Raichur: ಜಲದುರ್ಗದ ಐತಿಹಾಸಿಕ ದೇಗುಲದ ಗೋಡೆಗೆ ಧಕ್ಕೆ: ಧ್ವಂಸದ ಬಗ್ಗೆ ಹತ್ತಾರು ಅನುಮಾನ!
ಇತಿಹಾಸ ಪ್ರಸಿದ್ಧ ಪುರಾತತ್ವ ಇಲಾಖೆಗೆ ಸೇರಿದ ಜಲದುರ್ಗ ಕೋಟೆಯಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿ ಹೋಗಿದೆ. ಯಾರ ಬೇಕಾದರೂ ಪ್ರವಾಸಿಗರಂತೆ ಕೋಟೆಗೆ ಭೇಟಿ ನೀಡಿ ನಿಧಿಗಾಗಿ ಕೋಟೆ ಹಾಳು ಮಾಡುವ ಪ್ರಕರಣಗಳು ಆಗಾಗ ಕೇಳಿಬರುತ್ತಲ್ಲೇ ಇವೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ಲಿಂಗಸೂಗೂರು (ಜೂ.19): ಇತಿಹಾಸ ಪ್ರಸಿದ್ಧ ಪುರಾತತ್ವ ಇಲಾಖೆಗೆ ಸೇರಿದ ಜಲದುರ್ಗ ಕೋಟೆಯಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿ ಹೋಗಿದೆ. ಯಾರ ಬೇಕಾದರೂ ಪ್ರವಾಸಿಗರಂತೆ ಕೋಟೆಗೆ ಭೇಟಿ ನೀಡಿ ನಿಧಿಗಾಗಿ ಕೋಟೆ ಹಾಳು ಮಾಡುವ ಪ್ರಕರಣಗಳು ಆಗಾಗ ಕೇಳಿಬರುತ್ತಲ್ಲೇ ಇವೆ. ಇಂತಹ ಪ್ರಕರಣಗಳ ನಡುವೆ ಈಗ ಮತ್ತೊಂದು ಹೊಸ ಪ್ರಕರಣವೊಂದು ನಡೆದು ತಡವಾಗಿ ಬೆಳಕಿಗೆ ಬಂದಿದೆ. ಜಲದುರ್ಗ ಕೋಟೆಯಲ್ಲಿನ ಸಂಗಮೇಶ್ವರ ದೇಗುಲದ ಗೋಡೆಗಳನ್ನು ಒಡೆದು ದಾರಿ ಮಾಡಿಕೊಂಡು ಮೂಲ ಗದ್ದುಗೆ ಮೇಲಿನ ಗಾರೆ ಸಿಮೆಂಟ್ ಅಗೆದು ಧಕ್ಕೆ ಉಂಟು ಮಾಡಿದ ಘಟನೆವೊಂದು ನಡೆದಿದೆ. ದೇವಸ್ಥಾನದ ಗಚ್ಚಿನ ಗೋಡೆ ಪದರು ಸಂಪೂರ್ಣ ಕಿತ್ತಲಾಗಿದ್ದು, ಒಳಗಿನ ಎಡಬದಿಯ ಒಂದು ಗೋಡೆ ಒಡೆದು ಪುನ: ಸಿಮೆಂಟ್ ಮಾಡಲು ಮುಂದಾಗಿರುವುದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದರು.
ಸ್ಥಳಕ್ಕೆ ಲಿಂಗಸೂಗೂರು ತಹಸೀಲ್ದಾರ್ ಮತ್ತು ಪೊಲೀಸರು ಭೇಟಿ: ಐತಿಹಾಸಿಕ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂಕೇತ ಸಾರುವ ಜಲದುರ್ಗದ ಸಂಗಮೇಶ್ವರ ದೇಗುಲದ ಗಚ್ಚಿನ ಗೋಡೆಗೆ ಧಕ್ಕೆ ಆಗಿರುವ ಮಾಹಿತಿ ತಿಳಿದು ಜಲದುರ್ಗ ಕೋಟೆಗೆ ಲಿಂಗಸೂಗೂರು ತಹಸೀಲ್ದಾರ್ ಬಲರಾಮ್ ಕಟ್ಟಿಮನಿ, ಪಿಐ ಮಹಾಂತೇಶ ಸಜ್ಜನ್, ಆರ್‌ಐ ರಾಘವೇಂದ್ರ ದೇಗುಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರ್ಚಕ ಮತ್ತು ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಜಲದುರ್ಗ ಕೋಟೆಯಲ್ಲಿದೆ ಭಾವೈಕ್ಯತೆ ಸಂದೇಶದ ಮಂದಿರ: ಇಸ್ಲಾಮಿಕ್ ಶೈಲಿಯ ಮಂದಿರದಲ್ಲಿ ನಿತ್ಯ ಲಿಂಗ ಪೂಜೆ!
ಸಂಗಮೇಶ್ವರ ದೇಗಲದ ಗೋಡೆ ಧ್ವಂಸದ ಬಗ್ಗೆ ಗ್ರಾಮಸ್ಥರ ಆಕ್ರೋಶ: ಜಲದುರ್ಗ ಕೋಟೆಯಲ್ಲಿ ಏನ್ ಬೇಕಾದರೂ ನಡೆದರೂ ಯಾರು ಕೇಳುವರೇ ಇಲ್ಲದಂತೆ ಆಗಿದೆ. ಐತಿಹಾಸಿಕ ತಾಣಗಳ ಸಂರಕ್ಷಣಾ ಕಾಯ್ದೆಯಂತೆ ಯಾವುದೇ ಐತಿಹಾಸಿಕ ತಾಣಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳು ನಿರ್ಮಿಸುವಂತಿಲ್ಲ. ಖಾಸಗಿ ವ್ಯಕ್ತಿಗಳೂ ಸಹ ವಾಸಿಸುವಂತಿಲ್ಲ. ಅಲ್ಲದೆ ಸ್ಮಾರಕದ 200 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಪ್ರದೇಶವಾಗಿದ್ದು, ಉಲ್ಲಂಘನೆಯಾದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬ ಕಾಯ್ದೆ ಇದ್ದರೂ ಇಲ್ಲಿ ಪಾಲನೆ ಯಾಗದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಂಗಮೇಶ್ವರ ದೇಗುಲದ ವಿಚಾರದಲ್ಲಿ ನಿಜವಾಗಲೂ ಆಗಿದೇನು?: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ ಭಕ್ತರೊಬ್ಬರು ಯಾವುದೋ ವಸ್ತುಗಳು ಕಳೆದುಕೊಂಡು ಸಂಗಮೇಶ್ವರ ದೇಗುಲಕ್ಕೆ ಬಂದಿದ್ರು. ಬಂದಾಗ ದೇವರ ಬಳಿ ಆ ಕಳೆದು ಹೋದ ವಸ್ತು ಸಿಕ್ಕರೆ, ಈ ದೇವಸ್ಥಾನಕ್ಕೆ ಪ್ಲಾಸ್ಟರ್ ಮತ್ತು ಟೈಲ್ಸ್ ಅಳವಡಿಕೆ ಮಾಡುವುದಾಗಿ ಹರಕೆ ಕಟ್ಟಿಕೊಂಡು ಹೋಗಿದರಂತೆ. ಅದರಂತೆ ಆತನಿಗೆ ಕಳೆದು ಹೋದ ವಸ್ತು ಸಿಕ್ಕಿದೆ. ಹೀಗಾಗಿ ಆತ ಜಲದುರ್ಗದ ಕೋಟೆಯಲ್ಲಿ ಇರುವ ಸಂಗಮೇಶ್ವರ ದೇಗುಲದ ಅರ್ಚಕ ಕೃಷ್ಣಪ್ಪ ಎಂಬುವರೊಂದಿಗೆ ಮಾತುಕತೆ ಮಾಡಿ ಹರಕೆ ತೀರಿಸಲು ಮುಂದಾಗಿದ್ದಾರೆ.
ಯಾರ ಅನುಮತಿಯೂ ಪಡೆಯದೇ ಅರ್ಚಕರೊಂದಿಗೆ ಸೇರಿಕೊಂಡು ಐತಿಹಾಸಿಕ ದೇಗುಲದ ಮೂಲ ಗೋಡೆ ಒಡೆದು ಮತ್ತು ಮೂಲ ಗದ್ದುಗೆಗೆ ಸಿಮೆಂಟ್ ಪ್ಲಾಸ್ಟರ್ ಮಾಡಿ, ಟೈಲ್ಸ್ ಅಳವಡಿಕೆಗೆ ಸಿದ್ಧತೆ ಮಾಡಿಕೊಂಡಿದ್ರು. ಅಷ್ಟೇ ಅಲ್ಲದೆ ಜಾತ್ರೆ ವೇಳೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಬರುತ್ತೆ, ಭಕ್ತರ ದರ್ಶನಕ್ಕೆ ತುಂಬಾ ತೊಂದರೆ ಆಗುತ್ತೆ ಎಂದು ಭಾವಿಸಿ. ಅಲ್ಲದೆ ದೇಗುಲದ ಮುಖ್ಯ ದ್ವಾರದಿಂದ 3- 4 ಅಡಿ ಎತ್ತರದ ಟೈಲ್ಸ್ ಗಳು ಸಾಗಿಸಲು ಆಗಲ್ಲವೆಂದು ಭಾವಿಸಿ ದೇಗಲದ ಎಡಭಾಗದಲ್ಲಿ ಹೊಸದಾಗಿ ಬಾಗಿಲು ಒಂದನ್ನು ನಿರ್ಮಾಣ ಮಾಡಿದ್ದಾರೆ. ಇದು ಈಗ ಹತ್ತಾರು ಅನುಮಾನಗಳಿಗೆ ಈಗ ಕಾರಣವಾಗಿದೆ.
