ಮುಧೋಳದಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಸಂತೋಷ್ ಲಾಡ್ ಭಾಗವಹಿಸಿದ್ದರು. ಈ ವೇಳೆ ಸೈಕ್ಲಿಂಗ್ ಪಟುವೊಬ್ಬರು ಸಚಿವರ ಹೆಸರನ್ನೇ ಕೇಳಿದ ಸ್ವಾರಸ್ಯಕರ ಘಟನೆ ನಡೆದರೆ, ಬಳಿಕ ಲಾಡ್  ಅಂಬೇಡ್ಕರ್ ಅವರ ಹಿಂದೂ ಕೋಡ್ ಬಿಲ್ ಬಗ್ಗೆ ಮಾತನಾಡಿದರು.

ಬಾಗಲಕೋಟೆ: ಮುಧೋಳ‌ ನಗರದಲ್ಲಿ ಕಾರ್ಮಿಕ ಸಚಿವ ಸಂತೋಷ‌ ಲಾಡ್ ಅವರು ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟನೆ ಮಾಡಿದರು. ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸಾಥ್ ನೀಡಿದರು. ನಗರದ ಕುಮಕಾಲೆ ಖಾಸಗಿ ಪಿಯುಸಿ ಕಾಲೇಜು ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಿತ್ತು. ಈ ವೇಳೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು.

ಹೆಸರು ಏನೆಂದು ಕೇಳಿದ ಸೈಕ್ಲಿಂಗ್ ಪಟು‌‌

ವೇದಿಕೆ‌ ಮೇಲೆ ಸೈಕ್ಲಿಂಗ್ ಪಟು ಭಾಷಣ ಮಾಡುತ್ತಿದ್ದರು. ಈ ವೇಳೆ ಸಚಿವ ಸಂತೋಷ‌ ಲಾಡ್ ಪಕ್ಕದಲ್ಲೇ ನಿಂತಿದ್ದರು. ಭಾಷಣ ಆರಂಭದ ವೇಳೆ ಮಾತನಾಡುವಾಗ ಲಾಡ್ ಅವರಿಗೆ ತಮ್ಮ ಹೆಸರು ಏನೆಂದು ಸೈಕ್ಲಿಂಗ್ ಪಟು‌‌ ಕೇಳಿದ. ನಗು‌ ನಗುತ್ತಾ ನಾನು‌ ಸಂತೋಷ ಲಾಡ್ ಎಂದ ಸಚಿವರು.

ಆಗ ಕಾರ್ಯಕ್ರಮಕ್ಕೆ ಆಗಮಿಸಿದ‌ ಜನರು ಜೋರಾಗಿ ನಕ್ಕ‌ರು. ಇದಕ್ಕೆ ಸೈಕ್ಲಿಂಗ್ ಪಟು‌‌, ಯಾಕೆ ನಗ್ತಿದಿರಿ ನಾನೇನು ಜೋಕ್ ಮಾಡಿದೆನಾ? ಸರ್‌ ಹೆಸರು ಕೇಳಿದೆ‌ ಎಂದು ಹೇಳುತ್ತಾ. ನಾನು ತಮ್ಮ ಬಗ್ಗೆ ಟಿವಿಯಲ್ಲಿ ನೋಡಿದ್ದೀವಿ, ಪತ್ರಿಕೆಗಳಲ್ಲಿ ‌ಓದಿದ್ದೇವೆ. ತಾವು ಎಲ್ಲ ಕಾರ್ಯಕ್ಕೂ ಪ್ರೋತ್ಸಾಹ ನೀಡ್ತೀರಿ ನಮಗೂ ನೀಡಿ ಎಂದರು ಸೈಕ್ಲಿಂಗ್ ಪಟು. ಇದಕ್ಕೆ ಸೈಕ್ಲಿಂಗ್ ಪಟು ಹೆಗಲ‌ ಮೇಲೆ‌ ಕೈ ಹಾಕಿ ಸಚಿವ ಲಾಡ್ ಖುಷಿಯಿಂದ ನಿಂತರು.

ಬಾಬಾಸಾಹೇಬ್ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಬಗ್ಗೆ ಮಾತು

ಇನ್ನು ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತಾಡಿದ ಸಚಿವ ಲಾಡ್, ಅಂಬೇಡ್ಕರ್ ಅಂದರೆ ಬರಿ ಎಸ್ ಸಿ ಎಸ್ ಟಿ ಗೆ ಮಾತ್ರವಲ್ಲ. ಅವರು ಹಿಂದೂ ಕೋಡ್ ಬಿಲ್ ತರ್ತಾರೆ. ತಾವು ಮನೆಗೆ ಹೋದ ಮೇಲೆ ಎಲ್ಲರೂ ಹಿಂದೂ ಕೋಡ್ ಬಿಲ್ ಓದಬೇಕು. ಅದನ್ನು ಯಾಕೆ ತರ್ತಾರೆ ಅಂದರೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಬರ್ತಿರಲಿಲ್ಲ. ಅಪ್ಪನ ಆಸ್ತಿ, ತಾತನ ಆಸ್ತಿ , ಅಪ್ಪನ ‌ಆಸ್ತಿಗೆ ಅವಳಿಗೆ ಅಧಿಕಾರವೇ ಇರಲಿಲ್ಲ. ಗಂಡ ಸತ್ತರೆ ಇನ್ನೊಂದು ಮದುವೆಗೆ ಅವಕಾಶ ಇರಲಿಲ್ಲ. ವಿಚ್ಚೇಧನಕ್ಕೆ ಅವಕಾಶ ಇರಲಿಲ್ಲ. ಗಂಡ ಸತ್ತರೆ ಬೆಂಕಿಯಲ್ಲಿ ಎಗರಬೇಕು, ವಿಧವೆಯಾಗಿರಬೇಕು ಬಳೆ ಚೂರು ಮಾಡಬೇಕು. ಬಿಳಿ ಸೀರೆ ಉಟ್ಕೊಂಡು ಮೂಲೆಯಲ್ಲಿ ಕೂರಬೇಕು. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಗಿರಲಿಲ್ಲ. ಅಂತಹ ಸಂಸ್ಕೃತಿ ನಮ್ಮ ದೇಶದಲ್ಲಿತ್ತು.

