1960s Hotel Menu: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿರುವ ಬದ್ರಿಯಾ ರೆಸ್ಟೋರೆಂಟ್‌ನಲ್ಲಿ 1960ರ ಹಳೆಯ ಮೆನು ಬೋರ್ಡ್ ಒಂದು ವೈರಲ್ ಆಗಿದೆ. ಅಂದು ಕೇವಲ 1.50 ರೂಪಾಯಿಗೆ ಮಟನ್ ಬಿರಿಯಾನಿ ಮತ್ತು 5 ಪೈಸೆಗೆ ಆಮ್ಲೆಟ್ ಸಿಗುತ್ತಿತ್ತು ಎಂಬುದನ್ನು ಈ ಬೋರ್ಡ್ ತೋರಿಸುತ್ತದೆ. 

ಚಿಕ್ಕಮಗಳೂರು: ಇಂದು ನಾನ್-ವೆಜ್ ರೆಸ್ಟೋರೆಂಟ್‌ಗೆ ಹೋಗಿ ಊಟ ಮಾಡಬೇಕೆಂದ್ರೆ ಕನಿಷ್ಠ 500 ರೂಪಾಯಿ ಬೇಕಾಗುತ್ತದೆ. ಹೋಟೆಲ್‌ಗಳಲ್ಲಿಂದು ಚಿಕನ್ ಮತ್ತು ಮಟನ್‌ನಲ್ಲಿಯೇ ಬಗೆ ಬಗೆಯ ಖಾದ್ಯಗಳನ್ನು ಮಾಡಿಕೊಡಲಾಗುತ್ತದೆ. ಎಲ್ಲಾ ಬಗೆ ಖಾದ್ಯಕ್ಕೆ ಪ್ರತ್ಯೇಕ ಬೆಲೆ ಇರುತ್ತದೆ. ವ್ಲಾಗರ್ ಒಬ್ಬರು 1960ರಲ್ಲಿ ಮೆನು ಬೋರ್ಡ್ ವಿಡಿಯೋ ಮಾಡಿದ್ದಾರೆ. ಅಂದಿನ ಬೆಲೆಗಳನ್ನು ನೋಡಿದ್ರೆ 2 ರಿಂದ 3 ರೂಪಾಯಿಯಲ್ಲ ಹೊಟ್ಟೆ ತುಂಬಾ ಊಟ ಮಾಡಬಹುದು.

1960ರ ಹೋಟೆಲ್ ಮೆನುವಿನ ಬೋರ್ಡ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಬದ್ರಿಯಾ ರೆಸ್ಟೋರೆಂಟ್ ಮಾಲೀಕರು ತಮ್ಮ ತಂದೆಯ ನೆನಪಿಗಾಗಿ 1960ರ ಹೋಟೆಲ್ ಮೆನುವಿನ ಬೋರ್ಡ್ ಗೋಡೆಯ ಮೇಲೆ ಹಾಕಿಕೊಂಡಿದ್ದಾರೆ. 1960ರಲ್ಲಿಯೇ ಬದ್ರಿಯಾ ರೆಸ್ಟೊರೆಂಟ್‌ನಲ್ಲಿ ಇಂದು ಕಾಣಬಹುದಾದ ಬಗೆ ಬಗೆಯ ಚಿಕನ್ ಮತ್ತು ಮಟನ್ ಖಾದ್ಯಗಳನ್ನು ನೋಡಬಹುದಾಗಿದೆ.

ರೆಸ್ಟೋರೆಂಟ್ ಮಾಲೀಕರು ಹೇಳಿದ್ದೇನು?

ನಾವು ಬಸರಿಕಟ್ಟೆ ಮೂಲದವರಾಗಿದ್ದು, ನಮ್ಮ ತಂದೆಯವರು ಬದ್ರಿಯಾ ಹೆಸರಿನಲ್ಲಿ ಹೋಟೆಲ್ ಆರಂಭಿಸಿದರು. ಹೋಟೆಲ್ ಆರಂಭವಾಗಿ ಸುಮಾರು 60 ವರ್ಷಗಳು ಕಳೆದಿವೆ. ನಮ್ಮ ತಂದೆ ಹೋಟೆಲ್ ಆರಂಭಿಸಿದ್ದಾಗಿನ ನಮ್ಮಲ್ಲಿ ಸಿಗುತ್ತಿದ್ದ ಆಹಾರದ ಬೆಲೆ ಇದಾಗಿದೆ. ತಂದೆಯವರ ನೆನಪಿಗಾಗಿ ಈ ಬೋರ್ಡ್ ಉಳಿಸಿಕೊಂಡಿದ್ದೇವೆ. ಅಂದು ಒಂದೂವರೆ ರೂಪಾಯಿಗೆ ನೀಡುತ್ತಿದ್ದ ಮಟನ್ ಬಿರಿಯಾನಿಯನ್ನು ಇಂದು 240 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಇಂದು ನೀಡುವ 3 ಪ್ಲೇಟ್ ಸೇರಿಸಿದ್ರೆ ಅಂದಿನ 1 ಪ್ಲೇಟ್ ಆಗುತ್ತದೆ. ಅಷ್ಟು ದೊಡ್ಡ ಪ್ಲೇಟ್‌ನಲ್ಲಿ ಬಿರಿಯಾನಿ ನೀಡಲಾಗುತ್ತಿತ್ತು ಎಂದು ಮಾಲೀಕರು ಹೇಳುತ್ತಾರೆ.

