ಹೂ ಬೆಳೆಗಾರರಿಗೆ ಆಷಾಢ ಮಾಸದ ಬರೆ : ಹೂವಿನ ದರ ತೀವ್ರ ಕುಸಿತ

  • ಆಷಾಢ ಮಾಸದ ಹಿನ್ನೆಲೆಯಲ್ಲಿ ವಿವಿಧ ಹೂಗಳ ಬೆಲೆ ಪಾತಾಳಕ್ಕೆ
  • ಹೂ ಮಾರಾಟಗಾರರು ಮತ್ತು ಬೆಳೆಗಾರರು ಪರದಾಡುವಂತಾಗಿದೆ
  • ವಿವಿಧ ಹೂವುಗಳಿಗೆ ಬೆಲೆ ಇಲ್ಲದೆ ತಿಪ್ಪೆಗೆ ಎಸೆಯುವ ಪರಿಸ್ಥಿತಿ ಬಂದಿದೆ
Flowers Price Falls due To Ashada Month  snr

ವರದಿ : ಸತ್ಯರಾಜ್‌ ಜೆ.

 ಕೋಲಾರ (ಜು.28):  ಆಷಾಢ ಮಾಸದ ಹಿನ್ನೆಲೆಯಲ್ಲಿ ವಿವಿಧ ಹೂಗಳ ಬೆಲೆ ಪಾತಾಳಕ್ಕೆ ಇಳಿದಿರುವುದರಿಂದ ಹೂ ಮಾರಾಟಗಾರರು ಮತ್ತು ಬೆಳೆಗಾರರು ಪರದಾಡುವಂತಾಗಿದೆ. ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿರುವುದರಿಂದ ಗುಲಾಬಿ,ಚೆಂಡು,ಮಲ್ಲಿಗೆ ಹೂವು ಸೇರಿದಂತೆ ವಿವಿಧ ಹೂವುಗಳಿಗೆ ಬೆಲೆ ಇಲ್ಲದೆ ತಿಪ್ಪೆಗೆ ಎಸೆಯುವ ಪರಿಸ್ಥಿತಿ ಬಂದಿದೆ.

ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ದೇವಾಲಯಗಳಲ್ಲಿ ವಿಶೇಷ ಪೂಜೆ ಕಡಿಮೆ. ಇದರಿಂದಾಗಿ ಹೂವಿನ ಬಳಕೆ ಕಡಿಮೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ದೇವರ ಪಾದ ಸೇರೋ ಈ ಹೂವು ರೋಗ ನಿವಾರಿಸುವ ಆಯುರ್ವೇದ ಔಷಧವೂ ಹೌದು

ಚೆಂಡು ಹೂವಿಗೆ ಬೆಲೆ ಇಲ್ಲದೆ ಅವುಗಳನ್ನು ಕೀಳದೆ ಬೆಳೆಗಾರರು ತೋಟದಲ್ಲೇ ಬಿಟ್ಟು ಕೊಳೆಯುವಂತಾಗಿದೆ. ಜಿಲ್ಲೆಯಲ್ಲಿ ಹೂವು ಮಾರಾಟಗಾರರು ಮತ್ತು ಬೆಳೆಗಾರರು ನಾಲ್ಕೈದು ತಿಂಗಳಿನಿಂದ ಕಷ್ಟದ ಮೇಲೆ ಕಷ್ಟವನ್ನು ಅನುಭವಿಸುವಂತಾಗಿದೆ.

ಹೂವಿನ ದರ ತೀವ್ರ ಕುಸಿತ

ಮಾರುಕಟ್ಟೆಯಲ್ಲಿ ಒಂದು ಕೆಜಿ ಚೆಂಡು ಹೂವಿಗೆ 10 ರು. ಬೆಲೆ ಇದೆ. ಹಾಗೆಯೇ ಗುಲಾಬಿ, ಮಲ್ಲಿಗೆ, ಕನಕಾಂಬರ ಹೂವಿಗೂ ಬೆಲೆಯೂ ತೀವ್ರ ಕುಸಿತ ಕಂಡಿದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಪೂಜೆ ಪುನಸ್ಕಾರಗಳು, ಮದುವೆ ಸಮಾರಂಭಗಳು, ವಿಶೇಷ ಪೂಜೆಗಳು ಇಲ್ಲದಿರುವುದರಿಂದ ಹೂವಿಗೆ ಬೇಡಿಕೆ ಕಡಿಮೆ.