ಐತಿಹಾಸಿಕ ದೇಗುಲ ಧ್ವಂಸ ಮಾಡಿದ್ರೆ ಶಿಕ್ಷಾರ್ಹ ಅಪರಾಧ: ಈ ಬಗ್ಗೆ ಕೋಟೆಯ ಸಂರಕ್ಷಣೆಗೆ ನೇಮಿಸಿದ ಹೋಮ್ ಗಾರ್ಡ್‌ಗಳು ಕಮಾಂಡರ್ ಗಳ ಮೂಲಕ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಾಮಗಾರಿ ಆರಂಭಿಸಿ ನಾಲೈದು ದಿನ ಕಳೆದರೂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಇತಿಹಾಸ ಸಂಶೋಧಕರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಏಳೆಂಟು ವರ್ಷಗಳ ಹಿಂದೆ ಸಂಗಮೇಶ್ವರ ದೇವರ ನೂತನ ರಥೋತ್ಸವಕ್ಕಾಗಿ ಒಂದು ಬದಿಯ ಕೋಟೆ ಧ್ವಂಸಗೊಳಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಾಚ್ಯವಸ್ತು ಇಲಾಖೆ ಅಧೀನದ ಜಲದುರ್ಗ ಕೋಟೆಯು ಪ್ರಾಚೀನ ಸ್ಮಾರಕವಾಗಿ ಸಂರಕ್ಷಣೆ ಮಾಡಬೇಕಾಗಿದೆ. ಆದ್ರೆ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ಐತಿಹಾಸಿಕ ತಾಣ ದಿನದಿಂದ ದಿನಕ್ಕೆ ಹಾಳಾಗಿ ಹೋಗುತ್ತಿದೆ.
ಪುರಾತತ್ವ ಇಲಾಖೆ ಅಧಿಕಾರಿಗಳ ವರದಿಯಲ್ಲಿ ಏನಿದೆ?: ಜಲದುರ್ಗ ಕೋಟೆಯಲ್ಲಿನ ಸಂಗಮೇಶ್ವರ ದೇಗಲದ ಧ್ವಂಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಪುರಾತತ್ವ ಇಲಾಖೆಯ ಅಧಿಕಾರಿಗಳು ಜಲದುರ್ಗ ಕೋಟೆಗೆ ಭೇಟಿ ನೀಡಿ ಸದರಿ ಸಂಗಮೇಶ್ವರ ದೇವಸ್ಥಾನವನ್ನು ಪರಿಶೀಲನೆ ಮಾಡಿ ಕಲಬುರಗಿಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಜಲದುರ್ಗ ಕೋಟೆಯ ಮೇಲ್ಬಾಗದಲ್ಲಿ ಸಂಗಮೇಶ್ವರ ಸಂಗಮೇಶ್ವರ ದೇಗುಲವಿದೆ. ಕೋಟೆ ಪ್ರವೇಶದಲ್ಲಿ ಮೂರು ಕಮಾನುಗಳನ್ನು ಹೊಂದಿದ್ದು, ಮಧ್ಯದಲ್ಲಿನ ಕಮಾನನ್ನು ಹೊರತುಪಡಿಸಿ, ಅಕ್ಕ-ಪಕ್ಕದ ಕಮಾನುಗಳನ್ನು ಕಾಲಾಂತರದಲ್ಲಿ ಮುಚ್ಚಲಾಗಿದೆ.
