Millets : ಗಾತ್ರದಲ್ಲಿ ಕಿರಿದು, ಪೋಷಕಾಂಶದಲ್ಲಿ ಹಿರಿದು

ಗಾತ್ರದಲ್ಲಿ ಕಿರಿದಾಗಿದ್ದು, ಪೋಷಕಾಂಶದಲ್ಲಿ ಹಿರಿದಾಗಿರುವ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಭಿಪ್ರಾಯಪಟ್ಟರು.

Millet Is Small in size  small in nutrients snr

  ತುಮಕೂರು (ಜ. 14):  ಗಾತ್ರದಲ್ಲಿ ಕಿರಿದಾಗಿದ್ದು, ಪೋಷಕಾಂಶದಲ್ಲಿ ಹಿರಿದಾಗಿರುವ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಭಿಪ್ರಾಯಪಟ್ಟರು.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೈತಬಂಧುಗಳಿಗಾಗಿ ಶುಕ್ರವಾರ ನಗರದ ಬಾಲ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದಿನನಿತ್ಯದ ಆಹಾರಕ್ಕಿಂತಲೂ ಸಿರಿಧಾನ್ಯಗಳಿಂದ ಕೂಡಿದ ಆಹಾರ ಶ್ರೇಷ್ಠವಾಗಿದೆ. ಒಣಭೂಮಿ ಬೆಳೆಯಾಗಿರುವುದರಿಂದ ಸಿರಿಧಾನ್ಯಗಳನ್ನು ಕಡಿಮೆ ಮಳೆ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ವಾತಾವರಣ ಪೂರಕವಾಗಿದೆ. ರೈತರು ವಾಣಿಜ್ಯ ಬೆಳೆಯನ್ನು ಬೆಳೆಯುವುದರೊಂದಿಗೆ ಸಿರಿಧಾನ್ಯಗಳನ್ನು ಸಹ ಬೆಳೆಯಲು ಆಸಕ್ತಿ ತೋರಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ಸರ್ಕಾರದಿಂದ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಭಾಷಣ ಪ್ರಚಾರಕ್ಕಷ್ಟೆಸೀಮಿತಗೊಳಿಸದೆ ಸಿರಿಧಾನ್ಯಗಳಿಂದ ವೇದಿಕೆ ವಿನ್ಯಾಸ, ಸಿರಿಧಾನ್ಯ ಮಳಿಗೆ, ರೈತರಿಗೆ ಸಿರಿಧಾನ್ಯ ಭೋಜನ ಏರ್ಪಡಿಸಿರುವುದು ಸಿರಿಧಾನ್ಯ ಹಬ್ಬಕ್ಕೆ ಅರ್ಥಪೂರ್ಣವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಬಗ್ಗೆ ಮೆಚ್ಚುಗೆ ನುಡಿಗಳನ್ನಾಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸಿರಿಧಾನ್ಯಗಳಲ್ಲಿರುವ ಪೌಷ್ಟಿಕಾಂಶಗಳ ಗುಣಧರ್ಮಗಳನ್ನರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ನೀಡಲಾಗಿದೆ. ಆಧುನಿಕ ಕಾಲದಲ್ಲಿ ಬದಲಾದ ಆಹಾರ ಪದ್ಧತಿಯಿಂದ ಶೇ.90ರಷ್ಟುಜನರು ವಿವಿಧ ಖಾಯಿಲೆಗಳಿಂದ ಬಳಲುವಂತಾಗಿದೆ. ಬಾಯಿರುಚಿಗೆ ಜ‚ಂಕ್‌ ಫುಡ್‌ ತಿನ್ನುವುದನ್ನು ತ್ಯಜಿಸಿ ಪಾರಂಪರಿಕ ಆಹಾರ ಪದ್ಧತಿಯನ್ನನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು, ನವಣೆ, ಬರಗು, ಊದಲುನಂತಹ ಸಿರಿಧಾನ್ಯಗಳು ಆರೋಗ್ಯಕ್ಕೆ ಉತ್ತಮವೆಂದು ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ. ರೈತರು ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಏಕ ಬೆಳೆಗೆ ಮಾತ್ರ ಆದ್ಯತೆ ನೀಡದೆ ಎಣ್ಣೆಕಾಳು ಬೆಳೆ, ಸಿರಿಧಾನ್ಯ ಬೆಳೆಗಳನ್ನು ಸಹ ಮಿಶ್ರ ಬೆಳೆಯಾಗಿ ಬೆಳೆಯಬೇಕೆಂದು ಕರೆ ನೀಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿ.ಪಾಪಣ್ಣ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯವರಿಗೆ ಆರೋಗ್ಯಮಯ ಆಹಾರ ದೊರೆಯಬೇಕು. ಈ ನಿಟ್ಟಿನಲ್ಲಿ ರೈತಮಿತ್ರರು ಆರೋಗ್ಯ ಪೂರಕವಾದ ಬೆಳೆಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರ ಬಳಸುವುದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ. ಸಾವಯವ ಗೊಬ್ಬರ ಬಳಕೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್‌.ರವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ಸಿರಿಧಾನ್ಯ ಬೆಳೆಯಲು ಕೃಷಿ ಪ್ರದೇಶದ ವಿಸ್ತಿರ್ಣ ಹೆಚ್ಚಿಸಲು 6000 ರು.ಗಳ ಪೋ›ತ್ಸಾಹಧನ, ಸಿರಿಧಾನ್ಯ ಬೆಳೆಗಳ ಸಂಸ್ಕರಣೆ ಮಾಡಲು ಸಹಾಯಧನ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅವರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಯಿತು.

