Asianet Suvarna News Asianet Suvarna News

ಮಲ್ಲಿಗೆ ಬೆಳೆದು ಮುಗುಳ್ನಗೆ ಬೀರಿದ ವಕೀಲೆ : ಲಾಕ್ಡೌನ್ ನಲ್ಲಿ ಬಂಪರ್ ಆದಾಯ

  •  ಕೋರೋನಾ ಕಾಲದಲ್ಲಿ ಕಾಲಹರಣ ಮಾಡದೆ ಮನೆಯ ಟೇರೇಸ್ ಮೇಲೆ ಮಲ್ಲಿಗೆ ಬೆಳೆದ ವಕೀಲೆ
  • ಮಲ್ಲಿಗೆ ಬೆಳೆದು ಮುಗುಳ್ನಗೆ ಬೀರಿದ ಮಂಗಳೂರಿನ ಮಹಿಳೆಯ ಯಶೋಗಾಥೆ
Mangalore woman grows jasmine on terrace  earns money in lockdown snr
Author
Bengaluru, First Published Aug 9, 2021, 10:55 AM IST | Last Updated Aug 9, 2021, 11:00 AM IST

ವರದಿ :  ರಾಘವೇಂದ್ರ ಅಗ್ನಿಹೋತ್ರಿ
 
ಮಂಗಳೂರು (ಆ.09):  
ಕೋರೋನಾ ಕಾಲದಲ್ಲಿ ಕಾಲಹರಣ ಮಾಡದೆ ಮನೆಯ ಟೇರೇಸ್ ಮೇಲೆ ಮಲ್ಲಿಗೆ ಬೆಳೆದು ಮುಗುಳ್ನಗೆ ಬೀರಿದ ಮಂಗಳೂರಿನ ಮಹಿಳೆಯ ಯಶೋಗಾಥೆಯಿದು.

ಕೋರೊನಾ ಲಾಕ್ಡೌನ್ ಎಂದು ಇವರು ಕಾಲಹರಣ ಮಾಡದೇ ಆ ಸಮಯವನ್ನೇ ಹೇಗೆ  ಸದುಪಯೋಗ ಪಡಿಸಿ ಗಳಿಕೆ ಮಾಡಬಹುದು ಎಂಬುದಕ್ಕೆ ವಕೀಲೆ ಕಿರಣ ಮಾದರಿಯಾಗಿದ್ದಾಾರೆ.

ಮೂಲತಃ ಕೃಷಿ ಇವರ ಉದ್ಯೋಗವಲ್ಲ. ಎಲ್‌ಎಲ್‌ಬಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಕಿರಣ ಮಂಗಳೂರಿನ ಕೊಂಚಾಡಿಯ ನಿವಾಸಿ. ಮೊದಲು ಅಲ್ಪಸ್ವಲ್ಪ ತರಕಾರಿ ಬೆಳೆಸುತ್ತಿದ್ದರು, ಕಳೆದ ಲಾಕ್‌ಡೌನ್ ಸಮಯದಲ್ಲಿ ಮಲ್ಲಿಗೆ ಯಾಕೆ ಬೆಳೆಯಬಾರದು ಎಂದು ಚಿಂತನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತಂದರು. ಈಗ ಮನೆಯ ಮಾಳಿಗೆಯಲ್ಲಿ ದಿನ ದಿನ ಬೆಳೆದ ಮಲ್ಲಿಗೆ ಹೂವುಗಳನ್ನು ಕೊಯ್ದು ಮಾರಾಟ ಮಾಡುವುದೇ ಇವರಿಗೆ ಅತ್ಯಂತ ಖುಷಿ ನೀಡುತ್ತಿದೆ. ಜೊತೆಗೆ ಗಿಡ, ಹೂವುಗಳ ನಡುವೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೂ ಬೆಳೆಗಾರರಿಗೆ ಆಷಾಢ ಮಾಸದ ಬರೆ : ಹೂವಿನ ದರ ತೀವ್ರ ಕುಸಿತ

ಹೇಗೆ ಬೆಳೆದರು?: ನಗರ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯುವುದು ಸುಲಭದ ಮಾತಲ್ಲ. ಮಣ್ಣು, ಗೊಬ್ಬರವೆಲ್ಲವನ್ನೂ ಖರೀದಿಸಿಯೇ ತರಬೇಕು. ನರ್ಸರಿಯಿಂದ ಗಿಡ, ಮಣ್ಣು, ಗೊಬ್ಬರ ತಂದರು. ದೊಡ್ಡ ದೊಡ್ಡ ಕುಂಡಗಳನ್ನು ತಂದು ತಾರಸಿಯಲ್ಲಿರಿಸಿ, ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಶಂಕರಪುರ ಮಲ್ಲಿಗೆ ಗಿಡಗಳನ್ನು ನೆಟ್ಟರು. ಇದಕ್ಕೆ ಇವರ ಪತಿ, ಹಾಗೂ ಮಗ ನೆರವು ನೀಡಿದರು. ಅದಕ್ಕೊಂದಿಷ್ಟು ಪ್ರೀತಿಯ ಧಾರೆಯೆರೆದು ಗಿಡಗಳ ಆರೈಕೆ ಮಾಡಿದರು. ಅದರ ಫಲಿತಾಂಶವೇ ಇಂದು ಮನೆಯ ಮಾಳಿಗೆಯ ಮೇಲೆ ಗಿಡಗಳು ನಳನಳಿಸುತ್ತಿವೆ. ಹೂವುಗಳು ಅರಳಿ ಘಮಘಮಿಸುತ್ತಿವೆ.

Mangalore woman grows jasmine on terrace  earns money in lockdown snr

ನಾನು ಸ್ಥಳವಿಲ್ಲ, ಸಮಯವಿಲ್ಲವೆಂದು ಖಾಲಿ ಕುಳಿತಿಲ್ಲ. ಆರಂಭದಲ್ಲಿ ಒಂದಷ್ಟು ಖರ್ಚುಗಳಾಗಿವೆ. ಗಿಡಗಳಿಗೆ ಒಂದಷ್ಟು ಸಮಯ, ಶ್ರಮ, ಒಂದಷ್ಟು ಪ್ರೀತಿ ನೀಡಿದ ಪರಿಣಾಮ ಈಗ ಉತ್ತಮ ಫಲಿತಾಂಶ ಬಂದಿದೆ. ಎಲ್ಲ ಗಿಡಗಳಲ್ಲಿ ಹೂವುಗಳು ಅರಳಿ ನಿಂತಿವೆ ಎನ್ನುತ್ತಾರೆ ವಕೀಲೆ ಕಿರಣ.

ಜಣ ಜಣ ಕಾಂಚಾಣ: ಕಳೆದ ಸಲದ ಲಾಕ್ಡೌನ್ ಅವಧಿಯಲ್ಲಿ ಸುಮಾರು 100 ಮಲ್ಲಿಗೆ ಗಿಡಗಳನ್ನು ನರ್ಸರಿಯಿಂದ ತಂದು ಟೇರೇಸಿನ ಮೇಲೆ ನೆಟ್ಟಿದ್ದರು. ಸಾವಯವ ಗೊಬ್ಬರ ನೀಡಿ ಬೇಸಿಗೆಯಲ್ಲಿ ದಿನವೂ ನೀರು ನೀಡಿ ಆರೈಕೆ ಮಾಡಿದರು. 100 ಗಿಡದಲ್ಲಿ 90 ಗಿಡಗಳು ಬೆಳೆದು  ಹೂವು ಬಿಡಲು ಆರಂಭವಾಗಿ, ಈಗ ಉತ್ತಮ ಆದಾಯ ಬರುತ್ತಿದೆ.

 ಸರಾಸರಿ ದಿನಕ್ಕೆ ಒಂದು ಅಟ್ಟೆಯಷ್ಟು ಹೂವು ಸಿಗುತ್ತಿದ್ದು, ಇದರಿಂದ ಕಿರಣ ಅವರು ತಿಂಗಳಿಗೆ ಸುಮಾರು 15-16 ಸಾವಿರ ಆದಾಯ ಗಳಿಸುತ್ತಿದ್ದಾರೆ.

12 ವರ್ಷಕ್ಕೊಮ್ಮೆ ಅರಳೋ ಹೂವಿದು, ದೃಷ್ಟಿ ಹಾಯಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ!

