ಬಸವರಾಜ ಹಿರೇಮಠ

ಧಾರವಾಡ[ಆ. 15]  ಬಹುತೇಕ ಪ್ರಕಾಶಕರು ಪ್ರತಿಭಾಪೂರ್ಣ ಸಲಹಾ ಸಮಿತಿಯಿಂದ ವಂಚಿತರಾಗಿದ್ದು ಸರಿಯಾದ ಮಾರ್ಗದರ್ಶವಿಲ್ಲದೇ ಕೃತಿಗಳನ್ನು ಮುದ್ರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಕೃತಿಗಳ ಬದಲು ವಿಕೃತಿಗಳು ಬರುವಂತಾಗಿದೆ ಎಂದು ಕನ್ನಡಪ್ರಭ ಪುರವಣಿ ಸಂಪಾದಕ, ಅಂಕಣಕಾರ ಜೋಗಿ ವಿಷಾದಿಸಿದರು.

ಮನೋಹರ ಗ್ರಂಥ ಮಾಲೆಯ 87ನೇ ವರ್ಷಾಚರಣೆ ಅಂಗವಾಗಿ ನಗರದ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಪುಸ್ತಕಗಳ ಬಿಡುಗಡೆ ಮಾಡಿದ ಅವರು, ಈಗಿನ ಹಲವು ಪ್ರಕಾಶಕರು ಓದುವ ಹವ್ಯಾಸ ಬೆಳಸಿಕೊಳ್ಳುತ್ತಿಲ್ಲ. ಅವರಿಗೆ ಸರಿಯಾದ ಕೃತಿಗಳನ್ನು ಮುದ್ರಿಸಲು ಸಲಹೆ ಸಹ ನೀಡುವವರಿಲ್ಲ. ಕೃತಿಗಳನ್ನು ಗ್ರಂಥಾಲಯಕ್ಕೆ  ಕಳುಹಿಸುವ ಉದ್ದೇಶ ಮಾತ್ರ ಈಡೇರುತ್ತಿದ್ದು ಉತ್ತಮ ಕೃತಿಗಳ ಕೊರತೆ ಸಾರಸ್ವತ ಲೋಕದಲ್ಲಿ ಎದ್ದು ಕಾಣುತ್ತಿದೆ. ಜೊತಗೆ ಕೃತಿಗಳ ಕುರಿತು ಸರಿಯಾದ ಟೀಕೆ ಮಾಡುವರೂ ಇಲ್ಲದಾಗಿದ್ದು ಬರೀ ಪಂಥ ಬದ್ಧವಾಗಿ ವಿಮರ್ಶೆಗಳು ಬರುತ್ತಿವೆಯೇ ಹೊರತು ಕೃತಿ ಬದ್ಧವಾಗಿ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪ್ರಪಂಚಕ್ಕೆ 4 ಪುಸ್ತಕ

ಜಿ.ಬಿ. ಜೋಶಿ ನೇತೃತ್ವದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಪ್ರತಿಯೊಂದು ಕೃತಿಗಳ ವಿಷಯ ವಸ್ತುವನ್ನು ಕೀರ್ತಿನಾಥ ಕುರ್ತುಕೋಟಿ ನೇತೃತ್ವದ ದಿಗ್ಗಜರ ಸಲಹಾ ಸಮಿತಿಯು ಸೂಕ್ಷ್ಮವಾಗಿ ಗಮನಿಸಿ ನಂತರ ಮುದ್ರಿಸಲಾಗುತ್ತಿತ್ತು. ಅದೇ ಸಂಪ್ರದಾಯವನ್ನು ಈಗಲೂ ಡಾ.ರಮಾಕಾಂತ ಜೋಶಿ ಹಾಗೂ ಸಮೀರ ಜೋಶಿ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ತಾವೂ ಸೇರಿದಂತೆ ದೊಡ್ಡ-ದೊಡ್ಡ ಲೇಖಕರು ಮನೋಹರ ಗ್ರಂಥಮಾಲೆ ಪ್ರಕಾಶನದಲ್ಲಿಯೇ ತಮ್ಮ ಕೃತಿಗಳು ಪ್ರಕಟಗೊಳ್ಳಲಿ ಎನ್ನುತ್ತಾರೆ ಎಂದರು.

ಕಮಲಾ ಹೆಮ್ಮಿಗೆ ಅವರ ಕೇರಳ ಕಾಂತಾಸಮ್ಮಿತ (ಮಲೆಯಾಳಂ ಕಥೆಗಳು), ನಿವೃತ್ತ ಪೊಲೀಸ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ ಅವರ ಸಾವಿನ ಸೆರಗಲ್ಲಿ (ಕಥೆಗಳು], ಡಾ.ಲೋಹಿತ ನಾಯ್ಕರ ಅವರ ಉಮೇದುವಾರರು (ರಾಜಕೀಯ ಕಾದಂಬರಿ) ಹಾಗೂ ಡಾ. ಗುರುರಾಜ ಕರ್ಜಗಿ ಅವರ ಓ ಹೆನ್ಸಿ ಕಥೆಗಳು (ಕತೆಗಳು) ಕುರಿತು ವಿಶ್ಲೇಷಣೆ ಮಾಡಿದ ಜೋಗಿ ಅವರು, ಶತಮಾನದ ಹಿಂದೆ ಕೇರಳದಲ್ಲಿನ ಸ್ತ್ರೀ ಲೋಕದ ಶೋಷಣೆಯನ್ನು ಅಲ್ಲಿನ ಪರಿಸರದ ಚಿತ್ರಣದೊಂದಿಗೆ ಅದ್ಭುತವಾದ ಕೃತಿಯನ್ನು ಕಮಲಾ ಅವರು ರಚಿಸಿದ್ದಾರೆ.

