ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸರಿ ಎನ್ನುವವರು ಬಂದು ನೋಡಲಿ: ಪ್ರತಾಪ್‌ ಸಿಂಹ ವಿರುದ್ಧ ಸುಮಲತಾ ಕಿಡಿ

ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಯ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ಈಗಾಗಲೇ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದು ಸಮಸ್ಯೆಗಳ ಬಗ್ಗೆ ಹೇಳಿದ್ದೇನೆ. ಮುಂದೆ ನೇರವಾಗಿ ಭೇಟಿಯಾಗಿ ಸಹ ಮಾತನಾಡುತ್ತೇನೆ. ಜೊತೆಗೆ ಪ್ರಧಾನಿ ಮೋದಿ ಗಮನಕ್ಕೂ ತರುವುದಾಗಿ ಹೇಳಿದ ಸುಮಲತಾ ಅಂಬರೀಶ್‌ 

Mandya MP Sumalatha Ambareesh Slams to Mysuru Kodagu MP Pratap Simha grg

ಶ್ರೀರಂಗಪಟ್ಟಣ(ಸೆ.04):  ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸರಿಯಾಗಿದೆ ಎನ್ನುವವರು ಒಮ್ಮೆ ಬಂದು ನೋಡಲಿ. ಸಮಸ್ಯೆಗಳು ಹೇಗಿವೆ ಎನ್ನುವುದು ಕಣ್ಣಿಗೆ ಕಾಣುತ್ತದೆ. ಇದರಲ್ಲಿ ಯಾರೂ ಸುಳ್ಳು ಹೇಳೋಕೆ ಆಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಪರೋಕ್ಷವಾಗಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರು. ದಶಪಥ ಹೆದ್ದಾರಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೆದ್ದಾರಿ ರಸ್ತೆ ಕೆಲವೊಂದು ಕಡೆ ಬಿರುಕು ಬಿಟ್ಟಿದೆ. ರಸ್ತೆಯ ಅಕ್ಕ-ಪಕ್ಕದಲ್ಲಿ ಕುಸಿತ ಉಂಟಾಗಿದೆ. ಕೆಲವೊಂದು ಕಡೆ ಒಳಚರಂಡಿ ಹಾಗೂ ಅಂಡರ್‌ಪಾಸ್‌ ನಿರ್ಮಾಣದಲ್ಲಿ ಸಮಸ್ಯೆಯಾಗಿವೆ. ಜನರು ಸುತ್ತಿಕೊಂಡು ಬರಬೇಕಾದ ಸ್ಥಿತಿ ಇದೆ. ಇದನ್ನು ಸರಿಪಡಿಸಲು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರತಾಪ್‌ ಸಿಂಹ ಅವರು ಈ ಬಗ್ಗೆ ಯಾಕೆ ವಹಿಸಿಕೊಂಡು ಮಾತಾಡುತ್ತಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು. ನಾನು ಅದರ ಬಗ್ಗೆ ಕಾಮೆಂಟ್‌ ಮಾಡುವುದಿಲ್ಲ ಎಂದು ಹೇಳಿದರು.

MANDYA: ಉದ್ಘಾಟನೆಗೆ ಮುನ್ನವೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿರುಕು..!

ಶಾಸಕರ ಕಮಿಷನ್‌ ವಿಚಾರವಾಗಿ ಆರೋಪ ಮಾಡುವ ಬದಲು ದೂರು ಕೊಡಲಿ ಎಂಬ ಶಾಸಕ ಸುರೇಶ್‌ಗೌಡ ಮಾತಿನ ಬಗ್ಗೆ ಕೇಳಿದಾಗ, ಸ್ಥಳೀಯ ಶಾಸಕರು ಏನು ಬೇಕಾದರೂ ಮಾತನಾಡಲಿ. ನಾನು ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಧ್ವನಿ ಎತ್ತಿದ್ದೇನೆ. ನನ್ನ ಬಿಟ್ಟು ಯಾರು ಧ್ವನಿ ಎತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ನಾನು ಬೇರೆಯವರಿಗೆ ಸಾಬೀತು ಮಾಡಿ ತೋರಿಸುವ ಅಗತ್ಯವಿಲ್ಲ. ಅವರು ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಅದರ ಬಗ್ಗೆ ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ನಾನು ಜನರಿಗೆ ಉತ್ತರ ಕೊಡಬೇಕು ಅಷ್ಟೇ. ರಾಜಕೀಯ ಮಾಡುವವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನೇರವಾಗಿ ಹೇಳಿದರು.

