Asianet Suvarna News Asianet Suvarna News

ಊರಿನವರ ಮಾತು ಕೇಳಿ ಮಗಳನ್ನೇ ವಿಧವೆಯಾಗಿಸಿದ ತಂದೆ..!

ಪ್ರೀತಿಸಿ ಮದುವೆಯಾದ ನವ ವರನ ಶವ ಪತ್ತೆಯಾದ ಪ್ರಕರಣವನ್ನು ಹೊಳೆನರಸಿಪುರ ಪಟ್ಟಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಊರಿನ ಜನರ ಮಾತು ಕೇಳಿ ಮಗಳನ್ನೇ ವಿಧವೆಯಾಗಿಸಿದ ಕ್ರೂರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

 

man gives supari to kill his son in law in mandya
Author
Bangalore, First Published Nov 18, 2019, 2:18 PM IST

ಹಾಸನ(ನ.18): ಮಂಡ್ಯದಲ್ಲಿ ಸುಪಾರಿ ಹತ್ಯೆ ನಡೆಸಿದ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹೊಳೆನರಸಿಪುರ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಿದ್ದಯ್ಯನಕೊಪ್ಪಲು ಗ್ರಾಮದ ದೇವರಾಜು (53), ಸಂಜಯ್‌ (22), ಯಲಿಯೂರು ಸರ್ಕಲ್‌ ವಾಸಿ ಯೋಗೇಶ (21), ಕಾಳೇನಹಳ್ಳಿ ಗ್ರಾಮದ ವಾಸಿ ರೌಡಿ ಶೀಟರ್‌ ಮಂಜು (22), ಹಿಂಡುವಾಳು ಗ್ರಾಮದ ಚೆಲುವ (22), ಮಾಯಣ್ಣನಕೊಪ್ಪಲು ಗ್ರಾಮದ ನಂದನ್‌ (21) ಎಂಬವರೇ ಬಂಧಿತ ಆರೋಪಿಗಳು.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ರಾಮ್‌ನಿವಾಸ್‌ ಸೆಪೆಟ್‌ ಮಾತನಾಡಿ, ಆರೋಪಿಗಳಿಂದ ಸುಪಾರಿ ಕೊಲೆಗೆ ನೀಡಿದ್ದ 1.10.000 (ಒಂದು ಲಕ್ಷದ ಹತ್ತು ಸಾವಿರ) ರು. ಮತ್ತು ಕೊಲೆಗೆ ಉಪಯೋಗಿಸಿದ ಕಾರು (ಕೆಎ55ಬಿ6517) ಹಾಗೂ ಮೃತ ವ್ಯಕ್ತಿಯ ಬೈಕನ್ನು ವಶ ಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಘಟನೆ ವಿವರ:

ನ.14ರಂದು ಹೊಳೆನರಸೀಪುರದ ಗಾಂಧಿ ನಗರದ ವಾಸಿ ಜೀಸನ್‌ ಎಂಬಾತ ಪಟ್ಟಣ ಠಾಣೆಗೆ ಹಾಜರಾಗಿ ಹೊಳೆನರಸೀಪುರ ಸ್ಮಶಾನದ ನೇರದ ಹೇಮಾವತಿ ನದಿ ನೀರಿನಲ್ಲಿ ಒಂದು ಗಂಡಸಿನ ಶವವಿದೆ ಎಂದು ಈತನ ಬಲಗೈಯಲ್ಲಿ ಇಂಗ್ಲಿಷ್‌ನಲ್ಲಿ ಅಚ್ಚು ಎಂದು ಎಡಗೈನಲ್ಲಿ ಕನ್ನಡದಲ್ಲಿ ಅಂಬಿ ಎಂಬ ಹಚ್ಚೆ ಗುರುತು ಇದ್ದು, ಆತ ಯಾರು ಎಂದು ತಿಳಿದುಬಂದಿಲ್ಲ. ಆತನ ಸಾವಿನ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದನು.

ದೂರಿನ ಮೇರೆಗೆ ತನಿಖೆ ಕೈಗೊಂಡು, ನೀರಿನಲ್ಲಿ ಹಾಕಿರುವಂತೆ ಕಂಡು ಬಂದ ಮೇರೆಗೆ ಮೃತನ ಸಾವಿನಲ್ಲಿ ಅನುಮಾನ ಬಂದಿದ್ದು, ಮೃತನ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಮೃತನ ವಾರಸುದಾರರ ಪತ್ತೆಗೆ ಸಿಬ್ಬಂದಿ ನೇಮಿಸಲಾಗಿತ್ತು. ಮೃತನ ಕೈಮೇಲೆ ಅಚ್ಚು ಮತ್ತು ಅಂಬಿ ಎಂಬ ಹಚ್ಚೆ ಇದ್ದು, ಪತ್ತೆಗಾಗಿ ಮಾಹಿತಿಯನ್ನು ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.

ಕೆ. ಆರ್. ಪೇಟೆ: ನಾಮಪತ್ರ ಸಲ್ಲಿಕೆ ಭರಾಟೆ ಜೋರು, ಮದ್ಯ ಮಾರಾಟಕ್ಕೆ ಬ್ರೇಕ್

ನಂತರ ಇದು ಮಂಡ್ಯ ಪಶ್ಚಿಮ ಠಾಣೆಯ ಮೊನಂ 176/2019 ಕಲಂ ಮನುಷ್ಯ ಕಾಣೆ ಪ್ರಕರಣಕ್ಕೆ ಹೋಲಿಕೆಯಾಗಿತ್ತು. ಆದ್ದರಿಂದ ವಿಚಾರಣೆ ಮಾಡಿದಾಗ ಮೃತನ ಹೆಸರು ಮಂಜು ಬಿನ್‌ ನಿಂಗೇಗೌಡ 28 ವರ್ಷ ಸಿದ್ದಯ್ಯನಕೊಪ್ಪಲು ಗ್ರಾಮ ಕೊತ್ತತ್ತಿ ಹೋಬಳಿ ಮಂಡ್ಯ ಜಿಲ್ಲೆ ಎಂದು ತಿಳಿದು ಬಂದಿತು ಎಂದು ಮಾಹಿತಿ ನೀಡಿದರು. ಮೃತನ ರಕ್ತ ಸಂಬಂಧಿಕರ ಹೇಳಿಕೆ ಪಡೆದು ಹೊಳೆನರಸಿಪುರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಲಾಯಿತು.

ನಂತರ ತನಿಖೆ ಮುಂದುವರೆಸಿದ್ದು, ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಿದ್ದಯ್ಯ ಕೊಪ್ಪಲು ಗ್ರಾಮದ ವಾಸಿ ದೇವರಾಜು ಬಿನ್‌ ಲಿಂಗಯ್ಯ 53 ವರ್ಷ (ಹಾಲಿನ ಡೈರಿಯಲ್ಲಿ ಕಾರ‍್ಯದರ್ಶಿ ಕೆಲಸ) ಈತನನ್ನು ವಶಕ್ಕೆ ಪಡೆದು ವಿಚಾರಿಸಲಾಯಿತು.

ಅಣ್ಣ-ತಂಗಿ ಮದುವೆಯಿಂದ ಅವಮಾನ:

ಆಗ ಆರೋಪಿ ದೇವರಾಜು ಎಂಬವರ ಪುತ್ರಿ ಅರ್ಚನರಾಣಿಗೆ ಮಂಡ್ಯದ ರುದ್ರಾಕ್ಷಿಪುರದ ಕಿರಣ್‌ ಎಂಬುವರೊಂದಿಗೆ ವಿವಾಹ ನಿಶ್ವಯವಾಗಿತ್ತು. ಆದರೆ, ಅರ್ಚನರಾಣಿ ಅದೇ ಗ್ರಾಮದ ಈ ಪ್ರಕರಣದ ಮೃತ ವ್ಯಕ್ತಿ ಮಂಜು ಅವನೊಂದಿಗೆ ಓಡಿ ಹೋಗಿ ವಿವಾಹವಾಗಿದ್ದರು. ಈ ವೇಳೆ ಅರ್ಚನರಾಣಿಗೆ ಮಂಜು ಅಣ್ಣ ಆಗಬೇಕಿದ್ದು, ಅಣ್ಣ ತಂಗಿಯರೆ ಮದುವೆಯಾಗಿದ್ದಾರೆ ಎಂದು ಗ್ರಾಮದಲ್ಲಿ ಜನರು ಮಾತನಾಡಿಕೊಳ್ಳಲಾಗಿತ್ತು. ಆದ್ದರಿಂದ ದೇವರಾಜುಗೆ ಗ್ರಾಮದಲ್ಲಿ ಅವಮಾನವಾಗಿದ್ದು, ಮಂಜುಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ ಇವರ ತಮ್ಮ ನಿಂಗೇಗೌಡನ ಮಗ ಸಂಜು ಸಂಜಯ್‌ ಜೋತೆ ಸೇರಿ, ತನ್ನ ಮಗಳಾದ ಅರ್ಚನರಾಣಿಯನ್ನು ಮದುವೆಯಾಗಿರುವ ಮಂಜುನನ್ನು ಕೊಲೆ ಮಾಡಲು 5ಲಕ್ಷ ರು.ಗೆ ಸುಫಾರಿ ನೀಡಿದ್ದಾರೆ.

ಡೈವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಸೊಸೆ, ತಾಯಿ ಮಗ ನೇಣಿಗೆ ಶರಣು

ಸುಪಾರಿಯನ್ನು ತಮ್ಮನ ಮಗ ಸಂಜಯ್‌, ಯಲಿಯೂರು ವಾಸಿ ಯೋಗೇಶ, ಕಾಳೇನಹಳ್ಳಿ ಗ್ರಾಮದ ಮಂಜ, ಹಿಂಡುವಾಳು ಗ್ರಾಮದ ಚೆಲುವ ಮತ್ತು ಮಾಯಣ್ಣಕೊಪ್ಪಲು ಗ್ರಾಮದ ವಾಸಿ ನಂದನ್‌ ನಂದನಶೆಟ್ಟಿಗೆ ನೀಡಿದ್ದಾರೆ. ಸುಫಾರಿ ಕೊಲೆಗೆ ಮುಂಗಡವಾಗಿ 1 ಲಕ್ಷ ಅಡ್ವಾನ್ಸ್‌ ಅನ್ನು ಯೋಗೇಶನಿಗೆ ದೇವರಾಜ್‌ ಸಂಜಯ್‌ ಜಿಮ್‌ ಹತ್ತಿರ ನೀಡಿ, ಸಿದ್ದಯ್ಯ ಕೊಪ್ಪಲಿನ ಮಂಜುನನ್ನು ಕೊಲೆ ಮಾಡಬೇಕೆಂದು ತಿಳಿದ್ದಾರೆ.