ಇದನ್ನು ಮನಗಂಡ ಅಂಬೇಡ್ಕರ್ ಅವರು ಹಿಂದೂ ಬೋರ್ಡ್ ಬಿಲ್ ನಲ್ಲಿ ಪರಿವರ್ತನೆ ತಂದರು. ಕಾಶ್ಮೀರದಿಂದ ಕನ್ಯಾಕುಮಾರಿ ‌ವರೆಗೆ ಆಸ್ತಿಯಲ್ಲಿ ಪಾಲು ಸಿಗ್ತಾ ಇದ್ರೆ. ವಿಚ್ಚೇಧನಕ್ಕೆ ಅವಕಾಶ ಸಿಗ್ತಾ ಇದ್ರೆ. ಮರುಮದುವೆಗೆ ಅವಕಾಶ ಸಿಗ್ತಾ ಇದ್ರೆ. ಅದು ಕೇವಲ ಅಂಬೇಡ್ಕರ್ ಅವರು ಕೊಟ್ಟಂತ ಹಿಂದೂ ಕೋಡ್ ಬಿಲ್ ಕೊಟ್ಟಿರುವ ಅವಕಾಶ.

ನೀವು ರಾಜಕೀಯ ಸಿಸ್ಟಮ್ ಬದಲಾವಣೆ ಮಾಡಬೇಕು ಅಂದರೆ. ಯಾವುದೇ ರಾಜಕೀಯ ಪಕ್ಷ ಸೇರಬೇಕು. ಯಾವುದೇ ರಾಜಕೀಯ ಪಕ್ಷದ ಜಂಡಾ ಹಿಡಿಯಬೇಕು ಅಂತೇನಿಲ್ಲ. ಯಾವ ರಾಜಕೀಯ ಪಕ್ಷಗಳು ಯಾವ ಕಾರ್ಯಕ್ರಮ ಮಾಡ್ತಿವೆ. ಯಾವ ಪ್ರತಿನಿಧಿ ಯಾವ ಕೆಲಸ ಮಾಡ್ತಿದಾನೆ ಅಂತ. ನೀವು ಹತ್ತಿರದಿಂದ ಗಮನಿಸಬೇಕು ಆಲೋಚನೆ ‌ಮಾಡಬೇಕು. ದೇಶದಲ್ಲಿ 54% ಯುವ ಜನರೇಷನ್ ನಿಂದ ಕೂಡಿದೆ. ರಾಜಕೀಯ ಬಗ್ಗೆ ನಿಮಗೆ ಜಾಗೃತಿ ಇರಬೇಕು. ಸಂವಿಧಾನ ಓದಬೇಕು. ಯಾರಿಗಾದರೂ ಓಟ್ ಹಾಕಿ. ಯಾವುದಕ್ಕಾಗಿ ಓಟ್ ಹಾಕ್ತಿದಿರಿ. ಆ ಬಗ್ಗೆ ಪ್ರಶ್ನೆಯಿಲ್ಲ ಯಾತಕ್ಕಾಗಿ ಓಟ್ ಹಾಕ್ತಿದಿರಿ. ಏನು ಜಾತಿ ವ್ಯವಸ್ಥೆಗೋಸ್ಕರ ಹಾಕ್ತಿದಿರಾ! ಭಾವನಾತ್ಮಕವಾಗಿ ಓಟ್ ಹಾಕ್ತಿದಿರಾ! ಏನು ವಾಟ್ಸಾಪ್ ನಲ್ಲಿ ಪರಿವರ್ತನೆ ಆಗಿ ಹಾಕ್ತಿದಿರಾ? ಫೇಸ್ ಬುಕ್ ನಲ್ಲಿ ನೋಡಿ ಹಾಕ್ತಿದಿರಾ! ಯಾವ ಟಿವಿ ಆ್ಯಂಕರ್ ಹೇಳಿದಾರೆ ಅಂತ ಹಾಕ್ತಿದಿರಾ ಯೋಚನೆ ಮಾಡಿ. ಯಾವ ಸರಕಾರಗಳು ಸಂವಿಧಾನ ಪ್ರಕಾರ ನಡೆದುಕೊಂಡು ಹೋಗ್ತಿವೆ. ಅದನ್ನು ನೋಡಿ ಹಾಕಿ ಎಂದು ಹೇಳಿದರು.