ಕೋವಿಡ್ ಲಸಿಕೆ ಪಡೆವವರ ಸಂಖ್ಯೆ 40% ಕುಸಿತ..!
* ಕೋವಿಡ್-19 ಲಸಿಕೆ ಅಭಿಯಾನ ಮೊದಲಿನಷ್ಟು ಬಿರುಸಿನಿಂದ ನಡೆಯುತ್ತಿಲ್ಲ
* ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕು
* ಡಿಸೆಂಬರ್ ಒಳಗೆ ಎಲ್ಲ ಫಲಾನುಭವಿಗಳಿಗೆ ಲಸಿಕೆ ನೀಡಬೇಕಿದೆ
ರಾಕೇಶ್ ಎನ್.ಎಸ್.
ಬೆಂಗಳೂರು(ನ.05): ರಾಜ್ಯದಲ್ಲಿ(Karnataka) ಕೋವಿಡ್-19(Covid19) ಹರಡುವ ವೇಗಕ್ಕೆ ಲಗಾಮು ಬಿದ್ದಿರುವಂತೆಯೇ ಇತ್ತ ಕೋವಿಡ್ ಲಸಿಕೆ ಪಡೆಯುವ ಉತ್ಸಾಹ ಜನರಲ್ಲಿ ಮಾಯವಾಗಿದೆ. ರಾಜ್ಯದಲ್ಲಿ ಇನ್ನೂ ಸಾಕಷ್ಟು ಮಂದಿ ಮೊದಲ ಮತ್ತು ಎರಡನೇ ಡೋಸ್ ಪಡೆಯಲು ಬಾಕಿಯಿದ್ದರೂ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ಪಡೆಯುವರ ಸಂಖ್ಯೆಯಲ್ಲಿ ಹೆಚ್ಚೂ ಕಡಿಮೆ ಶೇ.40ರಷ್ಟು ಕುಸಿತ ಕಂಡು ಬಂದಿದೆ.
ರಾಜ್ಯದಲ್ಲಿ ಆರೋಗ್ಯ ಇಲಾಖೆಯ(Department of Health) ಮಾಹಿತಿಯ ಪ್ರಕಾರ 18 ವರ್ಷ ಮೇಲ್ಪಟ್ಟ4.87 ಕೋಟಿ ಮಂದಿಯನ್ನು ಲಸಿಕೆ(Vaccine) ಪಡೆಯಲು ಫಲಾನುಭವಿಗಳನ್ನಾಗಿ ಗುರುತಿಸಲಾಗಿದೆ. ಈ ಪೈಕಿ ನವೆಂಬರ್ 4ರ ಮಾಹಿತಿ ಪ್ರಕಾರ 4.26 ಕೋಟಿ ಮಂದಿ ಮೊದಲ ಡೋಸ್(First Dose) ಪಡೆದಿದ್ದಾರೆ. ಇನ್ನೂ 60 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದೆ. ರಾಜ್ಯ ಸರ್ಕಾರವೇ(Government of Karnataka) ನಿಗದಿ ಪಡಿಸಿಕೊಂಡಿರುವ ಗುರಿಯ ಪ್ರಕಾರ ಡಿಸೆಂಬರ್ ಒಳಗೆ ಎಲ್ಲ ಫಲಾನುಭವಿಗಳಿಗೆ(Beneficiaries)ಲಸಿಕೆ ನೀಡಬೇಕಿದೆ.
Covid Pills:ಕೋವಿಡ್ ಮಾತ್ರೆ ತುರ್ತು ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್!
ಆದರೆ, ಕಳೆದ ಕೆಲ ದಿನಗಳಿಂದ ಮೊದಲ ಡೋಸ್ ಪಡೆಯುವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಆಗಸ್ಟ್‌ನಲ್ಲಿ 75 ಲಕ್ಷ, ಸೆಪ್ಟೆಂಬರ್‌ನಲ್ಲಿ 78 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದರು. ಆದರೆ ಅಕ್ಟೋಬರ್‌ನಲ್ಲಿ ಕೇವಲ 32 ಲಕ್ಷ ಮಂದಿ ಮಾತ್ರ ಮೊದಲ ಡೋಸ್ ಸ್ವೀಕರಿಸಿದ್ದಾರೆ. ಪ್ರಸ್ತುತ ಪ್ರತಿದಿನದ ಸಂಖ್ಯೆ 30 ಸಾವಿರಕ್ಕೆ ಇಳಿದಿದೆ. ರಾಜ್ಯ ಈ ವರ್ಷದೊಳಗೆ ಎಲ್ಲ ವಯಸ್ಕರಿಗೂ ಲಸಿಕೆ ನೀಡುವ ಗುರಿ ತಲುಪಬೇಕಾದರೆ ಮುಂದಿನ ದಿನಗಳಲ್ಲಿ ಪ್ರತಿದಿನ ಕನಿಷ್ಠ ಪಕ್ಷ 2 ಲಕ್ಷ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಬೇಕಿದೆ.
