೊಯ್ಯಬೇಕು. ಕುಮಟಾ, ಹೊನ್ನಾವರ, ಅಂಕೋಲಾ ಹಾಗೂ ಭಟ್ಕಳ ತಾಲೂಕಿನ ಜನತೆ ದಕ್ಷಿಣ ಕನ್ನಡದ ಮಂಗಳೂರು, ಉಡುಪಿ ಜಿಲ್ಲೆಯ ಮಣಿಪಾಲ ಹಾಗೂ ಆದರ್ಶ ಆಸ್ಪತ್ರೆಗಳಿಗೆ ದಾಖಲಿಸಬೇಕು.

ಉತ್ತರ ಕನ್ನಡದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆ ಹೆಚ್ಚಿದ ಕೂಗು..!

ಹಳಿಯಾಳ, ದಾಂಡೇಲಿ, ಜೋಯಿಡಾ, ಮುಂಡಗೋಡ, ಯಲ್ಲಾಪುರ ತಾಲೂಕುಗಳ ಜನತೆ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಸಿದ್ದಾಪುರ ತಾಲೂಕಿನವರು ಶಿವಮೊಗ್ಗಕ್ಕೆ ತೆರಳಬೇಕು.
ಅಪಘಾತದಲ್ಲಿ ತೀವ್ರ ಗಾಯಗೊಂಡವರು, ಲಘು ಹೃದಯಾಘಾತ ಆದವರು, ಬ್ರೇನ್‌ ಹ್ಯಾಮರೇಜ, ಕಿಡ್ನಿ, ಶ್ವಾಸಕೋಶ ಕಾಯಿಲೆ ಹೀಗೆ ತುರ್ತು ಚಿಕಿತ್ಸೆ ಕೊಡಿಸಬೇಕಾದಾಗ ದೂರದ ಆಸ್ಪತ್ರೆಗೆ 3-4 ಗಂಟೆಗಳ ಕಾಲ ಕರೆದೊಯ್ಯಬೇಕಾದ ಪರಿಸ್ಥಿತಿ ಇರುವುದರಿಂದ ಮಾರ್ಗ ಮಧ್ಯೆಯೇ ಕೊನೆಯುಸಿರೆಳದ ಉದಾಹರಣೆಗಳಿಗೂ ಕೊರತೆ ಇಲ್ಲ. ಕಾರವಾರದ ಶಾಸಕರಾಗಿದ್ದ ವಸಂತ ಅಸ್ನೋಟಿಕರ್‌ ಅವರಿಗೆ ಗುಂಡೇಟು ಬಿದ್ದಾಗ ಹತ್ತಿರದಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದರೆ ಬದುಕುವ ಸಾಧ್ಯತೆಯೂ ಇತ್ತು.

ದಕ್ಷಿಣ ಕನ್ನಡ, ಉಡುಪಿ ಮತ್ತಿತರ ಜಿಲ್ಲೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಉತ್ತರ ಕನ್ನಡ ಜಿಲ್ಲೆಯ ಜನತೆಯೇ ಹೆಚ್ಚು ಪ್ರಮಾಣದಲ್ಲಿ ದಾಖಲಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ, ಆರೋಗ್ಯ ಕಾರ್ಡ್‌ಗಳನ್ನು ನೀಡಿ ಅವರು ತಮ್ಮ ಆಸ್ಪತ್ರೆಗಳಿಗೆ ಬರುವಂತೆ ತಿಳಿಸಲಾಗುತ್ತದೆ.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಲೇ ಇದೆ. ಸಾಕಷ್ಟುಮನವಿ ಸಲ್ಲಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದಿದೆ. ಜನಪ್ರತಿನಿಧಿಗಳನ್ನೂ ಆಗ್ರಹಿಸಲಾಗಿದೆ. ಆದರೆ ಜನರ ಈ ಬೇಡಿಕೆಗೆ ಸರ್ಕಾರದ ಸ್ಪಂದನೆ ಯಾವಾಗ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
 

Latest Videos
Follow Us:
Download App:
  • android
  • ios