ನವೆಂಬರ್ 1ರಿಂದ ಆರಂಭವಾಗುವ ವಾರ್ಡ್ ಒನ್ ಅಭಿಯಾನದಲ್ಲಿ ಉತ್ತರ ಪಾಲಿಕೆಯ 18 ಪ್ರಮುಖ ಜಂಕ್ಷನ್‌ಗಳ ಸುಧಾರಣೆಗೆ ಆಯುಕ್ತ ಪೊಮ್ಮುಲ ಸುನಿಲ್ ಕುಮಾರ್ ಸೂಚಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಣ್ಣಪುಟ್ಟ ಸಮಸ್ಯೆ ಪರಿಹರಿಸಲಿದ್ದಾರೆ.
ಬೆಂಗಳೂರು (ಅ.30): ನವೆಂಬರ್ 1ರಿಂದ ಆರಂಭವಾಗುವ ವಾರ್ಡ್ ಒನ್ ಅಭಿಯಾನದಲ್ಲಿ ಉತ್ತರ ಪಾಲಿಕೆಯಲ್ಲಿ ಗುರುತಿಸಿರುವ 18 ಪ್ರಮುಖ ಜಂಕ್ಷನ್‌ಗಳ ಸುಧಾರಣೆಗೆ ಕ್ರಮ ಕೈಗೊಳ್ಳಲು ಆಯುಕ್ತ ಪೊಮ್ಮುಲ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ಗಳು ಗುರುತು
ಈ 18 ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಥಳ ಪರಿಶೀಲಿಸಿ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸೂಚಿಸಿದ್ದು, ಸಂಬಂಧಿಸಿದ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ, ಯಾವ ಇಲಾಖೆಯಿಂದ ಯಾವ ಕಾಮಗಾರಿ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸದೆ ಪರಿಹರಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಸಮಸ್ಯೆಗಳಿಗೆ ಪರಿಹಾರ
ಬೀಡಾಡಿ ವಾಹನಗಳ ತೆರವು, ಕಟ್ಟಡ ತ್ಯಾಜ್ಯ ವಿಲೇವಾರಿ, ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ, ಬಸ್ ನಿಲ್ದಾಣಗಳ ಸ್ಥಳ ಬದಲಾವಣೆ, ನೀರು ಸರಬರಾಜು ಮತ್ತು ಒಳಚರಂಡಿ ಪೈಪ್‌ಲೈನ್‌ಗಳ ದುರಸ್ತಿ, ಜೋತುಬಿದ್ದಿರುವ ತಂತಿಗಳ ತೆರವುವಿಕೆ, ವಿದ್ಯುತ್ ತಂತಿಗಳ ಸರಿಪಡಿಸುವಿಕೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಅಭಿಯಾನವು ಒಂದು ವಾರಕ್ಕೆ ಸೀಮಿತವಾಗದೆ ವಾರ್ಡ್‌ಗಳಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಗುಣಮಟ್ಟವನ್ನು ನಿರಂತರವಾಗಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ಸೂಚಿಸಿದರು.






