Asianet Suvarna News Asianet Suvarna News

ರಂಗಶಂಕರ ನಾಟಕೋತ್ಸವದಲ್ಲಿ ಅರಳುವ ನಾಟಕಗಳ ಪಟ್ಟಿ

ಅಕ್ಟೋಬರ್ - ನವೆಂಬರಿನಲ್ಲಿ ಕಲೆಗಳು ಅರಳುತ್ತದಂತೆ. ಹೌದು. ಅಂಥ ಹಲವು ಪ್ರದರ್ಶನಗಳ ಗುಚ್ಛ ನಿಮಗಾಗಿ. ನಾಟಕ ಪ್ರಿಯರಿಗಾಗಿ. ಅಕ್ಟೋಬರ್ 27ರಿಂದ ನವೆಂಬರ್ 4ರವೆರೆಗ ಬೆಂಗಳೂರಿನ ರಂಗ ಶಂಕರದಲ್ಲಿ ನಡೆಯುವ ನಾಟಕೋತ್ಸವದಲ್ಲಿ ಇದುವರೆಗೆ ಎಲ್ಲಿಯೂ ಪ್ರದರ್ಶಿತವಾಗದ ನಾಟಕಗಳು ಪ್ರದರ್ಶಿತಗೊಳ್ಳುತ್ತದೆ. ಯಾವ ಭಾಷೆಯ, ಯಾವ ನಾಟಕ ಪ್ರದರ್ಶಿತಗೊಳ್ಳಲಿದೆ?

List of plays in Ranga Shankara theater fest 2018 Bengaluru
Author
Bengaluru, First Published Oct 15, 2018, 6:15 PM IST

ಬೆಂಗಳೂರು: ಅಕ್ಬೋಬರ್ 27ರಿಂದ ನವೆಂಬರ್4ರವರೆಗೆ ನಗರದ ಜೆಪಿ ನಗರದಲ್ಲಿರುವ ರಂಗ ಶಂಕರದಲ್ಲಿ ನಡೆಯುವ ನಾಟಕೋತ್ಸವ ರಂಗ ಪ್ರಿಯರ ಮನಸೂರೆಗೊಳ್ಳುವುದು ಗ್ಯಾರಂಟಿ. ಎಲ್ಲಿಯೂ ಪ್ರದರ್ಶಿತವಾಗದ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳುವುದು ಈ ಉತ್ಸವದ ವಿಶೇಷ.

ರಂಗವೇರದೇ ಉಳಿಯುವ ನಾಟಕಗಳು ಇಲ್ಲಿ

ಹಿಂದಿ, ತಮಿಳು, ಕನ್ನಡ..ಸೇರಿ ಯಾವ ಭಾಷೆಯ ನಾಟಕಗಳು ಪ್ರದರ್ಶಿತಗೊಳ್ಳಲಿದೆ? ಯಾರ ನಿರ್ದೇಶನ, ಯಾವ ನಾಟಕದ ತಂಡ ಈ ನಾಟಕಗಳನ್ನು ಪ್ರದರ್ಶಿಸಲಿದೆ. ಇಲ್ಲಿದೆ ನೋಡಿ ಪಟ್ಟಿ..

ಶನಿವಾರ, ಅಕ್ಟೋಬರ್ 27
ರಂಗ ಶಂಕರ 
ಅಹಲ್ಯಾ ಬಿ ಡಿ
ಹೆನ್ರಿಕ್ ಇಬ್ಸೆನ್‌ನ ಹೆಡ್ಡಾ ಗ್ಯಾಬ್ಲರ್ ರೂಪಾಂತರ
ರೂಪಾಂತರ, ನಿರ್ದೇಶನ: ಸುರೇಂದ್ರನಾಥ್
ಕನ್ನಡ, 90 ನಿಮಿಷಗಳು.
13 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಏನು ಕಥೆ?
ಅಹಲ್ಯಾ-ಕನ್ನಡದ ಹೆಡ್ಡಾ ಗ್ಯಾಬ್ಲರ್- ವಿದ್ವಾಂಸನ ಹೆಂಡತಿ. ಜೀವನದಲ್ಲಿ ಏಕತಾನತೆಯಿಂದ ಬೇಸತ್ತ ಹೆಣ್ಣು. ಜೀವನಕ್ಕಾಗಿ ಹಂಬಲಿಸುತ್ತಿದ್ದಾಳೆ. ಮದುವೆಯ ಬಂಧನದಲ್ಲಿ ಸಿಲುಕಿರುವ ಈಕೆ ಇಬ್ಬರು ಗಂಡಸರ ಹಣೇಬರಹವನ್ನು ತಿದ್ದುವ ಹುನ್ನಾರದಲ್ಲಿದ್ದಾಳೆ. ಅದರಲ್ಲಿ ಒಬ್ಬನನ್ನು ಪ್ರೀತಿಸಿ ಅದನ್ನು ಜಗತ್ತಿನ ಮುಂದೆ ಹೇಳಲಾಗದೇ ಒದ್ದಾಡುತ್ತಿದ್ದಾಳೆ. ಇನ್ನೊಬ್ಬ ವ್ಯಕ್ತಿ ಆಕೆಯ ಗಂಡ. ನೈತಿಕ ಚೌಕಟ್ಟುಗಳಲ್ಲಿ ಉಸಿರು ಕಟ್ಟಿಸುವ ಹಾಗೆ ಇರುವ ಸಮಾಜಕ್ಕೆ ವಿರುದ್ಧವಾಗಿ ಆಕೆಗೆ ಎಲ್ಲಾ ಗಂಡಸರೂ ಮಹಾ ಬೋರ್ ಎನಿಸಿ, ಹೆಣ್ಣೊಬ್ಬಳತ್ತ ಆಕರ್ಷಿತಳಾಗುತ್ತಾಳೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಆಕೆಗೆ ಜಗತ್ತಿನ ರೀತಿ-ರಿವಾಜುಗಳು ಅಡ್ಡಿಬರುತ್ತವೆ. ತನ್ನ ಹಣೆಬರಹವನ್ನು ತಾನೆ ಸುಂದರವಾಗಿ ರೂಪಿಸಿಕೊಳ್ಳುತ್ತಾಳೆ, ರಾಮಾಯಣದ ಅಹಲ್ಯೆಯಂತೆ ಅಲ್ಲ.

