ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡಿನಲ್ಲಿ ಮಹಾ ಚಂಡಿಕಾ ಹೋಮ
ಅಡಿಕೆ ಕೃಷಿಗೆ ಉಂಟಾಗಿರುವ ಎಲೆಚುಕ್ಕಿ ರೋಗದ ಕಾಯಿಲೆ ನಿವಾರಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಚಂಡಿಕಾ ಹೋಮವನ್ನು ನಡೆಸಲಾಗಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.3): ಕೃಷಿಯ ಅಧಿದೇವತೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಅಡಿಕೆ ಕೃಷಿಗೆ ಉಂಟಾಗಿರುವ ಎಲೆಚುಕ್ಕಿ ರೋಗದ ಕಾಯಿಲೆ ನಿವಾರಣೆಗೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿ ಚೆನ್ನಾಗಿ ನಡೆಯಬೇಕು ಎಂಬ ಚಿಂತನೆಯನ್ನು ಇಟ್ಟುಕೊಂಡು ಚಂಡಿಕಾ ಹೋಮವನ್ನು ನಡೆಸಲಾಗಿದೆ. ಕೃಷಿಕರು ತಮ್ಮ ಅಡಿಕೆ ಕೃಷಿಗೆ ಬಂದಿರುವ ತೊಂದರೆಯನ್ನು ತಿಳಿಸಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ವಿನಂತಿಸಿದ ಮೇರೆಗೆ ಇಂದು ಶ್ರೀಕ್ಷೇತ್ರ ಹೊರನಾಡಿನಲ್ಲಿ ಅಡಿಕೆ ಕೃಷಿಗೆ ಬಂದಿರುವ ಸಮಸ್ಯೆಯನ್ನು ಪರಿಹರಿಸಲು ಶ್ರೀಮಾತೆಯ ಸನ್ನಿಧಿಯಲ್ಲಿ ಮಹಾ ಚಂಡಿಕಾ ಹೋಮ ಮಾಡಲಾಯಿತು.
ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡಿನಲ್ಲಿ ಮಹಾ ಚಂಡಿಕಾ ಹೋಮ
ಈ ಹಿಂದೆಯೇ ಸಂಕಲ್ಪಿಸಿದಂತೆ ಸಂಪುಟಿಕರಣ ಪಾರಾಯಣ , ಮಹಾ ಸಂಕಲ್ಪದ ಅಂಗವಾಗಿ ಜಿ.ಭೀಮೇಶ್ವರ ಜೋಷಿ ಶ್ರೀಮಾತೆಗೆ ಶ್ರೀಮಾನ್ ಮಹಾ ಅಭಿಷೇಕ ಪೂಜೆಯನ್ನು ನೆರವೇರಿಸಿದರು.ಆನಂತರ ಶ್ರೀಮಾನ್ ಮಹಾ ಚಂಡಿಕಾ ಹೋಮವು ನೆರವೇರಿತು. ಕೃಷಿಕರ ಸಭೆಯಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಜಿ.ರಾಮನಾರಾಯಣ ಜೋಯಿಸ್, ರಾಸಾಯನಿಕ ಗೊಬ್ಬರವನ್ನು ಹೆಚ್ಚು ಹೆಚ್ಚು ಉಪಯೋಗ ಮಾಡಿ ಭೂಮಿಯನ್ನು ಬರಡು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿಕೊಳ್ಳುತ್ತಿರುವುದು ತುಂಬಾ ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಬದಲು ಪಾರಂಪರಿಕವಾದ ಕೃಷಿ ಪದ್ದತಿಯನ್ನು ನಡೆಸುವುದರಿಂದ ಭೂಮಿಯ ಫಲವತ್ತತೆ ಉಳಿಯುತ್ತದೆ, ರೋಗ ರುಜಿನಗಳಿಂದ ಮುಕ್ತವಾಗುವುದಕ್ಕೆ ಅವಕಾಶವಿದೆ. ಈ ಹಿಂದಿನ ಪದ್ದತಿಯಂತೆ ಕೃಷಿ ಚಟುವಟಿಕೆಗಳನ್ನು ನಡೆಸುವುದು ಎಲ್ಲಾ ಕೃಷಿಕರ ಅಭ್ಯುದಯಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಡಿಕೆ ಗಿಡಕ್ಕೆ ಎಲೆಚುಕ್ಕಿ ರೋಗ ಪ್ರಾರಂಭವಾಗಿ ಕೃಷಿ ನಾಶ