ಜಿಲ್ಲೆಯ ಮಾಲೂರು, ಕೋಲಾರ ಜಿಲ್ಲೆಯಲ್ಲಿ ಚೆಂಡು, ಗುಲಾಬಿ, ಮಲ್ಲಿಗೆ ಹೂಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ, ಹೂವಿಗೆ ಬೆಲೆ ಇಲ್ಲದಿರುವುದರಿಂದ ಬೆಳೆಗಾರರೂ ಹೆಚ್ಚಿನ ನಷ್ಟವನ್ನು ಅನುಭವಿಸುವಂತಾಗಿದೆ.

ಹಾವೇರಿ: ಬೆಲೆ ಸಿಗದೇ ಸೇವಂತಿ ಹೂವು ಬೆಳೆ ನಾಶಪಡಿಸಿದ ರೈತ

ಲಾಕ್‌ಡೌನ್‌ ಸಂದರ್ಭದಲ್ಲಿ ಗುಲಾಬಿ ಹೂವಿಗೆ ಮಾರುಕಟ್ಟೆಯೇ ಇಲ್ಲದಂತಾಗಿತ್ತು. ಹೊರ ರಾಜ್ಯಗಳಿಗೆ ಪೂರೈಕೆಯೂ ಸ್ಥಗಿತಗೊಂಡಿದ್ದರಿಂದ ಗುಲಾಬಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟಉಂಟಾಗಿತ್ತು. ಜಿಲ್ಲೆಯ ಸುಮಾರು 3,500 ಹೆಕ್ಟೇರ್‌ ಪ್ರದೇಶದಲ್ಲಿ ಗುಲಾಬಿ ಬೆಳೆಯುತ್ತಿದ್ದು ಬೆಳೆಗಾರರಿಗೆ ಕೋಟ್ಯಂತರ ರುಪಾಯಿ ನಷ್ಟಉಂಟಾಗುತ್ತಿದೆ.

ಗುಲಾಬಿ ರಫ್ತು ಸ್ಥಗಿತ:  ತರಕಾರಿಗೆ ನಿಗದಿತ ಬೆಲೆ ಇಲ್ಲದೆ ಏರು ಪೇರಾಗುವುದರಿಂದ ಇತ್ತೀಚೆಗೆ ರೈತರು ಚೆಂಡು, ಮಲ್ಲಿಗೆ, ಗುಲಾಬಿ ಹೂಗಳನ್ನು ಬೆಳೆಯುತ್ತಾರೆ. ಪಾಲಿಹೌಸ್‌ಗಳಲ್ಲಿ ಬೆಳೆಯುವ ಗುಲಾಬಿಯನ್ನು ರಫ್ತು ಮಾಡಲಾಗುತ್ತದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಲೂ ಗುಲಾಬಿ ರಫ್ತು ಸ್ಥಗಿತಗೊಂಡಿದೆ. ಗುಲಾಬಿಗೆ ಮಾರಾಟಕ್ಕೆ ದೇವನಹಳ್ಳಿ ಬಳಿ ಮಾರುಕಟ್ಟೆಇದೆ, ಆದರೆ ಕೊರೋನಾದಿಂದಾಗಿ ಈ ಮಾರುಕಟ್ಟೆಮುಚ್ಚಿದೆ.

ಬೇರೆ ರಾಜ್ಯಗಳಿಗೂ ಸರಬರಾಜು ಸ್ಥಗಿತ

ಕೋಲಾರ ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯುವ ಗುಲಾಬಿ ಹೂಗಳನ್ನು ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ,ಗೋವಾ, ದೆಹಲಿ, ಪಶ್ಚಿಮಬಂಗಾಳ ಮುಂತಾದ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳು ಹಾಗು ಮದುವೆಗಳನ್ನು ಸರಳವಾಗಿ ನಡೆಸುತ್ತಿರುವ ಪರಿಣಾಮ ಗುಲಾಬಿ ಸೇರಿದಂತೆ ಯಾವ ಹೂವುಗಳಿಗೂ ಬೇಡಿಕೆಯೇ ಇಲ್ಲದಂತಾಗಿದೆ.

Latest Videos
Follow Us:
Download App:
  • android
  • ios