Asianet Suvarna News Asianet Suvarna News

ಬಳ್ಳಾರಿ ವಿಭಜನೆ : ಕನ್ನಡದ ಮೇಲೇನು ಪರಿಣಾಮ?

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದಾಗಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲಾಗುತ್ತಿದೆ. ಈ ವಿಭಜನೆಯಿಂದಾಗುವ ‘ವಿಜಯನಗರ’ ಹೊಸ ಜಿಲ್ಲೆಯಿಂದ ವಿಜಯನಗರದ ಇತಿಹಾಸ ಮರುಕಳಿಸುವಂತಾಗಲಿದೆ ಎನ್ನುತ್ತಿದ್ದಾರೆ. 

Impacts on Kannada by Ballari division hls
Author
Bengaluru, First Published Dec 4, 2020, 5:53 PM IST

ಬೆಂಗಳೂರು (ಡಿ. 04): ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಹೊಸ ಜಿಲ್ಲೆಯನ್ನಾಗಿ ಮಾಡಲು ಮಂತ್ರಿಮಂಡಲ ಅನುಮೋದನೆ ನೀಡಿರುವುದರಿಂದ ವಿಜಯನಗರ 31ನೇ ಜಿಲ್ಲೆಯಾಗಿ ರೂಪುಗೊಳ್ಳಲಿದೆ. ಹೊಸ ಜಿಲ್ಲೆಯಾಗಬೇಕೆಂದು ರಾಜಕೀಯವಾಗಿ ಬಯಸಿದವರಿಗೆ ಈ ಸಂದರ್ಭ ಸಂಭ್ರಮವನ್ನುಂಟುಮಾಡಿದೆ.

ಆದರೆ ಬಳ್ಳಾರಿ ಜಿಲ್ಲೆ ರೂಪುಗೊಳ್ಳಲು ಹಿಂದಿನ ನಾಯಕರುಗಳು, ಜನರ ಹೋರಾಟ ತ್ಯಾಗ ಹಾಗೂ ಬಳ್ಳಾರಿಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ನಡೆಸಿದ ಹೋರಾಟ, ಏಕೀಕರಣದ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆ ವಹಿಸಿದ್ದ ಪ್ರಮುಖ ಪಾತ್ರ, ತೆಲುಗು ಹಾಗೂ ಕನ್ನಡ ದ್ವಿಭಾಷೆಯ, ನೆಲ ಜಲಗಳ ಸಂಘರ್ಷ, ಭಾಷೆಯ ಆಧಾರದ ಮೇಲೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕನ್ನಡಿಗರ ಗೆಲವು ಅಂದಿನವರು ಹೋರಾಡದಿದ್ದರೆ ಬಳ್ಳಾರಿ, ಹಂಪಿ ಪ್ರದೇಶಗಳು ಆಂಧ್ರದ ಪ್ರದೇಶಗಳಾಗಿ ಹೋಗುತ್ತಿದ್ದವು ಎನ್ನುವುದನ್ನು ಇಂದಿನ ಜನಾಂಗ ಮರೆಯಬಾರದು.

ಹೀಗೆ ಹಲವಾರು ಚಾರಿತ್ರಿಕ ಘಟನೆಗಳು ಮರೆಯಾಗುತ್ತಿವೆ ಎನ್ನುವುದು ವಿಷಾದದ ಸಂಗತಿ. ವಿಜಯನಗರ ಹೊಸ ಜಿಲ್ಲೆಯ ಪರವಾಗಲಿ-ವಿರೋಧಿಸುವುದಾಗಲಿ ಬರಹದ ಉದ್ದೇಶವಲ್ಲ. ಬಳ್ಳಾರಿ ಜಿಲ್ಲೆ ರೂಪುಗೊಳ್ಳುವ ಮುನ್ನ, ನಂತರ ಮುಂದಿನ ಪೀಳಿಗೆಗಾಗಿ ಹಿರಿಯರು ಮಾಡಿದ ಹೋರಾಟ ತ್ಯಾಗಗಳ ಕುರಿತು ಒಂದಿಷ್ಟುಅವಲೋಕನ.

