ಬಿಜೆಪಿದು ಪ್ರೀತಿಯ ರಾಜಕಾರಣವೇ ಹೊರತು ದ್ವೇಷದ್ದಲ್ಲ: ಬೊಮ್ಮಾಯಿ
ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ರಾಣಿಬೆನ್ನೂರ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಹೆಬ್ಬಾಗಿಲಾಗುವಂತೆ ಮಾಡುತ್ತೇವೆ ಎಂದ ಬೊಮ್ಮಾಯಿ| ವೈಯಕ್ತಿಕ ಹಿತಾಸಕ್ತಿಗಿಂತ ಜನಶಕ್ತಿ ಮತ್ತು ಅಭಿವೃದ್ಧಿ ವಿಚಾರಗಳಿಗೆ ಮತದಾರರು ಒತ್ತು ನೀಡಿದ್ದಾರೆ| ರಾಜ್ಯದ 15 ಸ್ಥಾನಗಳಿಗೆ ನಡೆದ ಉಪ ಚುನಾವಣೆಯು ದೇಶದ ಗಮನ ಸೆಳೆದಿದ್ದು ಫಲಿತಾಂಶವು ಯಡಿಯೂರಪ್ಪ ನಾಯಕತ್ವ ಹಾಗೂ ಸ್ಥಿರ ಸರ್ಕಾರಕ್ಕೆ ಜನರು ನೀಡಿದ ಮನ್ನಣೆಯಾಗಿದೆ|
ರಾಣಿಬೆನ್ನೂರು(ಡಿ.11): ನಮ್ಮದು ಪ್ರೀತಿಯ ರಾಜಕಾರಣವೇ ಹೊರತು ದ್ವೇಷದ್ದಲ್ಲ. ಅಭಿವೃದ್ಧಿಯೇ ಪಕ್ಷದ ಪ್ರಮುಖ ಆದ್ಯತೆಯಾಗಿದೆ. ಜನರ ತೀರ್ಮಾನದ ಎದುರು ಯಾರೂ ದೊಡ್ಡವರಲ್ಲ ಎಂಬುದಕ್ಕೆ ಕ್ಷೇತ್ರದ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನೂತನ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಮತ್ತು ಮತದಾರರು, ಕಾರ್ಯಕರ್ತರುಗಳಿಗೆ ಕೃತಜ್ಞತೆ ಅರ್ಪಿಸುವ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ರಾಣಿಬೆನ್ನೂರ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಹೆಬ್ಬಾಗಿಲಾಗುವಂತೆ ಮಾಡುತ್ತೇವೆ. ವೈಯಕ್ತಿಕ ಹಿತಾಸಕ್ತಿಗಿಂತ ಜನಶಕ್ತಿ ಮತ್ತು ಅಭಿವೃದ್ಧಿ ವಿಚಾರಗಳಿಗೆ ಮತದಾರರು ಒತ್ತು ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದ 15 ಸ್ಥಾನಗಳಿಗೆ ನಡೆದ ಉಪ ಚುನಾವಣೆಯು ದೇಶದ ಗಮನ ಸೆಳೆದಿದ್ದು, ಫಲಿತಾಂಶವು ಯಡಿಯೂರಪ್ಪ ನಾಯಕತ್ವ ಹಾಗೂ ಸ್ಥಿರ ಸರ್ಕಾರಕ್ಕೆ ಜನರು ನೀಡಿದ ಮನ್ನಣೆಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ರಸ್ತೆ, ನೀರಾವರಿ, ಸೇತುವೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಶಸ್ತ್ಯ ನೀಡಲಾಗುವುದು. ತಾಲೂಕಿನಲ್ಲಿ ಇನ್ಮುಂದೆ ಪೊಲೀಸ್ ಸ್ಟೇಷನ್ ರಾಜಕಾರಣವಿಲ್ಲ. ಜನರು ನಿರ್ಭಯವಾಗಿರಬಹುದು. ನೂತನ ಶಾಸಕರು ಪಕ್ಷದ ಎಲ್ಲಾ ಸ್ಥಳೀಯ ಮುಖಂಡರ ವಿಶ್ವಾಸದೊಂದಿಗೆ 24X7 ರೀತಿಯಲ್ಲಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ನೂತನ ಶಾಸಕ ಅರುಣಕುಮಾರ ಮಾತನಾಡಿ, ಜನರು ನೀಡಿದ ವಿಶ್ವಾಸಕ್ಕೆ ಚಿರಋಣಿಯಾಗಿರುವೆ. ನಾನು ಶಾಸಕನಲ್ಲ, ನಿಮ್ಮ ಮನೆ ಮಗ ಸೇವಕನೆಂದು ಪರಿಗಣಿಸಿ ಎಂದರು. ಇದೇ ಸಮಯದಲ್ಲಿ ಸಮಾರಂಭ ಮುಗಿಸಿಕೊಂಡು ತೆರಳುತ್ತಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನೂತನ ಶಾಸಕ ಅರುಣಕುಮಾರ ಅವರಿಗೆ ತಾಲೂಕು ಗಂಗಾಮತ ಸಮಾಜ ಬಾಂಧವರು ಕ್ರೇನ್ ಮೂಲಕ ಸೇಬು ಹಾರ ಸಮರ್ಪಿಸಿದರು.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕ ಬಿ.ಪಿ. ಹರೀಶ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಲಿಂಗರಾಜ ಪಾಟೀಲ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಜಯತೀರ್ಥ ಕಟ್ಟಿ, ಸಿದ್ಧರಾಜ ಕಲಕೋಟಿ, ಮಂಜುನಾಥ ಓಲೇಕಾರ, ಕೆ. ಶಿವಲಿಂಗಪ್ಪ, ಭಾರತಿ ಜಂಬಗಿ, ಎಸ್.ಎಸ್. ರಾಮಲಿಂಗಣ್ಣನವರ, ರಾಮಪ್ಪ ಕೋಲಕಾರ, ಶೋಭಾ ನಿಸ್ಸಿಮಗೌಡ್ರ, ಪರಮೇಶಪ್ಪ ಮೇಗಳಮನಿ, ಭಾರತಿ ಅಳವಂಡಿ, ಸಂಕಪ್ಪ ಮಾರನಾಳ ಸೇರಿದಂತೆ ಇತರರಿದ್ದರು.