ಶಾಲೆ ಆರಂಭದ ರಿಸ್ಕ್ ತೆಗೆದುಕೊಳ್ಳಬೇಕು : ಸಚಿವ ನಾಗೇಶ್‌

  • ಮಕ್ಕಳ ಮೇಲೇ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತಿರುವ ಕೋವಿಡ್‌ ಮೂರನೇ ಅಲೆ
  • ಆ.23ರಿಂದ ಮೊದಲ ಹಂತದಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳ ಆರಂಭ
  • ಈ ಬಗ್ಗೆ ರಾಜ್ಯದ ನೂತನ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಂದರ್ಶನ ಇಲ್ಲಿದೆ
Karnataka Education minister Bc Nagesh interview snr

ಸಂದರ್ಶನ :  ಆನಂದ್‌ ಎಂ. ಸೌದಿ/ ಲಿಂಗರಾಜು ಕೋರಾ

 ಯಾದಗಿರಿ/ಬೆಂಗಳೂರು (ಆ.09):  ಮಕ್ಕಳ ಮೇಲೇ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತಿರುವ ಕೋವಿಡ್‌ ಮೂರನೇ ಅಲೆಯ ಆತಂಕದ ನಡುವೆಯೇ ರಾಜ್ಯ ಸರ್ಕಾರ ಈಗಾಗಲೇ ಆ.23ರಿಂದ ಮೊದಲ ಹಂತದಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡಿದೆ. ಇದಕ್ಕೆ ಪೋಷಕರು, ಶಿಕ್ಷಕರು, ಖಾಸಗಿ ಶಾಲೆಗಳು, ತಜ್ಞರ ವಲಯದಿಂದ ಸ್ವಾಗತ ವ್ಯಕ್ತವಾಗಿದ್ದರೂ 3ನೇ ಅಲೆಯ ಪರಿಣಾಮದ ಭವಿಷ್ಯದ ಚಿತ್ರಣ ಯಾರಿಗೂ ಇಲ್ಲದ ಕಾರಣ ಎಲ್ಲರಲ್ಲೂ ದೊಡ್ಡ ಆತಂಕವಂತೂ ಮನೆ ಮಾಡಿದೆ.

ಆನ್‌ಲೈನ್‌ ಶಿಕ್ಷಣ, ದೂರದರ್ಶನ ಪಾಠ ಸೇರಿ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ನಿರಂತರ ಕಲಿಕೆಗೆ ಸರ್ಕಾರ ಪ್ರಯತ್ನ ನಡೆಸುತ್ತಿದ್ದರೂ ಭೌತಿಕ ತರಗತಿಯಷ್ಟುಯಶಸ್ವಿಯಾಗುತ್ತಿಲ್ಲ. ಮತ್ತೊಂದೆಡೆ ಖಾಸಗಿ ಶಾಲೆಗಳ ಶುಲ್ಕ ವಿವಾದ ಬಗೆಹರಿದಿಲ್ಲ. ಶೇ.75ರಷ್ಟುಪುಸ್ತಕಗಳು ಇನ್ನೂ ಮುದ್ರಣವೇ ಆಗಿಲ್ಲ. ಇಷ್ಟೆಲ್ಲಾ ಸಮಸ್ಯೆ, ಸವಾಲುಗಳ ನಡುವೆ ಮೊದಲ ಬಾರಿಗೆ ಸಚಿವರಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊಣೆ ಹೊತ್ತ ಬಿ.ಸಿ.ನಾಗೇಶ್‌ ಅವರು ಒಂದು ಕೋಟಿಗೂ ಹೆಚ್ಚು ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಇಲಾಖೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಎಲ್ಲರೂ ಪಾಸಾಗಿರುವ SSLC ಫಲಿತಾಂಶ ಇಂದು ಪ್ರಕಟ!

- ಕೋವಿಡ್‌ 3ನೇ ಅಲೆ ಆತಂಕದ ನಡುವೆಯೇ ಶಾಲೆ ಆರಂಭಕ್ಕೆ ನಿರ್ಧಾರವಾಗಿದೆ?

ಕೋವಿಡ್‌ ಆತಂಕ ಎಷ್ಟುನಿಜವೋ ಶಾಲೆ ಆರಂಭಿಸದಿದ್ದರೆ ಮಕ್ಕಳ ಭವಿಷ್ಯ ಹಳ್ಳ ಹಿಡಿಯುವುದೂ ಅಷ್ಟೇ ನಿಜ. ಈಗಾಗಲೇ ಈ ಬಗ್ಗೆ ತಜ್ಞರ ವರದಿಗಳೇ ಎಚ್ಚರಿಸಿವೆ. ಅಲ್ಲದೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಹೀಗಾಗಿ ಕೋವಿಡ್‌ ತೀವ್ರ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸಾಕಷ್ಟುದೇಶಗಳಲ್ಲಿ ಶಾಲೆಗಳು ನಿಂತಿಲ್ಲ. ಹಾಗಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲೂಬೇಕು, ಕೋವಿಡ್‌ನಿಂದಾಗುವ ಪರಿಣಾಮಗಳನ್ನೂ ಎದುರಿಸಬೇಕು. ಇದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ. ಶಾಲೆ ಆರಂಭಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ. ಸರ್ಕಾರದ ನಿರ್ಧಾರದಂತೆ ಆ.23ರಿಂದ ಶಾಲೆ ಆರಂಭಿಸಲು ಕ್ರಮ ವಹಿಸಲಾಗುವುದು.

"

- ಶಾಲೆ ಆರಂಭದ ಬಗ್ಗೆ ನಿರ್ಧಾರವಾದ ಬಳಿಕ ತಮಗೆ ಶಿಕ್ಷಣ ಇಲಾಖೆ ಖಾತೆ ಹಂಚಿಕೆಯಾಯಿತು ಅಲ್ಲವೇ?

ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಶಾಲೆ ಆರಂಭಿಸುವ ವಿಚಾರದಲ್ಲಿ ನನ್ನ ಅಭಿಪ್ರಾಯ ಬೇರೆಯಾಗಿಲ್ಲ. ಹಾಗಾಗಿ ಯಾವ ಸಮಸ್ಯೆಯೂ ಇಲ್ಲ. ಆದರೂ, ನಾವು ತಜ್ಞರ ವರದಿ, ಸೆಕೆಂಡ್‌ ಒಪಿನಿಯನ್‌, ಥರ್ಡ್‌ ಒಪಿನಿಯನ್‌ ಎಲ್ಲವನ್ನೂ ಪಡೆದೇ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.

- ಕೋವಿಡ್‌ ಅವಧಿಯಲ್ಲಿ ಶೇ.30ರಷ್ಟುಮಕ್ಕಳು ಕಲಿಕೆಯಿಂದ ದೂರ ಉಳಿದಿದ್ದಾರೆ. ಇನ್ನೂ ಶೇ.75ರಷ್ಟುಪುಸ್ತಕ ಮುದ್ರಣವಾಗಿಲ್ಲ?

ಈಗಷ್ಟೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಕಲಿಕೆಯಿಂದ ವಂಚಿತರಾದ ಮಕ್ಕಳಲ್ಲಿನ ಕಲಿಕಾ ಕೊರತೆ ಸರಿದೂಗಿಸಲು ಏನು ಮಾಡಬೇಕು? ಯಾವ ಕಾರಣಕ್ಕೆ ವಂಚಿತರಾದರು, ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ತಿಂಗಳಾಗುತ್ತಿದ್ದರೂ ಏಕೆ ಪುಸ್ತಕಗಳ ಮುದ್ರಣವಾಗಿಲ್ಲ ಎಲ್ಲವುಗಳ ಬಗ್ಗೆ ಶೀಘ್ರ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಇಲ್ಲಿ ಇಲಾಖೆಯ ನಾಯಕತ್ವ ನನ್ನದಾದರೂ ಸಾಮೂಹಿಕ ಹೊಣೆಗಾರಿಕೆ ಇದೆ. ಮಾಜಿ ಶಿಕ್ಷಣ ಮಂತ್ರಿಗಳು, ಅಧಿಕಾರಿಗಳು, ಶಿಕ್ಷಣ ತಜ್ಞರು ಸೇರಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರ ಸಲಹೆ, ಅಭಿಪ್ರಾಯ ಪಡೆದು ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ.

ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ : ಷರತ್ತುಗಳು ಏನು?

- ಆನ್‌ಲೈನ್‌, ಇ-ಶಿಕ್ಷಣ ಶಿಕ್ಷಣದ ವ್ಯವಸ್ಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಮ್ಮ ಸರ್ಕಾರಿ ಶಾಲೆಗಳ ಶೇ.40ರಷ್ಟುಮಕ್ಕಳ ಬಳಿ ಯಾವುದೇ ಆ್ಯಂಡ್ರಾಯ್ಡ್‌ ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ತಾಂತ್ರಿಕ ಉಪಕರಣಗಳಿಲ್ಲ. ಅವರಿಗೆ ಆನ್‌ಲೈನ್‌ ಶಿಕ್ಷಣ ತಲುಪಿಸುವುದು ಕಷ್ಟಸಾಧ್ಯ. ಇ-ಶಿಕ್ಷಣ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದರೂ ಸಂಪೂರ್ಣ ಯಶಸ್ಸು ಕಂಡಿಲ್ಲ. ನಿರ್ದಿಷ್ಟಗುರಿ ಸಾಧನೆಗೆ ಪ್ರಯತ್ನಿಸುತ್ತೇನೆ. ಗಾಂಧಿ, ವಿನೋಬಾ ಬಾವೆ, ವಿವೇಕಾನಂದರು ಯಾವುದನ್ನು ಶಿಕ್ಷಣ ಎಂದರೋ ಅದನ್ನು ನಾವು ಮಕ್ಕಳಿಗೆ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ಮೂಲಕ ಇದೆಲ್ಲವುದರ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ.

- ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕೆಲ ವರದಿಗಳು ಹೇಳುತ್ತಿವೆ?

ವರದಿ ಓದಿಲ್ಲ, ಜಿಸ್ಟ್‌ ಕೇಳಿದ್ದೇನೆ. ಸವಾಲು ಎದುರಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಎಲ್ಲರೂ ಹೊಣೆಗಾರರಾಗಿ ಎದುರಿಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಎಲ್ಲ ರೀತಿಯಲ್ಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲ ಅಲೆ, ಎರಡನೇ ಅಲೆಯ ರಿಸ್ಕ್‌ ಹೇಗೆ ತೆಗೆದುಕೊಂಡೆವೋ ಅದೇ ರೀತಿ ಮೂರನೇ ಅಲೆಗೂ ಸಜ್ಜಾಗಬೇಕು. ಒಂದು ರೀತಿಯಲ್ಲಿ ಮೊದಲ ಅಲೆ ಹಾಗೂ ಎರಡನೇ ಅಲೆ ಶೋಭೀಕರಣ ಆದಂತಾಯ್ತು. ಹದಿನೈದು ದಿನಗಳು ಬಹಳ ಕೆಟ್ಟದ್ದಾಗಿದ್ದವು ನಿಜ. ಅಧಿಕಾರಿಗಳು ಸಾಕಷ್ಟುಕೆಲಸ ಮಾಡಿದ್ದಾರೆ.

- ಕೊನೆಯದಾಗಿ ಸಚಿವ ಸ್ಥಾನ ಬಯಸದೇ ಬಂದ ಭಾಗ್ಯವಾ?

ನಿಮಗೇ ಗೊತ್ತು ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡ, ಲಾಬಿ ಮಾಡಿದವನಲ್ಲ. ಬಿಜೆಪಿಯಲ್ಲಿ ಹೊಸಬರನ್ನು ಗುರುತಿಸಿ ಹೊಣೆಗಾರಿಕೆ ನೀಡುವ ಪ್ರಯತ್ನಗಳು ಕೇಂದ್ರದಲ್ಲೂ ನಡೆದಿವೆ. ರಾಜ್ಯದಲ್ಲೂ ಸ್ವಲ್ಪ ಪ್ರಮಾಣದಲ್ಲಿ ನಡೆದಿವೆ. ಸಚಿವ ಸ್ಥಾನವೂ ಬಯಸಿ ಬಂದಿದ್ದಲ್ಲ, ಶಿಕ್ಷಣ ಇಲಾಖೆಯೂ ಕೇಳಿ ಪಡೆದಿದ್ದಲ್ಲ. ಮುಖ್ಯಮಂತ್ರಿಗಳು ಕೊಟ್ಟಿರುವ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.

Latest Videos
Follow Us:
Download App:
  • android
  • ios