ಪಾವಗಡ ತಾಲೂಕಿನ ಜಿ. ಅನಿಲ್‌ ಕುಮಾರ್‌, ಚಿಕ್ಕನಾಯಕನಹಳ್ಳಿಯ ಗೋವರ್ಧನ, ಗುಬ್ಬಿಯ ಎಲ್‌.ಆರ್‌. ಪ್ರಮೋದ್‌, ತಿಪಟೂರಿನ ಎಚ್‌.ವಿ.ಪುನೀತ, ತುರುವೇಕೆರೆಯ ಮುನಿಸ್ವಾಮಯ್ಯ, ಮಧುಗಿರಿಯ ವಿ.ರವಿ, ತುಮಕೂರಿನ ಹರೀಶ್‌, ಕುಣಿಗಲ್‌ನ ಶಿವಕುಮಾರಸ್ವಾಮಿ, ಕೊರಟಗೆರೆಯ ಎಸ್‌.ಜಿ. ಮುತ್ತನರಸಿಂಹಯ್ಯ, ಶಿರಾ ತಾಲೂಕಿನ ಸಿ.ಯು. ಗುಂಡಯ್ಯ ಅವರಿಗೆ ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಜಿ.ಕೆ. ಅನಸೂಯ ಕಳಸೇಗೌಡ, ನಬಾರ್ಡ್‌ ಬ್ಯಾಂಕಿನ ಎ.ಜಿ.ಎಂ. ಕೀರ್ತಿಪ್ರಭ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಕೃಷಿಕ ಸಮಾಜದ ವಿವಿಧ ತಾಲ್ಲೂಕಿನ ಪ್ರತಿನಿಧಿಗಳಾದ ಹನುಮಂತೇಗೌಡ, ಸಿದ್ಧರಾಮೇಶ್ವರ, ಚೆನ್ನಲಿಂಗಣ್ಣ, ರಂಗಸ್ವಾಮಿ, ನಾಗಣ್ಣ, ಜಿ.ಕೆ.ಕುಮಾರ್‌, ತ್ಯಾಗರಾಜ್‌, ರಾಜಶೇಖರ್‌, ಸೇರಿದಂತೆ ರೈತಬಾಂಧವರು, ರೈತ ಮಹಿಳೆಯರು ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

2023 ಸಿರಿಧಾನ್ಯ ವರ್ಷ

ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ಉತ್ತೇಜಿಸುವ ಸಲುವಾಗಿ 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದ್ದು, ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕೆಂದು ಕರೆ ನೀಡಿದರು. ನಾವೆಲ್ಲರೂ ಬಿಳಿ ಬಣ್ಣದ ಅನ್ನಕ್ಕೆ ಮಾರು ಹೋಗಿದ್ದೇವೆ. ತಮ್ಮ ಬಾಲ್ಯದಲ್ಲಿ ಪ್ರತಿನಿತ್ಯ ಸಿರಿಧಾನ್ಯಗಳ ಅಡಿಗೆ ಊಟ ಮಾಡುತ್ತಿದ್ದೆವು. ಹಬ್ಬ-ಹರಿದಿನಗಳಂದು ಮಾತ್ರ ಬಿಳಿ ಅನ್ನ ತಿನ್ನಲು ಸಿಗುತ್ತಿತ್ತು. ಆದರೆ ಈಗ ಬದಲಾದ ಆಹಾರ ಪದ್ಧತಿಯಿಂದ ನಾವೆಲ್ಲಾ ಅಕ್ಕಿ, ಸಕ್ಕರೆ, ಮೈದಾದಂತಹ ಬಿಳಿ ಬಣ್ಣದ ಆಹಾರ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ತೆಂಗಿನ ಉತ್ಪನ್ನಗಳಿಂದ 1 ಕೋಟಿ ರು ವಹಿವಾಟು

ದಬ್ಬೇಘಟ್ಟದ ಸ್ವರ್ಣಭೂಮಿ ರೈತ ಉತ್ಪಾದಕರ ಸಂಘವು ತೆಂಗಿನ ವಿವಿಧ ಉತ್ಪನ್ನಗಳಿಂದ 2021-22ನೇ ಸಾಲಿನಲ್ಲಿ 1 ಕೋಟಿ ರು.ಗಳ ವಹಿವಾಟು ನಡೆಸುವಷ್ಟುಅಭಿವೃದ್ಧಿ ಹೊಂದಿದೆ. ಅದೇ ರೀತಿ ಸಿರಿಧಾನ್ಯಗಳಿಂದ ತಯಾರಿಸಿದ ಜೀನಿ ಉತ್ಪನ್ನ ತಯಾರಿಸುತ್ತಿರುವ ಶಿರಾ ತಾಲೂಕಿನ ದಿಲೀಪ್‌, ತಂತ್ರಜ್ಞಾನ ಬಳಸಿಕೊಂಡು ನೆಲ್ಲಿಕಾಯಿ ಉತ್ಪನ್ನಗಳಿಂದ ಕೊರಟಗೆರೆ ತಾಲೂಕು ದುರ್ಗದ ನಾಗೇನಹಳ್ಳಿ ಮಹೇಶ್‌ ಅವರು ಆದಾಯ ಗಳಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರೈತರಿಗೆ ತಿಳಿಸಿದರು.

Latest Videos
Follow Us:
Download App:
  • android
  • ios