Arecanut Disease: ತೋಟಗಳಲ್ಲಿ ಅಡಕೆ ಅಕಾಲಿಕ ಹಣ್ಣಾಗುವ ರೋಗ ಪತ್ತೆ!
ಕರಾವಳಿಯ ಅಡಕೆ ತೋಟಗಳಲ್ಲಿ ಕೊಳೆರೋಗ, ಹಳದಿ ಎಲೆ ರೋಗಗಳ ಸಾಲಿಗೆ ಈಗ ಎಲೆ ಚುಕ್ಕಿ ರೋಗ ಸೇರಿದೆ. ಅದರಲ್ಲೂ ಮುಂದುವರಿದು ಎಳತು ಅಡಕೆ ಅಕಾಲಿಕವಾಗಿ ಹಣ್ಣಾಗುವ ರೋಗ ಪತ್ತೆಯಾಗಿದೆ.
ಮಂಗಳೂರು (ಅ.20) : ಕರಾವಳಿಯ ಅಡಕೆ ತೋಟಗಳಲ್ಲಿ ಕೊಳೆರೋಗ, ಹಳದಿ ಎಲೆ ರೋಗಗಳ ಸಾಲಿಗೆ ಈಗ ಎಲೆ ಚುಕ್ಕಿ ರೋಗ ಸೇರಿದೆ. ಅದರಲ್ಲೂ ಮುಂದುವರಿದು ಎಳತು ಅಡಕೆ ಅಕಾಲಿಕವಾಗಿ ಹಣ್ಣಾಗುವ ರೋಗ ಪತ್ತೆಯಾಗಿದೆ.
ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ
ಕಳೆದ ಒಂದು ತಿಂಗಳಿಂದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ಎಲೆ ಚುಕ್ಕಿ ರೋಗ ಬಾಧಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಎಳತು ಅಡಕೆ ದಿಢೀರ್ ಹಣ್ಣಾಗಿರುವ ರೋಗ ಪತ್ತೆಯಾಗಿದೆ. ಇದು ಎಲೆ ಚುಕ್ಕಿ ರೋಗದ ಮುಂದುವರಿದ ಭಾಗ ಎಂಬ ನಿಲುವಿಗೆ ವಿಜ್ಞಾನಿಗಳು ಬಂದಿದ್ದಾರೆ. ಅಕಾಲಿಕವಾಗಿ ಅಡಕೆ ಮಾಗುವುದರಿಂದ ಇಳುವರಿ ಮೇಲೆ ಭಾರಿ ಹೊಡೆತ ಬೀಳಲಿದೆ.
70 ಹೆಕ್ಟೇರ್‌ನಲ್ಲಿ ಅಡಕೆ ಬೆಳೆ ಹೊಡೆತ:
ಬೆಳ್ತಂಗಡಿಯ ಎಳನೀರು ಪ್ರದೇಶದ 70 ಹೆಕ್ಟೇರ್ ಪೂರ್ತಿ ಅಡಕೆ ತೋಟಗಳಲ್ಲಿ ಅಡಕೆ ಅಕಾಲಿಕವಾಗಿ ಹಣ್ಣಾಗಿದೆ. ಎಳತು ಅಡಕೆ ದಿಢೀರನೆ ಹಣ್ಣಾದಂತೆ ಕಂಡುಬರುವುದು ಮಾತ್ರವಲ್ಲ, ಗೊನೆಯಿಂದ ಕಳಚಿಕೊಳ್ಳುತ್ತದೆ. ಸಿಪ್ಪೆ ತೆಗೆದರೆ ಅದರೊಳಗೆ ಅಡಕೆ ಗುಣಮಟ್ಟಕಳೆದುಕೊಂಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಡಕೆ ಬೆಳೆದು ಬಳಿಕ ಮಾಗುವ ಮೊದಲೇ ಹಣ್ಣಾಗುವುದರಿಂದ ಭವಿಷ್ಯದಲ್ಲಿ ಭಾರಿ ಫಸಲು ನಷ್ಟಉಂಟಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.
ಅಕಾಲದಲ್ಲಿ ಹಣ್ಣಾಗುವುದು ಯಾಕೆ?:
ಎಳತು ಅಡಕೆ ಅಕಾಲದಲ್ಲಿ ಹಣ್ಣಾದಂತೆ ಭಾಸವಾಗುವುದು ಯಾಕೆ ಎಂಬುದನ್ನು ನಿಖರ ಕಾರಣ ಪತ್ತೆ ಹಚ್ಚಲಾಗುತ್ತಿದೆ. ಮೇಲ್ನೋಟಕ್ಕೆ ಇದು ಎಲೆ ಚುಕ್ಕಿ ರೋಗದ ಮುಂದುವರಿದ ಲಕ್ಷಣ ಎನ್ನುತ್ತಾರೆ ವಿಜ್ಞಾನಿಗಳು.