ರಂಗ ಶಂಕರ: ರಂಗ ಪ್ರಿಯರ ಮನದಣಿಸುವ ಹಬ್ಬ
     
ಭಾನುವಾರ, ಅಕ್ಟೋಬರ್ 28
ಏಸ್ತೆಟಿಕ್ ಡಾನ್ಸ್ ಸ್ಟುಡಿಯೋ, ಕಾಠ್ಮಂಡು 
ರಾಜೇಂದ್ರ ಲಕ್ಷ್ಮಿ
ರಚನೆ: ಸೋಮ್ ನಾಥ್ ಖನಾಳ್, ಸಂಯೋಗ್ ಗುರಾಗೆನ್, ನಮ್ರತಾ
ನಿರ್ದೇಶನ: ನಮ್ರತಾ ಕೆ ಸಿ
ನೇಪಾಳಿ - 65 ನಿಮಿಷಗಳು.
8 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಜೀವನಾಧರಿತ ನ್ಯತ್ಯ ನಾಟಕ:
ದೇವಿ ಷಾ ಅವರ ಜೀವನದ ಘಟನೆಗಳನ್ನು ಆಧರಿಸಿದ ನೃತ್ಯ ನಾಟಕ ನೇಪಾಳಿ ನೃತ್ಯ ಪ್ರಕಾರವನ್ನು ಆಧರಿಸಿ ರೂಪುಗೊಂಡಿದೆ. ಇದೊಂದು ವಿಭಿನ್ನ ಪ್ರಯೋಗ. ನೇಪಾಳಿ ದೊರೆ ವಂಶದಲ್ಲಿ ಮೊತ್ತಮೊದಲಿಗೆ ರಾಜಪ್ರತಿನಿಧಿಯಾಗಿ ನೇಮಕಗೊಂಡವರು ರಾಜೇಂದ್ರ ರಾಜ್ಯಲಕ್ಷ್ಮಿ ಷಾ. ತಮ್ಮ ಎಂಟು ವರ್ಷಗಳ ಆಳ್ವಿಕೆಯಲ್ಲಿ ಪೃಥ್ವಿ ನಾರಾಯಣ ಷಾ ಅವರು ಪ್ರಾರಂಭಿಸಿದ ನೇಪಾಳ ಏಕೀಕರಣ ಚಳುವಳಿಗೆ ಸಾಕಷ್ಟು ಶ್ರಮಿಸಿದರು. 

ಪಾಲ್ಪಾದಲ್ಲಿ ರಾಜಕುಟುಂಬದಲ್ಲಿ ಜನಿಸಿದ ಇವರು ಪೃಥ್ವಿ ನಾರಾಯಣ ಷಾ ಅವರ ಮೊದನೇ ಪುತ್ರ ಪ್ರತಾಪ್ ಸಿಂಹ ಷಾ ಅವರನ್ನು ವಿವಾಹವಾದರು. ತಂದೆಯ ಮರಣಾನಂತರ ಪ್ರತಾಪ ಸಿಂಹ ಷಾ ಅವರು ಗದ್ದುಗೆ ಏರಿದರು. ರಾಜ್ಯಲಕ್ಷ್ಮಿ ಹಾಗೂ ಪ್ರತಾಪ ಸಿಂಹ ಅವರಿಗೆ ರಾಣಾ ಬಹಾದುರ್ ಷಾ ಎನ್ನುವ ಮಗ ಹುಟ್ಟಿದ. ಅವನಿಗೆ ಕೇವಲ ಎರಡು ವರ್ಷಗಳಾಗಿದ್ದಾಗ 26 ವರ್ಷ ವಯಸ್ಸಿನ ಪ್ರತಾಪ ಸಿಂಹ ತೀರಿಕೊಂಡರು. ನಂತರ ರಾಜಪ್ರತಿನಿಧಿಯಾಗಿ ತಮ್ಮ ಮಗ ರಾಣಾ ಬಹಾದ್ದೂರ್ ಷಾ ಹೆಸರಿನಲ್ಲಿ ರಾಜೇಂದ್ರ ಲಕ್ಷ್ಮಿ ದೇವಿ ಷಾ ಅವರು ಆಳ್ವಿಕೆ ನಡೆಸಿದರು. ಈ ಪ್ರಸ್ತುತಿಯನ್ನು ಆ ಘಟನೆಗಳ ಸುತ್ತ ಹೆಣೆಯಲಾಗಿದೆ.