ಬಳ್ಳಾರಿ ವಿಭಜನೆಗೆ ಬಿಡಲ್ಲ, ಸ್ಥಾನಕ್ಕೆ ರಾಜೀನಾಮೆಗೂ ಸಿದ್ಧ : ಸೋಮಶೇಖರ ರೆಡ್ಡಿ

ಛಲ ಹೋರಾಟಗಳ ಪ್ರತಿಫಲ

1953ರ ಅಕ್ಟೋಬರ್‌ 1ರಂದು ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಆದರೆ ಇದು ಅಷ್ಟುಸುಲಭವಾಗಿ ಸೇರ್ಪಡೆಗೊಳ್ಳಲಿಲ್ಲ. ಬಳ್ಳಾರಿ ಜಿಲ್ಲೆಯ ಪ್ರಮುಖ ನಾಯಕರುಗಳ ಮುಂದಾಲೋಚನೆ, ಛಲ, ಹೋರಾಟಗಳ ಫಲವಾಗಿ ಅಂತಿಮವಾಗಿ ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಯಿತು. ಇದಕ್ಕೂ ಮುನ್ನ ಬಳ್ಳಾರಿ ಆಂಧ್ರ ಮತ್ತು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿತ್ತು. 1921ರಲ್ಲಿ ಕಾಂಗ್ರೆಸ್‌ ತನ್ನ ಸಂಸ್ಥಾ ಕಾರ್ಯವನ್ನು ನಿರ್ವಹಿಸುವ ಸಲುವಾಗಿ ಭಾಷಾವಾರು ಪ್ರಾಂತಗಳಲ್ಲಿ ದೇಶವನ್ನು ವಿಂಗಡಿಸಿದಾಗ ಬಳ್ಳಾರಿಯಲ್ಲಿ ಹಲವಾರು ಸಮಸ್ಯೆಗಳುಂಟಾದವು.

ಆಂಧ್ರದವರು ಇಡೀ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ನೀಡುವಂತೆ ಕೇಳಿಕೊಂಡರು. ಆಗ ಬಳ್ಳಾರಿಯಲ್ಲಿ ಹೋರಾಟಗಳು ಹುಟ್ಟಿಕೊಂಡವು. ಈ ವಿವಾದವನ್ನು ಬಗೆಹರಿಸುವ ಸಲುವಾಗಿ ಎನ್‌.ಪಿ.ಕೇಳ್ಕರ್‌ ಸಮಿತಿಯನ್ನು ರಚಿಸಲಾಯಿತು. ಆಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಆದೋನಿ, ಆಲೂರು, ರಾಯದುರ್ಗ ತಾಲೂಕುಗಳನ್ನು ಆಂಧ್ರ ಕಾಂಗ್ರೆಸಿಗೆ, ಬಳ್ಳಾರಿ ನಗರವನ್ನು ಒಳಗೊಂಡಂತೆ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ತಾಲೂಕುಗಳು ಕರ್ನಾಟಕ ಕಾಂಗ್ರೆಸಿಗೆ ಹಂಚಿಕೆ ಮಾಡಲಾಯಿತು. ಮುಂದೆ ವಿಜಯನಗರದ ರಾಜಧಾನಿಯಾಗಿದ್ದ ಹಂಪಿ ಹಾಗೂ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಿಕೊಳ್ಳಲು ಆಂಧ್ರದವರು ಪ್ರಯತ್ನಪಟ್ಟರು. ಆದರೆ ಬಳ್ಳಾರಿಗರ ಸತತ ಹೋರಾಟದಿಂದ ಇವು ಕರ್ನಾಟಕದಲ್ಲಿ ಉಳಿದವು.

ಭಾಷೆಯ ಆಧಾರದ ಚುನಾವಣೆ

1925ರಲ್ಲಿ ಆಂಧ್ರಪ್ರದೇಶದಲ್ಲಿ ವಿಶ್ವವಿದ್ಯಾಲಯ ಪ್ರಾರಂಭಗೊಂಡಾಗ ಬಳ್ಳಾರಿಯನ್ನು ಇದರ ವ್ಯಾಪ್ತಿಗೆ ತರಲು ಪ್ರಯತ್ನಿಸಿದಾಗ, ಇದನ್ನು ಪ್ರತಿಭಟಿಸಿ, ಹೋರಾಟಗಾರರು ಮದ್ರಾಸ್‌ಗೆ ಹೋಗಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸುವುದನ್ನು ತಡೆದದ್ದು ಐತಿಹಾಸಿಕ ಘಟನೆಯೆಯಾಗಿದೆ. ಆದರೆ ಬಳ್ಳಾರಿಯನ್ನು ಆಂಧ್ರಕ್ಕೆ ಸೇರ್ಪಡೆಗೊಳಿಸುವ ಹಲವಾರು ಪ್ರಯತ್ನಗಳನ್ನು ಬಳ್ಳಾರಿಯ ಕನ್ನಡಪರ ಹೋರಾಟಗಾರರು, ಅಂದಿನ ರಾಜಕೀಯ ನಾಯಕರುಗಳ ಸತತ ಪ್ರಯತ್ನದಿಂದಾಗಿ ಬಳ್ಳಾರಿ ಕರ್ನಾಟಕದಲ್ಲೇ ಉಳಿಯಿತು.

