Asianet Suvarna News Asianet Suvarna News

ಉಡುಪಿಯಲ್ಲಿ ನ.20ಕ್ಕೆ ಅಶೋಕ್‌ ಗ್ರಾಮವಾಸ್ತವ್ಯ

  •  ಉಡುಪಿಯಲ್ಲಿ ನ.20ಕ್ಕೆ ಅಶೋಕ್‌ ಗ್ರಾಮವಾಸ್ತವ್ಯ
  • ಕೊಕ್ಕರ್ಣೆ ಮತ್ತು ಆರೂರು ಗ್ರಾಮಗಳಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ
minister r Ashok grama vastaya in Udupi on november 20 snr
Author
Bengaluru, First Published Nov 7, 2021, 6:45 AM IST

ಉಡುಪಿ (ನ.07): ಉಡುಪಿ (Udupi) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಕ್ಕರ್ಣೆ ಮತ್ತು ಆರೂರು ಗ್ರಾಮಗಳಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನ.20ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಕಂದಾಯ ಸಚಿವ ಆರ್‌. ಅಶೋಕ್‌ (Minister R Ashok) ಭಾಗವಹಿಸಿ, ರಾತ್ರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. 

ಅಂದು ಬೆಳಗ್ಗೆ ಕೊಕ್ಕರ್ಣೆಯಲ್ಲಿ ಮತ್ತು ಮಧ್ಯಾಹ್ನ ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆರೂರುನಲ್ಲಿ ವಾಸ್ತವ್ಯ ಮಾಡಲಿದ್ದಾರೆ. 

ನ.21ರಂದು ಬೆಳಗ್ಗೆ ಕಂಜೂರು ಗ್ರಾಮದಲ್ಲಿನ ಕೊರಗರ ಕಾಲೋನಿಗೆ (Koraga Colony) ಭೇಟಿ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ದಾವಣಗೆರೆಯಲ್ಲಿ ವಾಸ್ತವ್ಯ

ಕೋವಿಡ್‌ನಿಂದಾಗಿ (Covid) ಸ್ಥಗಿತಗೊಂಡಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ಹೊನ್ನಾಳಿ ಕ್ಷೇತ್ರದ ಕುಂದೂರು ಗ್ರಾಮದಲ್ಲಿ ಪುನರ್‌ ಆರಂಭಗೊಂಡಿತ್ತು. ಕುಂದೂರು ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌.ಅಶೋಕ ಸ್ವತಃ ಇಡೀ ಊರಿನ ಜನರ ಮನೆ ಬಾಗಿಲಿಗೆ ಹೋಗಿ ಜನರ ಅಹವಾಲು ಆಲಿಸುವ ಮೂಲಕ ಇಡೀ ಗ್ರಾಮಸ್ಥರ ಮನ ಗೆದ್ದಿದ್ದಾರೆ. ಒಟ್ಟು 36 ತಾಸುಗಳನ್ನು ಸಚಿವರು ಕುಂದೂರಿನಲ್ಲಿ ಕಳೆದಿದ್ದರು.

ಶನಿವಾರ ರಾತ್ರಿಯಿಂದಲೇ ಇಡೀ ಗ್ರಾಮದ ಕೇರಿ ಕೇರಿ ಸುತ್ತಾಡಿ, ಮಹಿಳೆಯರು, ಮಕ್ಕಳು, ಹಿರಿಯರು, ವಯೋವೃದ್ಧರ ಜೊತೆಗೆ ಸರ್ಕಾರದ ಯೋಜನೆ, ಸೌಲಭ್ಯ ನಿಮಗೆ ಸುಲಭವಾಗಿ ತಲುಪುತ್ತಿವೆಯಾ ಎಂದೆಲ್ಲಾ ವಿಚಾರಿಸಿದ್ದರು. 

 ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ ಜತೆ ವಾಯು ವಿಹಾರ ಮುಗಿ​ಸು​ತ್ತಿ​ದ್ದಂತೆ ಕೇರಿ ಕೇರಿಗೂ ಭೇಟಿ ನೀಡಿ, ಗ್ರಾಮದ ದೇವಸ್ಥಾನ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲೂ ಗ್ರಾಮಸ್ಥರು, ಹಿರಿಯರೊಂದಿಗೆ ಕುಶಲೋಪರಿ ವಿಚಾರಿಸಿದರು, ಸಮಸ್ಯೆಗಳ ಕುರಿತು ಚರ್ಚಿಸಿದ್ದರು.

ಭೋವಿ ಕಾಲೋನಿಗೆ ತೆರಳಿದ ಸಚಿವರು ಅಲ್ಲೂ ಜನರ ಅಹವಾಲು ಆಲಿಸಿ ಮನವಿ ಸ್ವೀಕರಿಸಿದರು. ಬಹುತೇಕ ಮನವಿಗಳು ಬಗರ್‌ ಹುಕುಂ ಸಾಗುವಳಿ ಪತ್ರ, ಮನೆ, ನಿವೇಶನ ಕೋರಿ, ಗ್ರಾಮಕ್ಕೆ ಸ್ಮಶಾನ ಕೋರಿದ್ದಾಗಿದ್ದವು. ಗ್ರಾಮಸ್ಥರ ಪೈಕಿ ಯಾರಾದರೂ ಜಮೀನು ನೀಡಿದರೆ ಅದನ್ನು ಸರ್ಕಾರದಿಂದ ಖರೀದಿಸಿ, ಅಲ್ಲಿ ಮನೆ ಕಟ್ಟಿಸಿಕೊಡಲು, ಸ್ಮಶಾನ ನಿರ್ಮಿಸಲು ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು.  

