ಕುಷ್ಟಗಿ: ಪಲ್ಲಕ್ಕಿ ಉತ್ಸವ, ಬಂಧಿತ 50 ಜನರಲ್ಲಿ 6 ಮಂದಿಗೆ ಕೊರೋನಾ ಸೋಂಕು!

ಕೊರೋನಾ ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿ​ಹಾ​ಳ​ ಗ್ರಾಮದಲ್ಲಿ ನಡೆದಿದ್ದ ಶುಕಮುನಿ ಸ್ವಾಮಿಯ ಪಲ್ಲಕ್ಕಿ ಉತ್ಸವ| 50 ಮಂದಿಯ ವಿರುದ್ಧ ಪ್ರಕರಣ ದಾಖಲು| ಸೋಂಕಿತ 6 ಮಂದಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು| 

Coronavirus Confirmed to 6 People out of 50 Arrest Accused in  Koppal

ಕುಷ್ಟಗಿ(ಆ.22):  ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಗುರುವಾರ ನಡೆದ ಅವಧೂತ ಶುಕಮುನಿ ಸ್ವಾಮಿ ಪಲ್ಲಕ್ಕಿ ಉತ್ಸವ ಸಂದರ್ಭದಲ್ಲಿ ಪೊಲೀಸ್‌ ವಾಹನ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಚ್ಚರಿಯೆಂದರೆ ಇವರಲ್ಲಿ ಆರು ಮಂದಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ! ಬಂಧಿತ 44 ಜನರನ್ನು ವಿವಿಧ ಜೈಲುಗಳಿಗೆ ಕಳುಹಿಸಿದ್ದರೆ, ಸೋಂಕಿತ 6 ಮಂದಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೋಟಿಹಾಳದ ಶುಕಮುನಿ ಸ್ವಾಮಿಯ ಆರಾಧನೆ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಸದಂತೆ ತಹಸೀಲ್ದಾರರು ಆದೇಶ ಹೊರಡಿಸಿದ್ದರು. ಆದರೆ ಗ್ರಾಮದ ಕೆಲವರು ಗುರುವಾರ ಸಂಜೆ ಉತ್ಸವದ ನೆಪದಲ್ಲಿ ದೇವಸ್ಥಾನದ ಮುಖ್ಯದ್ವಾರವನ್ನು ಮುರಿದು ಪಲ್ಲಕ್ಕಿಯನ್ನು ಗ್ರಾಮದ ಸುತ್ತಾಡಿಸಿದ್ದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶವಿಲ್ಲವೆಂದು ಹೇಳಿದ್ದಕ್ಕಾಗಿ ಕೆಲವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗಾಗಿ ಸ್ಥಳೀಯ ಠಾಣೆಯಲ್ಲಿ ಗ್ರಾಮದ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಚಂದ್ರಶೇಖರ್‌ ಜಿ. ಹೇಳಿದರು.

ಕೊಪ್ಪಳ: ಕೊರೋನಾ ಮಧ್ಯೆ ಪಲ್ಲಕ್ಕಿ ಉತ್ಸವ ನಡೆಸಿದವರಿಗೆ ಲಾಠಿ ಏಟು

ಮುಂಜಾಗ್ರ​ತಾ ಕ್ರಮವಾಗಿ ಸ್ವಾಮಿಯ ಆರಾಧನಾ ಮಹೋತ್ಸವವನ್ನು ಸಾಂಕೇತಿಕವಾಗಿ ಮಠದ ಆವರಣದಲ್ಲಿ ಆಚರಿಸಲು ನಿರ್ಧರಿಸಿ ಈ ಕುರಿತಂತೆ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ತಹಸೀಲ್ದಾ​ರ್‌ ಎಂ. ಸಿದ್ದೇಶ ಅವರು ಗ್ರಾಮದಲ್ಲಿ ಡಂಗುರ ಸಾರಿದ್ದರು. ಆದರೆ ಕೆಲವರು ದೇವಸ್ಥಾನದಿಂದ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಿ ಗ್ರಾಮದ ಕೆಲ ಬೀದಿಗಳಲ್ಲಿ ಸಂಚಾರ ನಡೆಸಿದ್ದರಿಂದ ಈ ಘಟನೆ ನಡೆದಿದೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.

ಕೋವಿಡ್‌ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ ಮಾಡಿದ ಮತ್ತು ಆ ಸಂದರ್ಭದಲ್ಲಿ ತಡೆಯಲೆತ್ನಿಸಿದ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ 50 ಮಂದಿಯ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಅವರಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್‌ ಇರುವುದು ಖಚಿತವಾಗಿದ್ದರಿಂದ ಅವರನ್ನು ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಷ್ಟಗಿ ತಹಸೀಲ್ದಾರ್‌ ಎಂ. ಸಿದ್ದೇಶ ಅವರು ತಿಳಿಸಿದ್ದಾರೆ.  
"

Latest Videos
Follow Us:
Download App:
  • android
  • ios