ಇನ್ನೇನು ಮರಣ ದಂಡನೆಗೆ ಗುರಿಯಾಗಲಿರುವ ಕೈದಿಗಳ ಅಪರಾಧ ಜಗತ್ತಿನ ಕುರಿತು ಡಿ.ವಿ. ಗುರುಪ್ರಸಾದ ಅವರು ಕೈದಿಗಳ ಮನಸ್ಸಿನ ಅನುವಾದನ್ನು ಸಾವಿನ ಸೆರಗು ಕೃತಿಯಲ್ಲಿ ಮಾಡಿದ್ದಾರೆ. ರಾಜಕೀಯ ಬದುಕಿನ ರೋಚಕತೆಗಳನ್ನು ಆಧರಿಸಿ ಲೋಹಿತ ನಾಯ್ಕರ ಅವರು ‘ಉಮೇದುವಾರರು’ ಬರೆದಿದ್ದು, ಭಾರತೀಯ ರಾಜಕೀಯ ವಿಶ್ಲೇಷಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಕೃತಿ ನಾಟಕ ಅಥವಾ ಸಿನಿಮಾ ಆಗುವ ಮೂಲಕ ಹೊರ ಜಗತ್ತಿಗೂ ರಾಜಕೀಯದ ಒಳಸುಳಿ ಗೊತ್ತಾಗಬೇಕೆಂದು ಜೋಗಿ ಅಭಿಪ್ರಾಯಿಸಿದರು. ಇನ್ನು, ರೋಚಕ ಕಥೆಗಳನ್ನು ಹೊಂದಿರುವ ಕರ್ಜಗಿ ಅವರ ’ಓ ಹೆನ್ರಿ’ ಪುಸ್ತಕ ಓದಿಸಿಕೊಂಡು ಹೋಗುತ್ತದೆ ಎಂದರು.

ಲೇಖಕ ಡಾ.ಡಿ.ವಿ. ಗುರುಪ್ರಸಾದ ಮಾತನಾಡಿ, 35 ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಮೋಹನ ಕುಮಾರ ಸೇರಿದಂತೆ ದಂಡುಪಾಳ್ಯದ ಪ್ರಮುಖ ಆರೋಪಿಗಳನ್ನು ನಾನು ಕರ್ತವ್ಯದಲ್ಲಿದ್ದಾಗ ವಿಚಾರಣೆ ಮಾಡಿದ್ದೆ. ಅವರೆಂದೂ ತಾವು ಅಪರಾಧ ಮಾಡಿರುವುದಾಗಿ ಒಪ್ಪಿಕೊಳ್ಳಲಿಲ್ಲ. ಬೇಸರ ಎಂದರೆ, ಅವರಲ್ಲಿ ಅಪರಾಧ ಭಾವನೆಯೇ ಇಲ್ಲ. ಇಷ್ಟಾಗಿಯೂ ಅವರಿಗೆ ಮರಣ ದಂಡನೆ ಆಗಿದ್ದು ಕೃತಿ ರಚನೆ ವೇಳೆ ಅವರನ್ನು ಸಂದರ್ಶಿಸಿದಾಗ ಅವರಿಗಿನ್ನೂ ಬಿಡುಗಡೆ ಆಶಾಭಾವನೆ ಇದೆ ಎಂಬುದೇ ಆಶ್ಚರ್ಯ ತಂದಿದೆ. ಇನ್ನೊಂದಡೆ ಮರಣದಂಡೆನೆಗೆ ಗುರಿಯಾಗಿರುವ ಪೈಕಿ ಕೆಲವರು ಸಂದರ್ಭದ ಒತ್ತಡಕ್ಕೆ ಸಿಲುಕಿ ಅಪರಾಧ ಮಾಡಿದ್ದಾರೆ. ಇದೇ ಅಪರಾಧ ಜಗತ್ತನ್ನು ಕೃತಿ ತೆರೆದಿಡುತ್ತದೆ ಎಂದರು. ಲೇಖಕರಾದ ಕಮಲಾ ಹೆಮ್ಮಗೆ ಹಾಗೂ ಲೋಹಿತ ನಾಯ್ಕರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಆನಂದ ಝಂಜರವಾಡ, ಈಗಿನ ಬಹುತೇಕ ಕೃತಿಗಳ ಹಿಂದೆ ಸಾಂಸ್ಕೃತಿಕ ಒತ್ತಡ ಇದೆಯೇ ಹೊರತು ಸಂಸ್ಕೃತಿಯ ಒತ್ತಡ ಇಲ್ಲ. ಯೋಜಿತವಾಗಿ ಕೃತಿಗಳನ್ನು ಬರೆಯುತ್ತಿದ್ದಾರೆಯೇ ಹೊರತು ಸೃಜನಶೀಲವಾಗಿ ಬರೆಯುತ್ತಿಲ್ಲ. ಕನ್ನಡದಲ್ಲಿ ಸಾವಿರಾರು ಕೃತಿಗಳ ಪ್ರವಾಹದಲ್ಲಿ ಸೃಜನಶೀಲತೆ ಕೊಚ್ಚಿ ಹೋಗುತ್ತಿದೆ. ಸೃಜನಾತ್ಮಕ ಕೃತಿಗಳ ಅಗತ್ಯತೆ ನಮಗಿದೆ ಎಂದು ಹೇಳಿದರು.ಡಾ. ರಮಾಕಾಂತ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹ.ವೆಂ. ಕಾಖಂಡಕಿ ನಿರೂಪಿಸಿದರು. ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ, ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಮಾಲತಿ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.