ಸೋಮವಾರ, ಅಕ್ಟೋಬರ್ 29
ರಾಹಿ ಥಿಯೇಟರ್, ಮುಂಬೈ ದೊಹ್ರಿ ಝಿಂದಗಿ
ರಚನೆ: ವಿಜಯ್‌ದಾನ್ ದೇತಾ
ನಿರ್ದೇಶನ: ಗುರ್ಲೀನ್ ಜಡ್ಜ್
ಹಿಂದಿ, ಮಾರವಾಡಿ - 80 ನಿಮಿಷಗಳು.
16 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಜಿಪುಣ ವರ್ತಕರಿಬ್ಬರ ಕಥೆಯಿದು
ಪರಮ ಜಿಪುಣ ವರ್ತಕರಿಬ್ಬರು ಅತ್ಯಂತ ಗಾಢ ಸ್ನೇಹಿತರೂ ಕೂಡ. ಇಬ್ಬರ ಊರಿನ ನಡುವಿನ ಅಂತರ ಇಪ್ಪತ್ನಾಲ್ಕು ಕಿಲೋಮೀಟರ್ ಮಾತ್ರ. ಇಬ್ಬರೂ ಇನ್ನೂ ಜನ್ಮ ತಳೆದಿಲ್ಲದ ತಮ್ಮ ಮಕ್ಕಳ ವಿವಾಹವನ್ನು ನಿರ್ಧಾರ ಮಾಡಿಬಿಡುತ್ತಾರೆ. ಅಲ್ಲಿಯವರೆಗೂ ಯಾವ ಸಮಸ್ಯೆಯೂ ಇಲ್ಲ. ಆದರೆ ಹುಟ್ಟಿದವರಿಬ್ಬರೂ ಹೆಣ್ಣು ಮಕ್ಕಳು. ವರದಕ್ಷಿಣೆಯ ಆಸೆಗೆ ಬಲಿಯಾಗಿ ಒಬ್ಬ ತನ್ನ  ಮಗಳನ್ನು ಮಗ ಎಂದೇ ನಂಬಿಸುತ್ತಾನೆ. ಮದುವೆಯ ರಾತ್ರಿಯವರೆಗೂ ಗುಟ್ಟಾಗಿದ್ದ ಈ ವಿಷಯ ನಂತರ ಬಯಲಾಗಿ ಲೈಂಗಿಕ, ನೈತಿಕ, ಸಾಮಾಜಿಕ ನಿಯಮಗಳಿಗೆ ಒಂದು ಸವಾಲಾಗಿ ನಿಲ್ಲುತ್ತದೆ.

ಮಂಗಳವಾರ, ಅಕ್ಟೋಬರ್ 30
ತಹಾತೋ, ಬೆಂಗಳೂರು
ಅನಿಮಲ್ ಫಾರ್ಮ್
ರಚನೆ: ನೆಲ್ಸನ್ ಬಾಂಡ್, ಜಾರ್ಜ್ ಆರ್ವೆಲ್
ನಿರ್ದೇಶನ: ಪ್ರಶಾಂತ್ ನಾಯರ್
ಇಂಗ್ಲಿಷ್, ಕನ್ನಡ, ಹಿಂದಿ - 90 ನಿಮಿಷಗಳು.
8 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಫಾರ್ಮ್‌ ಕಥೆ ಏನು?
ಈ ಫಾರ್ಮ್ ಒಂದು ಕಲ್ಪನೆಯ ಪ್ರತಿರೂಪ. ಒಂದು ತೀಕ್ಷ್ಣ, ವ್ಯಂಗ್ಯ. ಮನುಷ್ಯ ಮಾಲೀಕನ ವಿರುದ್ಧ ಪ್ರಾಣಿಗಳು ಸಿಡಿದೆದ್ದು ತಮ್ಮ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಕತೆ ಇದು. ಜಾರ್ಜ್ ಆರ್ವೆಲ್ ರಷ್ಯಾದ ಕಮ್ಯೂನಿಸ್ಟ್ ದಬ್ಬಾಳಿಕೆಯ ವಿರುದ್ಧ ಬರೆದ ಕತೆ. ಇದನ್ನು ಬರೆದು ವರ್ಷಗಳೇ ಕಳೆದರೂ ಜಗತ್ತಿನಲ್ಲೆಡೆ ರಾಜಕೀಯ ವ್ಯವಸ್ಥೆಯಲ್ಲಿ ಈ ಕತೆಯ ಹೋಲಿಕೆ ಕಂಡು ಬಂದು ಇದೊಂದು ಕಾಲಾತೀತ ಸಾಮಾಜಿಕ-ರಾಜಕೀಯ ವಿಡಂಬನೆ ಹಾಗೂ ವ್ಯಾಖ್ಯಾನವಾಗಿ ಉಳಿದುಕೊಂಡಿದೆ. ಇಲ್ಲಿ ಪ್ರಸ್ತುತವಾಗುವ ಅನಿಮಲ್ ಫಾರ್ಮ್ ನಾಟಕವು ಮೂಲ ವಸ್ತುವಿಗೆ ಬದ್ಧವಾಗಿ ಪ್ರಸ್ತುತ ಸನ್ನಿವೇಷಕ್ಕೆ ತನ್ನನ್ನು ಒಗ್ಗಿಸಿಕೊಂಡಿದೆ. ಒಂದು ಮುಖ್ಯ ಪ್ರಶ್ನೆ - ಈಗ ಆಗುತ್ತಿರುವುದೆಲ್ಲವೂ ಭೂತಕಾಲದಲ್ಲಿ ಆಗಿಯೇ ಹೋಗಿದೆಯೇನು? ನಿರಾಕರಣೆಯಲ್ಲಿ ಬದುಕುತ್ತಾ ಮತ್ತವೇ ತಪ್ಪುಗಳನ್ನು ಮಾಡುತ್ತಿದ್ದೇವೇನು ನಾವು? ಸಂಪೂರ್ಣ ಅಧಿಕಾರ ಸಂಪೂರ್ಣ ಭ್ರಷ್ಟತೆಯನ್ನು ಹುಟ್ಟಿಸಿಯೇ ತೀರುತ್ತದೇನು? ನಾಯಕನೊಬ್ಬನ ಗುಣಗಳು ನಮ್ಮನ್ನು ಎಚ್ಚರಿಸಬೇಕೇನು? ಹೋಗಲಿ ಬಿಡಿ.

