ಅನ್ನದಾನೀಶ್ವರ ಯಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು. ಈ ವರ್ಷದ ವಿಶೇಷವಾಗಿ, ಭಕ್ತರಿಗೆ ಲಕ್ಷಾಂತರ ಮಸಾಲಾ ಮಿರ್ಚಿಗಳನ್ನು ಪ್ರಸಾದವಾಗಿ ನೀಡಲಾಯಿತು. ಇದರೊಂದಿಗೆ ವಿವಿಧ ಊರುಗಳಿಂದ ಭಕ್ತರು ತಂದ ಜೋಳದ ರೊಟ್ಟಿ, ಹೋಳಿಗೆ ಸೇರಿದಂತೆ ಬಗೆಬಗೆಯ ಭಕ್ಷ್ಯಗಳು ಮಹಾಪ್ರಸಾದದ ವೈಭವವನ್ನು ಹೆಚ್ಚಿಸಿದವು.

ಗದಗ: ಅನ್ನದಾನೀಶ್ವರ ಯಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಜರುಗುತ್ತಿದೆ. ಪ್ರಸ್ತುತ ವರ್ಷ ಯಾತ್ರಾ ಮಹೋತ್ಸದವ ದಿನವಾದ ಶನಿವಾರ ಎಲ್ಲ ಭಕ್ತರಿಗೂ ಪ್ರಸಾದದಲ್ಲಿ ಲಕ್ಷಾಂತರ ಮಸಾಲಾ ಮಿರ್ಚಿಗಳನ್ನು ನೀಡಲಾಗಿದೆ.

Add Asianetnews Kannada as a Preferred SourcegooglePreferred

ಕನಕಗಿರಿಯಿಂದ ಸುಮಾರು ಹತ್ತಾರು ಜನರು ಆಗಮಿಸಿ ಬೆಳಗ್ಗೆಯಿಂದಲೇ ಮಿರ್ಚಿ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಅದಕ್ಕಾಗಿಯೇ ಕಳೆದ 3-4 ದಿನಗಳಿಂದ ಮೆಣಸಿನಕಾಯಿ, ಹಸಿಹಿಟ್ಟು, ಎಣ್ಣೆ, ಮಸಾಲೆ ಸಾಮಗ್ರಿಗಳು ಸೇರಿದಂತೆ ಎಲ್ಲ ರೀತಿಯ ತಯಾರಿಯನ್ನು ಜಾತ್ರಾ ಮಹೋತ್ಸವ ಸಮಿತಿ ಸೇರಿದಂತೆ ವಿವಿಧ ಗೆಳೆಯರ ಬಳಗದವರು ಮಾಡಿದ್ದರು.

ಆಗಮಿಸಿದ ಭಕ್ತರಿಗೆ ಭಕ್ಷ ಭೋಜನ

ಪ್ರಸ್ತುತ ಯಾತ್ರಾ ಮಹೋತ್ಸವಕ್ಕೆ ಮುಂಡರಗಿ ಪಟ್ಟಣವೂ ಸೇರಿದಂತೆ ಮುರ್ಲಾಪೂರ, ಕುಕನೂರ, ಲಕ್ಕುಂಡಿ, ಹಳ್ಳಿಕೇರಿ, ಹಳ್ಳಿಗುಡಿ, ಬರದೂರು, ಕಾಟರಳ್ಳಿ, ಗಂಗಾವತಿ, ಕೊಪ್ಪಳ, ಗದಗ, ವೆಂಕಟಗಿರಿ, ತಂಬ್ರಳ್ಳಿ ಭಕ್ತರು, ಜತೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದವರು ಲಕ್ಷಾಂತರ ಜೋಳದ ರೊಟ್ಟಿ, ಮಾದಲಿ, ರವೆ ಉಂಡಿ, ಶೇಂಗಾ ಹೋಳಿಗೆ, ಬೂಂದಿ, ಬಾಲೂಶಾ, ಬೆಲ್ಲದ ಜಿಲೇಬಿ, ಜರೂಟಿ ಪೂರಿ ಸೇರಿದಂತೆ ಅನೇಕ ವಿವಿಧ ಪ್ರಸಾದವನ್ನು ಮಾಡಿ ತಂದಿದ್ದರಿಂದ ಆಗಮಿಸಿದ ಭಕ್ತರಿಗೆ ಭಕ್ಷ ಭೋಜನ ದೊರೆಯಿತು.

ಪ್ರಸಾದದ ವ್ಯವಸ್ಥೆಯಲ್ಲಿ ಭಾಗಿಯಾದ ಭಕ್ತರು

ಸಾವಿರಾರು ಜನ ಭಕ್ತರು ಸರದಿಯಲ್ಲಿ ನಿಂತು ಪ್ರಸಾದ ಸೇವಿಸಿದ್ದು ಕಂಡು ಬಂತು. ಮೂರು ದಿನಗಳ ಮಹಾಪ್ರಸಾದಕ್ಕೆ ಬೇಕಾದ ಎಲ್ಲ ತರಕಾರಿಯನ್ನು ಘಟಪ್ರಭಾ ಹಾಗೂ ಇತರೆ ಪ್ರದೇಶಗಳಿಂದ ಭಕ್ತರು ತಂದಿದ್ದರು. ಯಾತ್ರಾ ಸಮಿತಿ ಸದಸ್ಯರೂ ಸೇರಿದಂತೆ ಅನ್ನದಾನೀಶ್ವರ ಗೆಳೆಯರ ಬಳಗ ಹಾಗೂ ವಿವಿಧ ಸಂಘಟನೆಗಳ ಯುವಕರು ಪ್ರಸಾದದ ವ್ಯವಸ್ಥೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು.