Bihar Election Outcome CM Wont Change PM Might Change Says Minister Santosh Lad ಬಿಹಾರ ಚುನಾವಣೆ ಬಳಿಕ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುವುದು ಕೇವಲ ಊಹಾಪೋಹ, ಬೇಕಿದ್ದರೆ ಪ್ರಧಾನಿಯೇ ಬದಲಾಗಬಹುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ದಾವಣಗೆರೆ (ನ.1): ಬಿಹಾರ ಚುನಾವಣೆ ಬಳಿಕ ಸಿಎಂ ಬದಲಾಗೋದು ಅನ್ನೋದೆಲ್ಲಾ ಊಹಾಪೋಹ. ಬೇಕಿದ್ದರೆ ಪ್ರಧಾನಿ ಬದಲಾಗಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಗೇನಾದರೂ ಬಿಹಾರದಲ್ಲಿ ನಿತೀಶ್ ಕುಮಾರ್ ಸೋಲು ಕಂಡರೆ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು. ಚಂದ್ರಬಾಬು ನಾಯ್ಡು ಅವರಿಂದ ಒತ್ತಡ ಈಗಾಗಲೇ ಶುರುವಾಗಿದೆ. ನಿತೀಶ್ ಕುಮಾರ್ ಅವರನ್ನು ಡಮ್ಮಿಯಾಗಿ ಬಳಕೆ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ಅವರನ್ನು ಮುಳುಗಿಸುವ ಎಲ್ಲಾ ಪ್ರಯತ್ನ ಬಿಜೆಪಿ ಮಾಡ್ತಾ ಇದೆ. ಅಲ್ಲಿ ಬಿಜೆಪಿ ಸೋಲುವ ಲಕ್ಷಣ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸಂಪುಟ ಪುನಾರಚನೆ ಆಗಲಿದೆ ಎಂದ ಲಾಡ್
ಬಹುಶಃ ಕ್ಯಾಬಿನೆಟ್ ಪುನಾರಚನೆ ಆಗಲಿದೆ. ಕೆಲವೊಂದು ಸಚಿವರನ್ನು ಕೈಬಿಡಲಾಗುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ರೀಶಫಲ್ ಅಂದ್ರೆ ಅದೇ ತಾನೆ. ಯಾವುದೇ ಪೂರ್ಣ ಬಹುಮತದ ಸರ್ಕಾರ ಇದ್ದಾಗ ಕ್ಯಾಬಿನೆಟ್ ಪುನಾರಚನೆ ಆಗುತ್ತದೆ. ಹಿಂದೆಯೂ ಹಲವು ಸರ್ಕಾರಗಳು ಮಾಡಿವೆ. ಸಂಪುಟ ಪುನಾರಚನೆ ವೇಳೆ ಯಾವ ರೀತಿಯ ಮಾನದಂಡ ಹಾಕುತ್ತಾರೆ ಅನ್ನೋದು ಗೊತ್ತಿಲ್ಲ. ಸಿಎಂ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಅದು. ನವೆಂಬರ್ ಕ್ರಾಂತಿ ಏನಿಲ್ಲ. ಅದೂ ಬರೀ ಚರ್ಚೆ ಅಷ್ಟೇ ಎಂದು ಹೇಳಿದರು.
ಸಿಎಂ ಪ್ರಮಾಣ ವಚನಕ್ಕೆ ಡೇಟ್ ಫಿಕ್ಸ್ ವಿಚಾರದ ಬಗ್ಗೆ ಮಾತನಾಡಿದ ಅವರು, ನನಗೆ ಅದರ ಬಗ್ಗೆ ನಂಗೇನು ಗೊತ್ತಿಲ್ಲ ನಾನು ಅಮಾಯಕ. ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯ ಶುರುವಾಗಿದೆ. ಅದಕ್ಕೆ ಎಲ್ಲಾ ಹೆಣ್ಣುಮಕ್ಕಳ ಅಕೌಂಟ್‌ಗೆ 10 ಸಾವಿರದಂತೆ 7500 ಕೋಟಿ ಖರ್ಚು ಮಾಡಿದ್ದಾರೆ. ಯಾವುದೇ ಪ್ರಣಾಳಿಕೆಯಲ್ಲಿ ಇಲ್ಲದೆ ಎಲ್ಲ ಹೆಣ್ಣು ಮಕ್ಕಳ ಅಕೌಂಟ್ ಗೆ 10 ಸಾವಿರ ಹಾಕಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಇಲ್ಲದೆ ಸೋಲುವ ಭಯದಲ್ಲಿ ಹಣ ಹಾಕಿದ್ದಾರೆ. ಎಲ್ಲ ರಾಜ್ಯದವರು ನಮ್ಮ ಸ್ಕೀಮ್ ಉಪಯೋಗಿಸುತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪ್ರತಾಪ್ ಸಿಂಹ-ಪ್ರದೀಪ್ ಈಶ್ವರ್ ವಾಕ್ಸಮರದ ಬಗ್ಗೆ ಮಾತನಾಡಿದ ಅವರು, ನಾನು ಇಬ್ಬರಲ್ಲೂ ಮನವಿ ಮಾಡ್ತೀನಿ, ಇಲ್ಲಿ ನಾವು ಯಾರು ಪರ್ಮನೆಂಟ್ ಅಲ್ಲ. ಅವರಿಬ್ಬರು ಯುವ ರಾಜಕಾರಣಿಗಳು. ರಾಜಕಾರಣದಲ್ಲಿ ಇನ್ನೂ ಬಹಳ ದೂರ ಹೋಗೋದಿದೆ. ಯಾರು ಸರಿ ಯಾರು ತಪ್ಪು ಅಂತ ಹೇಳೋದರಲ್ಲಿ ಅರ್ಥವೇ ಇಲ್ಲ. ಈ ತರಾ ಹೇಳಿಕೆ ಸರಿಯಲ್ಲ ಅಂತ ನಾನು ಸಹೋದರನಾಗಿ ಮನವಿ ಮಾಡ್ತೀನಿ. ಯಾರೆ ಆಗಲಿ ವೈಯಕ್ತಿಕ ವಿಚಾರ ಮಾತಾಡೋದು ಸರಿಯಲ್ಲ ಎಂದು ಹೇಳಿದರು.