ಬುಧವಾರ,  ಅಕ್ಟೋಬರ್ 31
ದಿ ಲಾಸ್ಟ್ ಪೋಸ್ಟ್ ಇನಿಷಿಯೇಟೀವ್, ಬೆಂಗಳೂರು
ಐ ಆಮ್ ನಾಟ್ ದೇರ್
ಗುರ್ದೀಪ್ ಕೌರ್ ಭಟ್ಟಿ ಅವರ ಭೇಜ್ಝತಿ ಜೋ ಅನ್ನಾ ರೂಸ್ ಅವರ ಹೌ ಟು ಸಪ್ರೆಸ್ ವುಮೆನ್ಸ್ ರೈಟಿಂಗ್ಸ್ ಆಧರಿಸಿದೆ.
ರೂಪಾಂತರ ಮತ್ತು ನಿರ್ದೇಶನ: ದೀಪಿಕಾ ಅರವಿಂದ್
ಇಂಗ್ಲಿಷ್, ಕನ್ನಡ, ಹಿಂದಿ - 70 ನಿಮಿಷಗಳು.
13 ವರ್ಷ ಮೇಲ್ಪಟ್ಟ ಪ್ರೇಕ್ಷಕರಗೆ ಸೂಕ್ತ

ಸೆನ್ಸಾರ್ ಕಥಾ ಹಂದರ
ಮಹಿಳಾ ಸಾಹಿತ್ಯವನ್ನು ಸೆನ್ಸಾರ್ ಮಾಡುವ ಎಂಟು ಹಂತಗಳನ್ನು ಆಧರಿಸಿ ಈ ನಾಟಕ ರೂಪುಗೊಂಡಿದೆ ಗುರ್ದೀಪ್ ಕೌರ್ ಭಟ್ಟಿ ಮತ್ತು ಜೋ ಅನ್ನಾ ರೂಸ್ ಅವರ ಸಾಹಿತ್ಯದಿಂದ ಶುರುವಾಗಿ ಹೆಣ್ಣು ಮಕ್ಕಳ ಪ್ರಾಮಾಣಿಕ ದನಿಗಳನ್ನು, ಅವರ ಕತೆ, ಅಳಲು, ದುಃಖ, ತುಮುಲಗಳನ್ನು ಹೇಗೆ ವ್ಯವಸ್ಥಿತವಾಗಿ ದಮನ ಮಾಡಲಾಗುತ್ತದೆ ಎನ್ನುವುದನ್ನು ನಾಟಕ ತೋರಿಸುತ್ತದೆ. ಇಬ್ಬರು ನಟಿಯರ ನಡುವೆ ನಡೆಯುವ ಈ ಪ್ರಸ್ತುತಿ ವಿಚಿತ್ರ ಹಾಸ್ಯ ಹಾಗೂ ಮೊನಚಾದ ವ್ಯಂಗ್ಯದಿಂದ ಕೂಡಿದ್ದು ಹೆಣ್ಣು ಮಕ್ಕಳ ಅಭಿವ್ಯಕ್ತಿಯನ್ನು ಹೇಗೆ ಎಂಟು ಹಂತಗಳಲ್ಲಿ ಸೆನ್ಸಾರ್ ಮಾಡಬಹುದು ಎನ್ನುವುದನ್ನು ಹೇಳುತ್ತದೆ. ಕಲ್ಪನೆ, ವಾಸ್ತವ ಹಾಗೂ ಸಂಭವನೀಯ ಘಟನೆಗಳಿಂದ ಕೂಡಿದ ಈ ನಾಟಕ ಸಂಗೀತ ಹಾಗೂ ಚಲನೆಯನ್ನು ಹೇರಳವಾಗಿ ಬಳಸಿಕೊಂಡಿದೆ.