1960ರ ಮೆನು ಕಾರ್ಡ್

ಆಹಾರಬೆಲೆ
ಮಟನ್ ಬಿರಿಯಾನಿ (1 ಪ್ಲೇಟ್)1.50 ರೂಪಾಯಿ
ಮಟನ್ ಚಾಕ್ ಪೀಸ್1 ರೂಪಾಯಿ 12 ಪೈಸೆ
ಕುರ್ಮಾ ಊಟ10 ಪೈಸೆ
ಸುಕ್ಕಾ ಮೀನು40 ಪೈಸೆ
ಮೀನು ಸಾರು40 ಪೈಸೆ
ಆಮ್ಲೆಟ್5 ಪೈಸೆ
ಮಟನ್ ಬಟರ್ ಫ್ರೈ50 ಪೈಸೆ
ಅಕ್ಕಿ ಕಡಬು20 ಪೈಸೆ
ಬಟರ್ ಚಿಕನ್ ಫ್ರೈ ಊಟ12 ಪೈಸೆ
ಚಿಕನ್ ತಂದೂರಿ (1 ಪೀಸ್)20 ಪೈಸೆ
ಚಿಕನ್ ಬಿರಿಯಾನಿ (1 ಪ್ಲೇಟ್)10 ಪೈಸೆ
ಟೀ10 ಪೈಸೆ
ಅನ್ನ (1 ಬೌಲ್)37 ಪೈಸೆ 
ಮಟನ್ ಬಿರಿಯಾನಿ ಅರ್ಧ ಪ್ಲೇಟ್87 ಪೈಸೆ
ಬೇಳೆ ಸಾರು ಊಟ60 ಪೈಸೆ

1960ರ ಮೆನು ಬೋರ್ಡ್‌ನಲ್ಲಿ ಇಡ್ಲಿ ಸೇರಿದಂತೆ ವಿವಿಧ ತಿಂಡಿಗಳ ಬೆಲೆಯನ್ನು ನಮೂದಿಸಲಾಗಿದೆ. ಆದರೆ ಕಾಲಕ್ರಮೇಣ ಬೋರ್ಡ್‌ನಲ್ಲಿರುವ ಅಂಕಿಗಳು ಅಳಕಿವೆ. ಆದರೆ ಇಂದು ಈ ನಾನ್-ವೆಜ್ ಖಾದ್ಯಗಳ ಬೆಲೆ 200 ರೂಪಾಯಿಗೂ ಅಧಿಕವಾಗಿದ್ದು, ನೀಡಲಾಗುವ ಪ್ರಮಾಣವೂ ಕಡಿಮೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 54 ವರ್ಷದ ಹಿಂದೆ ಕದ್ದಿದ್ದ 37 ರೂ.ಯನ್ನ ವಿದೇಶಕ್ಕೆ ಹೋಗಿ ಹಿಂದಿರುಗಿಸಿ ಕೊಟ್ಟ ಬಂದ ಭಾರತೀಯ

ನೆಟ್ಟಿಗರು ಹೇಳಿದ್ದೇನು?

ಆವಾಗ ಅಷ್ಟೊಂದು ಕಡಿಮೆ ಬೆಲೆ ಇದ್ದರೂ ಸಾಮಾನ್ಯ ಜನರಿಗೆ ಹೋಟೆಲ್‌ಗಳಲ್ಲಿ ಊಟ ಮಾಡುವಷ್ಟು ಹಣ ಸಿಗುತ್ತಿರಲಿಲ್ಲ. 1960 ನೇ ಇಸ್ವಿಗೆ ಅದೇ ದೊಡ್ಡ ಮೊತ್ತ. ತಿಂಡಿ ಇಪ್ಪತ್ತು ಪೈಸೆ, ನಲವತ್ತು ಪೈಸೆ ಅನ್ನುತ್ತೇವೆ. ಆಗ ಇಪ್ಪತ್ತು ಪೈಸೆ ಸಿಗೋದೇ ಕಷ್ಟವಿರುತ್ತಿತ್ತು. ಈಗಿನ ಕಾಲ ತೆಗೆದುಕೊಳ್ಳೋಣ. ಈಗ ಯಾವುದೇ ತಿಂಡಿ ಪದಾರ್ಥಗಳು ನೂರರ ಆಸುಪಾಸಿದೆ. ಅದೇ ಈಗ ಸ್ವಲ್ಪ ಜಾಸ್ತಿ ಅಂತ ಕಾಣಿಸುತ್ತೆ. ಇನ್ನು ಹತ್ತಿಪತ್ತು ವರ್ಷ ಕಳೆದರೆ ಇದೇ ಪದಾರ್ಥ ಐನೂರು ಆರುನೂರು ರುಪಾಯಿಗಳ ಆಸುಪಾಸಿರುತ್ತದೆ‌. ಆಗ ಈಗಿನ ದರ ಬಹಳ ಸೋವಿ‌ ಅಂತನಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ: Chikkamagaluru: ಕಡಬು-ಮೀನುಸಾರು ತಿಂದಿದ್ದ 35 ವರ್ಷದ ಹಳೆ ಬಿಲ್ ನೀಡಲು ಕೊಟ್ಟಿಗೆಹಾರಕ್ಕೆ ಬಂದ ವ್ಯಕ್ತಿ