ಇದಕ್ಕೆ ಯೋಗೇಶ್‌ ಒಪ್ಪಿಕೊಂಡು ತನ್ನ ಸ್ನೇಹಿತರಾದ ನಂದನ್‌ ಶೆಟ್ಟಿ, ಚೆಲುವ ಮತ್ತು ಮಂಜು ಅವರೊಂದಿಗೆ ಕಳೆದ ನ.9ರಂದು ಮಧ್ಯಾಹ್ನ ಕಾರಿನಲ್ಲಿ ಮಂಜುನನ್ನು ಎತ್ತಿಹಾಕಿಕೊಂಡು ಯಲಿಯೂರು, ಶ್ರೀರಂಗಪಟ್ಟಣ, ಪಾಲಹಳ್ಳಿ, ಪಂಪ್‌ ಹೌಸ್‌, ಮೈಸೂರು, ಬಿಳಿಕೆರೆ, ಲಕ್ಷ್ಮಣ ತೀರ್ಥ ನದಿ, ನಂತರ ಕೆಆರ್‌ ನಗರ ಕಾವೇರಿ ಹೊಳೆ ಹತ್ತಿರ ಕೊಲೆ ಮಾಡಲು ಪ್ರಯತ್ನ ಪಟ್ಟು ವಿಫಲವಾಗಿ ಕೊನೆಗೆ ಹೊಳೆನರಸಿಪುರದ ಸ್ಮಶಾನದ ಹತ್ತಿರ ಹೇಮಾವತಿ ನದಿಯಲ್ಲಿ ಮಂಜುನನ್ನು ಕತ್ತುಕೊಯ್ದು ಕೊಲೆ ಮಾಡಿ ಬೆನ್ನಿಗೆ ಹಗ್ಗದಿಂದ ಕಲ್ಲುಕಟ್ಟಿನದಿಯಲ್ಲಿ ಮುಳುಗಿಸಿ ಹೋಗಿದ್ದಾರೆ ಎಂದು ಎಸ್ಪಿ ರಾಮ್‌ನಿವಾಸ್‌ ಸೆಪೆಟ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಸನ ಅಪರ ಪೊಲೀಸ್‌ ಅಧೀಕ್ಷಕಿ ಬಿ.ಎನ್‌.ನಂದಿನಿ, ಹೊಳೆನರಸೀಪುರ ಡಿವೈಎಸ್‌ಪಿ ಲಕ್ಷ್ಮೇಗೌಡ ಇತರರು ಇದ್ದರು.

ಮಂಜುನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಸುಪಾರಿ ಪಡೆದಿದ್ದವರಲ್ಲಿ ಒಬ್ಬನಾದ ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿ ಮಾಯಣ್ಣನಕೊಪ್ಪಲು ಗ್ರಾದ ನಂದನ್‌ ಎಂಬಾತ ಬಟನ್‌ ಚಾಕನ್ನು ಪ್ಲಿಫ್‌ ಕಾರ್ಟ್‌ನಿಂದ ಆನ್‌ಲೈನ್‌ ಮೂಲಕ ಕೊಂಡುಕೊಂಡಿದ್ದಾನೆ.

ಬಹುಮಾನ ಘೋಷಣೆ

ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಹೊಳೆನರಸೀಪುರ ವೃತ್ತದ ಸಿಪಿಐ ಅಶೋಕ್‌, ಹೊಳೆನರಸೀಪುರ ಪಟ್ಟಣ ಪೊಲೀಸ್‌ ಠಾಣೆಯ ಪಿಎಸ್‌ಐ ಕುಮಾರ್‌, ಗ್ರಾಮಾಂತರ ಠಾಣೆಯ ಪಿಎಸ್‌ಐ ಮೋಹನ್‌ ಕೃಷ್ಣ, ಎಎಸ್‌ಐ ಬಾಬು, ಸಿಬ್ಬಂದಿ ಮಂಜುನಾಥ್‌, ಚಿದಾನಂದ, ಜಗದೀಶ್‌, ಕುಮಾರ, ಸಂಗಮ್‌, ದ್ಯಾವೇಗೌಡ, ಪ್ರಕಾಶ, ರಾಜಶೇಖರಮೂರ್ತಿ, ಕೀರ್ತಿರಾಜ್‌, ಮನು, ವಸಂತ, ಬಸವೇಗೌಡ, ಮಂಜೇಗೌಡ, ಬಸವರಾಜು, ಮಂಜೇಗೌಡ, ಹರೀಶ್‌, ಚಾಲಕರಾದ ನಾಗಪ್ಪ, ಧನರಾಜ್‌ ಅವರ ಕಾರ್ಯವನ್ನು ಎಸ್ಪಿ ಡಾ. ರಾಮ್‌ ನಿವಾಸ್‌ ಸೆಪಟ್‌ ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ.

Follow Us:
Download App:
  • android
  • ios