ಬೆಂಗಳೂರಿನಲ್ಲಿ 7.11 ಕೋಟಿ ರೂ. ಹೊತ್ತೊಯ್ಯುತ್ತಿದ್ದ ನಗದು ವಾಹನ ದರೋಡೆ ಪ್ರಕರಣವನ್ನು ಪೊಲೀಸರು 60 ಗಂಟೆಗಳಲ್ಲಿ ಭೇದಿಸಿದ್ದಾರೆ. ಈ ಪೂರ್ವ ಯೋಜಿತ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 5.76 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು (ನ.22): ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಎಟಿಎಂ ನಗದು-ವಾಹನ ದರೋಡೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇಲ್ಲಿಯವರೆಗೂ 5.76 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಗಳ ಬಂಧನವಾಗಿದ್ದು, ಘಟನೆ ನಡೆದ ಕ್ಷಣದಿಂದ 60 ಗಂಟೆಗಳ ಅವಧಿಯಲ್ಲಿ ಈ ಹಣವನ್ನು ವಶಪಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಮೊದಲೇ ನಿಖರವಾಗಿ ಪ್ಲ್ಯಾನ್‌ಮಾಡಲಾಗಿದ್ದ ಮತ್ತು ಮಾಹಿತಿ ಆಧಾರಿತ ದರೋಡೆ ಇದಾಗಿತ್ತು ಎಂದು ತಿಳಿಸಿದ್ದು, ಇಲ್ಲಿಯವರೆಗೂ 3 ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.ನ. 19 ರಂದು ಮಧ್ಯಾಹ್ನ 1.20ರ ಸುಮಾರಿಗೆ 7.11 ಕೋಟಿ ಹಣ ಹೊತ್ತೊಯ್ಯುತ್ತಿದ್ದ ವ್ಯಾನ್‌ಅನ್ನು ಡಿ.ಜೆ ಹಳ್ಳಿಯ ಬಳಿ, ಅಪರಿಚಿತರು RBI ನಿಯಂತ್ರಣಾಧಿಕಾರಿಗಳಂತೆ ನಟಿಸಿ ಅಡ್ಡಗಟ್ಟಿದ್ದರು. ಹಣ ಹೊತ್ತೊಯ್ದಿದ್ದ ವ್ಯಾನ್‌ ಅಪಹರಣ ಆಗಿರುವ ಬಗ್ಗೆ ಸಿಎಂಎಸ್‌ ಸಂಸ್ಥೆಯಿಂದ ವರದಿ ಬಂದಿತ್ತು.ನಂತರದ ತನಿಖೆಯಲ್ಲಿ ಈ ಘಟನೆ 12:48 ಗಂಟೆಗಳ ಸಮಯದಲ್ಲಿ ಅಶೋಕ ಪಿಲ್ಲ‌ರ್-ಜಯನಗರ-ಡೇರಿ ಸರ್ಕಲ್‌ನಲ್ಲಿ ನಡೆದಿರುವುದು ದೃಢಪಟ್ಟಿತ್ತು.

ಅಪರಾಧಿಗಳು ವ್ಯಾನ್ ಅನ್ನು ತಡೆದು, ಶಸ್ತ್ರ ತೋರಿಸಿ, ಬೆದರಿಸಿ, ನಗದು ಪೆಟ್ಟಿಗೆಗಳನ್ನು ತೆಗೆದುಕೊಂಡು ಮಧ್ಯಾಹ್ನ 13:16 ಗಂಟೆಗೆ ವಾಹನವನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿದ್ದ ಸವಾಲುಗಳು