ಇದರ ಹಿಂಭಾಗದಲ್ಲಿ ಚೌಕಾಕಾರದ ತೆರೆದ ಪ್ರಾಂಗಣವಿದ್ದು, ಹಿಂಭಾಗದ ಗೋಡೆಯಲ್ಲಿ ಮಿಹರಬ್ ರಚನೆ ಇದೆ, ಇದರ ಮೇಲ್ಬಾಗದಲ್ಲಿ ಹಾಗೂ ಕಟ್ಟಡದ ಸುತ್ತಲೂ ಕೊಡೆಯಾಕಾರದ ಮಿನಾರೆಟ್ಸ್ ಗಳಿವೆ. ಪ್ರಾಂಗಣದ ಮಧ್ಯದಲ್ಲಿ ಹಿಂಭಾಗದ ಗೋಡೆಗೆ ಹೊಂದಿಕೊಂಡಂತೆ ದಕ್ಷಿಣೋತ್ತರವಾಗಿ ಸದರಿ ಗದ್ದುಗೆ ಎಂದು ಉಲ್ಲೇಖಿಸಲಾಗಿರುವ ಕಟ್ಟೆ ಇದ್ದು, 4,26*2.18*0.38ಮೀ. ಅಳತೆಯನ್ನು ಹೊಂದಿದೆ. ಸದರಿ ಕಟ್ಟಡವು ಮೂಲತಃ ಇಸ್ಲಾಮಿಕ್ ವಾಸ್ತುಶೈಲಿಯ ಕಟ್ಟಡವಾಗಿದ್ದು, ಕಾಲಕ್ರಮೇಣ ಅನೇಕ ಬದಲಾವಣಿಗಳಿಗೆ ತುತ್ತಾಗಿದೆ. ಸದರಿ ಕಟ್ಟಡದ ಕುರಿತು Antiquarian Remains in Hyderabad State ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಯಾವುದೇ ನಮೂದು ಇರುವುದಿಲ್ಲ.
ಸೋರುತ್ತಿಹುದು ಬೀಳುತಿಹುದು ಸರ್ಕಾರಿ ಶಾಲೆಯ ಮಾಳಿಗೆ
ಸದ್ಯ ದೇಗುಲದ ಗದ್ದುಗೆಯನ್ನು ದುರಸ್ತಿಗೊಳಿಸುವ ಪ್ರಯುಕ್ತ ದೇವಸ್ಥಾನದ ಅರ್ಚಕರಾದ ಕೃಷ್ಣಪ್ಪ ಮೇಲಿನಮಠ ಇವರು ಕಟ್ಟೆಯ ಮೇಲ್ಬಾಗ ಹಾಗೂ ಪ್ರಾಂಗಣದ ಗೋಡೆಗಳ ಗಜ್ಜನ್ನು ತೆಗೆದಿದ್ದು, ಪ್ರಾಂಗಣದ ಎಡಭಾಗಕ್ಕೆ ಹೊಸದಾಗಿ ಬಾಗಿಲನ್ನು ಅಳವಡಿಸುವ ಸಂಬಂಧ ಗಚ್ಚಿನ ಗೋಡೆಯನ್ನು ಒಡೆದಿರುತ್ತಾರೆ. ಮೇಲಾಗಿ, ದೇಗುಲದ ದುರಸ್ತಿಯ ಕುರಿತು ಯಾವುದೇ ಮಾಹಿತಿಯನ್ನು ಪೂರ್ವಾನುಮತಿಯನ್ನು ಸಹ ಪಡೆಯದೇ ಕೃತ್ಯ ಎಸಗಿರುತ್ತಾರೆ. ಇದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಭಂಗ ಉಂಟಾಗಿದ್ದು, ಪರಿಣಾಮ ಅರ್ಚಕರ ಮೇಲೆ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ತಾಲೂಕು ಆಡಳಿತದಿಂದ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸದರಿ ಪ್ರದೇಶದಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಹಾಗೂ ಕಾವಲಿಗಾಗಿ ಭದ್ರತಾ ಸಿಬ್ಬಂದಿ ಹೊರತಾಗಿ ಪೊಲೀಸ್ ಸಿಬ್ಬಂದಿಗಳನ್ನು ಸಹ ನಿಯೋಜಿಸಿರುತ್ತಾರೆ.
ಗದ್ದುಗೆಯನ್ನು ಈ ಮೊದಲಿನಂತೆ ದುರಸ್ತಿ ಮಾಡಿಸಬೇಕೆಂದು ಹಾಗೂ ಸದಸ್ಯ ಅರ್ಚಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಿಂದ ಹಾಗೂ ಸುತ್ತಲಿನ ಗ್ರಾಮಸ್ಥರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಒಟ್ಟಿನಲ್ಲಿ ಕೃಷ್ಣ ನದಿ ದಡದಲ್ಲಿ ಇರುವ 12ನೇ ಶತಮಾನದಲ್ಲಿ ದೇವಗಿರಿಯ ಯಾದವರು ನಿರ್ಮಿಸಿದ ಏಳು ಸುತ್ತಿನ, ಏಳು ದ್ವಾರಗಳ ಜಲದುರ್ಗ ಕೋಟೆ ನೋಡಲು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಶಿಥಿಲಾವಸ್ಥೆಗೆ ತಲುಪಿದ ಕೋಟೆ ಮತ್ತು ಸಂಗಮೇಶ್ವರ ಗದ್ದುಗೆ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಗಮನ ಹರಿಸಬೇಕು ಎಂಬುವುದು ಜನರ ಒತ್ತಾಯವಾಗಿದೆ.