ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಡೆದ ಸ್ಫೋಟಗಳಿಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರು (ನ.11): ದೆಹಲಿಯಲ್ಲಿ ನಡೆದ ಕಾರ್‌ ಬಾಂಬ್‌ ಸ್ಫೋಟ ವಿಚಾರದಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 10 ವರ್ಷದಲ್ಲಿ 25 ಬಾಂಬ್ ಸ್ಪೋಟ ಆಗಿದೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ಸ್ಪೋಟಗಳಾಗಿದೆ. ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆಗಿದ್ದೇವೆ. ಈಗ ರಾಜಕೀಯ ಮಾತನಾಡಲ್ಲ ಎಂದು ಹೇಳಿದ್ದಾರೆ.

ತಾಲಿಬಾನ್ ಸಚಿವ ಭಾರತದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹೆಣ್ಣು ಮಕ್ಕಳು ಇರಬಾರದು ಅಂತಾನೆ. ಅದನ್ನ ಕೇಂದ್ರ ಸರ್ಕಾರ ಒಪ್ಪುತ್ತದೆ. ಸಿಂಧೂರ್, ಹೆಣ್ಣುಮಕ್ಕಳ ಗೌರವ ಅಂದವರು ಎಲ್ಲಿ ಹೋದರು? ನಿಮ್ಮ ಅಕ್ಕತಂಗಿಯರು ಪ್ರೆಸ್‌ಮೀಟ್‌ಗೆ ಬರಬಾರದು ಎಂದರಲ್ಲ ಆಗ ದೇಶಕ್ಕೆ ಅವಮಾನ ಆಗಲಿಲ್ವಾ? ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ದಾರ ಮಾಡಿದ್ದೀರಿ? ಸಗಣಿ, ಉಚ್ಚೆ ಅನ್ನೋದನ್ನ ಬಿಟ್ಟು ಇನ್ನೇನು ಮಾತನಾಡಿದ್ದೀರ? ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉಚ್ಚೆ ಕುಡಿಸಿ ಎಂದು ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಅಂಬೇಡ್ಕರ್ ಭವನದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಸಂತೋಷ್‌ ಲಾಡ್‌ ಭಾಗವಹಿಸಿದ್ದರು. ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಕಳಕಳಿ ಭದ್ರತಾ ಮಂಡಳಿ, ಮಂಡ್ಯ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್ ಸೇರಿ‌ ಹಲವರು ಭಾಗಿಯಾಗಿದ್ದರು.

ಏರ್‌ಪೋರ್ಟ್‌ನಲ್ಲಿ ನಮಾಜ್‌ ಕೇಂದ್ರ ನಿಯಂತ್ರಣ ಮಾಡ್ಬೇಕು ಎಂದ ಲಾಡ್‌

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್ ವಿಚಾರದಲ್ಲಿ ಮಾತನಾಡಿದ ಅವರು, ಏರ್‌ಪೋರ್ಟ್ ನಿರ್ವಹಣೆ ಮಾಡುವುದು ಕೇಂದ್ರ ಸರ್ಕಾರ. ಇದನ್ನೆಲ್ಲಾ ಕೇಂದ್ರ ಸರ್ಕಾರ ಕಂಟ್ರೋಲ್ ಮಾಡಬೇಕು. ಅವರಿಗೆ ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಲು ಅನುಮತಿ ಕೊಟ್ಟಿದ್ಯಾರು? ಅಕ್ರಮ ಮದರಸಗಳಿದ್ದರೆ ದೂರು ನೀಡಲಿ. ದೂರು ಕೊಟ್ಟಿದ್ದರೆ, ತನಿಖೆ ನಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಜೈಲಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಲಾಡ್‌, ಶೇಮ್ ಆನ್ ಸಿಸ್ಟಮ್. ದಕ್ಷ ಅಧಿಕಾರಿಗಳನ್ನ ನೇಮಕ ಮಾಡಬೇಕು, ಭ್ರಷ್ಟರ ವಿರುದ್ಧ ಕ್ರಮ ಆಗಬೇಕು. ಎಲ್ಲೋ ಒಂದು ಕಡೆ ಆದರೆ ಸರ್ಕಾರವನ್ನ ಬ್ಲೇಮ್ ಮಾಡಲು ಆಗುತ್ತಾ? ಹಾಗಾದರೆ ದೆಹಲಿ ಸ್ಪೋಟ ಕೇಂದ್ರ ಸರ್ಕಾರ ಹೊಣೆ ಹೊರುತ್ತಾ? ಸಿದ್ದರಾಮಯ್ಯ ರಾಜೀನಾಮೆ ಕೇಳುವವರು, ಮೋದಿ ರಾಜೀನಾಮೆ ಕೇಳ್ತಾರ? ಎಂದು ಪ್ರಶ್ನೆ ಮಾಡಿದ್ದಾರೆ.