ಈ ಹಿಂದೆ ಕೃಷಿ ಭೂಮಿಗೆ ಬಂದಿದ್ದ ತೊಂದರೆಯ ನಿವಾರಣೆಗಾಗಿ ಶ್ರೀಕ್ಷೇತ್ರದ ಅಧಿದೇವತೆಯ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ ಹಾಗೂ ಮಹಾ ಚಂಡಿಕಾಯಾಗವನ್ನು ನಡೆಸಿ ಆ ಯಾಗದ ಭಸ್ಮವನ್ನು ಮತ್ತು ಆರ್ಚಿಸಿದ ಕುಂಕುಮ ಪ್ರಸಾದವನ್ನು ಖಾಯಿಲೆಗೆ ಒಳಗಾದ ಕೃಷಿ ಭೂಮಿಗೆ ಹಾಕಿ ಉತ್ತಮ ಪರಿಹಾರ ಪಡೆದ ಅನುಭವದಂತೆ ಶ್ರೀಕ್ಷೇತ್ರದ ವತಿಯಿಂದ ಪಡೆದುಕೊಂಡ ಪ್ರಸಾದವನ್ನು ತಮ್ಮ ಕೃಷಿ ಭೂಮಿಗೆ ಹಾಕುವುದು ಸಂರಕ್ಷಣೆಯ ದೃಷ್ಟಿಯಿಂದ ಉತ್ತಮ ಕಾರ್ಯವಾಗಿದೆ ಎಂದು ಶ್ರೀಕ್ಷೇತ್ರದ ಜಿ.ಭೀಮೇಶ್ವರ ಜೋಷಿ ಈ ಅಭಿಪ್ರಾಯವನ್ನು ಸಭೆಯಲ್ಲಿ ಉಪಸ್ಥಿತರಿರುವ ಕೃಷಿಕರಿಗೆ ವ್ಯಕ್ತಪಡಿಸಿದರು.
ಅಡಕೆಗೆ ಎಲೆ ಚುಕ್ಕಿರೋಗ, ಜಿಲ್ಲೆಗೂ ತಟ್ಟಿದ ಭೀತಿ!
ಕೃಷಿಕರಿಗೆ ಕೃಷಿ ಬೆಳೆಗೆ ತೊಂದರೆ ಬಂದಾಗ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಲಾಗಿತ್ತು ಇದರ ಪರಿಣಾಮವಾಗಿ, ಕೃಷಿಕರಿಗೆ ತಾವು ಬೆಳೆದ ಅಡಿಕೆಗೆ ಉತ್ತಮ ದರವನ್ನು ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂಬುದನ್ನು ಸ್ಮರಿಸಿಕೊಂಡು ಪ್ರಸ್ತುತ ಅಡಿಕೆ ಗಿಡಕ್ಕೆ ಎಲೆಚುಕ್ಕಿ ರೋಗ ಪ್ರಾರಂಭವಾಗಿ ಕೃಷಿ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ತೊಂದರೆಗೆ ಒಳಗಾಗಿರುವ ಅಡಿಕೆ ಕೃಷಿಕರಿಗೆ ಶೃಂಗೇರಿ ಶಾರದಾ ಪೀಠದ ಉಭಯ ಜಗದ್ಗುರುಗಳ ಅಭಯ ಮತ್ತು ಆಶೀರ್ವಾದ ಸಿಕ್ಕಿರುವುದು ಮಹಾಪ್ರಸಾದವಾಗಿದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
Arecanut Disease: ತೋಟಗಳಲ್ಲಿ ಅಡಕೆ ಅಕಾಲಿಕ ಹಣ್ಣಾಗುವ ರೋಗ ಪತ್ತೆ!
ಅತಿ ಶೀಘ್ರವಾಗಿ ಶೃಂಗೇರಿ ಸಂಸ್ಥಾನದ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲು ಸಮಯವನ್ನು ನಿಗದಿಪಡಿಸುವುದು ಅಗತ್ಯ ಎಂಬ ಮಾಹಿತಿ ಚರ್ಚೆಗೆ ಬಂದು, ಈ ಜವಾಬ್ದಾರಿಯನ್ನು ಮ್ಯಾಮ್ಕೋಸ್ ನ ಉಪಾಧ್ಯಕ್ಷರಾದ ಮಹೇಶರವರಿಗೆ ನೀಡಲಾಯಿತು.