ಈ ದರೋಡೆ ನಿಖರವಾದ ಪೂರ್ವ ಯೋಜಿತವಾಗಿದ್ದು, ಪ್ರಾಥಮಿಕ ಸುಳಿವುಗಳು ತೀರಾ ಕಡಿಮೆ ಇದ್ದವು. ಅಪರಾಧಿಗಳು ಅನೇಕ CCTV ಕಾಣದ ಪ್ರದೇಶಗಳಲ್ಲಿ ನಿಖರ ನಿಲುಗಡೆಗಳನ್ನು ಮಾಡಿದ್ದರು. ಕಾರ್ಯಾಚರಣೆ ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ಎಲ್ಲಿಯೂ ಬಳಸಿರಲಿಲ್ಲ. ತನಿಖೆ ದಿಕ್ಕು ತಪ್ಪಿಸಿಕೊಳ್ಳಲು ಹಲವು ಭಾಷೆಗಳಲ್ಲಿ ಸಂವಹನ ನಡೆಸಲಾಗಿತ್ತು. ಅನೇಕ ವಾಹನಗಳನ್ನು ಬಳಸಲಾಗಿದ್ದು, ಅವುಗಳ ನಂಬರ್ ಪ್ಲೇಟ್ ಗಳನ್ನು ಪದೇ ಪದೇ ಬದಲಾಯಿಸಲಾಗಿತ್ತು. ದರೋಡೆ ಮಾಡಿದ ನೋಟುಗಳು ಸರಣಿ ಸಂಖ್ಯೆಗಳ ದಾಖಲಾತಿ ಇರದ ಕಾರಣ ಗುರುತಿಸುವುದು ಕಷ್ಟವಾಗಿತ್ತು. ಅಧಿಕೃತವಲ್ಲದ ಮಾಧ್ಯಮ ವರದಿಗಳು ಆರಂಭಿಕ ತನಿಖೆಯ ಸಂವೇದನಾಶೀಲ ಹಂತಗಳಿಗೆ ಅಡಚಣೆ ತಂದವು.ಈ ಎಲ್ಲಾ ಸವಾಲುಗಳ ನಡುವೆಯೂ ತಾಂತ್ರಿಕ ವಿಶ್ಲೇಷಣೆ ಮತ್ತು ತಂಡದ ಸಂಯೋಜಿತ ಕಾರ್ಯದಿಂದ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆ

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡಿದ್ದರು. ದಕ್ಷಿಣ ವಿಭಾಗದ 11 ಪಿಐ ಗಳು ಮತ್ತು 02 ಎಸಿಪಿಗಳೊಂದಿಗೆ, ಸಿಸಿಬಿ ವಿಭಾಗದ 6 ಪಿಐ ಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸುಳಿವುಗಳನ್ನು ಹಿಂಬಾಲಿಸಲಾಯಿತು (ಕೆಲವು ತಂಡಗಳು ಗೋವಾ ತನಕ ವ್ಯಾಪ್ತಿಯನ್ನು ವಿಸ್ತರಿಸಿದವು). 30 ಕ್ಕಿಂತ ಹೆಚ್ಚು ಮಂದಿಯನ್ನು ಪ್ರಕರಣದಲ್ಲಿ ವಿಚಾರಣೆ ಮಾಡಲಾಗಿತ್ತು. CCTV, ವಾಹನ ಚಲನವಲನ ಮತ್ತು ಸ್ಥಳೀಯ ಗುಪ್ತಚರ ಮಾಹಿತಿ ನಿರಂತರವಾಗಿ ವಿಶ್ಲೇಷಿಸಲಾಯಿತು. ಪ್ರಥಮ 24 ಗಂಟೆಯಲ್ಲಿಯೇ ಆರೋಪಿಗಳು ಮತ್ತು ಬಳಸಿದ ವಾಹನಗಳ ಬಗ್ಗೆ ಪ್ರಮುಖ ಸುಳಿವುಗಳು ಲಭಿಸಿದ್ದವು.

ಬೆಂಗಳೂರು ಪೊಲೀಸರ ಸಾಧನೆ

ಘಟನೆ ನಡೆದ 54 ಗಂಟೆಯಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. 60 ಗಂಟೆಯ ಒಳಗೆ 5.76 ಕೋಟಿ ಹಣ ವಶಪಡಿಸಿಕೊಳ್ಳಲಾಯಿತು. ಕೃತ್ಯಕ್ಕೆ ಬಳಸಿದ 1 ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಬೆಂಗಳೂರು ಮೂಲದ 6-8 ಜನರ ಗುಂಪು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.