ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳ 2026 ರಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಿದ ಮಳಿಗೆಗಳ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಮೇಳವನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮವನ್ನಾಗಿ ಮಾಡಲು ಆಯೋಜಕರಿಗೆ ನೋಟಿಸ್ ನೀಡಲಾಗಿದ್ದು, ಕಸ ವಿಂಗಡಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬೆಂಗಳೂರು (ನ.16): ನಗರದ ಹೊರವಲಯ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಇಂದಿನಿಂದ (ನವೆಂಬರ್ 16) ಮೂರು ದಿನಗಳ ಕಾಲ ನಡೆಯುತ್ತಿರುವ ಪ್ರತಿಷ್ಠಿತ 'ಕೃಷಿ ಮೇಳ 2026'ಕ್ಕೆ ಮೊದಲ ದಿನವೇ ಬೆಂಗಳೂರು ಉತ್ತರ ನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತೆಯ ಬಿಸಿ ಮುಟ್ಟಿಸಿದ್ದಾರೆ. ಮೇಳದಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಸುತ್ತಿದ್ದ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಪಾಲಿಕೆ ತಂಡ, ನಿಯಮ ಉಲ್ಲಂಘಿಸಿದವರಿಗೆ ಒಟ್ಟು ₹4,000 ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ಮಳಿಗೆಗಳಿಗೆ ದಿಢೀರ್ ಭೇಟಿ; ಮಾರ್ಷಲ್‌ಗಳಿಂದ ಕಾರ್ಯಾಚರಣೆ:

ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ರೈತರು ಹಾಗೂ ಸಾರ್ವಜನಿಕರು ಭೇಟಿ ನೀಡುವ ಕೃಷಿ ಮೇಳದಲ್ಲಿ ಪರಿಸರ ಮಾಲಿನ್ಯ ತಡೆಯಲು ಪಾಲಿಕೆ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ, ಬ್ಯಾಟರಾಯನಪುರ ವಿಭಾಗದ ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು ಮಾರ್ಷಲ್‌ಗಳ ತಂಡ ಮೇಳದ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿತು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಹಾಗೂ ತ್ಯಾಜ್ಯ ವಿಲೇವಾರಿ ನಿಯಮ ಗಾಳಿಗೆ ತೂರಿದ ಮಳಿಗೆದಾರರಿಗೆ ಸ್ಥಳದಲ್ಲೇ ದಂಡದ ಬಿಸಿ ಮುಟ್ಟಿಸಲಾಯಿತು.

'ಶೂನ್ಯ ತ್ಯಾಜ್ಯ ಮೇಳ'ವನ್ನಾಗಿ ನಡೆಸಲು ಆಯೋಜಕರಿಗೆ ನೋಟಿಸ್:

ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಇಡೀ ಕೃಷಿ ಮೇಳವನ್ನು ಸಂಪೂರ್ಣವಾಗಿ 'ಶೂನ್ಯ ತ್ಯಾಜ್ಯ ಕಾರ್ಯಕ್ರಮ' (Zero Waste Event) ವನ್ನಾಗಿ ರೂಪಿಸುವಂತೆ ಪಾಲಿಕೆ ವತಿಯಿಂದ ಮೇಳದ ಆಯೋಜಕರಿಗೆ ಅಧಿಕೃತ ನೋಟಿಸ್ ನೀಡಲಾಗಿದೆ. ಸ್ಥಳೀಯ 'ಯಲಹಂಕ ಇಕೋ ಗ್ರೂಪ್' ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿರುವ ಅಧಿಕಾರಿಗಳು, ಮೇಳದ ಆವರಣದಾದ್ಯಂತ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ.

4 ಬಣ್ಣದ ಕಸದ ತೊಟ್ಟಿಗಳ ಬಳಕೆ ಕಡ್ಡಾಯ:

ಮೇಳದಲ್ಲಿ ಕಸದ ರಾಶಿ ಬೀಳುವುದನ್ನು ತಪ್ಪಿಸಲು ಮೂಲದಲ್ಲೇ ಕಸ ವಿಂಗಡಣೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ:

ಹಸಿರು ತೊಟ್ಟಿ: ಹಸಿ ಕಸ (ಆಹಾರ ತ್ಯಾಜ್ಯ)

ನೀಲಿ ತೊಟ್ಟಿ: ಒಣ ಕಸ

ಕೆಂಪು ತೊಟ್ಟಿ: ನೈರ್ಮಲ್ಯ ತ್ಯಾಜ್ಯ (Sanitary waste)

ಕಪ್ಪು ತೊಟ್ಟಿ: ಇತರೆ ತ್ಯಾಜ್ಯಗಳು

ಮುಂದಿನ ಎರಡು ದಿನವೂ ಮುಂದುವರಿಯಲಿದೆ ಕಣ್ಗಾವಲು:

ನವೆಂಬರ್ 18ರವರೆಗೆ ನಡೆಯಲಿರುವ ಈ ಕೃಷಿ ಮೇಳದಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಪಾಲಿಕೆಯ ಕೆಲಸವಲ್ಲ; ಬದಲಾಗಿ ಆಯೋಜಕರು, ಮಳಿಗೆದಾರರು ಹಾಗೂ ಭೇಟಿ ನೀಡುವ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ ಎಂದು ಪಾಲಿಕೆ ತಿಳಿಸಿದೆ. ಮುಂದಿನ ದಿನಗಳಲ್ಲೂ ಮಾರ್ಷಲ್‌ಗಳ ಹದ್ದಿನ ಕಣ್ಣು ಇರಲಿದ್ದು, ಪ್ಲಾಸ್ಟಿಕ್ ಬಳಕೆ ಅಥವಾ ಕಸ ಎಸೆಯುವುದು ಕಂಡುಬಂದರೆ ಮತ್ತಷ್ಟು ಕಠಿಣ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.