ಹೊಸಪೇಟೆ: ಸ್ವತಃ ಕಟೌಟ್ ತೆರವುಗೊಳಿಸಿದ ಸಚಿವ ಆನಂದ್ ಸಿಂಗ್
ಅನಧಿಕೃತ ಬ್ಯಾನರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಟೌಟ್ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಪ್ರತಿಭಟನೆ| ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸ್ವತಃ ಕಟೌಟ್ ತೆರವುಗೊಳಿಸಿದ ಸಚಿವ ಆನಂದ್ ಸಿಂಗ್|
ಹೊಸಪೇಟೆ(ಡಿ.05): ನಗರದಲ್ಲಿನ ಅನಧಿಕೃತ ಬ್ಯಾನರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಟೌಟ್ ಅನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಧ್ವಜಸ್ತಂಭ ವೃತ್ತದ ಬಳಿ ಧರಣಿ ನಡೆಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಆನಂದ್ ಸಿಂಗ್ ಸ್ವತಃ ಕಟೌಟ್ ತೆರವುಗೊಳಿಸಿದರು. ಕಿತ್ತೂರಿನಿಂದ ಬಳ್ಳಾರಿ ವರೆಗೆ ಚಲಿಸು ಕರ್ನಾಟಕ ಎಂಬ 300 ಕಿಮೀ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದ ಪಕ್ಷವು ಶುಕ್ರವಾರ ನಗರಕ್ಕೆ ಆಗಮಿಸಿತ್ತು. ಇದೇ ವೇಳೆ ನಗರದಲ್ಲಿ ಅನಧಿಕೃತವಾಗಿ ಸಂಚಾರಿ ಸಿಗ್ನಲ್ ಕಾಣದಂತೆ ಹಾಕಿದ್ದ ಹುಟ್ಟುಹಬ್ಬ ಶುಭಾಶಯದ ಬ್ಯಾನರ್ ಅನ್ನು ಯಶಸ್ವಿಯಾಗಿ ತೆರವುಗೊಳಿಸಿದ ಆನಂತರ ನಗರದ ಶಾನ್‌ಭಾಗ್ ವೃತ್ತದಲ್ಲಿ ಹಾಕಿರುವ ಸಚಿವ ಆನಂದ್ ಸಿಂಗ್ ಅವರ ಕಟೌಟ್ ಅನ್ನು ಸಹ ನಗರಸಭೆ ತೆರವುಗೊಳಿಸುವಂತೆ ಒತ್ತಾಯಿಸಿ ಕಟೌಟ್ ಎದುರು ಧರಣಿ ನಡೆಸಿದರು.
ಬಳ್ಳಾರಿ ವಿಭಜನೆ : ಕನ್ನಡದ ಮೇಲೇನು ಪರಿಣಾಮ?
ಸ್ಥಳಕ್ಕೆ ಆಗಮಿಸಿದ ಸಚಿವ ಆನಂದ್ ಸಿಂಗ್ ಅವರು ಕಟೌಟ್ ತೆರವುಗೊಳಿಸಲಾಗುವುದು. ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಮುಂದಿನ ಪೀಳಿಗೆಗೆ ಗೌರವ ಕೊಡುವ ಮಾದರಿಯಲ್ಲಿ ನಾವು ನಡೆದುಕೊಳ್ಳಬೇಕು. ಏಕವಚನದಲ್ಲಿ ಯಾರಿಗೂ ಮಾತನಾಡಬಾರದು. ಯಾರ ಮನಸ್ಸು ನೋವಿಸಬಾರದು ಎಂದು ರವಿಕೃಷ್ಣ ರೆಡ್ಡಿ ಅವರ ಬಳಿ ಹೇಳಿದರು. ಆಗ ರವಿ ಕೃಷ್ಣರೆಡ್ಡಿ ಅವರು ಕೂಡ ನಾವು ಹಮ್ಮಿಕೊಂಡ ಜಾಥಾ ಉದ್ದೇಶವೇ ಬೇರೆ ಇದೆ. ಆದರೆ, ಈ ರೀತಿ ಪ್ರಸಂಗ ನಡೆಯಿತು. ನಡೆಯಬಾರದಿತ್ತು ಎಂದು ಸಚಿವರ ಬಳಿ ಹೇಳಿದರು. ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸ್ವತಃ ಸಚಿವ ಆನಂದ್ ಸಿಂಗ್ ಕಟೌಟ್ ತೆರವುಗೊಳಿಸಿದರು.