Commission: ಕೇಂದ್ರದ ಹಣಕ್ಕೂ ಶಾಸಕ ಕಮಿಷನ್ ದಂಧೆ: ಸಂಸದೆ ಸುಮಲತಾ
ಹಣ ಕೊಡುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಸಂಸದೆ ಸುಮಲತಾ ಅಂಬರೀಶ್
ಮಂಡ್ಯ(ಸೆ.04): ಕೇಂದ್ರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಗಳಿಗೂ ಜನಪ್ರತಿನಿಧಿಗಳು ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ಜೆಡಿಎಸ್ ಶಾಸಕರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ 100ಕ್ಕೆ 500ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಕಮಿಷನ್ ಕೊಟ್ಟು ಗುಣಮಟ್ಟದ ಕಾಮಗಾರಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಮಿಷನ್ ಕಾರಣದಿಂದಲೇ ನಿರ್ಮಾಣವಾದ ಮೂರೇ ತಿಂಗಳಲ್ಲಿ ರಸ್ತೆಗೆ ಹಾಕಿದ ಡಾಂಬರು ಕಿತ್ತು ಬರುತ್ತಿದೆ. ಕಮಿಷನ್ ದಂಧೆಯಿಂದಾಗಿ ಯಾವುದೇ ಕಾಮಗಾರಿಗಳಲ್ಲೂ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
ಇದನ್ನು ನಾನು ಯಾರನ್ನೋ ಟಾರ್ಗೆಟ್ ಮಾಡಿಕೊಂಡು ಮಾಡುತ್ತಿರುವ ಆರೋಪವಲ್ಲ. ಗುತ್ತಿಗೆದಾರರಿಂದ ನಮಗೆ ನೇರವಾಗಿ ಬರುತ್ತಿರುವ ಮಾಹಿತಿ. ಆದರೆ, ಮುಂದೆ ಬಂದು ಹೇಳುವುದಕ್ಕೆ ಹೆದರುತ್ತಿದ್ದಾರೆ. ಮುಂದೆ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಕೆಲಸ ಸಿಗದಂತೆ ತಡೆಯುತ್ತಾರೆ, ಕಪ್ಪು ಪಟ್ಟಿಗೆ ಸೇರಿಸುವರೆಂಬ ಭಯ ಅವರನ್ನು ಕಾಡುತ್ತಿದೆ ಎಂದು ಹೇಳಿದರು.
ಸಂಘಟಿತ ಹೋರಾಟದಿಂದ ಇದನ್ನು ತಡೆಯಬೇಕು
ಸ್ಥಳೀಯ ನಾಯಕರು ನಿರಂತರವಾಗಿ ಗುತ್ತಿಗೆದಾರರ ಸಂಪರ್ಕದಲ್ಲಿದ್ದಾರೆ. ಎಷ್ಟುಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನುದಾನ ದುರುಪಯೋಗವಾಗುತ್ತಿರುವುದಂತೂ ಸತ್ಯ. ಇದೊಂದು ದುರಂತವೂ ಹೌದು. ಇದನ್ನು ನೋಡಿದಾಗ ಹೊಟ್ಟೆಉರಿಯುತ್ತದೆ. ಎಷ್ಟೂಂತ ನಾವು ಹೋರಾಟ ಮಾಡಲು ಸಾಧ್ಯ? ಒಬ್ಬರ ಹೋರಾಟದಿಂದ ಆಗುವಂತಹ ಕೆಲಸವಲ್ಲ. ಎಲ್ಲರೂ ಒಂದು ತಂಡವಾಗಿ ಇದನ್ನ ತಡೆಯಬೇಕು ಎಂದರು.
ದೂರು ಕೊಟ್ಟು ತನಿಖೆ ಮಾಡಿಸಲಿ: ಸುರೇಶ್‌ಗೌಡ
ನಾಗಮಂಗಲ: ಕೇಂದ್ರದ ಅನುದಾನದಲ್ಲಿ ನಡೆಯುವ ಕಾಮಗಾರಿಯಲ್ಲಿ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುವ ಬದಲು ದೂರು ಕೊಟ್ಟು ತನಿಖೆ ಮಾಡಿಸಲಿ ಎಂದು ಸಂಸದೆ ಸುಮಲತಾ ಕಮಿಷನ್ ಆರೋಪಕ್ಕೆ ಶಾಸಕ ಕೆ..ಸುರೇಶ್‌ಗೌಡ ತಿರುಗೇಟು ನೀಡಿದರು.
ಸಂಸದರು ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ನಾಯಕರು ಮತ್ತು ಶಾಸಕರನ್ನು ಬೈದರೆ ಜನ ಮೆಚ್ಚಿಕೊಳ್ಳುತ್ತಾರೆ ಎಂದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಕೆಲಸ ಮಾಡದೇ ನಮ್ಮನ್ನು ನಿಂದಿಸುತ್ತಾ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನವರು ಸಹಾಯ ಮಾಡಿದ್ದಾರೆಂಬ ಕಾರಣಕ್ಕೆ ಅವರ ಬಗ್ಗೆ ಮಾತನಾಡುವುದಿಲ್ಲ. ಡಬಲ್ ಇಂಜಿನ್ ಸರ್ಕಾರದ ಸಹ ಪ್ರಯಾಣಿಕರಾಗಿರುವುದರಿಂದ ಬಿಜೆಪಿಯವರನ್ನು ಬೈಯ್ಯೋದಿಲ್ಲ. ಉಳಿದಿರೋದು ನಾವೊಬ್ಬರೇ. ಬೈದುಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಬಿಎಂಪಿ: ಶೇ.50 ಕಮಿಷನ್ ಆರೋಪ ಬೆನ್ನಲ್ಲೇ ಗುತ್ತಿಗೆದಾರರಿಗೆ ಹಣ..!
ನಾವು ಆರು ಜನ ಶಾಸಕರು ಕ್ಷೇತ್ರದಲ್ಲೇ ಇದ್ದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇವೆ. ಅವರು ಸಂಸದರಾಗಿ ಯಾವ ಕೆಲಸವನ್ನೂ ಮಾಡದೆ ಬೆಂಗಳೂರು ಸೇರಿಕೊಂಡಿದ್ದಾರೆ. ಆಗಾಗ ತಪ್ಪು ಹುಡುಕಿಕೊಂಡು ಮಾತನಾಡುವುದೇ ಅವರ ಕೆಲಸವಾಗಿದೆ. ಈ ವಿಷಯವಾಗಿ ದಿಶಾ ಸಭೆಯಲ್ಲಿ ಏನಾದರೂ ಕೇಳಿದರೆ ದ್ವೇಷಕ್ಕೆ ಮಾತನಾಡುತ್ತಾರೆಂದು ರಂಪಾಟ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಸಂಸದರು ಶಾಸಕರ ಮೇಲೆ ಮಾಡಿರುವ ಕಮಿಷನ್ ಆರೋಪ ಶುದ್ಧ ಸುಳ್ಳು. ಇವರ ಕಮಿಷನ್ ಬಗ್ಗೆ ಪ್ರತಾಪ್‌ಸಿಂಹ ಅವರನ್ನು ಕೇಳಿದರೆ ಚೆನ್ನಾಗಿ ಹೇಳುತ್ತಾರೆ. ಬೆಂಗಳೂರು -ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಎಷ್ಟೆಷ್ಟುಕಮಿಷನ್ ಕೇಳಿದ್ದಾರೆ, ಪರಿಹಾರದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ವಿವರವಾಗಿ ಹೇಳುತ್ತಾರೆ ಎಂದು ತಿರುಗುಬಾಣ ಬಿಟ್ಟರು.