ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದುಬಂದಿದ್ದು, ಅರಮನೆ ಮತ್ತು ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಯುವದಸರಾವನ್ನು ನಗರದ ಹೊರಗೆ ಆಯೋಜಿಸಿದ್ದರಿಂದ ನಗರದಲ್ಲಿ ಒತ್ತಡ ಕಡಿಮೆಯಾಗಿದ್ದು, ದೀಪಾಲಂಕಾರ ಮತ್ತು ಆಹಾರ ಮೇಳ ಜನರನ್ನ ಆಕರ್ಷಿಸಿವೆ.
ಮೈಸೂರು (ಅ.23): ನಾಡಹಬ್ಬ ದಸರಾ ನಿಮಿತ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳವಾಗಿದೆ.
9 ದಿನಗಳಲ್ಲಿ ಅರಮನೆ ನೋಡಲು 1.10 ಲಕ್ಷ ಮಂದಿ ಭೇಟಿ
ಕಳೆದ 9 ದಿನಗಳಲ್ಲಿ (ಆಯುಧಪೂಜೆ - ವಿಜಯದಶಮಿಗೆ ರಜೆ) ಅರಮನೆಗೆ 1.10 ಲಕ್ಷ ಮಂದಿ ಭೇಟಿ ನೀಡಿದ್ದರೆ, ಮೃಗಾಲಯಕ್ಕೆ ಒಟ್ಟು 11 ದಿನಗಳಲ್ಲಿ 1.57 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಇದೇ ಅವಧಿಯಲ್ಲಿ ಕಳೆದ ವರ್ಷ ಮೃಗಾಲಯಕ್ಕೆ 1.56 ಲಕ್ಷ ಮಂದಿ ಭೇಟಿ ನೀಡಿದ್ದರು.
ದಸರಾಕ್ಕೆ ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರೆಷ್ಟು?
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಸಾಮಾನ್ಯವಾಗಿ ಅರಮನೆ ಮತ್ತು ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ಆಧರಿಸಿ ಎಷ್ಟು ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿರಬಹುದು ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಈ ಬಾರಿಯು ಮೈಸೂರಿಗೆ ಸುಮಾರು ನಾಲ್ಕೈದು ಲಕ್ಷ ಮಂದಿ ಭೇಟಿ ನೀಡಿದ್ದಾರೆ.
ಯುವದಸರಾ ಮೈಸೂರು ನಗರದ ಹೊರಗೆ ಆಯೋಜಿಸಿದ್ದರಿಂದ ನಗರದ ಒಳ ಭಾಗ ಉಂಟಾಗುವ ಒತ್ತಡ ನಿವಾರಣೆ ಆಯಿತು. ಇನ್ನು ಸಾರ್ವಜನಿಕರು ಹೆಚ್ಚಾಗಿ ಮುಗಿ ಬೀಳುವಂತೆ ಮಾಡಿದ್ದು ಕಣ್ಮನ ತಣಿಸುವ ವಿದ್ಯುತ್ ದೀಪಾಲಂಕಾರ, ಆಹಾರ ಮೇಳ ಮತ್ತು ಅರಮನೆ ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ.
ಅರಮನೆಗೆ ವಾರಾಂತ್ಯದ ಅ.17ರಂದು 15,075 ಮಂದಿ, 18 ರಂದು 17,969 ಮತ್ತು 19 ರಂದು 16,378 ಮಂದಿ ಭೇಟಿ ನೀಡಿದ್ದರು. ಮೃಗಾಲಯಕ್ಕೆ ಆಯುಧಪೂಜೆಯಂದು 20,264 ವಿಜಯದಶಮಿಯಂದು 19,745 ಮಂದಿ ಭೇಟಿ ನೀಡಿದ್ದು, ಇದರಿಂದಾಗಿ 1.93 ಕೋಟಿ ರು. ಆದಾಯ ಸಂಗ್ರಹವಾಗಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ಅನುಷಾ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ₹1.91 ಕೋಟಿ ಸಂಗ್ರಹವಾಗಿತ್ತು.


