ಮಂಗಳೂರು(ಮೇ 17): ಮದ್ಯಪ್ರಿಯರಿಗೆ ಹಿಂದೆಲ್ಲ ಸಖತ್‌ ‘ಕಿಕ್‌’ ನೀಡುತ್ತಿದ್ದ ಮದ್ಯದಂಗಡಿಗಳು ಈಗ ಲಾಕ್‌ಡೌನ್‌ ಅವಧಿಯಲ್ಲಿ ಸಾಕಷ್ಟುಕಿಕ್‌ ಏರಿಸುತ್ತಿಲ್ಲ. ಮದ್ಯದಂಗಡಿಗಳಿಗೂ, ಸರ್ಕಾರಕ್ಕೂ ಸಾಕಷ್ಟುಕಾಸು ದಕ್ಕುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮದ್ಯ ಮಾರಾಟ ಅರ್ಧಕ್ಕರ್ಧ ಇಳಿದುಬಿಟ್ಟಿದೆ!

ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ನಿಟ್ಟಿನಲ್ಲಿ ಎರಡನೇ ಲಾಕ್‌ಡೌನ್‌ ಅವಧಿಯ ಬಳಿಕ ರಾಜ್ಯದಲ್ಲಿ ಮೇ 4ರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಸೇರಿದಂತೆ ವೈನ್‌ಶಾಪ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಕೆಲ ದಿನಗಳ ಬಳಿಕ ಬಾರ್‌ಗಳು ಕೂಡ ಮದ್ಯ ಪಾರ್ಸೆಲ್‌ಗೆ ಓಪನ್‌ ಆದವು. ಆದರೆ ಮೊದಲ ದಿನ ಸೇಲ್‌ ಆದದ್ದು ಬಿಟ್ಟರೆ ದಿನಗಳೆದಂತೆ ‘ಎಣ್ಣೆ’ ವ್ಯಾಪಾರ ಕುಸಿತದ ಹಾದಿಯಲ್ಲೇ ಇದೆ. ಜನಸಾಮಾನ್ಯರು ಮದ್ಯ ಕೊಳ್ಳಲು ಹಣವಿಲ್ಲದೆ ಚಿಂತಿತರಾಗಿದ್ದರೆ, ಬಾರ್‌- ವೈನ್‌ಶಾಪ್‌ ಮಾಲೀಕರು ಮದ್ಯ ಸೇಲ್‌ ಆಗದ ಚಿಂತೆಯಲ್ಲಿದ್ದಾರೆ.

ಕೊರೋನಾ ನಂಟು: ಎಜೆ ಆಸ್ಪತ್ರೆಯ 25 ಸಿಬ್ಬಂದಿ ಅಬ್ಸರ್ವೇಶನ್‌ನಲ್ಲಿ

ಶೇ.40 ಆದಾಯ ಖೋತಾ!: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 4ರ ಬಳಿಕ ಒಟ್ಟು 438 ಮದ್ಯ ಸನ್ನದುಗಳು ತೆರೆದಿವೆ. ಒಟ್ಟಾರೆಯಾಗಿ ತಿಂಗಳಿಗೆ ಏನಿಲ್ಲವೆಂದರೂ 2ರಿಂದ 2.20 ಲಕ್ಷ ಕೇಸ್‌ (ಒಂದು ಕೇಸ್‌ ಎಂದರೆ 9 ಲೀಟರ್‌ ಮದ್ಯ) ಮದ್ಯ ಮಾರಾಟವಾಗುತ್ತಿತ್ತು. ಆದರೆ ಮೇ 15ರವರೆಗೆ ಕೇವಲ 70 ಸಾವಿರ ಕೇಸ್‌ಗಳಷ್ಟುಮಾತ್ರ ಮಾರಾಟವಾಗಿದೆ ಎಂದು ದ.ಕ. ಜಿಲ್ಲಾ ಅಬಕಾರಿ ಉಪಾಯುಕ್ತೆ ಶೈಲಜಾ ಕೋಟೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

‘ಬಡವರ ಡ್ರಿಂಕ್‌’ಗೆ ಹೆಚ್ಚು ಲಾಸ್‌: ಜಿಲ್ಲೆಯಲ್ಲಿ ಅತಿಹೆಚ್ಚು ಸೇಲಾಗುತ್ತಿದ್ದುದು ಬಡವರ ಡ್ರಿಂಕ್‌ ‘ಮೈಸೂರು ಲ್ಯಾನ್ಸರ್‌’. ಆದರೆ ಈಗ ಈ ಬ್ರ್ಯಾಂಡ್‌ಗಳ ಸೇಲ್‌ಗೆ ಬಹುದೊಡ್ಡ ಹೊಡೆತ ಬಿದ್ದಿರುವುದರಿಂದಲೇ ಒಟ್ಟಾರೆ ಸೇಲ್‌ನಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ. ಇನ್ನುಳಿದಂತೆ ದುಬಾರಿ ಸ್ಕಾಚ್‌ಗಳು, ಬಿಯರ್‌ ಮಾರಾಟವೂ ಸ್ವಲ್ಪ ಮಟ್ಟಿಗೆ ತಗ್ಗಿದೆ ಎನ್ನುತ್ತಾರೆ ಶೈಲಜಾ ಕೋಟೆ. ಅಂದರೆ ಸರ್ಕಾರದ ಬೊಕ್ಕಸಕ್ಕೆ ಅಬಕಾರಿಯಿಂದ ಹೆಚ್ಚಿನ ಆದಾಯ ಬರುತ್ತಿದ್ದುದು ಬಡ ವರ್ಗದಿಂದಲೇ ಎನ್ನುವುದನ್ನು ತೋರಿಸಿಕೊಟ್ಟಿದೆ ಈ ಲಾಕ್‌ಡೌನ್‌.