ಜನಸಾಮಾನ್ಯರಂತೆ ಕುಂದೂರು ಗ್ರಾಮದ ಗೂಡಂಗಡಿಯಲ್ಲಿ ಟೀ ಕುಡಿ​ದು ಜನರ ಜೊತೆಗೆ ಚರ್ಚಿಸಿದರು. ನಂತರ ದಲಿತರ ಕಾಲೋನಿಗೆ ತೆರಳಿ​ದಾ​ಗ ಮಹಿಳೆಯರು ಆರತಿ ಮಾಡಿ, ಸಚಿವ, ಶಾಸಕರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಬಳಿಕ ದಲಿತ ಮುಖಂಡ, ಬಗರ್‌ ಹುಕುಂ ಸಮಿತಿ ಸದಸ್ಯ ಡಿ.ಶಾಂತರಾಜ, ಶಾರದಮ್ಮ ದಂಪತಿ ಮನೆಗೆ ತೆರ​ಳಿ ರಾಗಿ ತಾಲಿಪಟ್ಟು, ತಟ್ಟೆಇಡ್ಲಿ, ತರಕಾರಿ ಉಪ್ಪಿಟ್ಟು, ಜಾಮೂನು, ಕಾಳು ಪಲ್ಯ, ಚಟ್ನಿಪುಡಿ, ತುಪ್ಪ, ಮೊಸರು ಒಳಗೊಂಡ ಬೆಳಗಿನ ಉಪಹಾರ ಮುಗಿಸಿದರು. ಯಾವುದೇ ಹಮ್ಮುಬಿಮ್ಮು ಇಲ್ಲದೆ ಇದೇ ತಾಲಿಪಟ್ಟು, ಕೆಂಪು ಚಟ್ನಿ, ತುಪ್ಪ, ತಿಂಡಿಗಳನ್ನೆಲ್ಲಾ ಕಟ್ಟಿಕೊಡಿ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಇದನ್ನೇ ತಿನ್ನುತ್ತೇನೆಂದು ಹೇಳುವ ಮೂಲಕ ಶಾಂತರಾಜ ದಂಪತಿ, ಕಾಲೋನಿ ಜನರು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.

ಅನಾರೋಗ್ಯದಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಕುಂದೂರು ಗ್ರಾಮದ ನಯನಾ, ಮಲ್ಲಿಕಾ ಸೋದರಿಯರನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳುವುದಾಗಿ ಸಚಿವ ಆರ್‌.ಅಶೋಕ ಘೋಷಿಸಿದರು. ಎಸ್ಸೆಸ್ಸೆಲ್ಸಿವರೆಗಿನ ಓದಿನ ಖರ್ಚನ್ನು ಭರಿಸುತ್ತೇನೆ. ಬೆಂಗಳೂರಲ್ಲಾಗಲಿ ಅಥವಾ ಹೊನ್ನಾಳಿಯಲ್ಲೇ ಆಗಲಿ ಈ ಮಕ್ಕಳ ಓದಿಗೆ ನೆರವು ನೀಡುವೆ. ದೇವರು ಕೊಟ್ಟರೆ ಪಿಯುಸಿಯನ್ನೂ ಓದಿಸುತ್ತೇನೆ ಎಂದರು. ಇಡೀ ಗ್ರಾಮಸ್ಥರು, ಹೊನ್ನಾಳಿ ಜನತೆ ತೋರಿದ ಪ್ರೀತಿ, ಅಭಿಮಾನಕ್ಕೆ ಖುಷಿ ಆದರಲ್ಲದೆ, ಇನ್ನೊಂದು ತಿಂಗಳಲ್ಲಿ ಮತ್ತೆ ಹೊನ್ನಾಳಿಗೆ ಬಂದು, ಎಸಿ ಕಚೇರಿ ಉದ್ಘಾಟಿಸುವ ವಾಗ್ದಾನ ಮಾಡಿದ್ದರು.

ರಾಜ್ಯದ 227 ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿದೆ. ಅಲ್ಲಿನ ವಸ್ತುಸ್ಥಿತಿ ಅವಲೋಕಿಸಲಾಗಿದೆ. ಕಂದಾಯ ಇಲಾಖೆಯನ್ನೇ ಮನೆ ಮನೆಗೆ ಕೊಂಡೊಯ್ಯುವಂತೆ ಬೇರೆ ಬೇರೆ ಇಲಾಖೆಗಳನ್ನೂ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ. ದಲಿತ ಕೇರಿಯ ಜನರು ಬಹುತೇಕ ಜಮೀನು, ಸೂರು, ನೀರು ಕೇಳುತ್ತಿದ್ದಾರೆ. ಅವುಗಳನ್ನು ಆದಷ್ಟು ಬೇಗ ಪೂರೈಸುತ್ತೇನೆ. ಆಶ್ರಯ ಯೋಜನೆಯಿಂದ ಜಮೀನು ಕೊಡಿಸಲು ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ್ದರು.

Follow Us:
Download App:
  • android
  • ios