1952ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ವಿಧಾನಸಭೆಗೆ ಆಯ್ಕೆಯಾದವರು ಮುಂಡ್ಲೂರು ಗಂಗಪ್ಪನವರು. ಇವರು ಆಯ್ಕೆಯಾದಾಗ ಬಳ್ಳಾರಿ ಆಂಧ್ರಕ್ಕೆ ಸೇರಬೇಕೆನ್ನುವ ತೆಲುಗರ ಧ್ವನಿ ದೊಡ್ಡತಾಯಿತು. ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕೆನ್ನುವವರ ಪರವಾಗಿ ನಿಂತವರು ಗಂಗಪ್ಪನವರು. ತೆಲಗು ಮತ್ತು ಕನ್ನಡ ಭಾಷೆಯ ಆಧಾರದ ಮೇಲೆ ಚುನಾವಣೆ ನಡೆಯಲಿ, ಯಾವ ಭಾಷೆಯ ಅಭ್ಯರ್ಥಿ ಗೆಲ್ಲುತ್ತಾರೋ, ಆ ಭಾಷೆಯವರಿಗೆ ಬಳ್ಳಾರಿ ಸೇರಲಿ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತೆಲುಗು ಪರವಾಗಿ ಮತ್ತೆ ಸ್ಪರ್ಧಿಸುತ್ತಾರೆ. ಇತ್ತ ಕನ್ನಡಿಗ ಪರವಾಗಿ ಹರಗಿನ ಡೋಣಿ ಸಣ್ಣ ಬಸವನಗೌಡ ಇವರು ಸ್ಪರ್ಧಿಸುತ್ತಾರೆ.

ಬಿಬಿಎಂಪಿ ಚುನಾವಣೆ : ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾದ ಸರ್ಕಾರ

ಕನ್ನಡ ಹಾಗೂ ತೆಲುಗರ ಭಾಷಿಕರ ನಡುವಿನ ಚುನಾವಣೆ ಇದಾಗಿತ್ತು. ಅಂದಿನ ಬಳ್ಳಾರಿಯ ಮುಖಂಡರು, ಕನ್ನಡ ಪರ ಹೋರಾಟಗಾರ ಜನಸಾಮಾನ್ಯರ ಪರಿಶ್ರಮದಿಂದ, ಕನ್ನಡಿಗರ ಪರವಾಗಿದ್ದ ಹರಗಿನ ಡೋಣಿ ಸಣ್ಣ ಬಸವನಗೌಡ ಇವರು ಗೆಲುವು ಪಡೆಯುತ್ತಾರೆ. ತೆಲುಗರ ಪರವಾಗಿ ನಿಂತಿದ್ದ ಮಂಡ್ಲೂರು ಗಂಗಪ್ಪ ಸೋಲುತ್ತಾರೆ. ಇದರಿಂದ ಬಳ್ಳಾರಿಯಲ್ಲಿ ಕನ್ನಡ ಭಾಷೆ, ಕನ್ನಡಿಗರ ಗೆಲುವಾಯಿತು. ಬಳ್ಳಾರಿ ಮತ್ತೆ ಕನ್ನಡಿಗರದ್ದು ಎಂದು ಸಾಬೀತಾಯಿತು. ಭಾಷೆಯ ಆಧಾರದ ಮೇಲೆ ಚುನಾವಣೆ ನಡೆದದ್ದು ದೇಶದಲ್ಲೇ ಮೊದಲು ಎಂಬ ಚರಿತ್ರೆ ಬಳ್ಳಾರಿಗೆ ಇದೆ.