ಇದೇ ವೇಳೆ ಅಚ್ಚರಿಯ ಬೆಳವಣಿಗೆಯಲ್ಲಿ ಎರಡನೇ ಡೋಸ್(Second Dose) ಲಸಿಕೆ ಪಡೆಯುವವರ ಸಂಖ್ಯೆಯಲ್ಲಿಯೂ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಕೋವಿಡ್ ಎರಡನೇ ಆಲೆ ಕ್ಷೀಣಿಸಿ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಮೊದಲ ಡೋಸ್ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ದೊಡ್ಡ ಜಿಗಿತ ಕಂಡಿತ್ತು. ಕೋವ್ಯಾಕ್ಸಿನ್‌ನ(Covaxin) ಮೊದಲ ಡೋಸ್ ಪಡೆದು ಒಂದು ತಿಂಗಳಿನ ಅಸುಪಾಸಿನಲ್ಲಿ ಎರಡನೇ ಡೋಸ್ ಪಡೆಯಲು ಆರ್ಹರಾಗುತ್ತಾರೆ. ಆದರೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೋವಿಶೀಲ್ಡ್(Covishield) ಪಡೆದವರು ಆಕ್ಟೋಬರ್ ತಿಂಗಳಿನಲ್ಲಿ ಎರಡನೇ ಡೋಸ್ ಪಡೆಯಲು ಅರ್ಹರಾಗಿದ್ದರು.
ಸೆಪ್ಟೆಂಬರ್‌ನಲ್ಲಿ 70 ಲಕ್ಷ ಮಂದಿ ಮಂದಿ ಎರಡನೇ ಡೋಸ್ ಪಡೆದಿದ್ದರೆ ಅಕ್ಟೋಬರ್‌ನಲ್ಲಿ ಕೇವಲ 57 ಲಕ್ಷ ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಇದು ಎರಡನೇ ಡೋಸ್ ಪಡೆಯಲು ಜನ ಮುಂದಾಗುತ್ತಿಲ್ಲ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆನ್‌ಲಾಕ್(Unlock) ಆಗುತ್ತಿದ್ದಂತೆ ಕಚೇರಿ, ಕಾರ್ಖಾನೆಗಳು ಆರಂಭಗೊಂಡಾಗ ಕನಿಷ್ಠ ಪಕ್ಷ ಮೊದಲ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಕೆಲಸಕ್ಕೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತು ಕೋವಿಡ್‌ನ ಭಯದಿಂದ ಲಸಿಕೆ ಪಡೆದಿದ್ದ ಅನೇಕರು ಇದೀಗ ಎರಡನೇ ಡೋಸ್‌ಗೆ ಮೀನಮೇಷ ಎಣಿಸುತ್ತಿದ್ದಾರೆ.
ಕೋವ್ಯಾಕ್ಸಿನ್ ಎಕ್ಸ್‌ಪೈರಿ ಅವಧಿ 12 ತಿಂಗಳಿಗೆ ವಿಸ್ತರಣೆ
ಸದ್ಯ 2.32 ಕೋಟಿ ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಮೊದಲ ಡೋಸ್ ಪಡೆದಿರುವ 1.90 ಕೋಟಿ ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದೆ. ಈ ಮಧ್ಯೆ ಸೆಪ್ಟೆಂಬರ್ 17ರಂದು ನಡೆಸಿದ ವಿಶೇಷ ಲಸಿಕಾ ಅಭಿಯಾನದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಿ ರಾಜ್ಯ ಸರ್ಕಾರ ಸಾಧನೆ ಮಾಡಿತ್ತು. ಆ ಬಳಿಕ ನಡೆದ ವಿಶೇಷ ಲಸಿಕಾ ಅಭಿಯಾನದಲಿ(Vaccination Campaign) ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ.
ತಿಂಗಳುವಾರು ಲಸಿಕೆ ನೀಡಿಕೆಯ ಪ್ರಮಾಣ
ತಿಂಗಳು ಮೊದಲ ಡೋಸ್ ಎರಡನೇ ಡೋಸ್ ಒಟ್ಟು
ಜೂನ್ 80.62 ಲಕ್ಷ 18.32 ಲಕ್ಷ 90.44 ಲಕ್ಷ
ಜುಲೈ 48.49 ಲಕ್ಷ 27.72 ಲಕ್ಷ 76.21 ಲಕ್ಷ
ಆಗಸ್ಟ್ 75.93 ಲಕ್ಷ 56.33 ಲಕ್ಷ 1.12 ಕೋಟಿ
ಸೆಪ್ಟೆಂಬರ್ 78.64 ಲಕ್ಷ 70.12 ಲಕ್ಷ 1.48 ಕೋಟಿ
ಅಕ್ಟೋಬರ್ 32.51 ಲಕ್ಷ 57.04 ಲಕ್ಷ 89.55 ಲಕ್ಷ
ರಾಜ್ಯದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಮೊದಲಿನಷ್ಟು ಬಿರುಸಿನಿಂದ ನಡೆಯುತ್ತಿಲ್ಲ. ಕೊನೆಯ ಹಂತದಲ್ಲಿ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಇಳಿಕೆ ಆಗುವುದು ಸಹಜ. ಆದರೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕು ಎಂಬ ಗುರಿಯಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ರಾಜ್ಯದ ಲಸಿಕೆ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.