ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸೇತುವೆ ನಿರ್ಮಾಣಕ್ಕಾಗಿ ನದಿಗೆ ಹಾಕಲಾದ ಒಡ್ಡಿನಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ. ಈ ಕಾಮಗಾರಿಯಿಂದಾಗಿ ದಂಬೆಲ್‌, ಮಾಲೇಮಾರ್, ಕಾವೂರು ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆಯಿದ್ದು, ಸುಮಾರು 2.5 ಲಕ್ಷ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.

ಮಂಗಳೂರು: ನಗರದ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ ನದಿಗೆ ಹಾಕಲಾದ ನೀರಿನ ಒಡ್ಡಿನ ಪರಿಣಾಮ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಸಮುದ್ರ ಸೇರದೆ ಕೃತಕ ನೆರೆಯ ಭೀತಿ ಎದುರಾಗಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಇಸಿಎಫ್) ಗೌರವ ಕಾರ್ಯದರ್ಶಿ ಎಚ್.‌ ಶಶಿಧರ ಶೆಟ್ಟಿ ಹೇಳಿದರು.

Add Asianetnews Kannada as a Preferred SourcegooglePreferred

ಮೂರರಿಂದ ನಾಲ್ಕು ಅಡಿ ಮುಳುಗಡೆ ಸಾಧ್ಯತೆ

ಒಕ್ಕೂಟದ ನಿಯೋಗದೊಂದಿಗೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಒಡ್ಡಿನ ಪರಿಣಾಮ ನೀರು ಸರಾಗವಾಗಿ ಹರಿಯದೆ ಒತ್ತಡದಿಂದ ಹಿಮ್ಮುಖ ಸಂಚರಿಸಿ ಸಮಸ್ಯೆ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ದಂಬೆಲ್ ಮೂಲಕ ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಲ್ ಮುಂತಾದ ಪ್ರದೇಶಗಳು ಸುಮಾರು ಮೂರರಿಂದ ನಾಲ್ಕು ಅಡಿ ಮುಳುಗಡೆ ಆಗುವ ಸಾಧ್ಯತೆ ಇದೆ ಎಂದರು.

ಸುಮಾರು 2.5 ಲಕ್ಷ ಮಂದಿ ಇರುವ ವಸತಿ ಪ್ರದೇಶ

ನದಿಗೆ ಅಡ್ಡವಾಗಿ ನಿರ್ಮಿಸಿದ ಒಡ್ಡನ್ನು ಕೂಡಲೇ ತೆರವು ಮಾಡಬೇಕು. ಇಲ್ಲದಿದ್ದರೆ ಸುಮಾರು 2.5 ಲಕ್ಷ ಮಂದಿ ಇರುವ ವಸತಿ ಪ್ರದೇಶ ಮುಳುಗಡೆಯಾಗಲಿದೆ. ಸಾಮಾನ್ಯ ಜ್ಞಾನ ಇಲ್ಲದೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ಅಡೆತಡೆ ಇಲ್ಲದೆಯೇ ಕೊಟ್ಟಾರಚೌಕಿ ಸುತ್ತಲಿನ ಪ್ರದೇಶ ಮುಳುಗಡೆಯಾಗಿತ್ತು. ಕೂಡಲೇ ಈ ಮಣ್ಣು ತೆರವು ಮಾಡಬೇಕು. ಇಲ್ಲದಿದ್ದರೆ ಮುಂದಿನ ಗಂಡಾಂತರಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭ ಎನ್‌ಇಸಿಎಫ್ ಅಧ್ಯಕ್ಷ ಜಾನಸ್‌, ಉಪ ಕಾರ್ಯದರ್ಶಿ ಇಯಾನ್‌, ಸದಸ್ಯರಾದ ಸರಿತಾ ಶೆಟ್ಟಿ, ಸುರೇಶ್‌ ಉಡುಪ ಮತ್ತಿತರರು ಇದ್ದರು.

ಇದನ್ನೂ ಓದಿ: ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?

ಇದನ್ನೂ ಓದಿ: ಮಂಗಳೂರು: ಬಂಟ್ವಾಳ, ವಿಟ್ಲ ಆಗಸದಲ್ಲಿ ಭೂಮಿಗೆ ಅತ್ಯಂತ ಸಮೀಪ 8 ಸುತ್ತು ಗಿರಕಿ ಹೊಡೆದ ಏರ್‌ಇಂಡಿಯಾ, ಗಾಬರಿಬಿದ್ದ ಜನ!