ಮೊದಲ ದಿನವೇ ಡೌನ್‌!:

2ನೇ ಲಾಕ್‌ಡೌನ್‌ ಮುಕ್ತಾಯವಾಗಿ ಮೇ 4ರಂದು ವೈನ್‌ಶಾಪ್‌ಗಳು ಓಪನ್‌ ಆದ ಮೊದಲ ದಿನ ಜಿಲ್ಲಾದ್ಯಂತ ಮದ್ಯ ಸನ್ನದುಗಳ ಎದುರು ಮಾರುದ್ದದ ಕ್ಯೂ ಕಂಡುಬಂದಿತ್ತು. ಅಂದು ಮದ್ಯ ಭರಪೂರ ಸೇಲಾದೀತು ಎಂದೇ ಭಾವಿಸಲಾಗಿತ್ತು. ಆದರೆ ವಾಸ್ತವದಲ್ಲಿ ಸರಾಸರಿ ಮದ್ಯ ವ್ಯಾಪಾರವಷ್ಟೆಆಗಿತ್ತು. ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ದಿನನಿತ್ಯ ಸರಾಸರಿ 5ರಿಂದ 7 ಕೋಟಿ ರು. ಆದಾಯ ಬರುತ್ತಿತ್ತು. ಮೇ 4ರಂದು ಕೂಡ ಆದದ್ದು 7 ಕೋಟಿ ರು. ಮಾತ್ರ. ಅದಾಗಿ ದಿನ ಕಳೆಯುತ್ತಿದ್ದಂತೆ ಜನರು ವೈನ್‌ಶಾಪ್‌ಗಳ ಕಡೆ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾರೆ.

ಉಣ್ಣಲೂ ಕಾಸಿಲ್ಲ, ಕುಡಿಯೋದೆಲ್ಲಿ?

ನಾವು ಇಂದು ದುಡಿದು ಇಂದೇ ಉಣ್ಣೋರು. ಲಾಕ್‌ಡೌನ್‌ ಶುರುವಾದಾಗಿನಿಂದ ಕೆಲಸವಿಲ್ಲ, ಉಣ್ಣಲೂ ಗತಿಯಿಲ್ಲ. ಇನ್ನು ಕುಡಿಯಲು ಕಾಸೆಲ್ಲಿ? ಮಕ್ಕಳಿಗೆ ಹಾಲು ತರುವುದೇ ಕಷ್ಟವಾಗಿದೆ. ಹಿಂದೆ ಹೋಲಿಕೆ ಮಾಡಿದರೆ ಈಗ ಸ್ವಲ್ಪವಾದರೂ ಪರವಾಗಿಲ್ಲ. ಆದರೂ ಕುಡಿಯುವಷ್ಟುಹಣ ಸಿಗುತ್ತಿಲ್ಲ ಎಂದು ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವ ಉತ್ತರ ಕರ್ನಾಟಕ ಮೂಲದ ಹನುಮಂತಪ್ಪ ಅಳಲು ತೋಡಿಕೊಂಡರು.

ವಲಸೆ ಕಾರ್ಮಿಕರೇ ‘ಬಾಸ್‌’ ಗುರು!

ಜಿಲ್ಲೆಯಲ್ಲಿ ಉತ್ತರ ಭಾರತದ ವಲಸೆ ಕಾರ್ಮಿಕರು ಸುಮಾರು 35 ಸಾವಿರಕ್ಕೂ ಹೆಚ್ಚಿದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಅರ್ಧಕ್ಕರ್ಧ ಮಂದಿ ಈಗಾಗಲೇ ತಮ್ಮೂರಿಗೆ ತೆರಳಿದ್ದಾರೆ. ಇದು ಮದ್ಯ ಮಾರಾಟದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ನಗರದ ವೈನ್‌ಶಾಪ್‌ವೊಂದರ ಮಾಲೀಕರು ತಿಳಿಸಿದ್ದಾರೆ. ವಲಸೆ ಕಾರ್ಮಿಕರು ತೆರಳುತ್ತಿರುವುದು ಒಂದೆಡೆಯಾದರೆ, ಲಾಕ್‌ಡೌನ್‌ನಿಂದ ಜನರಿಗೆ ಕೆಲಸವಿಲ್ಲದೆ ಆದಾಯವೂ ಇಲ್ಲದಂತೆ ಆಗಿದೆ. ಹೀಗಾಗಿ ಮದ್ಯ ಮಾರಾಟ ತೀವ್ರ ಕುಸಿತವಾಗಿದೆ ಎಂದು ಅಬಕಾರಿ ಉಪಾಯುಕ್ತೆ ಶೈಲಜಾ ಕೋಟೆ ಹೇಳುತ್ತಾರೆ.

-ಸಂದೀಪ್‌ ವಾಗ್ಲೆ