ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ಇಳಕಲ್ಲಿನ ವಿಜಯ ಮಹಾಂತ ಶ್ರೀಗಳ 'ಮಹಾಂತ ಜೋಳಿಗೆ' ಸ್ತಬ್ಧಚಿತ್ರಕ್ಕೆ ಬೆಳಗಾವಿ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಸಾರ್ವಜನಿಕರಲ್ಲಿರುವ ದುಶ್ಚಟಗಳನ್ನು ಭಿಕ್ಷೆಯಾಗಿ ಬೇಡಿದ್ದ ಶ್ರೀಗಳ ವಿನೂತನ ಕಾರ್ಯ ಬಿಂಬಿಸಿತ್ತು.
ಇಳಕಲ್ಲ (ಅ.30): ವಿಶ್ವವಿಖ್ಯಾತ ಮೈಸೂರು ದಸರಾ(Mysuru dasara)ದಲ್ಲಿ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ಮಹಾಂತ ಜೋಳಿಗೆ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಇಳಕಲ್ಲ ಜನರಿಗೆ ಸಂತಸ ಇಮ್ಮಡಿಗೊಳಿಸಿದೆ.
ದುಶ್ಚಟಗಳನ್ನೇ ಭಿಕ್ಷೆ ಬೇಡಿದ ಇಳಕಲ್ ವಿಜಯ ಮಹಾಂತ ಶ್ರೀಗಳು
ಇಳಕಲ್ಲಿನ ವಿಜಯ ಮಹಾಂತೇಶ್ವರ ಶ್ರೀಮಠದ ಲಿಂ.ಡಾ.ಮಹಾಂತ ಶ್ರೀಗಳು ಸಾರ್ವಜನಿಕರಲ್ಲಿ ಸಮಾಜ ಹಾಗೂ ಯುವಜನರ ಸುಧಾರಣೆ ಗುರಿಯಿಂದ ಜನರಲ್ಲಿರುವ ದುಶ್ಚಟಗಳನ್ನು ಭಿಕ್ಷೆ ಬೇಡಿ ಜಗತ್ತಿನಲ್ಲಿ ದುಶ್ಚಟ ಭಿಕ್ಷೆ ಬೇಡಿದ ಏಕೈಕ ಶ್ರೀಗಳು. ಅವರ ಈ ವಿನೂತನ ಕಾರ್ಯ ಜಗತ್ತಿಗೆ ಮಾದರಿಯಾಗಿತ್ತು. ಇದನ್ನು ಕಂಡ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಈ ಚಿತ್ರವನ್ನೇ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಬೇಕು ಎಂದು ನಿರ್ಧರಿಸಿ ಆದೇಶ ಮಾಡಿದರು.
ಮೈಸೂರು ದಸರಾ ನೋಡಲು ಬಂದವರು ಮಹಾಂತ ಶ್ರೀಗಳು ಜನರಲ್ಲಿರುವ ದುಶ್ಚಟಗಳ ಭಿಕ್ಷೆ ಬೇಡುವ ಸ್ತಬ್ಧ ಚಿತ್ರ ಕಂಡು ಆಶ್ಚರ್ಯಚಕಿತರಾಗಿದರಲ್ಲದೆ ಓರ್ವ ಸನ್ಯಾಸಿ ಹಣ, ಕನಕ ಬೇಡದೇ ಜೋಳಿಗೆಯಲ್ಲಿ ಜನರ ದುಶ್ಚಟ ಬೇಡುವುದು ಕಂಡು ಅಚ್ಚರಿಪಟ್ಟರು.
ಇಳಕಲ್ ಪ್ರಥಮ, ಉತ್ತರ ಕನ್ನಡ ದ್ವಿತೀಯ ಸ್ಥಾನ
ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳನ್ನುಬೆಂಗಳೂರು, ಮೈಸೂರು, ಕಲಬರ್ಗಿ, ಬೆಳಗಾವಿ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಬೆಳಗಾವಿ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಶ್ರೀಮಠದ ಡಾ.ಮಹಾಂತಪ್ಪಗಳ ಮಹಾಂತ ಜೋಳಿಗೆಯ ಸ್ವಾಮೀಜಿ ಎಂಬ ಸ್ತಬ್ಧ ಚಿತ್ರ ಪ್ರಥಮ ಬಹುಮಾನ ಪಡೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಸ್ತಬ್ಧ ಚಿತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸುವಲ್ಲಿ ಆಸಕ್ತಿ ವಹಿಸಿದ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರಿಗೆ ಮತ್ತು ಬಾಗಲಕೋಟೆ ಜಿಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಳಕಲ್ ಮಹಾಂತ ಶ್ರೀಗಳು ಸಂತಸ
ಮೈಸೂರು ದಸರಾ ಮೆರವಣಿಗೆಯಲ್ಲಿ ಡಾ.ಮಹಾಂತ ಶ್ರಿಗಳ ದುಶ್ಚಟ ಭಿಕ್ಷೆ ಬೇಡುವ ಸ್ತಬ್ಧ ಚಿತ್ರ ಪ್ರಥಮ ಬಹುಮಾನ ಪಡೆದುದ್ದು ನಿಜಕ್ಕೂ ಸಂತಸವಾಗಿದೆ. ಸಚಿವರಾದ ವಿಜಯಾನಂದ ಕಾಶಪ್ಪನವರ ಹಾಗೂ ಬಾಗಲಕೋಟೆ ಜಿಪಂ ಅಧಿಕಾರಿಗಳಿಗೆ ಇಳಕಲ್ಲ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ.
-ಡಾ. ಗುರುಮಹಾಂತ ಶ್ರೀಗಳು ವಿಜಯಮಹಾಂತೇಶ್ವರ ಮಠ ಇಳಕಲ್ಲ
ಮೈಸೂರು ದಸರಾ ಸಂಭ್ರಮದಲ್ಲಿ ಅನೇಕ ರೀತಿಯ ಸ್ತಬ್ಧ ಚಿತ್ರಗಳನ್ನು ನೋಡಿದ್ದೇವೆ. ಆದರೆ ನಮ್ಮ ಲಿಂ. ಡಾ.ಮಹಾಂತ ಶ್ರೀಗಳ ಕಾರ್ಯ ಜಗತ್ತಿಗೆ ಮಾದರಿ ಕಾರ್ಯ ಎಂದು ನನಗೆ ಎನಿಸಿತ್ತು. ಅದಕ್ಕಾಗಿ ಈ ಸ್ತಬ್ಧ ಚಿತ್ರ ಮಾಡಿ ಮೈಸೂರು ದಸರಾದಲ್ಲಿ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಿದ್ದು ಸಂತಸವಾಗಿದೆ.
- ವಿಜಯಾನಂದ ಕಾಶಪ್ಪನವರ ಜಿಲ್ಲಾ ಸಚಿವ