ಅ.1 1953 ಚರಿತ್ರೆಯ ದಿನ

1952ರ ಚುನಾವಣೆಯಲ್ಲಿ ಕನ್ನಡಿಗರ ಗೆಲುವಿನಿಂದಾಗಿ ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ತೀವ್ರವಾಯಿತು. ಇದರ ನೇತೃತ್ವವನ್ನು ಅಲ್ಲಂ ಕರಿಬಸಪ್ಪ, ಕೋ. ಚನ್ನಬಸಪ್ಪ, ಹಡಗಲಿಯ ಅಂಗಡಿ ಚನ್ನಬಸಪ್ಪ, ಗಡಗಿ ಮರಿಸ್ವಾಮೆಪ್ಪ, ರೆಹಮಾನ್‌ ಸಾಬ್‌ ಇವರು ವಹಿಸಿಕೊಂಡು ಹೋರಾಟ ಮುಂದುವರಿಸುತ್ತಾರೆ. ಇವರ ಹೋರಾಟವನ್ನು ಸಾಹಿತಿಗಳಾದ ಡಾ.ಮೃತ್ಯುಂಜಯ ರುಮಾಲೆ ಅವರು ಚರಿತ್ರೆಯನ್ನು ಜ್ಞಾಪಿಸಿಕೊಂಡು ಹೇಳಿದ್ದು ಹೀಗೆ ‘1953ರಲ್ಲಿ ಮೈಸೂರು ರಾಜ್ಯದಲ್ಲಿ 80 ಜನ ಶಾಸಕರಿದ್ದರು.

ಅವರಾರ‍ಯರು ಬೆಂಗಳೂರಿನಲ್ಲಿರುತ್ತಿರಲಿಲ್ಲ. ಅವರವರ ಊರುಗಳಲ್ಲಿರುತ್ತಿದ್ದರು. ಇವರೆಲ್ಲರನ್ನು ಕಂಡು ಬಳ್ಳಾರಿಯನ್ನು ಮೈಸೂರು ರಾಜ್ಯಕ್ಕೆ ಸೇರಿಸುವಂತೆ ಈ ಐವರು ಮನವಿ ಮಾಡಿದ್ದರು. ಅಲ್ಲಂ ಕರಿಬಸಪ್ಪನವರ ಬಳಿಯಿದ್ದ ಕಾರಿನಲ್ಲೇ ಈ ಐದು ಜನರು ಪ್ರಯಾಣ ಮಾಡಿದ್ದರು. ಕಾರಿಗೆ ಚಾಲಕನನ್ನು ಕರೆದುಕೊಂಡು ಹೋದರೆ ಒಬ್ಬರು ಕಡಿಮೆಯಾಗುತ್ತಾರೆ ಎಂದು ಸ್ವಂತಃ ಅಲ್ಲಂ ಕರಿಬಸಪ್ಪನವರೇ ಚಾಲನೆ ಮಾಡಿಕೊಂಡು ಹೋಗಿದ್ದು, ಶಾಸಕರುಗಳನ್ನು, ವಿಧಾನಸಭೆಯ ಸ್ವೀಕರನ್ನು ಭೇಟಿಯಾಗಿ ವಿಧಾನಸಭೆಯಲ್ಲಿ ಈ ಬಗ್ಗೆ ಮಂಡಿಸುವಂತೆ ಮನವಿ ಮಾಡುತ್ತಾರೆ.

ಮುಖ್ಯಮಂತ್ರಿ ಕೆಂಗಲ್ಲ ಹನುಮಂತಯ್ಯನವರನ್ನು ಭೇಟಿಯಾಗಿ ಮನವಿ ಮಾಡುತ್ತಾರೆ. ಅವರು ಒಪ್ಪಿ ವಿಧಾನಸಭೆಯಲ್ಲಿ 1953ರ ಅಕ್ಟೋಬರ್‌ 1ರಂದು ಬಳ್ಳಾರಿ ಜಿಲ್ಲೆಯನ್ನು ಅಧಿಕೃತವಾಗಿ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಿದ್ದು ರೋಚಕ ಚರಿತ್ರೆ’ ಎನ್ನುತ್ತಾರೆ. ಹೌದು, ಅಖಂಡ ಬಳ್ಳಾರಿ ಜಿಲ್ಲೆಯ ಹೋರಾಟಕ್ಕೆ, ಅದು ಮದ್ರಾಸ್‌ ಪ್ರಾಂತ್ಯದಿಂದ ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡುವಲ್ಲಿ ಮುತ್ಸದ್ದಿ ಅಲ್ಲಂ ಕರಿಬಸಪ್ಪ, ನ್ಯಾಯವಾದಿ ಕೋ. ಚನ್ನಬಸಪ್ಪ ಮೊದಲಾದವರ ದೂರದೃಷ್ಟಿ, ಚಿಂತನೆ, ಹೋರಾಟಗಳಿಂದಾಗಿ ಸಾಧ್ಯವಾಗಿತ್ತು.

