ಬೆಂಗಳೂರು (ಡಿ.15):  ಒಂದು ವರ್ಷದ ಅವಧಿಯಲ್ಲಿ 70 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ತರಕಾರಿ ವ್ಯಾಪಾರಿಯೊಬ್ಬ 15 ಸಾವಿರ ರು. ದಂಡ ತೆತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ಲಗ್ಗೆರೆ ನಿವಾಸಿ ಮಂಜುನಾಥ್‌ ಎಂಬುವರೇ ದಂಡ ಶಿಕ್ಷೆಗೆ ಗುರಿಯಾಗಿದ್ದು, ಎರಡು ದಿನಗಳ ಹಿಂದೆ ಹೆಲ್ಮೆಟ್‌ ಧರಿಸದೆ ಸ್ಕೂಟರ್‌ ಓಡಿಸುವಾಗ ಮಹಾಲಕ್ಷ್ಮಿ ಲೇಔಟ್‌ನ ಶಂಕರ ನಗರ ಬಸ್‌ ನಿಲ್ದಾಣ ಸಮೀಪ ರಾಜಾಜಿನಗರ ಸಂಚಾರ ಪೊಲೀಸರಿಗೆ ಮಂಜುನಾಥ್‌ ಸಿಕ್ಕಿಬಿದ್ದಿದ್ದರು. ಬಳಿಕ ಅವರ ಹಿಂದಿನ ತಪ್ಪುಗಳನ್ನು ಪೊಲೀಸರು ಪರಿಶೀಲಿಸಿದಾಗ ಹಳೇ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊನೆಗೆ ಸ್ಕೂಟರ್‌ ಜಪ್ತಿ ಮಾಡಿದ ಪೊಲೀಸರು, ಸವಾರನಿಗೆ 15,400 ರು. ದಂಡ ವಿಧಿಸಿದ್ದರು. ಮಂಜುನಾಥ್‌ ಅವರು ಶನಿವಾರ ದಂಡ ಪಾವತಿಸಿ ಸ್ಕೂಟರ್‌ ಬಿಡಿಸಿಕೊಂಡಿದ್ದಾರೆ.

ಅಪ್ಪನ ಹೆಸರಿನ ಸ್ಕೂಟರ್‌:

ವಿಜಯನಗರದ ಬಸ್‌ ನಿಲ್ದಾಣ ಬಳಿ ತರಕಾರಿ ಮಾರಾಟ ಮಳಿಗೆ ಹೊಂದಿರುವ ಮಂಜುನಾಥ್‌ ಅವರು, ತಮ್ಮ ಕುಟುಂಬದ ಜತೆ ಲಗ್ಗೆರೆಯಲ್ಲಿ ನೆಲೆಸಿದ್ದಾರೆ. ತಮ್ಮ ತಂದೆ ಹೆಸರಿನಲ್ಲಿ ಆ್ಯಕ್ಟಿವಾ ಹೊಂಡಾ ಖರೀದಿಸಿದ್ದ ಅವರು, ಒಂದು ವರ್ಷದಿಂದ ಹೆಲ್ಮೆಟ್‌ ಧರಿಸದೆ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ಸೇರಿದಂತೆ 70ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರು.

ಹಲ್ಲೆ ನಡೆಸಿದ್ದ ಟ್ರಾಫಿಕ್ ಮುಖ್ಯಪೇದೆ ಮತ್ತೆ ತರಬೇತಿಗೆ ವಾಪಸ್!...

ಆದರೆ ಯಾವತ್ತೂ ಪೊಲೀಸರ ಕೈಗೆ ಸಿಗದೆ ಮಂಜು ಓಡಾಡುತ್ತಿದ್ದರು. ಆದರೆ ಗುರುವಾರ ಅವರ ಅದೃಷ್ಟಕೈ ಕೊಟ್ಟಿತು. ಅಂದು ಶಂಕರನಗರ ಬಸ್‌ ನಿಲ್ದಾಣ ಬಳಿ ರಾಜಾಜಿನಗರ ಸಂಚಾರ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ರವೀಂದ್ರ ಹಾಗೂ ಸಿಬ್ಬಂದಿ, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಅದೇ ವೇಳೆ ಶಂಕರ ನಗರ ಕಡೆಯಿಂದ ತಮ್ಮ ಆ್ಯಕ್ಟಿವಾದಲ್ಲಿ ಮಂಜುನಾಥ್‌ ಲಗ್ಗೆರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹೆಲ್ಮಟ್‌ ಧರಿಸದೆ ಸ್ಕೂಟರ್‌ ಓಡಿಸುತ್ತಿದ್ದ ಮಂಜು, ಪೊಲೀಸರನ್ನು ನೋಡಿದ ಕೂಡಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಆದರೆ ಜನ ಸಂದಣಿ ಹೆಚ್ಚಿದ್ದ ಕಾರಣ ಪರಾರಿಯಾಗಲು ಸಾಧ್ಯವಾಗದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆಗ ಎಎಸ್‌ಐ ರವೀಂದ್ರ ಅವರು, ಹೆಲ್ಮಟ್‌ ಧರಿಸದ ಕಾರಣಕ್ಕೆ 500 ರು. ದಂಡ ಹಾಕಿದ್ದಾರೆ. ಬಳಿಕ ಮಂಜುನಾಥ್‌ ಸ್ಕೂಟರ್‌ನ ಹಿಂದಿನ ಪ್ರಕರಣಗಳ ಬಗ್ಗೆ ಪರಿಶೀಲಿಸಿದಾಗ ತಪ್ಪುಗಳ ಸರಣಿ ಹೊರ ಬಂದಿದೆ. ಕೂಡಲೇ ಪೊಲೀಸರು, ಮಂಜುನಾಥ್‌ಗೆ 70 ಪ್ರಕರಣಗಳಿಗೆ 15,400 ರು. ದಂಡ ಕಟ್ಟುವಂತೆ ನೋಟಿಸ್‌ ಜಾರಿಗೊಳಿಸಿ ಸ್ಕೂಟರ್‌ ಜಪ್ತಿ ಮಾಡಿದ್ದಾರೆ. ಅದರಂತೆ ಶನಿವಾರ ಬೆಳಗ್ಗೆ ಠಾಣೆಗೆ ತೆರಳಿದ ಅವರು ದಂಡ ಪಾವತಿಸಿ ಸ್ಕೂಟರ್‌ ಬಿಡಿಸಿಕೊಂಡಿದ್ದಾರೆ. ಲಗ್ಗೆರೆ ಕಡೆ ಓಡಾಡುವಾಗ ಹೆಲ್ಮಟ್‌ ಧರಿಸದೆ ಅವರು ಹೆಚ್ಚು ಓಡಾಡಿದ್ದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.