ಗರಿಗಳಲ್ಲಿ ಸಣ್ಣ ಚುಕ್ಕೆ ಕಂಡುಬಂದು ನಂತರ ಇಡೀ ಮರ ಒಣಗುವುದು. ಜತೆಗೆ ಗರಿಯಲ್ಲಿನ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತಗೊಂಡು ಮರವೂ ಬೆಳವಣಿಗೆ ಕಾಣದೇ ಇರುವುದು ಎಲೆ ಚುಕ್ಕಿ ರೋಗದ ಮುಖ್ಯ ಲಕ್ಷಣ. ಅದೇ ರೋಗಪೀಡಿತ ಅಡಕೆ ಮರದಲ್ಲಿ ಎಳತು ಅಡಕೆ ಕೂಡ ಅಕಾಲಿಕವಾಗಿ ಹಣ್ಣಾಗುವುದು ಇದೇ ರೋಗದ ಮಂದುವರಿದ ಲಕ್ಷಣ. ವಾಸ್ತವದಲ್ಲಿ ಒಳಗಡೆ ಅಡಕೆ ಎಳತೇ ಇರುತ್ತದೆ. ಮತ್ತೆ ಅಡಕೆ ಮಾಗುವುದಿಲ್ಲ. ಇಡೀ ಅಡಕೆ ಗೊನೆಗೆ ರೋಗ ಪಸರಿಸಿ ಫಸಲು ಕೈಗೆ ಸಿಗುವುದಿಲ್ಲ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಸದ್ಯಕ್ಕೆ ನಿಯಂತ್ರಣವೇ ಪರಿಹಾರ:
ಅಡಕೆ ಅಕಾಲಿಕ ಹಣ್ಣಾಗುವ ರೋಗಕ್ಕೆ ಪ್ರತ್ಯೇಕ ಪರಿಹಾರ, ನಿಯಂತ್ರಣ ಕ್ರಮಗಳಿಲ್ಲ. ಎಲೆ ಚುಕ್ಕಿ ರೋಗಕ್ಕೆ ಕೈಗೊಳ್ಳುವ ಪರಿಹಾರ ಕ್ರಮಗಳನ್ನೇ ಇದಕ್ಕೂ ಮಾಡದರೆ ಸಾಕು ಎನ್ನುತ್ತಾರೆ ವಿಜ್ಞಾನಿಗಳು.
ಎಲೆ ಚುಕ್ಕಿ ರೋಗ ಗಾಳಿಗೆ ಪಸರಿಸುತ್ತದೆ. ಹಳದಿ ಎಲೆ ರೋಗದಲ್ಲಿ ಅಡಕೆ ಮರದ ಗರಿ ಪೂರ್ತಿ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ನಿಧಾನವಾಗಿ ಕರಟುವುದು. ಎಲೆ ಚುಕ್ಕಿ ರೋಗದಲ್ಲಿ ಗರಿ ಪೂರ್ತಿ ಕಳಚಿಕೊಂಡು ಉತ್ಪಾದನೆ ಮೇಲೆ ತಕ್ಷಣಕ್ಕೆ ಹೊಡೆತ ನೀಡುತ್ತದೆ. ಇದನ್ನು ನಿಯಂತ್ರಿಸಲು ರೋಗಬಾಧಿತ ಸೋಗೆಯನ್ನು ಕಿತ್ತು ಹಾಕಬೇಕು. ಅಲ್ಲದೆ ರೋಗಪೀಡಿತ ತೋಟ ಮಾತ್ರವಲ್ಲ ರೋಗ ಇಲ್ಲದೇ ಇರುವ ತೋಟಗಳಲ್ಲೂ ಸಾಮೂಹಿಕ ಔಷಧ ಸಿಂಪರಣೆ ನಡೆಸಬೇಕು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ರೋಗಬಾಧಿತ ತೋಟಗಳಿಗೆ ವಿಜ್ಞಾನಿಗಳ ತಂಡ ಭೇಟಿ
ದ.ಕ.ಜಿಲ್ಲೆಯಲ್ಲಿ ಸುಳ್ಯದ ಮರ್ಕಂಜ, ಅರಂತೋಡು, ಸಂಪಾಜೆ, ಪುತ್ತೂರಿನ ಗಡಿಭಾಗ ಸ್ವರ್ಗ, ಕಾಸರಗೋಡಿನ ಪಡ್ರೆ, ಮುಳ್ಳೇರಿಯಾ, ಬೆಳ್ತಂಗಡಿಯ ಎಳನೀರು, ಸಂಸೆ, ಕಳಸ, ಸಾಗರ, ಶೃಂಗೇರಿ, ಮೂಡಿಗೆರೆ, ತೀರ್ಥಹಳ್ಳಿ, ನಿಟ್ಟೂರು, ಶಿರಸಿ ಸಿದ್ಧಾಪುರಗಳಲ್ಲಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಎಲೆ ಚುಕ್ಕಿ ರೋಗ ಕಂಡುಬಂದಿದೆ. ಈ ಕಡೆಗಳಲ್ಲೆಲ್ಲ ಸ್ವತಃ ಅಡಕೆ ತೋಟಗಳಿಗೆ ತೆರಳಿ ಸಿಪಿಸಿಆರ್ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸುತ್ತಿದೆ.
