ಜಲದುರ್ಗ ಕೋಟೆಯಲ್ಲಿದೆ ಭಾವೈಕ್ಯತೆ ಸಂದೇಶದ ಮಂದಿರ: ಇಸ್ಲಾಮಿಕ್ ಶೈಲಿಯ ಮಂದಿರದಲ್ಲಿ ನಿತ್ಯ ಲಿಂಗ ಪೂಜೆ!
ಜಿಲ್ಲೆಯ ಚಿನ್ನದ ನಾಡು ಎಂದು ಗುರುತಿಸಿಕೊಳ್ಳುವ ಲಿಂಗಸೂಗೂರು ತಾಲೂಕು ತುಂಬಾ ವಿಭಿನ್ನತೆಯಿಂದ ಕೂಡಿದೆ. ಅದರಲ್ಲೂ ಲಿಂಗಸೂಗೂರು ತಾಲೂಕಿನ ಜಲದುರ್ಗ ಕೋಟೆ ನೋಡಲು ಎರಡು ಕಣ್ಣು ಸಾಲಾದ್ದು, ಐತಿಹಾಸ ಹಿನ್ನೆಲೆ ಹೊಂದಿರುವ ಜಲದುರ್ಗ ಕೋಟೆಗಾಗಿ ಹತ್ತಾರು ರಾಜಮನೆತನಗಳು ಯುದ್ಧ ಮಾಡಿರುವುದು ಇತಿಹಾಸವೂ ಇದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜೂ.07): ಜಿಲ್ಲೆಯ ಚಿನ್ನದ ನಾಡು ಎಂದು ಗುರುತಿಸಿಕೊಳ್ಳುವ ಲಿಂಗಸೂಗೂರು ತಾಲೂಕು ತುಂಬಾ ವಿಭಿನ್ನತೆಯಿಂದ ಕೂಡಿದೆ. ಅದರಲ್ಲೂ ಲಿಂಗಸೂಗೂರು ತಾಲೂಕಿನ ಜಲದುರ್ಗ ಕೋಟೆ ನೋಡಲು ಎರಡು ಕಣ್ಣು ಸಾಲಾದ್ದು, ಐತಿಹಾಸ ಹಿನ್ನೆಲೆ ಹೊಂದಿರುವ ಜಲದುರ್ಗ ಕೋಟೆಗಾಗಿ ಹತ್ತಾರು ರಾಜಮನೆತನಗಳು ಯುದ್ಧ ಮಾಡಿರುವುದು ಇತಿಹಾಸವೂ ಇದೆ.
ಕೃಷ್ಣಾ ನದಿಗೆ ಎದೆಗೊಟ್ಟು ನಿಂತ ತಾಣವೇ ಜಲದುರ್ಗ: ಜಲದುರ್ಗ ಹೆಸರಿನಲ್ಲಿ ಜಲ ಅಂದ್ರೆ ನೀರು, ದುರ್ಗ ಅಂದ್ರೆ ಕೋಟೆ ಅಂತ ಅರ್ಥವಾಗುತ್ತೆ..ಹೆಸರಿನಂತೆ ಜಲದುರ್ಗ ಕೃಷ್ಣಾನದಿಗೆ ಎದೆಗೊಟ್ಟು ನದಿಯ ಹರಿವನ್ನೆ ಅರ್ಧಿಸಿರುವ ಕೋಟೆ ದೇಶದಲ್ಲಿಯೇ ಬಹು ವಿಶಿಷ್ಟತೆಯಿಂದ ಕೂಡಿದ ಕೋಟೆಯಾಗಿದೆ. ಈ ಕೋಟೆಗಾಗಿ ವಿಜಯನಗರ, ಬಿಜಾಫುರದ ಆದಿಲಶಾಹಿಗಳು, ಬಹುಮನಿ ಸುಲ್ತಾನರು ಸೇರಿದಂತೆ ಹತ್ತಾರು ರಾಜಮನೆತನಗಳು ಜಲದುರ್ಗ ಕೋಟೆ ವಶಪಡಿಸಿಕೊಂಡು ಆಡಳಿತ ಮಾಡಿದ್ದಾರೆ. ಅಲ್ಲದೇ ಯುದ್ದ ಕೈದಿಗಳನ್ನು ಬಂಧಿಸಿಡುವ ತಾಣವಾಗಿತ್ತು. ಅದರ ಜೊತೆಗೆ ಕೈದಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತಿತ್ತು ಎಂಬುವುದು ನಾವು ಇತಿಹಾಸದ ಪುಟಗಳಲ್ಲಿ ನೋಡಬಹುದಾಗಿದೆ.
ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಉಡುಪಿ ಸರ್ಕಾರಿ ಕಾಲೇಜಲ್ಲಿ ಅಡ್ಮಿಷನ್ ಹೆಚ್ಚಳ
ತೊಟ್ಟಿಲು ಕಟ್ಟಿ ತೂಗಿ ಕೈದಿಗಳಿಗೆ ಶಿಕ್ಷೆ: ಲಿಂಗಸೂಗೂರು ತಾಲೂಕಿನ ಜಲದುರ್ಗ ಕೋಟೆಯೂ ಪ್ರಕೃತಿ ಮಡಿನಲ್ಲಿ ಇರುವ ಸುಂದರ ಕೋಟೆಯಾಗಿದೆ. ಆದ್ರೆ ಕೋಟೆ ನೋಡಲು ಎಷ್ಟು ಅಂದವಾಗಿ ನಿರ್ಮಾಣವಾಗಿತ್ತೋ ಅಷ್ಟೇ ಭಯವನ್ನ ಹುಟ್ಟಿಸುವ ಹತ್ತಾರು ಕಥೆಗಳು ಈ ಕೋಟೆಯಲ್ಲಿವೆ. ನೂರಾರು ಅಡಿಯ ಎತ್ತರದಲ್ಲಿ ಇರುವ ಕೋಟೆಯ ಮೇಲ್ಬಾಗದಲ್ಲಿ ತೊಟ್ಟಿಲು ಕಟ್ಟಿದ್ದರು. ಆ ತೊಟ್ಟಿಲಲ್ಲಿ ಕೈದಿಗಳನ್ನು ತೂಗಿ ಕೃಷ್ಣ ನದಿಗೆ ಎಸೆದು ಶಿಕ್ಷೆ ನೀಡುತ್ತಿರುವ ವಿಶಿಷ್ಟ ಶಿಕ್ಷಾ ಪದ್ದತಿ ಭಾರತೀಯ ಇತಿಹಾಸದಲ್ಲಿ ಕುತೂಹಲ ಮೂಡಿಸುತ್ತದೆ.
ಜಲದುರ್ಗ ಕೋಟೆಯ ಇತಿಹಾಸದ ಪರಿಚಯ: ಜಲದುರ್ಗ ಕೋಟೆಯನ್ನು ದೇವಗಿರಿಯ ಯಾದವರು 12ನೇ ಶತಮಾನದಲ್ಲಿ ಕಟ್ಟಿಸಿರಬಹುದೆಂದು ಹೇಳಲಾಗುತ್ತಿದೆ. ಆದಿಲ್ ಶಾಹಿಗಳ ವಾಸ್ತುಶಿಲ್ಪ ಎದ್ದು ಕಾಣುತ್ತಿದೆ. ಸುಮಾರು 400 ಅಡಿ ಎತ್ತರದ ಕೋಟೆಯ ಬುರುಜು ಕಟ್ಟಲಾಗಿದೆ. ಹಿಂದೆ ಅಪರಾಧಿಗಳನ್ನು ಕೋಟೆ ಬುರುಜು ಮೇಲಿಂದ ಕೃಷ್ಣಾ ನದಿಗೆ ನೂಕಿ ಶಿಕ್ಷೆ ಕೊಡುತ್ತಿದ್ದರೆಂದು ಹೇಳಲಾಗುತ್ತಿದೆ. ಈ ಕೋಟೆಯ ಸುತ್ತಲೂ ಕೃಷ್ಣಾ ನದಿ ಕವಲೊಡೆದು ಹರಿಯುತ್ತಿದ್ದರಿಂದ ಜಲದುರ್ಗ ಕೋಟೆ ಅತ್ಯಂತ ರಕ್ಷಣಾ ಕೋಟೆಯಾಗಿತ್ತು.
ಸೈನಿಕರಿಗೆ ಆಸ್ಪತ್ರೆ ಆಗಿತ್ತು ಜಲದುರ್ಗ ಕೋಟೆ: ಜಲದುರ್ಗ ಕೋಟೆ ಬರೀ ಕಲ್ಲು –ಕಟ್ಟಡಗಳ ಕೋಟೆ ಆಗಿ ಇರದೇ ಕೋಟೆಯ ಸುತ್ತಲು ಅಚ್ಚುಹಸಿರು ಹೊಂದಿರುವ ಬೆಟ್ಟ-ಗುಡ್ಡಗಳು ಇವೆ. ಈ ಬೆಟ್ಟ –ಗುಡ್ಡಗಳಲ್ಲಿ ಹತ್ತಾರು ಔಷಧಿ ಗಿಡ-ಮರಗಳು ಇಂದಿಗೂ ಸಹ ನೋಡಲು ಸಿಗುತ್ತವೆ. ಹೀಗಾಗಿ ಹಿಂದಿನ ಕಾಲದಲ್ಲಿ ಜಲದುರ್ಗ ಕೋಟೆ ಅತ್ಯಂತ ಆಯಕಟ್ಟಿನಲ್ಲಿದ್ದು ಇಲ್ಲಿ ಯುದ್ದ ಮಾಡಿ ಗಾಯಗೊಂಡ ಸೈನಿಕರಿಗೆ ಔಷಧೋಪಚಾರ ಮಾಡುವ ಜೊತೆಗೆ ರೋಗ-ರುಜಿನಗಳಿಗೂ ಚಿಕತ್ಸೆ ನೀಡುತ್ತಿದ್ದರು.