ಗುರುವಾರ, ನವೆಂಬರ್ 1
ದಿ ಲಾಫಿಂಗ್ ಕ್ಯಾವೆಲಿಯರ್, ಬೆಂಗಳೂರು
ಅಮ್ಮಿ ಜಾನ್
ರಚನೆ: ದಾರಿಯೋ ಫೋ ಮತ್ತು ಫ್ರಾಂಕಾ ರಾಮೆ
ರೂಪಾಂತರ ಮತ್ತು ನಿರ್ದೇಶನ: ಸತ್‌ಚಿತ್ ಪುರಾಣಿಕ್
ಕನ್ನಡ, ದಖ್ಖನಿ ಉರ್ದು - 75 ನಿಮಿಷಗಳು.
12 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಅಮ್ಮ ಜಾನ್ ಕಥೆ ಏನು?
ಹೆಸರಿಲ್ಲದ ಮಹಿಳೆಯೊಬ್ಬಳ ಸ್ವಗತ ಈ ನಾಟಕ. ಅಮಿನಾ ಝಾಹಿದಾಳನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ಬೆಂಗಳೂರಿನ ಟ್ಯಾನೆರಿ ರಸ್ತೆಯಲ್ಲಿ ಆಕೆ ಅಮ್ಮಿ ಜಾನ್ ಎಂದೇ ಹೆಸರುವಾಸಿ. ಆಕೆಗೆ ಗಾಳಿ ಸುದ್ದಿ, ಗಾಸಿಪ್ಪುಗಳು ಬಹಳ ಇಷ್ಟ. ಅಲ್ಲದೇ ತನ್ನ ಹಳೆಯ ಸೈಬರ್ ಕೆಫೆಯಿಂದ ಸಿಗುವ ಅರೆಬೆಂದ ಹಸಿ ಹಸಿ ಸುದ್ದಿಗಳನ್ನು, ತನ್ನ ಸ್ಮಾರ್ಟ್ ಫೋನಿಗೆ ಬರುವ ಸತ್ಯ ಮತ್ತು ಸುಳ್ಳು ಸುದ್ದಿ ಎರಡನ್ನೂ ಒಂದೇ ಅಳತೆಯಲ್ಲಿ ತೂಗುತ್ತಾಳೆ. ಮಗ ಮೆಹಮೂದನಿಗೆ ರುಚಿಕಟ್ಟಾದ ಅಡುಗೆ ಮಾಡಿ ಬಡಿಸುವುದೆಂದರೆ ಆಕೆಗೆ ಬಹಳ ಇಷ್ಟ. ಅವನಿಗೋ ಮಲಬದ್ಧತೆಯ ಸಮಸ್ಯೆ. ಅವನಿಗಾಗಿ ವಿಶೇಷವಾಗಿ ಅಡುಗೆಯನ್ನು ತಯಾರು ಮಾಡಿಕೊಂಡು ಹೋಗಬೇಕೆಂದಾಗ ಅವಳ ಮಗ ಜೈಲಿನಲ್ಲಿರುವುದು ತಿಳಿಯುತ್ತದೆ. ಅವನು ಆ್ಯಂಟಿ ನ್ಯಾಷನಲ್, ಅರ್ಬನ್ ನಕ್ಸಲ್, ಭಯೋತ್ಪಾದಕ ಅಂತೆಲ್ಲಾ ಬಿರುದು ಹೊತ್ತಿದ್ದಾನೆ. ಜನರು ಏನೇನೆಲ್ಲಾ ಯೋಚಿಸುತ್ತಿದ್ದಾರೆಂದು ತಿಳಿಯಲು ಜನರ ಮನಸ್ಸನ್ನು ಮ್ಯಾಪ್ ಮಾಡಲಾಗುತ್ತಿದೆ. ಮೆಹಮೂದನ ಮನಸ್ಸಿನಲ್ಲಿರುವುದು ಹಂದಿ ಬಿರಿಯಾನಿಯ ಆಲೋಚನೆ ಮಾತ್ರ. ದೇಶದಲ್ಲಿ ಬಹಿಷ್ಕೃತಗೊಂಡಿರುವ ಮಾಂಸವೊಂದರ ಆಲೋಚನೆ ಸುಳಿದರೂ ಆತನಿಗೆ ಬಿಡುಗಡೆಯಿಲ್ಲ. ಕನಸುಗಳು ಹೇಗೆ ಹುಟ್ಟುತ್ತವೆ, ಹೇಗೆ ಬೆಳೆದುಕೊಳ್ಳುತ್ತವೆ, ಹೇಗೆ ಕೊನೆಗೊಳ್ಳುತ್ತವೆ ಎಂದು ಅಮ್ಮಿ ಜಾನ್ ತಿಳಿಸುತ್ತಾಳೆ.