ಎಲೆಚುಕ್ಕಿ ರೋಗ ಹಿನ್ನೆಲೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಆರಗ ಜ್ಞಾನೇಂದ್ರ
ಈಗಾಗಲೇ ಈ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡ ಅಡಕೆ ತೋಟಗಳಿಗೆ ಬಂದಿರುವ ರೋಗ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಿಪಿಸಿಆರ್‌ಐ ತಂಡದಲ್ಲಿ ಹಿರಿಯ ಕೃಷಿ ವಿಜ್ಞಾನಿ ಡಾ.ವಿನಾಯಕ ಹೆಗಡೆ, ಡಾ.ಸಂತೋಷ್ ಕುಮಾರ್, ಡಾ.ತವ ಪ್ರಕಾಶ್ ಪಾಂಡ್ಯನ್, ಡಾ.ಭವಿಷ್ಯ ಮತ್ತಿತರರಿದ್ದಾರೆ.
ದ.ಕ, ಉತ್ತರ ಕನ್ನಡ, ಮಲೆನಾಡು, ಬಯಲು ಸೀಮೆಗಳಲ್ಲಿ ಅಡಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ವ್ಯಾಪಕ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದನ್ನು ಈಗಲೇ ನಿಯಂತ್ರಿಸದಿದ್ದರೆ, ಇದು ಮತ್ತಷ್ಟುವ್ಯಾಪಿಸಿ ಇಡೀ ಅಡಕೆ ಫಸಲಿಗೆ ಭೀಕರ ಹೊಡೆತ ನೀಡುವ ಭೀತಿ ಇದೆ. ಬೆಳೆಗಾರರೆಲ್ಲ ಸೇರಿ ನಿರ್ದಿಷ್ಟಔಷಧವನ್ನು ಸಿಂಪರಣೆ ಮಾಡಬೇಕು. ಅದಕ್ಕೂ ಮೊದಲು ರೋಗಪೀಡಿತ ಸೋಗೆಯನ್ನು ಕೀಳಬೇಕು.
-ಡಾ.ಭವಿಷ್ಯ, ಕೀಟಶಾಸ್ತ್ರ ವಿಜ್ಞಾನಿ, ಸಿಪಿಸಿಆರ್‌ಐ ಕಾಸರಗೋಡು
ಎಳನೀರು ಪ್ರದೇಶದ 70 ಹೆಕ್ಟೇರ್ ಅಡಕೆ ತೋಟದಲ್ಲಿ ಈ ರೋಗ ಕಂಡುಬಂದಿದೆ. ಅಲ್ಲಿಗೆ ಸಿಪಿಸಿಆರ್‌ಐ ಕೃಷಿ ವಿಜ್ಞಾನಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ. ಸಮುದಾಯ ಸ್ಪ್ರೇ ನಡೆಸುವಂತೆ ಸೂಚನೆ ನೀಡಲಾಗಿದೆ. ರೋಗ ನಿಯಂತ್ರಣಕ್ಕೆ ಪೊಷಿಕೊನಝೋಲ್ ಔಷಧ ಸಿಂಪರಣೆಗೆ ನಿರ್ದೇಶನ ನೀಡಲಾಗಿದೆ. ರೋಗ ನಿಯಂತ್ರಣಕ್ಕೆ ಜಿಲ್ಲೆಗೆ ಲಭಿಸಿದ 3.20 ಲಕ್ಷ ರು.ಗಳನ್ನು ಎಳನೀರಿಗೆ ಆದ್ಯತೆ ನೆಲೆಯಲ್ಲಿ ನೀಡಲು ಉದ್ದೇಶಿಸಲಾಗಿದೆ.
-ಚಂದ್ರಶೇಖರ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ, ಬೆಳ್ತಂಗಡಿ