1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ : ಸರ್ವಪಕ್ಷ ಸಭೆಯಲ್ಲಿ ನಿರ್ಧಾರ

ಚರಿತ್ರೆ ಮರುಕಳಿಸುವುದೇ?

ಇಂಥ ಹಲವಾರು ಐತಿಹಾಸಿಕ ಘಟನೆಗಳಿಗೆ ಅಖಂಡ ‘ಬಳ್ಳಾರಿ ಜಿಲ್ಲೆ’ ಕಾರಣವಾಗಿದೆ. ಆದರೆ ಇಂದು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದಾಗಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲಾಗುತ್ತಿದೆ. ಈ ವಿಭಜನೆಯಿಂದಾಗುವ ‘ವಿಜಯನಗರ’ ಹೊಸ ಜಿಲ್ಲೆಯಿಂದ ವಿಜಯನಗರದ ಇತಿಹಾಸ ಮರುಕಳಿಸುವಂತಾಗಲಿದೆ ಎನ್ನುತ್ತಿದ್ದಾರೆ. ಆದರೆ, ನಾವು ಇದುವರೆಗೂ ವಿಜಯನಗರದ ಇತಿಹಾಸ ಕುರಿತು ಅಧ್ಯಯನ, ಸಂಶೋಧನೆ ನಡೆಸದೆ, ಹಂಪಿಯ ಪುನರುಜ್ಜೀವನಗೊಳಿಸದೇ ಇರುವಾಗ ಈಗ ಜಿಲ್ಲೆಯಾದ ತಕ್ಷಣ ವಿಜಯನಗರದ ಚರಿತ್ರೆ ಮರುಕಳಿಸಲು ಸಾಧ್ಯವೇ? ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದರಿಂದ ನಮ್ಮ ಹಿಂದಿನವರ ಹೋರಾಟ ವ್ಯರ್ಥವಾಗಬಾರದು.

ಈಗಾಗಲೇ ನೆಲ-ಜಲಗಳ ಹಿಡಿತ ಪಡೆದಿರುವ ತೆಲುಗರ ಪ್ರಭಾವ ಮುಂದೆ ಬಳ್ಳಾರಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರವಾದ ಅಧ್ಯಯನ, ಚರ್ಚೆಗಳು ನಡೆಯಬೇಕಾಗಿದೆ. ಅನ್ಯ ಭಾಷಿಕರ ಪ್ರಭಾವಗಳಿಲ್ಲದ ಅಚ್ಚ ಕನ್ನಡದ ಪಶ್ಚಿಮ ತಾಲೂಕುಗಳು ಬೇರ್ಪಟ್ಟರೆ ಬಳ್ಳಾರಿಯ ಕನ್ನಡದ ಉಳಿವಿನ ಬಗ್ಗೆ, ಬಳ್ಳಾರಿಯ ಅಸ್ಮಿತೆಯ ಬಗ್ಗೆ ಚರ್ಚೆಗಳಾಗಬೇಕಾಗಿದೆ. ದ್ವಿಭಾಷಿಕ ನೆಲೆಯ ‘ಬಳ್ಳಾರಿ’ ಮತ್ತೊಂದು ಬೆಳಗಾವಿ ಆಗದಿರುವಂತೆ ನೋಡಿಕೊಳ್ಳುವ ಹೊಣೆ, ಜವಾಬ್ದಾರಿ, ರಾಜಕಾರಣಿಗಳ ಮೇಲೆ, ಸರ್ಕಾರದ ಮೇಲೆ, ಕನ್ನಡಿಗರ ಮೇಲಿದೆ. ವಿಜಯನಗರದ ವ್ಯಾಪ್ತಿಯ ಸ್ಮಾರಕಗಳ ಹೊಲ ಗದ್ದೆಗಳು, ರಿಯಲ್‌ ಎಸ್ಟೇಟ್‌ಗಳಾಗಿ ಪರಿವರ್ತನೆಯಾಗದೆ ಇದ್ದರೆ ಸ್ಮಾರಕಗಳ ನಡುವೆ ಹೊಸ ಬಡಾವಣೆಗಳು ಹುಟ್ಟಿಕೊಳ್ಳದಿದ್ದರೆ ಸಾಕು.