ಹೆದ್ದಾರಿ ಕಾಮಗಾರಿಯ ವಿಚಾರದಲ್ಲಿ ಎರಡು ವರ್ಷದಿಂದ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ಆಗಿನಿಂದಲೂ ಈ ಕಾಮಗಾರಿ ವಿಚಾರದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ.
ಆದರೆ, ಈ ಬಗ್ಗೆ ಯಾರಿಂದಲೂ ಸ್ಪಂದನೆ ದೊರೆತಿರಲಿಲ್ಲ. ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದೆ. ಇಂದು ಗೋಪಾಲಯ್ಯ ಅವರೊಂದಿಗೆ ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡಿದ್ದೇವೆ. ಇದರಿಂದ ಸಾಕಷ್ಟು ಸಮಸ್ಯೆಗಳು ಬೆಳಕಿಗೆ ಬಂದಿವೆ ಎಂದು ನುಡಿದರು.

ದಶಪಥ ಹೆದ್ದಾರಿ ನಿರ್ಮಾಣದಿಂದ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಓಡಾಡುವವರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ, ಹೆದ್ದಾರಿ ಅಕ್ಕ-ಪಕ್ಕದ ಜಿಲ್ಲೆ, ಪಟ್ಟಣ ಹಾಗೂ ಗ್ರಾಮೀಣ ಜನರು ಓಡಾಡುವುದಕ್ಕೆ ಎಲ್ಲೂ ಸರಿಯಾದ ವ್ಯವಸ್ಥೆ ಆಗಿಲ್ಲ ಮಂಡ್ಯ-ರಾಮನಗರ ಭಾಗದಲ್ಲಿ ಜನರು ಸಾಕಷ್ಟುಸಮಸ್ಯೆ ಎದುರಿಸುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

Commission: ಕೇಂದ್ರದ ಹಣಕ್ಕೂ ಶಾಸಕ ಕಮಿಷನ್‌ ದಂಧೆ: ಸಂಸದೆ ಸುಮಲತಾ

ಮಳೆ ಬಂದಾಗ ನೀರು ಹೋಗಲು ಈ ಮೊದಲು ದೊಡ್ಡ ಬಾಕ್ಸ್‌ ಚರಂಡಿಗಳನ್ನು ಮಾಡಿದ್ದರು. ಈಗ ಅದರ ಚಿಕ್ಕದು ಮಾಡಿದ್ದಾರೆ. ಇದರಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿದುಹೋಗದೆ ಸಮಸ್ಯೆಗಳು ಎದುರಾಗಿವೆ. ಇದರಿಂದ ಜನರು-ರೈತರಿಗೆ ಸಾಕಷ್ಟುಸಮಸ್ಯೆಗಳಾಗುತ್ತಿವೆ ಎಂದರು.

ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಯ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ಈಗಾಗಲೇ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದು ಸಮಸ್ಯೆಗಳ ಬಗ್ಗೆ ಹೇಳಿದ್ದೇನೆ. ಮುಂದೆ ನೇರವಾಗಿ ಭೇಟಿಯಾಗಿ ಸಹ ಮಾತನಾಡುತ್ತೇನೆ. ಜೊತೆಗೆ ಪ್ರಧಾನಿ ಮೋದಿ ಅವರ ಗಮನಕ್ಕೂ ತರುವುದಾಗಿ ಹೇಳಿದರು.
 

Latest Videos
Follow Us:
Download App:
  • android
  • ios