ಮೈಸೂರು (ನ.23):  ಬಿಹಾರ ಚುನಾವಣೆ ಫಲಿತಾಂಶದಲ್ಲಿ ವಾಸ್ತವವಾಗಿ ಬಿಜೆಪಿ ಸೋತಿದೆ ಮತ್ತು ಮೋದಿ ಯುಗಾಂತ್ಯ ಆರಂಭವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡ್ರಾ.ಬಿ.ಪಿ. ಮಹೇಶ್‌ಚಂದ್ರ ಗುರು ಅಭಿಪ್ರಾಯಪಟ್ಟರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಮೈಸೂರು ವಿವಿ ಸಂಶೋಧಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂದು ಸಾಹೇಬ ಅವರ ಒಡಲ ದನಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಿಹಾರ ಚುನಾವಣೆಯಲ್ಲಿ ಮಹಾಘಠಬಂಧನ್‌ಗೆ ಸೋಲಾಗಿದೆ, ಬಿಜೆಪಿ ಗೆದ್ದಿದೆ ಎಂದು ಹೇಳಬಹುದು. ಆದರೆ ಬಿಜೆಪಿ ಸೋತು ಮೋದಿ ಯುಗಾಂತ್ಯ ಆರಂಭವಾಗಿದೆ. ಅಧಿಕಾರಿ ದುರ್ಬಳಕೆ ಮತ್ತು ಇವಿಎಂ ಯಂತ್ರದ ದುರ್ಬಳಕೆಯಿಂದಷ್ಟೇ ಮೋದಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರು.

ಚುನಾವಣೆ ಪ್ರಚಾರದ ವೇಳೆ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಅಭ್ಯರ್ಥಿ

ನಮ್ಮಲ್ಲಿನ ಅನೇಕರಿಗೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇಲ್ಲ. ಒಂದು ವೇಳೆ ಅರ್ಥಮಾಡಿಕೊಳ್ಳುವ ಮನೋಭಾವ ಇದ್ದಿದ್ದರೆ ಸಮ ಸಮಾಜ ಕಟ್ಟಬಹುದಿತ್ತು. ಇಂತಹ ಸೂಕ್ಷ್ಮ ವಿಚಾರವನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಇಡೀ ಸಾರಾಂಶ ನೀವು ಬದುಕಿ, ಇತರರನ್ನು ಬದುಕಲು ಬಿಡಿ ಎಂಬುದಾಗಿ ವಿವರಿಸಿದ್ದಾರೆ. ಕೃಷಿ ಸಂಸ್ಕೃತಿಯಿಂದ ನಿಜವಾದ ಪ್ರತಿಭೆಗಳು ಬಂದಿವೆಯೇ ಹೊರತು, ಖುಷಿ ಸಂಸ್ಕೃತಿಯಿಂದ ಬಂದಿಲ್ಲ. ಇದಕ್ಕೆ ಪುಸ್ತಕದ ಕರ್ತೃ ಚಂದು ಸಾಹೇಬ್‌ ಉತ್ತಮ ಉದಾಹರಣೆ. ಅವರು ತಮ್ಮ ಮೊದಲ ಕೃತಿಯ ಮೂಲಕ ಬದುಕಿನ ಎಲ್ಲಾ ಅಂಶಗಳನ್ನು ಒಳಗೊಂಡ 90 ವಿಭಿನ್ನ ವಿಚಾರ ಮಂಡಿಸಿದ್ದಾರೆ ಎಂದರು.

ಪುಸ್ತಕ ಕುರಿತು ಕೆ. ದೀಪಕ್‌ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಂ, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಮೊದಲಾದವರು ಇದ್ದರು.