ಜಲದುರ್ಗ ಕೋಟೆಯಲ್ಲಿ ಶರಣ ಸೈನ್ಯಕ್ಕೆ ತರಬೇತಿ: 14-15ನೇ ಶತಮಾನದಲ್ಲಿ ಶರಣ ಚಳುವಳಿಯ ನಾಯಕ ಕೊಡೇಕಲ್ ಬಸವಣ್ಣನವರು ಅತ್ತ ವಿಜಯನಗರ, ಇತ್ತ ಆದಿಲ್ ಶಾಹಿಗಳು ಮತ್ತು ಬಹುಮನಿ ಸುಲ್ತಾನರ ಹುಟ್ಟಡಗಿಸಿ ಯುದ್ದ ಮಾಡುವ ಮೂಲಕ ಶರಣ ಚಳುವಳಿಗಾರರು ಜಲದುರ್ಗ ಕೋಟೆ ವಶಪಡಿಸಿಕೊಂಡು ಆಡಳಿತ ನಡೆಸಿದ್ದಾರೆ. ದೇಶದ ಇತಿಹಾಸದಲ್ಲಿ ಶರಣ ಸೈನ್ಯ ಕಟ್ಟಿ ಯುದ್ದ ಮಾಡಿ ಯುದ್ದದಲ್ಲಿ ವಿಜಯ ಪತಾಕೆ ಹಾರಿಸಿ ಕೋಟೆ ವಶಪಡಿಸಿಕೊಂಡು ಆಡಳಿತ ನಡೆಸಿದ್ದು ಶರಣ ಚಳುವಳಿಯ ಮಹತ್ವದ ಮೈಲಿಗಲ್ಲಾಗಿದೆ.
ಜಲದುರ್ಗ ಕೋಟೆಯಲ್ಲಿವೆ ಭಾವೈಕ್ಯತೆ ದೇಗುಲಗಳು: ಜಲದುರ್ಗ ಕೋಟೆಯಲ್ಲಿ ಎತ್ತ ನೋಡಿದ್ರೂ ಕಾವಲು ಗೋಪುರಗಳು ಕಾಣಿಸಿಕೊಳ್ಳುತ್ತವೆ. ಅದರ ಜೊತೆಗೆ ಸಿಡಿಲು ಬಾವಿ ವರ್ಷ ಎಲ್ಲಾ ದಿನವೂ ನೀರಿನಿಂದ ಕೂಡಿರುವ ಬಾವಿಯಾಗಿದೆ. ಹಿಂದಿನ ಕಾಲದಲ್ಲಿ ಸಿಡಿಲು ಬಾವಿ ನೀರು ಬಳಸುತ್ತಿದ್ರು ಎಂದು ಹೇಳಲಾಗುತ್ತಿದೆ. ಸಿಡಿಲು ಬಾವಿ ಪಕ್ಕದಲ್ಲಿ ಆರೂಢ ಸಂಗನಾಥ ದೇವಸ್ಥಾನವಿದೆ. ಈ ದೇವಸ್ಥಾನವೂ ಜಲದುರ್ಗ ಕೋಟೆಯ ಕೇಂದ್ರ ಬಿಂದು ಎಂಬಂತೆ ನೋಡುಗರನ್ನ ಸೆಳೆಯುತ್ತೆ. ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಿದ ದೇವಾಲಯದಲ್ಲಿ ನಿತ್ಯವೂ ಲಿಂಗ ಪೂಜೆ ನಡೆಯುತ್ತೆ. ಅದರ ಪಕ್ಕದಲ್ಲಿಯೇ ಮುಸ್ಲಿಂರ ಘೋರಿಯಿದೆ.