ಇವರಿಗೆ ಮಾಲೆ ಕಟ್ಟಲೂ ಗೊತ್ತಿರಲಿಲ್ಲ. ಯೂಟ್ಯೂಬ್ ಮೂಲಕ ಮಾಲೆ ಕಟ್ಟಲು ಕಲಿತು, ಈಗ ಒಂದು ಗಂಟೆಗೆ ಒಂದು ಅಟ್ಟೆ ಹೂವು ಮಾಲೆ ಕಟ್ಟುವ ಸಾಮರ್ಥ್ಯ ಗಳಿಸಿದ್ದಾರೆ. ತುಂಬಾ ಹೂವುಗಳಿದ್ದಾಗ ಸಹೋದರಿಯರು ಮಾಲೆ ಕಟ್ಟಲು ನೆರವಾಗುತ್ತಾರೆ.
ಉತ್ತಮ ದರ ನಿರೀಕ್ಷೆ: ಮಳೆಗಾಲ, ಆಷಾಢ ಮಾಸದಲ್ಲಿ ಹೂವಿಗೆ ಬೇಡಿಕೆ ಕಡಿಮೆ. ಇನ್ನೇನು ಶ್ರಾವಣ ಮಾಸ ಆರಂಭವಾಗಿ ಹಬ್ಬ ಹರಿದಿನಗಳು ಆರಂಭವಾಗಲಿವೆ, ಮಲ್ಲಿಗೆಗೆ ಉತ್ತಮ ದರ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಿರಣ ಅವರಿದ್ದಾರೆ. ಮತ್ತಷ್ಟು ಗಿಡಗಳನ್ನು ತರಿಸಿ ನೆಡುವ ಉದ್ದೇಶ ಹೊಂದಿದ್ದಾರೆ.

ಬಲು ಬೇಡಿಕೆಯ ಮಲ್ಲಿಗೆ:  ಒಂದು ಚೆಂಡು ಮಲ್ಲಿಗೆ ಎಂದರೆ ಅದರಲ್ಲಿ 700 ಹೂವುಗಳಿರುತ್ತವೆ. ಇಂತಹ ನಾಲ್ಕು ಚೆಂಡು ಸೇರಿದರೆ ಒಂದು ಅಟ್ಟೆ ಮಲ್ಲಿಗೆಯಾಗುತ್ತದೆ. ಅಟ್ಟೆಯ ಲೆಕ್ಕದಲ್ಲಿ ಮಲ್ಲಿಗೆ ಹೂವು ಮಂಗಳೂರಿಂದ ಬೆಂಗಳೂರು, ಮುಂಬೈ ಸೇರಿದಂತೆ ಗಲ್ಫ್  ರಾಷ್ಟ್ರಗಳಿಗೂ ರಫ್ತಾಗುತ್ತವೆ. ಸೀಸನ್‌ಲ್ಲಿ ಮಲ್ಲಿಗೆ ಅಟ್ಟೆಗೆ 1000 ದಿಂದ 1500 ರು. ನಿಗದಿಯಾಗುತ್ತದೆ. ಮಂಗಳೂರು ಹಾಗೂ ಉಡುಪಿಯ ಶಂಕರಪುರ ಮಲ್ಲಿಗೆಗೆ ದೇಶ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ.

ಮಲ್ಲಿಗೆ ಕೃಷಿಯಲ್ಲಿ ಉತ್ತಮ ಆದಾಯವೂ ಇದೆ, ಮನಸ್ಸಿಗೆ ಖುಷಿ, ಸಮಾಧಾನವೂ ಲಭ್ಯ. ಸ್ವಾವಲಂಬಿಯಾಗಿ ಬದುಕುವವರಿಗೆ ಮಲ್ಲಿಗೆ ಕೃಷಿ ಉತ್ತಮ ಆಯ್ಕೆ. ಗಿಡಗಳ ಆರೈಕೆ ಚೆನ್ನಾಗಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ನಾನೇ ಮಾದರಿ ಮಲ್ಲಿಗೆ ಬೆಳೆಗಾರರಾದ ಮಂಗಳೂರಿನ  ಕಿರಣ.  

Latest Videos
Follow Us:
Download App:
  • android
  • ios