ಶುಕ್ರವಾರ, ನವೆಂಬರ್ 2
ಇಂಡಿಯನೋಸ್ಟ್ರಮ್, ಪಾಂಡಿಚೇರಿ
ಚಾಂಡಾಲ, ಇಂಪ್ಯೂರ್
ವಿಲಿಯಮ್ ಷೇಕ್ಸ್‌ಪಿಯರನ ರೋಮಿಯೋ ಜೂಲಿಯೆಟ್ ಆಧಾರಿತ
ನಿರ್ದೇಶನ: ಕುಮಾರನ್ ವಲ್ಲವನ್
ತಮಿಳು - 180 ನಿಮಿಷಗಳು.
12 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ದೆವ್ವ ಮತ್ತು ದ್ವೇಷ
ಭಾರತದ ಒಂದು ಚಂದದ ಊರಿನಲ್ಲಿ ಕೇವಲ ದ್ವೇಷ ಕಾರುತ್ತಾ ಬದುಕುವ ಹಳೇ ದೆವ್ವವೊಂದು ತನ್ನ ಪವಿತ್ರ ಸಿಂಹಾಸನದ ಮೇಲೆ ಕೂತಿದೆ. ಜಗತ್ತನ್ನು ಅದು ನಾಲ್ಕು ವರ್ಣಗಳಾಗಿ ವಿಂಗಡಿಸಿದೆ. ಮೇಲೆ ಅತ್ಯಂತ ಪವಿತ್ರ ಸ್ಥಳದಲ್ಲಿ ಬ್ರಾಹ್ಮಣರಿದ್ದಾರೆ, ನಂತರ ವೈಶ್ಯರು, ನಂತರ ಕ್ಷತ್ರಿಯರು ಆಮೇಲೆ ಗುಲಾಮರಾದ ಶೂದ್ರರು. ಇನ್ನೊಂದು ವರ್ಗವಿದೆ, ಮುಟ್ಟಲೂ ಅರ್ಹರಲ್ಲದ ಚಾಂಡಾಲರು. ಅವರನ್ನು ಎಲ್ಲದರಿಂದಲೂ ಪ್ರತ್ಯೇಕವಾಗಿರಿಸಿರುವುದು ಅನಿವಾರ್ಯ. ಅವರು ಪಾವಿತ್ರ್ಯತೆಯನ್ನು ಹಾಳು ಮಾಡುತ್ತಾರೆ. ನಡೆಯುವ ನೆಲವನ್ನು, ಉಸಿರಾಡುವ ಗಾಳಿಯನ್ನು, ಕುಡಿಯುವ ನೀರನ್ನು, ತಮ್ಮ ಸಂಪರ್ಕಕ್ಕೆ ಬಂದ ಮನಸ್ಸನ್ನೂ ಅಪವಿತ್ರಗೊಳಿಸುತ್ತಾರೆ.

ಶನಿವಾರ, ನವೆಂಬರ್ 3
ಥರ್ಡ್ ಸ್ಪೇಸ್ ಕಲೆಕ್ಟೀವ್, ನವ ದೆಹಲಿ
ಮಹಿಷ್
ರಚನೆ: ಯೂಜೀನ್ ಅಯುನೆಸ್ಕೋ
ನಿರ್ದೇಶನ: ನೀಲ್ ಸೇನ್ ಗುಪ್ತಾ
ಹಿಂದಿ - 90 ನಿಮಿಷಗಳು.
15 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಪತ್ರಕರ್ತೆ, ಮಹಿಷ ಮತ್ತು ಕೋಣ
ಹಿಂದಿ ಪತ್ರಿಕೆಯೊಂದರ ಕಚೇರಿಯಲ್ಲಿ ವಂದನಾ ಉದ್ಯೋಗಿ. ಪೂಜಾ ಪಂಡಾಲ್ ಒಂದರ ಹತ್ತಿರ ತನ್ನ ಸ್ನೇಹಿತ ಆದರ್ಶನನ್ನು ಭೇಟಿಯಾಗಲು ಹೋಗುವಾಗ ಊರಿಗೆ ಊರೇ ಬೆಚ್ಚಿಬೀಳುವಂತಹ ಸುದ್ದಿ ತಿಳಿಯುತ್ತದೆ. ಕೋಣವೊಂದು ಊರಿನಲ್ಲಿ ನಿಯಂತ್ರಣವಿಲ್ಲದೆ ಸೊಕ್ಕಿನಿಂದ ಅಲೆಯುತ್ತಿದೆ. ಪಂಡಾಲ್‌ಗೆ ಸಾಗಿಸುತ್ತಿದ್ದ ತುಲಸಿ ಕುಂಡವನ್ನು ನಾಶ ಮಾಡಿದೆ. ಈ ಕೋಣದ ಗುರುತು ತಿಳಿಯುವುದು ದುಸ್ತರವಾದಾಗ ಇನ್ನೊಂದು ಸತ್ಯ ಗೋಚರಿಸುತ್ತದೆ - ಊರಿನ ಜನ ಒಬ್ಬೊಬ್ಬರಾಗಿ ಮಹಿಷ ಎಂಬ ಕೋಣಗಳಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ಮಹಿಷಾಸುರ ಎಲ್ಲರನ್ನೂ ತನ್ನಂತೆ ಮಾಡುತ್ತಿದ್ದಾನೆ. ಆದರೆ ಮನುಷ್ಯ ಸಂಕುಲ ಈ ರೀತಿ ಕೊನೆಗೊಳ್ಳುವುದನ್ನು ಒಪ್ಪದ ಅಸಹಾಯಕ, ಅಶಕ್ತ ವಂದನಾ ಹೋರಾಡುತ್ತಾಳೆ. ಈ ಎಲ್ಲಾ ಸಂಕೇತಗಳು ಏನು ಹೇಳುತ್ತವೆ? ಈ ಮಹಿಷ ಯಾರು ಮತ್ತು ಮನುಷ್ಯ ಯಾರು? ಎಲ್ಲಕ್ಕೂ ಮಿಗಿಲಾಗಿ ವಂದನಾ ಯಾರು?

