ಸರ್ವಾಧಿಕಾರದಿಂದ ದೇಶ ರಕ್ಷಿಸುವೆ: ಬಂಧಮುಕ್ತ ಕೇಜ್ರಿವಾಲ್ ಘೋಷಣೆ
ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಹೊರ ಬಂದು ಬಂಧಮುಕ್ತರಾದರು.
ನವದೆಹಲಿ (ಮೇ.11): ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಹೊರ ಬಂದು ಬಂಧಮುಕ್ತರಾದರು. ಅವರನ್ನು ಎಎಪಿ ನಾಯಕರು ಮತ್ತು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಸರ್ವಾಧಿಕಾರಿಗಳಿಂದ ದೇಶವನ್ನು ರಕ್ಷಿಸಬೇಕಿದೆ. ನನಗೆ ಜಾಮೀನು ನೀಡಿದ ಸುಪ್ರಿಂ ಕೋರ್ಟ್‌ಗೆ, ನ್ಯಾಯಾಧೀಶರಿಗೆ ಧನ್ಯವಾದಗಳು ಎಂದರು.
‘ನಾನು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದೇನೆ ಎಂದು ನಿಮಗೆ ಹೇಳಿದ್ದೆ. ಅದರಂತೆ ನಾನು ಹೊರ ಬಂದಿದ್ದೇನೆ. ಶನಿವಾರ ನಾನು ಹನುಮನ ದೇಗುಲಕ್ಕೆ ಭೇಟಿ ನೀಡಲಿದ್ದೇನೆ. ನನ್ನ ಜೊತೆ ನೀವು ದೇಗುಲಕ್ಕೆ ಬರಬೇಕು’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ದೇಗುಲ ದರ್ಶನದ ನಂತರ ಎಎಪಿ ಕಚೇರಿಯಲ್ಲಿ ಮಧ್ಯಾಹ್ 1 ಗಂಟೆಗೆ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ.
ಇದು ಪ್ರಜಾಸತ್ತೆಗೆ ಸಿಕ್ಕ ಜಯ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡುತ್ತಿದ್ದಂತೆಯೇ ಆಪ್ ಕಾರ್ಯಕರ್ತರು ದಿಲ್ಲಿಯಲ್ಲಿ ಭಾರಿ ಸಂಭ್ರಮಾಚರಣೆ ನಡೆಸಿದ್ದಾರೆ. ಈ ಕುರಿತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು ‘ಸತ್ಯಮೇವ ಜಯತೆ’ ಎಂಬ ಟ್ವೀಟ್ ಮಾಡಿದ್ದಾರೆ. ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಇದು ಪ್ರಜಾಸತ್ತೆಗೆ ಸಂದ ಜಯ ಎಂದಿದ್ದಾರೆ. ಕಾಂಗ್ರೆಸ್, ಟಿಎಂಸಿ ಸೇರಿ ಅನೇಕ ಪಕ್ಷಗಳು ಕೋರ್ಟ್ ತೀರ್ಮಾನ ಸ್ವಾಗತಿಸಿವೆ.
ದೆಹಲಿ ಅಬಕಾರಿ ಹಗರಣ: ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು
ದೆಹಲಿ ಎಎಪಿ ಕಚೇರಿ ಬಳಿ ಎಎಪಿ ಕಾರ್ಯಕರ್ತರು ಸಂಭ್ರಮಿಸಿದರು. ಕೇಜ್ರಿವಾಲ್ ಪರ ಘೋಷಣೆ ಕೂಗಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ಸಿಂಗ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ‘ಸುಪ್ರೀಂ ಕೋರ್ಟ್ ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂ.1ರ ವರೆಗೂ ಮಧ್ಯಂತರ ಜಾಮೀನು ಜಾರಿಗೊಳಿಸಿದೆ. ಇದನ್ನು ಎಎಪಿ ಸ್ವಾಗತಿಸುತ್ತದೆ. ಸತ್ಯ ಯಾವತ್ತಿದ್ದರೂ ಗೆದ್ದೇ ಗೆಲ್ಲುತ್ತದೆ. ಆದರೆ ಸ್ವಲ್ಪ ತಡವಾಗಬಹುದು. ಸತ್ಯಕ್ಕೆ ಜಯಸಿಕ್ಕಾಗ ಸರ್ವಾಧಿಕಾರ ಕೊನೆಗೊಳ್ಳುತ್ತದೆ. ಸತ್ಯಮೇವ ಜಯತೆ’ ಎಂದು ಪೋಸ್ಟ್ ಮಾಡಿದ್ದಾರೆ. ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾ.21 ರಂದು ಬಂಧಿಸಿತ್ತು.