Asianet Suvarna News Asianet Suvarna News

ಅಪಾಯದಂಚಿನಲ್ಲಿ ಮಡಿಕೇರಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ!

ಕೊಡಗು ಜಿಲ್ಲೆ ಮೂಲಕ ಹಲವು ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ -275ರ ಮಡಿಕೇರಿ -ಸಂಪಾಜೆ ರಸ್ತೆ ಬಹುತೇಕ ಅಪಾಯದ ಅಂಚಿನಲ್ಲಿದೆ. ಸುರಕ್ಷತೆಯೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಮುಂದಿನ ಮಳೆಗಾಲ ಅವಧಿಯಲ್ಲಿ ಜಿಲ್ಲೆ ಇತರ ಜಿಲ್ಲೆಗಳೊಂದಿಗೆ ರಸ್ತೆ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.

Madikeri Sampaje National Highway is in Dangerous rav
Author
First Published Dec 2, 2022, 8:50 AM IST

ಕುಶಾಲನಗರ (ಡಿ.2) : ಕೊಡಗು ಜಿಲ್ಲೆ ಮೂಲಕ ಹಲವು ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ -275ರ ಮಡಿಕೇರಿ -ಸಂಪಾಜೆ ರಸ್ತೆ ಬಹುತೇಕ ಅಪಾಯದ ಅಂಚಿನಲ್ಲಿದೆ. ಸುರಕ್ಷತೆಯೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಮುಂದಿನ ಮಳೆಗಾಲ ಅವಧಿಯಲ್ಲಿ ಜಿಲ್ಲೆ ಇತರ ಜಿಲ್ಲೆಗಳೊಂದಿಗೆ ರಸ್ತೆ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.

ಕಳೆದ 4 ವರ್ಷಗಳ ಅವಧಿಯಲ್ಲಿ ಮಳೆಗಾಲ ಸಂದರ್ಭ ರಸ್ತೆಯಲ್ಲಿ ಬಿರುಕು ಕಾಣುವುದರೊಂದಿಗೆ ಮಡಿಕೇರಿ- ಸಂಪಾಜೆ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಡಕುಂಟಾಗುತ್ತಿರುವುದು ಆಗಾಗ್ಗೆ ಕಂಡು ಬರುತ್ತಿದೆ. ಈ ವ್ಯಾಪ್ತಿಯಲ್ಲಿ ಮಳೆಗಾಲದ 3 ತಿಂಗಳ ಅವಧಿಯಲ್ಲಿ ಸರಾಸರಿ ಅಂದಾಜು 2900 ಮಿಲಿ ಮೀಟರ್‌ ಮಳೆಯಾಗುತ್ತಿದ್ದು, ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕಾಗಿದೆ. ಸಂಪಾಜೆ ಘಾಟ್‌ ಸೆಕ್ಷನ್‌ ವ್ಯಾಪ್ತಿಯ 71.600 ಕಿ.ಮೀ ನಿಂದ 112.300 ಕಿ.ಮೀ ಅಂತರದ ಬಂಟ್ವಾಳ ರಸ್ತೆಯ 21 ಕಡೆ ರಸ್ತೆ ಅಪಾಯದ ಅಂಚಿನಲಿದ್ದು, 2022ರಲ್ಲಿ ಸಂಭವಿಸಿದ 13 ಭೂಕಂಪನಗಳಲ್ಲಿ ರಸ್ತೆ ಅಲ್ಲಲ್ಲಿ ಬಿರುಕು ಕಂಡಿದೆ. ಇದರ ಸುರಕ್ಷತೆ, ಅಭಿವೃದ್ಧಿ ಕಾಮಗಾರಿ ನಡೆಯದಿದ್ದಲ್ಲಿ, ಮುಂದಿನ ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ರಸ್ತೆ ಕುಸಿತದೊಂದಿಗೆ ಇತರ ಜಿಲ್ಲೆಗಳೊಂದಿಗೆ ಕೊಡಗು ಜಿಲ್ಲೆಯ ಸಂಪರ್ಕ ಸಂಪೂರ್ಣ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.

BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಅಧಿಕಾರಿಗಳು ಮಡಿಕೇರಿ- ಸಂಪಾಜೆ ವ್ಯಾಪ್ತಿಯ ನಡುವೆ 21 ಸ್ಥಳಗಳನ್ನು ಗುರುತಿಸಿದ್ದು, ಕುಸಿತ ತಪ್ಪಿಸುವ ನಿಟ್ಟಿನಲ್ಲಿ ರಸ್ತೆಗೆ ರಿಟೈನಿಂಗ್‌ ವಾಲ್‌, ಗಾರ್ಡ್‌ ವಾಲ್‌ಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿರುವುದಾಗಿ ತಿಳಿದು ಬಂದಿದೆ. ಅಂದಾಜು 99.87 ಕೋಟಿ ರುಪಾಯಿಯ ಪ್ರಸ್ತಾವನೆಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಆರ್‌. ನಾಗರಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೂಲಕ ಮಾತ್ರ ಕೊಡಗು ಜಿಲ್ಲೆಗೆ ಮಂಗಳೂರು, ಮೈಸೂರು, ಹಾಸನ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು, ನೆರೆ ಕೇರಳಕ್ಕೂ ಇದೇ ಮಾರ್ಗವನ್ನು ಅವಲಂಬಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಕುಸಿತದಿಂದ ಯಾವುದೇ ರೀತಿ ಸಾವು- ನೋವು, ಸಮಸ್ಯೆ ಉಂಟಾಗದ ರೀತಿಯಲ್ಲಿ ಎಚ್ಚರವಹಿಸುವ ಸಂಬಂಧ ಪ್ರಸ್ತಾವನೆಯಲ್ಲಿ ಮಾಹಿತಿ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆ: ಈ ಬಗ್ಗೆ ಸಮಗ್ರ ಮಾಹಿತಿಯೊಂದಿಗೆ ಮಡಿಕೇರಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಕೂಡ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಈ ಸಾಲಿನ ಜೂನ್‌ ತಿಂಗಳಲ್ಲಿ ಪತ್ರ ಬರೆದಿದ್ದು, ಎನ್‌ಎಚ್‌- 275, ಸಂಪಾಜೆ ಘಾಟ್‌ ರಸ್ತೆಯಲ್ಲಿ, ರಸ್ತೆ ಸುರಕ್ಷತೆ ಮತ್ತು ವಾರ್ಷಿಕ ಯೋಜನೆಯಡಿಯಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳಲು ಅನುದಾನ ಕಲ್ಪಿಸುವಂತೆ ಕೋರಿರುವುದು ಇದಕ್ಕೆ ಪೂರಕ ಅಂಶವಾಗಿದೆ.

ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದಿಂದ ಕುಶಾಲನಗರ- ಮಡಿಕೇರಿ- ಸಂಪಾಜೆ ಘಾಟ್‌- ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 5 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು ಈ ಸಾಲಿನಲ್ಲಿ ಒಟ್ಟು 170 ಕೋಟಿ ರುಪಾಯಿ ವೆಚ್ಚದ ಅಂದಾಜು ಪಟ್ಟಿಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಬೆಂಗಳೂರು ವಲಯ ಕಚೇರಿಗೆ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮಂಗಳೂರು- ಶಿರಾಡಿ ಘಾಟ್‌ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಉಂಟಾದಾಗ ಪರ್ಯಾಯ ರಸ್ತೆಯಾಗಿ ಬಂಟ್ವಾಳ- ಮಡಿಕೇರಿ-ಮೈಸೂರು- ಬೆಂಗಳೂರು ರಸ್ತೆಯನ್ನು ಬಳಕೆ ಮಾಡುವುದು ಸಾಮಾನ್ಯವಾಗಿದ್ದು, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪಾಜೆ- ಮಡಿಕೇರಿ ರಸ್ತೆಯ ಸುರಕ್ಷತೆ, ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚುರಂಜನ್‌, ವಿಷಯವನ್ನುಅದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದುಎಂದು ಹೇಳಿದ್ದಾರೆ.

ಕೇಂದ್ರ ಭೂ ಸಾರಿಗೆಇಲಾಖೆಯ ಹಿರಿಯ ಅಧಿಕಾರಿಗಳು ಮಡಿಕೇರಿ- ಸಂಪಾಜೆ ವ್ಯಾಪ್ತಿಯರಸ್ತೆ ಪರಿಶೀಲನೆ ಸಂಬಂಧ ಹಲವು ಭಾರಿ ಭೇಟಿ ನೀಡಿದರೂ, ಈ ಕಾಮಗಾರಿ ಯೋಜನೆ ಮಾತ್ರ ನೆನೆಗುದಿಗೆ ಬಿದ್ದಿದೆ. ಇದರ ಜೊತೆಗೆ ಬೊಯಿಕೇರಿ ಮತ್ತು ಆನೆಕಾಡು ವ್ಯಾಪ್ತಿಯ ಅಪಘಾತ ವಲಯದ ಹೆದ್ದಾರಿ ರಸ್ತೆಯ ಅಗಲೀಕರಣ, ಕುಶಾಲನಗರ ತಾವರೆಕೆರೆ ಬಳಿಯ ಹೆದ್ದಾರಿ ರಸ್ತೆ ಎತ್ತರಿಸುವ ಯೋಜನೆಯ ಕಾಮಗಾರಿ ಕೂಡ ನೆನೆಗುದಿಗೆ ಬಿದ್ದಿದೆ.

Kodagu: ಆನೆ-ಮಾನವ ಸಂಘರ್ಷ: ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

ಸಂಬಂಧಿಸಿದ ಜನಪ್ರತಿನಿಧಿಗಳು ಕೊಡಗು ಜಿಲ್ಲೆಯ ಮಡಿಕೇರಿ- ಸಂಪಾಜೆ, ಕುಶಾಲನಗರ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಯೋಜನೆಗಳ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವಾಲಯದ ಮೂಲಕ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕಾಗಿದೆ ಎನ್ನುವುದು ವಾಹನ ಚಾಲಕರ ಆಗ್ರಹವಾಗಿದೆ.

ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದಿಂದ ಕುಶಾಲನಗರ- ಮಡಿಕೇರಿ- ಸಂಪಾಜೆ ಘಾಟ್‌- ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 5 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು ಈ ಸಾಲಿನಲ್ಲಿ ಒಟ್ಟು 170 ಕೋಟಿ ರುಪಾಯಿ ವೆಚ್ಚದ ಅಂದಾಜು ಪಟ್ಟಿಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಬೆಂಗಳೂರು ವಲಯ ಕಚೇರಿಗೆ ಸಲ್ಲಿಸಲಾಗಿದೆ

- ಆರ್‌. ನಾಗರಾಜ್‌, ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ

Follow Us:
Download App:
  • android
  • ios