ಭಾನುವಾರ, ನವೆಂಬರ್ 4
ಟ್ಯಾಡ್‌ಪೋಲ್ ರೆಪರ್ಟರಿ, ನವ ದೆಹಲಿ
ರಾಕ್ಷಸ್
ಯೆವೆನಿ ಷ್ವಾರ್ಟ್ಜ್ ಅವರ ದಿ ಡ್ರಾಗನ್ ಆಧರಿತ
ರೂಪಾಂತರ: ಇರಾವತಿ ಕಾರ್ಣಿಕ್
ನಿರ್ದೇಶನ: ಬಿಕ್ರಮ್ ಘೋಷ್
ಹಿಂದಿ - 85 ನಿಮಿಷಗಳು.
12 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತ

ಇದು ರಾಕ್ಷಸನ ಕಥೆಯೇ?
ಪ್ರವಾಸಿಯೊಬ್ಬ ತಿರುಗಾಡುತ್ತಾ ನೂರಾರು ವರ್ಷಗಳಿಂದ ರಾಕ್ಷಸನೊಬ್ಬನ ಆಳ್ವಿಕೆಯಲ್ಲಿರುವ ಊರಿಗೆ ಬಂದು ಸೇರುತ್ತಾಳೆ. ರಾಕ್ಷಸನಿಂದ ನಿಮಗೆಲ್ಲಾ ಮುಕ್ತಿ ಕೊಡಿಸುತ್ತೇನೆ ಎಂದು ಪ್ರವಾಸಿ ವೀರಾ ಹೇಳಿದಾಗ ಜನ ಅವಳನ್ನು ಗೇಲಿ ಮಾಡುತ್ತಾರೆ. ಅವರಿಗೆ ರಾಕ್ಷಸನಿಂದ ಮುಕ್ತಿ ಬೇಕಾಗಿಲ್ಲ. ಆದರೆ ಮುಕ್ತಿ ಕೊಡಿಸಿಯೇ ತೀರುತ್ತೇನೆಂದು ವೀರಾ ಪಣ ತೊಡುತ್ತಾಳೆ. ತನ್ನ ಗುರಿ ಸಾಧಿಸುವ ಸಮಯದಲ್ಲಿ ಅವಳಿಗೆ ಬೇಕಾದ ಆಯುಧಗಳನ್ನು ಒದಗಿಸಿಕೊಡಲು ಕಟಿಬದ್ಧರಾಗಿರುವವರು ಸಿಗುತ್ತಾರೆ. ಆದರೆ ಗುರಿ ಮುಟ್ಟಲು ಅಷ್ಟು ಸಾಕೇನು? ಯೆವೆನಿ ವಿರಚಿತ ಈ ಕತೆಯಲ್ಲಿ ಬಣ್ಣ ಬಣ್ಣದ ವಿಚಿತ್ರ ಜೀವಿಗಳಿವೆ. ರಮ್ಯತೆ, ಕಲ್ಪನೆ, ಪ್ರೀತಿ, ತಮಾಷೆ ಎಲ್ಲವನ್ನೂ ಒಳಗೊಂಡ ಈ ನಾಟಕ ಸ್ವಾತಂತ್ರ್ಯದ ಬೆಲೆಯನ್ನು ಜನರಿಗೆ ತಿಳಿಯಪಡಿಸುತ್ತದೆ. ಮುಕ್ತಿಯನ್ನು ಕೊಡಿಸುತ್ತಲೇ ಈ ರಾಕ್ಷಸ ನಮ್ಮೊಳಗೇ ಬದುಕಿದ್ದಾನೆನ್ನುವ ಆಶ್ಚರ್ಯಕರ ಕಟು ಸತ್ಯವನ್ನೂ ಹೇಳುತ್ತದೆ.

ಇತರೆ ಚಟುವಟಿಕೆಗಳು
ಅಕ್ಟೋಬರ್ 27 ಮತ್ತು ನವೆಂಬರ್ 4 ಸಂಜೆ 5ರಿಂದ 6.30ರವರೆಗೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.
- ಸಾಮಾಜಿಕ ಮಾಧ್ಯಮಗಳಿಂದ ಸಾರ್ವಜನಿಕ ಅವ್ಯವಸ್ಥೆಯನ್ನುಂಟು ಮಾಡಲು ಸಾಧ್ಯ. ಹಾಗಾಗಿ ಇದನ್ನು ಅಂಕೆಯಲ್ಲಿಡಲು ಸೆಕ್ಷನ್ 124ಆ ಸರಿಯಾದ ಮಾರ್ಗ.
- ಲಿಂಗಾಧಾರಿತ ಮೀಸಲಾತಿಯ ಅಗತ್ಯವಿದೆ. ಯಾಕೆಂದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅರ್ಹತೆ ಅಥವ ಯೋಗ್ಯತೆ ಅಸಾಧು. ಈ ಚರ್ಚೆಗಳನ್ನು ತಕ್ಷಶಿಲಾ ಸಂಸ್ಥೆ ರೂಪಿಸಿದೆ.