371ಜೆ ಮೀಸಲು ಸಿಗುವುದೇ?

371(ಜೆ) ವ್ಯಾಪ್ತಿಯ ಲಾಭ ಪಡೆಯುವ ಸಲುವಾಗಿಯೇ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಮರುಸೇರ್ಪಡೆ ಮಾಡಲಾಗಿತ್ತು. ಆದರೆ ಈಗ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಿಂದ ಹೊರಬಂದು ಹೊಸ ಜಿಲ್ಲೆ ರಚನೆಯಾದರೆ 371(ಜೆ) ಸೌಲಭ್ಯ ಹೊಸ ಜಿಲ್ಲೆಗೆ ಸಿಗುವುದೇ ಎನ್ನುವುದನ್ನು ತಜ್ಞರು, ರಾಜಕಾರಣಿಗಳು ಸ್ಪಷ್ಟಪಡಿಸಬೇಕಾಗಿದೆ. ‘ವಿಜಯನಗರ’ದ ಹೊಸ ಜಿಲ್ಲೆ ರಚನೆಯಾಗುತ್ತಿದೆ. ಆದರೆ ಈ ಹಿಂದೆ ಇದೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೂತನ ಜಿಲ್ಲೆಗಳಾಗಿ ರಚನೆಗೊಂಡ, ಯಾದಗಿರಿ, ಕೊಪ್ಪಳ ಜಿಲ್ಲೆಗಳಂತಾಗದೆ ಇರಲಿ.

ಬ್ರಿಟಿಷರ ಕಾಲದಿಂದಲೂ ‘ಬಳ್ಳಾರಿ ಜಿಲ್ಲೆ’ ಏಕ ಆಡಳಿತಕ್ಕೆ ಒಳಪಡದೆ ಪ್ರಾಂತ್ಯಗಳು, ದ್ವಿಭಾಷೆಯ ಇಕ್ಕಳದಲ್ಲಿ ನಲುಗತ್ತಲೇ ಬಂದಿದೆ. ಏಕೀಕರಣದ ನಂತರವೂ ‘ಬಳ್ಳಾರಿ ಜಿಲ್ಲೆ’ ಒಂದು ರೀತಿಯಲ್ಲಿ ವಿಲಕ್ಷಣವಾಗಿಯೇ ಕಾಣುತ್ತಿದೆ. ಬೆಂಗಳೂರು, ಮೈಸೂರು ಭಾಗದವರಿಗೆ ಬಳ್ಳಾರಿ ಉತ್ತರ ಕರ್ನಾಟಕದ ಪ್ರದೇಶದ ಜಿಲ್ಲೆಯೆಂದು, ಉತ್ತರ ಕರ್ನಾಟಕದವರಿಗೆ ‘ಬಳ್ಳಾರಿ’ ಹೈದರಬಾದ್‌ ಕರ್ನಾಟಕದ ಪ್ರದೇಶವೆಂದು, ಹೈದರಾಬಾದ್‌-ಕರ್ನಾಟಕದವರು ಈ ಪ್ರದೇಶದ ಹೊರತಾದ ಜಿಲ್ಲೆಯೆಂದು ‘ಬಳ್ಳಾರಿ’ಯನ್ನು ನೋಡುವ ಪರಿಪಾಠ ಬೆಳೆದುಬಂದಿದೆ. ಇದೀಗ ಅಖಂಡ ಜಿಲ್ಲೆ ವಿಭಜನೆಯಾದರೆ ಜಿಲ್ಲೆಯೊಳಗಿಂದಲೇ ‘ಬಳ್ಳಾರಿ’ಯನ್ನು ನೋಡುವ ದೃಷ್ಟಿಹೇಗಿರಬಹುದು?

- ಎಂ.ಎಂ. ಶಿವಪ್ರಕಾಶ್‌, ಹೊಸಪೇಟೆ

Follow Us:
Download App:
  • android
  • ios