ಹಿಂದೂಗಳ ಲಿಂಗಕ್ಕೆ ಪೂಜೆ ಸಲ್ಲಿಸಿದ್ರೆ, ಮುಸ್ಲಿಂ ಸಮುದಾಯದವರು ಘೋರಿಗೆ ಬಂದು ಪ್ರಾರ್ಥನೆ ಮಾಡಿ ಹೋಗುತ್ತಾರೆ. ಲಿಂಗ ಮತ್ತು ಘೋರಿ ಒಟ್ಟೊಟ್ಟಿಗಿ ಇವೆ. ಹಿಂದು, ಮುಸ್ಲಿಂಮರು ಒಂದಾಗಿ ತಮ್ಮ -ತಮ್ಮ ಧರ್ಮಗಳ ಪ್ರಕಾರ ಬಂದು ಭಕ್ತಿ ಸಮರ್ಪಿಸಿ ಇಂದಿಗೂ ಹೋಗುತ್ತಿದ್ದಾರೆ. ಇತಿಹಾಸದ ಪ್ರಕಾರ ಬಹುಮನಿ ಸುಲ್ತಾನರ, ಬಿಜಾಪುರ ಆದಿಶಾಹಿಗಳು ಹಾಗೂ ವಿಜಯನಗರದ ಅರಸ ಮದ್ಯೆ ಘನಘೋರ ಯುದ್ದ ನಡೆಯುತ್ತಿದ್ದವು. ಇಂತಹ ಸಂಕೀರ್ಣ ಸಂದರ್ಭದಲ್ಲಿ ಹಿಂದು, ಮುಸ್ಲಿಂ ರಾಜರನ್ನು ಸದೆಬಡಿದು ಶರಣರು ಆಡಳಿತ ನಡೆಸಿದ್ದು ಅಲ್ಲಮ-ಅಲ್ಲಾ ಒಂದೇ, ಹಿಂದು ಮುಸ್ಲಿಂಮರಿಗೆ ಚಂದ್ರಮನೊಬ್ಬನೆ ಎನ್ನುವ ಮೂಲಕ ಭಾವೈಕ್ಯತೆ ಬೆಸೆದು ಸಹೋದರತೆ, ಮೆರೆದಿದ್ದು ಅನಾದಿ ಕಾಲದಿಂದಲೂ ಇಲ್ಲಿ ಹಿಂದು-ಮುಸ್ಲಿಂರು ಒಂದಾಗಿ ತಮಗಿಷ್ಟ ಬಂದ ರೀತಿಯಲ್ಲಿ ದೇವರ ಪೂಜೆ ಮಾಡುತ್ತಾ ಬಂದಿದ್ದಾರೆ.
ಲಿಂಗಸೂಗೂರು: ಪರಿಸರ ಪ್ರೇಮಿಗಳಿಗೆ ಕೈಬೀಸಿ ಕರೆಯುತ್ತಿದೆ ಟೆರೇಸ್ ಗಾರ್ಡನ್..!
ಅಮೆರಿಕಾದ ಸಿನಿಮಾಕ್ಕೆ ಬಳಕೆ ಆಯ್ತು ಜಲದುರ್ಗ ಕೋಟೆ: ಅಮೆರಿಕಾದ ಕೊಲೆಡರಲ್ ನದಿಯ ಮಾದರಿಯಲ್ಲಿ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಜಲದುರ್ಗ ಕೋಟೆಯ ಬಳಿ ಹರಿಯುವ ಕೃಷ್ಣಾನದಿ ಕಾಣುತ್ತದೆ. ಹೀಗಾಗಿ ಈ ವಿಚಾರ ತಿಳಿದ ಅಮೆರಿಕಾದ ಖ್ಯಾತ ಜೆ.ಲಿ. ಥಾಮ್ಸ್ (J.Lee Thompson) ಎಂಬಾತ 1963ರಲ್ಲಿ ತಾನು ನಿರ್ದೇಶನ ಮಾಡಿದ ಮೆಕ್ಯಾನಿಸ್ ಗೋಲ್ಡ್ ( Mackenna’s Gold) ಸಿನಿಮಾದ ಸಲುವಾಗಿ ಜಲದುರ್ಗದಲ್ಲಿ ಹರಿಯುವ ಕೃಷ್ಣಾನದಿಯ ವಿಹಂಗಮ ದೃಶ್ಯವನ್ನು ಹೆಲಿಕ್ಯಾಪ್ಟರ್ ಮೂಲಕ ಚಿತ್ರಿಕರಣ ಮಾಡಿದ್ದನ್ನು ನೆನಪಿಸಬಹುದು. ಒಟ್ಟಿನಲ್ಲಿ ಐತಿಹಾಸಿನ ಹಿನ್ನೆಲೆ ಇರುವ ಜಲದುರ್ಗ ಕೋಟೆ ಸರಿಯಾಗಿ ನಿರ್ವಹಣೆ ಇಲ್ಲದೆ ಇರುವುದರಿಂದಾಗಿ ಇಡೀ ಕೋಟೆ ದಿನ ದಿನ ಕಳೆದಂತೆ ನಾಶವಾಗಿ ಹೋಗುತ್ತಿದೆ. ಹತ್ತಾರು ಭಾವೈಕ್ಯತೆ ಸಂದೇಶ ಸಾರುವ ಜಲದುರ್ಗ ಕೋಟೆ ಉಳಿಸಿ ಬೆಳೆಸಬೇಕಾಗಿದೆ.