ನಾಟಕ ಓದುಗಳು
ನಾಟಕಗಳ ತಯಾರಾದ ಓದುಗಳು. ಪ್ರತಿರೋಧವನ್ನು ಆಚರಿಸುವ, ಬಹಿಷ್ಕರಿಸಿದ ಕೃತಿಗಳ ಪುನರ್ ಅವಲೋಕನ.
ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00ರವರೆಗೆ.
ಅಕ್ಟೋಬರ್ 27, ಶನಿವಾರ
ಗ್ರೀಕ್ ನಾಟಕ ಲೈಸಿಸ್ಟ್ರಾಟ, ರೂಪಾಂತರ ಮತ್ತು ನಿರ್ದೇಶನ ಶ್ರೀ ವಂಶಿ ಮಟ್ಟ

ಅಕ್ಟೋಬರ್ 28, ಭಾನುವಾರ
ರಾಮ್‌ಜೀ ಆಯೇಂಗೆ
ರಚನೆ ಮತ್ತು ನಿರ್ದೇಶನ ಅಭಿನವ್ ಗ್ರೋವರ್
 
ಅಕ್ಟೋಬರ್ 28, ಭಾನುವಾರ
ಸುಧನ್ವ ದೇಶಪಾಂಡೆ, ದೆಹಲಿ 
ಬೀದಿನಾಟಕಗಳ ಮೂಲಕ ಸಾಂಸ್ಕೃತಿಕ ಪ್ರತಿರೋಧ

ಅಕ್ಟೋಬರ್ 29, ಸೋಮವಾರ
ಶೇಬಾ ಚಚ್ಚಿ, ದೆಹಲಿ
ಸಮಕಾಲೀನ ಚಿತ್ರಕಲೆ ಮತ್ತು ವಿನ್ಯಾಸ ಕಲೆಗಳಲ್ಲಿ ಸಾಂಸ್ಕೃತಿಕ ಪ್ರತಿರೋಧ

ಅಕ್ಟೋಬರ್ 30, ಮಂಗಳವಾರ
ಸುನೀಲ್ ಶಾನಬಾಗ್, ಮುಂಬೈ
ಸಾಂಸ್ಕೃತಿ ಬಹುತ್ವಕ್ಕೆ ಸ್ವತಂತ್ರ ಅವಕಾಶಗಳನ್ನು ನಿರ್ಮಿಸಿಕೊಳ್ಳುವ ತಂತ್ರಗಳು

ಅಕ್ಟೋಬರ್ 31, ಬುಧವಾರ
ಅರ್ಷಿಯಾ ಸತ್ತರ್, ಬೆಂಗಳೂರು
ಪುರಾಣಗಳಲ್ಲಿ ಪ್ರತಿರೋಧ

ನವೆಂಬರ್ 1, ಗುರುವಾರ
ಸಮಿಕ್ ಬಂಡೋಪಾಧ್ಯಾಯ, ಕೊಲ್ಕತ್ತಾ
ಬಂಗಾಲಿ ಸಿನೆಮಾ, ಸಾಹಿತ್ಯ, ನಾಟಕಗಳಲ್ಲಿ ಪ್ರತಿರೋಧದ ಅಲೆ.

ನವೆಂಬರ್, 2, ಶುಕ್ರವಾರ
ಇಪಿ ಉಣ್ಣಿ, ಕೇರಳ
ವ್ಯಂಗ್ಯ ಚಿತ್ರ ಮತ್ತು ಸಂಪಾದಕೀಯಗಳ ಮೂಲಕ ಪ್ರತಿರೋಧ

ನವೆಂಬರ್ 3, ಶನಿವಾರ
ಆತಂಕವಾದಿಯ ಆಕಸ್ಮಿಕ ಸಾವು
ಮೂಲ ಡಾರಿಯೋ ಫೋ, ಕನ್ನಡ ರೂಪಾಂತರ ಸುರೇಂದ್ರನಾಥ್
ನಿರ್ದೇಶನ ಸಂದೀಪ್ ಪೈ. ರಂಗಸಿರಿ ತಂಡದ ಪ್ರಸ್ತುತಿ.

ಪ್ರತಿರೋಧ ಮತ್ತು ಕಲೆ - ಮಾತುಕತೆ. 
ಪ್ರತಿ ದಿನ ಸಂಜೆ ರಿಂದ 5ರಿಂದ 6.30ರವರೆಗೆ

ಇವಲ್ಲದೇ ಪ್ರತಿ ದಿನ ಮಧ್ಯಾಹ್ನ 3ರಿಂದ ಚಲನಚಿತ್ರಗಳ ಪ್ರದರ್ಶನ.

Follow Us:
Download App:
  • android
  • ios