ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಬಂಟ್ವಾಳದ ವಿಟ್ಲ, ಕಲ್ಲಡ್ಕ ಭಾಗದಲ್ಲಿ ಹಲವು ಸುತ್ತು ಹೊಡೆದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಇದು ತಾಂತ್ರಿಕ ದೋಷವಲ್ಲ, ಬದಲಿಗೆ ಹವಾಮಾನ ವೈಪರೀತ್ಯದಿಂದಾಗಿ ಪೈಲಟ್‌ಗಳು ಅನುಸರಿಸಿದ 'ಹೋಲ್ಡಿಂಗ್ ಪ್ಯಾಟರ್ನ್' ಎಂಬ ಸುರಕ್ಷತಾ ಕ್ರಮವಾಗಿತ್ತು. ಅಂತಿಮವಾಗಿ ವಿಮಾನವು ಸುರಕ್ಷಿತವಾಗಿ ಇಳಿಯಿತು.

ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೊಂದು ವಿಟ್ಲ, ಕಲ್ಲಡ್ಕ ಪರಿಸರದ ಆಕಾಶದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಸುತ್ತುಗಳನ್ನು ಹೊಡೆದ ಘಟನೆ ಗುರುವಾರ ಸಂಜೆ ನಡೆದಿದ್ದು, ಸ್ಥಳೀಯ ಜನರಲ್ಲಿ ಕೆಲ ಕಾಲ ಭೀತಿ ಮತ್ತು ಆತಂಕ ಮೂಡಿಸಿತು.

Add Asianetnews Kannada as a Preferred SourcegooglePreferred

ತಾಂತ್ರಿಕ ದೋಷವೆಂದು ಗಾಬರಿಗೊಂಡ ಜನ

ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ IX2924 (ಬೋಯಿಂಗ್ 737 MAX 8) ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ವಿಟ್ಲ ಆಕಾಶ ಭಾಗಕ್ಕೆ ಬರುತ್ತಿದ್ದಂತೆ ವಿಮಾನವು ಅತ್ಯಂತ ಕೆಳ ಮಟ್ಟದಲ್ಲಿ (ಸುಮಾರು 2,650 ಅಡಿ ಎತ್ತರದಲ್ಲಿ) ವೃತ್ತಾಕಾರದಲ್ಲಿ ನಿರಂತರ ಸುತ್ತು ಹೊಡೆಯಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ತೀವ್ರ ಆತಂಕ ವ್ಯಕ್ತಪಡಿಸಿದರು. ಫ್ಲೈಟ್‌ ರಾಡಾರ್ ಅಪ್ಲಿಕೇಶನ್‌ನಲ್ಲೂ ವಿಮಾನವು ಒಂದೇ ಕಡೆ ಸುತ್ತುತ್ತಿರುವುದು ದಾಖಲಾಗಿದೆ.

ಇದು ಸಾಮಾನ್ಯ ವಾಯುಯಾನ ಪ್ರಕ್ರಿಯೆ:

ಸಾಮಾನ್ಯವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಹಠಾತ್ ಗಾಳಿ, ಭಾರಿ ಮಳೆ ಅಥವಾ ದಟ್ಟವಾದ ಮೋಡಗಳಿದ್ದಾಗ ರನ್‌ವೇ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮಂಗಳೂರು ಕರಾವಳಿ ಭಾಗದಲ್ಲಿ ಸದ್ಯ ಹವಾಮಾನ ವೈಪರೀತ್ಯ ಹಾಗೂ ಮಳೆಯ ವಾತಾವರಣ ಇರುವುದರಿಂದ ಸುರಕ್ಷತೆ ದೃಷ್ಟಿಯಿಂದ ಪೈಲಟ್‌ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಸೂಚನೆಯಂತೆ ಹವಾಮಾನ ತಿಳಿಯಾಗುವವರೆಗೆ ಆಕಾಶದಲ್ಲೇ ಕಾಯುತ್ತಾರೆ. ಇದನ್ನು ವಾಯುಯಾನದ ಭಾಷೆಯಲ್ಲಿ ‘ಹೋಲ್ಡಿಂಗ್ ಪ್ಯಾಟರ್ನ್’ (Holding Pattern) ಎನ್ನಲಾಗುತ್ತದೆ. ಎರಡು ವಿಮಾನಗಳು ‘ಹೋಲ್ಡಿಂಗ್ ಪ್ಯಾಟರ್ನ್’ ಮುಗಿಸಿ ಸುರಕ್ಷಿತವಾಗಿ ಇಳಿದಿವೆ.

ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿ ಇರಲಿಲ್ಲ. ವಿಟ್ಲ ಪರಿಸರದಲ್ಲಿ ಸುತ್ತುಗಳನ್ನು ಮುಗಿಸಿದ ವಿಮಾನವು ಬಳಿಕ ಮೂಡಬಿದಿರೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣದತ್ತ ಸಾಗಿದ್ದು, ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಆತಂಕ ಪಡಬಾರದು ಎಂದು ವಾಯುಯಾನದ ತಜ್ಞರು ತಿಳಿಸಿದ್ದಾರೆ.