ಕಲಬುರಗಿ ವಿಮಾನ ನಿಲ್ದಾಣದ ಬಳಿ ತರಬೇತಿ ಲಘು ವಿಮಾನವೊಂದು ತಾಂತ್ರಿಕ ದೋಷದಿಂದ ರೈತರ ತೊಗರಿ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
ಕಲಬುರಗಿ (ಅ.7): ತರಬೇತಿ ಲಘು ವಿಮಾನವೊಂದು ತಾಂತ್ರಿಕ ದೋಷದ ಕಾರಣದಿಂದ ರೈತರ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ ಸಂಜೆ ನಗರದ ವಿಮಾನ ನಿಲ್ದಾಣದ ಬಳಿ ನಡೆದಿದೆ.
ತೊಗರಿ ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ!
ಸಾಮಾನ್ಯ ತರಬೇತಿ ಹಾರಾಟ ನಡೆಸುತ್ತಿದ್ದ ಈ ಸಣ್ಣ ವಿಮಾನದಲ್ಲಿ ದಿಢೀರನೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿ, ಸಮಯಪ್ರಜ್ಞೆ ಮೆರೆದು ಸಮೀಪದಲ್ಲಿದ್ದ ತೊಗರಿ ಹೊಲದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ವಿಮಾನದ ತಾಂತ್ರಿಕ ದೋಷಕ್ಕೆ ಕಾರಣವೇನು?
ಈ ಘಟನೆಯು ಕಲಬುರಗಿ ಜಿಲ್ಲೆಯ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ತಾಂತ್ರಿಕ ಲೋಪಕ್ಕೆ ನಿಖರ ಕಾರಣವೇನು ಎಂಬ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತಪ್ಪಿದ ಮತ್ತೊಂದು ದುರಂತ
ತರಬೇತಿ ವಿಮಾನ ಕಲಬುರಗಿ ಬಯಲಿನಲ್ಲಿ ಹಾರುತ್ತಿದ್ದರಿಂದ ದುರಂತ ತಪ್ಪಿದೆ. ಒಂದು ವೇಳೆ ನಗರದ ಸಮೀಪಲ್ಲಿ ಹಾರಾಟ ನಡೆಸಿದ್ದರೆ ಪರಿಣಾಮ ಏನಾಗುತ್ತಿತ್ತು. ಇಲ್ಲಿ ತಾಂತ್ರಿಕ ದೋಷ ಕಾಣುತ್ತಿದ್ದಂತೆ ಎಚ್ಚೆತ್ತು ವಿಶಾಲವಾಗಿ ಹರಡಿದ್ದ ತೊಗರಿ ಹೊಲದಲ್ಲಿ ಲ್ಯಾಂಡ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅದೃಷ್ಟವಶಾತ್ ದುರಂತವೊಂಡು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ವಿಮಾನ ದುರಂತಗಳು
ಇತ್ತೀಚೆಗೆ ಫ್ಲೈದುಬೈ ವಿಮಾನ ಆಗಸದಲ್ಲಿ ಕೋ ಪೈಲಟ್‌ನಿಂದ ದಾಳಿ ನಡೆದ ದುರಂತದ ಬಳಿಕ, ನೈಜೀರಿಯಾದಲ್ಲೂ ವಿಮಾನ ಅಪಘಾತಕ್ಕೀಡಾಗ ಏಳು ಮಂದಿ ಸಿಬ್ಬಂದಿ ಸೇರಿ 32 ಜನ ಸಜೀವ ದಹನವಾದರು. ಇದರ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲೂ ತರಬೇತಿ ನೀಡುವ ಲಘು ವಿಮಾನವು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.


