ಕೊಪ್ಪಳ: ವೆಂಟಿಲೇಟರ್ ಸಮಸ್ಯೆಯಿಂದಲೇ ಹಲವರ ಸಾವು!
ಕೋವಿಡ್ ಆಸ್ಪತ್ರೆಯಲ್ಲಿ 33 ಇದ್ದರೂ 11 ವೆಂಟಿಲೇಟರ್ ಮಾತ್ರ ಸುಸ್ಥಿತಿ| ಅಘಾತಕಾರಿ ಅಂಶ ಎಂದರೆ ಕೋವಿಡ್ ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರೇ ಇಲ್ಲ| ಸಚಿವ ಬಿ.ಸಿ. ಪಾಟೀಲ ಗಮನಕ್ಕೂ ತಂದರೂ ಇತ್ಯರ್ಥವಾಗದ ಸಮಸ್ಯೆ|
ಕೊಪ್ಪಳ(ಆ.22): ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಲೇ ಇದ್ದು, ವೆಂಟಿಲೇಟರ್ ಸಮಸ್ಯೆಯಿಂದ ಅನೇಕರು ಬಲಿಯಾಗುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿಯೇ ಸುಮಾರುಸ 33 ವೆಂಟಿಲೇಟರ್ ಇದ್ದರೂ ಕಾರ್ಯ ನಿರ್ವಹಿಸುತ್ತಿರುವುದು ಕೇವಲ 11 ಮಾತ್ರ.
ಇದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ನೀಡಿದ ಅಧಿಕೃತ ಮಾಹಿತಿ. ಆದರೆ, ವಾಸ್ತವ ಮಾಹಿತಿಯೇ ಬೇರೆಯೇ ಇದೆ ಎನ್ನಲಾಗುತ್ತಿದೆ. ಕೇವಲ ಮೂರು ವೆಂಟಿಲೇಟರ್ ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗುತ್ತಿವೆ.
ಮಾಜಿ ಸಚಿವರೊಬ್ಬರ ಆಪ್ತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವಾಗ ವೆಂಟಿಲೇಟರ್ ಇಲ್ಲದೆ ಗೋಳಾಡಿದರು. ಆರೋಗ್ಯ ಇಲಾಖೆಯ ಕಾರ್ಯದರ್ಶಿವರೆಗೂ ವೆಂಟಿಲೇಟರ್ ಸಮಸ್ಯೆ ಕುರಿತು ದೂರಲಾಯಿತು. ಇಂಥವರ ಸ್ಥಿತಿಯೇ ಹೀಗಾದರೆ ಸಾಮಾನ್ಯರ ಪಾಡೇನು? ಎನ್ನುವುದಕ್ಕೆ ಜಿಲ್ಲಾಧಿಕಾರಿಗಳ ವಿಕಾಸ್ ಕಿಶೋರ ಸುರಳ್ಕರ್ ಅವರು ಉತ್ತರ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಇರುವ ವೆಂಟಿಲೇಟರ್‌ಗಳು, ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೆಂಟಿಲೇಟರ್‌ಗಳ ಸಂಖ್ಯೆ ಎಷ್ಟು ಎನ್ನುವುದನ್ನು ಜಿಲ್ಲಾಡಳಿತ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿದೆ.
ಕುಷ್ಟಗಿ: ಪಲ್ಲಕ್ಕಿ ಉತ್ಸವ, ಬಂಧಿತ 50 ಜನರಲ್ಲಿ 6 ಮಂದಿಗೆ ಕೊರೋನಾ ಸೋಂಕು!
ಹಲವರ ಸಾವು
ಜಿಲ್ಲೆಯಲ್ಲಿ ಈಗಾಗಲೇ ಸುಮಾರು ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಶತಕ ದಾಟುತ್ತಿದ್ದು, ಇದರಲ್ಲಿ ಬಹುತೇಕರು ವೆಂಟಿಲೇಟರ್ ಇಲ್ಲದ್ದಕ್ಕಾಗಿಯೇ ಪ್ರಾಣ ತೆತ್ತಿದ್ದಾರೆ ಎನ್ನುವುದು ಕೋವಿಡ್ ಆಸ್ಪತ್ರೆಯಲ್ಲಿ ಕೇಳಿ ಬರುತ್ತಿರುವ ಮಾತು. ಇದನ್ನು ನಾವು ಬಾಯಿ ಬಿಟ್ಟು ಹೇಳುವಂತಿಲ್ಲ ಎನ್ನುತ್ತಾರೆ ಅಲ್ಲಿಯ ವೈದ್ಯರು.
ತಹಸೀಲ್ದಾರ್ ರಮೇಶ ಅಳವಂಡಿಕರ್ ಅವರು ಸಹ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಪ್ರಾಣ ತೆತ್ತರು. ಅವರು ಸಹ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇರುವ 11 ವೆಂಟಿಲೇಟರ್‌ಗಳು ಯಾವಾಗ ಭರ್ತಿಯಾಗಿಯೇ ಇರುತ್ತವೆ ಎನ್ನುವ ಮಾಹಿತಿಯನ್ನು ನೀಡಲಾಗುತ್ತದೆ. ಹಾಗಾದರೆ ತುರ್ತಾಗಿ ಬಂದರೆ ಅವರನ್ನು ಯಾವ ವೆಂಟಿಲೇಟರ್‌ಗೆ ಹಾಕಲಾಗುತ್ತದೆ ಎನ್ನುವುದಕ್ಕೆ ಜಿಲ್ಲಾಡಳಿತದ ಬಳಿ ಉತ್ತರವೇ ಇಲ್ಲ.
ಇದಕ್ಕಿಂತ ಅಘಾತಕಾರಿ ಅಂಶ ಎಂದರೆ ಕೋವಿಡ್ ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರೇ ಇಲ್ಲ. ಕೋವಿಡ್‌ನಿಂದಾಗಿ ದಾಖಲಾಗುವವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರೇ ಅವರಿಗೆ ಸರಿಯಾದ ಚಿಕಿತ್ಸೆಯೇ ದೊರೆಯುತ್ತಿಲ್ಲವಾದ್ದರಿಂದ ಅವರು ಮರಣ ಹೊಂದುತ್ತಿದ್ದಾರೆ. ಈ ಸಮಸ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರ ಗಮನಕ್ಕೂ ಬಂದಿದೆಯಾದರೂ ಅದಿನ್ನು ಇತ್ಯರ್ಥವಾಗಿಯೇ ಇಲ್ಲ.