Asianet Suvarna News Asianet Suvarna News

ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡ ಇನ್ನಿಲ್ಲ

ಮಳವಳ್ಳಿ ತಾಲೂಕಿನ ಕುಂದನ ಬೆಟ್ಟದಲ್ಲಿ 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲ್ಮನೆ ಕಾಮೆ ಗೌಡ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

Mandya Modern Bhagirath Kalmane Kamegowda is no more akb
Author
First Published Oct 17, 2022, 12:37 PM IST | Last Updated Oct 17, 2022, 1:42 PM IST

ಮಂಡ್ಯ: ಮಳವಳ್ಳಿ ತಾಲೂಕಿನ ಕುಂದನ ಬೆಟ್ಟದಲ್ಲಿ 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲ್ಮನೆ ಕಾಮೆ ಗೌಡ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಲಿದೆ.

ಕುಂದನ ಬೆಟ್ಟದಲ್ಲಿ (kundana betta) 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಅಂತರ್ಜಲ ವೃದ್ದಿಗೆ ನೆರವಾಗಿದ್ದ ಕಲ್ಮನೆ ಕಾಮೇಗೌಡರಿಗೆ  (Kalmane Kamegowda) 84 ವರ್ಷ ವಯಸ್ಸಾಗಿತ್ತು.  ನಿನ್ನೆ ತೀವ್ರ ಅಸ್ವಸ್ಥರಾಗಿದ್ದ ಅವರು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರು ಪ್ರಾಣಿ, ಪಕ್ಷಿಗಳು ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಆಸರೆ ಒದಗಿಸಿದ್ದರು. ಕೆರೆಯ ನೀರು ಕಲುಷಿತವಾಗದಂತೆ ಹಾಗೂ ಕೆರೆಗಳಲ್ಲಿ ಜಾನುವಾರುಗಳನ್ನು ತೊಳೆಯದಂತೆ ಕವಲುಗಾರರಾಗಿ ಕೆರೆಗಳನ್ನು ಕಾಯುತ್ತಿದ್ದರು. ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ ಅವರ ಈ ಸಾಧನೆಯನ್ನು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಪ್ರಶಂಸಿಸಿದ್ದರು.

ಕಲ್ಮನೆ ಕಾಮೇಗೌಡರು ಕುರಿಗಾಹಿ ಆಗಿದ್ದರು ತಮ್ಮ ಇಳಿ ವಯಸ್ಸಿನಲ್ಲೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗ್ರಾಮದ ಸಮೀಪದಲ್ಲಿರುವ ಕುಂದೂರು ಬೆಟ್ಟದಲ್ಲಿ ಸ್ವಂತ ಹಣ ವ್ಯಯಿಸಿ 16 ಕೆರೆಗಳನ್ನು ನಿರ್ಮಾಣ ಮಾಡಿದ್ದ ಕಾಮೇಗೌಡರು ಅಂತರ್ಜಲ ವೃದ್ಧಿಗೆ ಪಣತೊಟ್ಟಿದ್ದರು. ಅಲ್ಲದೇ ಕೆರೆ ನಿರ್ಮಾಣ ಮಾಡಿ ಕಾಡಿನ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡುವ ಮೂಲಕ ಆಧುನಿಕ ಭಗೀರಥ ಅಂತಲೇ ಪ್ರಖ್ಯಾತರಾಗಿದ್ದರು. ಕೆರೆ ಮಾತ್ರವಲ್ಲದೆ ಬೆಟ್ಟದ ತಪ್ಪಲಿನಲ್ಲಿ ಗಿಡ, ಮರಗಳನ್ನು ನೆಟ್ಟು ಅವುಗಳನ್ನ ಪೋಷಿಸುವ ಹೊಣೆ ಹೊತ್ತಿದ್ದರು. ಅನಕ್ಷರಸ್ಥರಾಗಿದ್ದರು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಾಮೇಗೌಡರು ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇನ್ನು ಕಾಮೇಗೌಡರ ನಿಸ್ವಾರ್ಥ ಪರಿಸರ ಸೇವೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವತಿಯಿಂದ ಅಸಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಜೊತೆಗೆ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿವೆ. ಪ್ರಶಸ್ತಿಯಲ್ಲಿ ಬಂದ ಹಣವನ್ನು ಪರಿಸರ ಸಂರಕ್ಷಣೆ ಮೀಸಲಿಟ್ಟು ಕಾಮೇಗೌಡರು ದೇಶಕ್ಕೆ ಮಾದರಿ ಎನಿಸಿದ್ದರು. 

ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟ ಕಾಮೇಗೌಡ್ರು..!

ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾದ ಪರಿಸರ ಪ್ರೇಮಿ, ಕಾಯಕಯೋಗಿ, ಆಧುನಿಕ ಭಗೀರಥ ಎಂದೇ ಕರೆಯಲ್ಮಡುವ ಕಲ್ಮನೆ ಕಾಮೇಗೌಡರು ಅನಾರೋಗ್ಯದಿಂದ ಕಳೆದ ಜನವರಿಯಲ್ಲಿ ಹಾಸಿಗೆ ಹಿಡಿದಿದ್ದರು. ಸಾಮಾಜಿಕ ಸೇವೆಗೆ ಆಡಳಿತ ವ್ಯವಸ್ಥೆ ತಡೆಯೊಡ್ಡಿದ್ದರಿಂದ ಬೇಸತ್ತ ಕಾಮೇಗೌಡರು ಅನ್ನ-ನೀರು ತ್ಯಜಿಸಿದ ಪರಿಣಾಮ ಅನಾರೋಗ್ಯಕ್ಕೊಳಗಾಗಿದ್ದರು. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಪುಟ್ಟಮನೆಯೊಂದರಲ್ಲಿ ಅನಾರೋಗ್ಯದಿಂದ ನರಳುತ್ತಿರುವ ಕಾಮೇಗೌಡರತ್ತ ಜಿಲ್ಲಾಡಳಿತ ತಿರುಗಿಯೂ ನೋಡುತ್ತಿಲ್ಲ ಎಂದು ಆಗ ಆರೋಪಗಳು ಕೇಳಿ ಬಂದಿದ್ದವು. ಕಾಮೇಗೌಡರ ಸೇವೆಯನ್ನು ಪರಿಗಣಿಸಿ ಪ್ರಧಾನಿ ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕಾಮೇಗೌಡರಿಗೆ ಕರೆ ಮಾಡಿ ವಾಸಕ್ಕೆ ಹೊಸ ಮನೆ ಕಟ್ಟಿಸಿಕೊಡುವ, ಮಕ್ಕಳಿಗೆ ಉದ್ಯೋಗ ಹಾಗೂ ತಮ್ಮ ಸೇವೆಗೆ ಪೂರಕವಾಗಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಅದರಂತೆ ವಿಧಾನಸೌಧದಿಂದ ಜಿಲ್ಲಾಧಿಕಾರಿಯವರಿಗೆ ಐದಾರು ಪತ್ರಗಳನ್ನು ಬರೆದರೂ ಯಾವುದಕ್ಕೂ ಅಧಿಕಾರಿಗಳು ಕ್ಯಾರೇ ಅಂದಿರಲಿಲ್ಲ. ಆದರೆ ಈಗ ಸರ್ಕಾರದ ಸವಲತ್ತು ಸಿಗುವ ಮೊದಲೇ ಕಾಮೇಗೌಡರು ಇಹಲೋಕ ತ್ಯಜಿಸಿದ್ದಾರೆ.

ಪ್ರಧಾನಿ ಮೋದಿ ಶ್ಲಾಘಿಸಿದ್ದ ಕಾಮೇಗೌಡರ ವಿರುದ್ಧ ತನಿಖೆ

ಕಾಮೇಗೌಡರು 16 ಚೆಕ್‌ಡ್ಯಾಂಗಳನ್ನು (Check dam) ನಿರ್ಮಿಸಿ, ಕೆರೆ-ಕಟ್ಟೆಗಳನ್ನು ರಕ್ಷಿಸುವುದರೊಂದಿಗೆ ಗಿಡ-ಮರಗಳನ್ನು ಬೆಳೆಸಿ ಸುತ್ತಮುತ್ತಲ ಪ್ರದೇಶ ಹಸಿರಿನಿಂದ (Greenary) ಕಂಗೊಳಿಸುವಂತೆ ಮಾಡಿದ್ದರು. ಆದರೆ ಇವರ ಮೇಲೆ ಮರಳು ಗಣಿಗಾರಿಕೆ ಆರೋಪ ಹೊರಿಸಲಾಗಿತ್ತು. ಕೇಂದ್ರ ಸರ್ಕಾರದ (Union Govt) ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ (Padmashree award) ಕಾಮೇಗೌಡರ ಹೆಸರು ಶಿಫಾರಸಾಗುವುದನ್ನೂ ತಡೆಹಿಡಿಯಲಾಯಿತು. ಇಳಿ ವಯಸ್ಸಿನಲ್ಲಿ ಕಾಮೇಗೌಡರು ತನಿಖೆ ಎದುರಿಸಬೇಕಾದ ಸ್ಥಿತಿಯನ್ನೂ ತಂದೊಡ್ಡಿದರು. ಈ ಬೆಳವಣಿಗೆಗಳಿಂದ ಕಾಮೇಗೌಡರು ತೀವ್ರವಾಗಿ ನೊಂದಿದ್ದರು. ಸುಮಾರು 50 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆರೆ-ಕಟ್ಟೆಗಳ ನಿರ್ಮಾಣ, ಅಭಿವೃದ್ಧಿ, ಮರ ಗಿಡಗಳ ಪೋಷಣೆಗೆ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಹಲವು ಬಾರಿ ಕಾಮೇಗೌಡರು ಬೇಸರ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios