ಆಸರೆ ರಿಯಾಲ್ಟಿ ಸಂಸ್ಥೆಯ ನೂತನ ಪ್ಲಾಟ್ ಉದ್ಘಾಟನಾ ಸಮಾರಂಭದಲ್ಲಿ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ, ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಬಗ್ಗೆ ಸ್ವಾರಸ್ಯಕರ ಘಟನೆ ಹಂಚಿಕೊಂಡರು. ಕುಸುಮಾ ಅವರನ್ನು ನಟಿ ಎಂದುಕೊಂಡಿದ್ದಾಗಿ ತಿಳಿಸಿ, ಬಿಗ್‌ಬಾಸ್ ಮನೆಯಲ್ಲಿದ್ದಾಗ ಅವರು ನೀಡಿದ ಬೆಂಬಲವನ್ನು ಸ್ಮರಿಸಿದರು.

ಬೆಂಗಳೂರು: ಆಸರೆ ರಿಯಾಲ್ಟಿ ಸಂಸ್ಥೆಯ ನೂತನ 'ಕೆ.ಪಿ. ಗ್ರೀನ್ ಲೇಕ್ ವ್ಯೂ' ರೆಸಿಡೆನ್ಸಿಯಲ್ ಪ್ಲಾಟ್ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ, ರಜತ್ ಹಾಗೂ ವಿನಯ್ ಭಾಗವಹಿಸಿದ್ದರು.

ಗಿಲ್ಲಿ ಕನ್ಫ್ಯೂಸ್ ಆಗಿದ್ದೇಕೆ?

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಕೂಡ ಭಾಗಿಯಾಗಿದ್ದರು. ವೇದಿಕೆ ಮೇಲೆ ಕುಸುಮಾ ಬಗ್ಗೆ ಮಾತು ಆರಂಭಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಾನು ಕುಸುಮಾ ಅಕ್ಕನ ಬಗ್ಗೆ ಹೇಳಲೇಬೇಕು. ನಾನು ಲಗ್ಗೆರಿಯಲ್ಲಿ ನಾಲ್ಕರಿಂದ ಐದು ವರ್ಷಗಳ ಕಾಲ ಇದ್ದೆ. ಈ ಮೊದಲು ನಾನು ಅವರನ್ನು ನೋಡಿದ್ದು ರಸ್ತೆ ಬದಿಯಲ್ಲಿ ಹಾಕಿದ್ದ ಬ್ಯಾನರ್‌ಗಳ ಮೂಲಕ. ಕಾರ್ಯಕ್ರಮಗಳ ಸಂಬಂಧ ರಸ್ತೆ ಬದಿಯಲ್ಲಿ ಅವರ ಬ್ಯಾನರ್‌ಗಳನ್ನು ನೋಡುತ್ತಿದ್ದೆ.

ಮುಂದುವರಿದು ತಮಾಷೆಯಾಗಿ ಮಾತನಾಡಿದ ಗಿಲ್ಲಿ.. ಆ ಬ್ಯಾನರ್‌ಗಳನ್ನು ನೋಡಿದಾಗ ಇವರು ಯಾವುದೋ ಹೀರೋಯಿನ್ ಆಗಿರಬೇಕು. ಯಾರೋ ಸಿನಿಮಾ ಅಥವಾ ಸೀರಿಯಲ್ ಕಲಾವಿದೆ ಇರಬೇಕು. ಅದಕ್ಕೇ ಹೆಚ್ಚಾಗಿ ಗೆಸ್ಟ್ ಆಗಿ ಬರ್ತಿದ್ದಾರೆ ಅಂದುಕೊಂಡಿದ್ದೆ. ತುಂಬಾ ದಿನಗಳವರೆಗೆ ನಾನು ನಿಮ್ಮನ್ನು ಹಾಗೆಯೇ ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯ್ತು ಇವರು ರಾಜಕಾರಣಿ ಎಂದು ಎಂದಿದ್ದಾರೆ. ಆಗ ಇಡೀ ವೇದಿಕೆ ಜೋರಾಗಿ ನಕ್ಕಿದೆ.

ಇದೇ ವೇಳೆ ಗಿಲ್ಲಿ ಬಿಗ್‌ ಬಾಸ್‌ಗೆ ಹೋದಾಗ ಕುಸುಮಾ ಅವರು ಮಾಡಿ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ನಾನು ಬಿಗ್‌ಬಾಸ್‌ಗೆ ಹೋದ ಮೇಲೆ, ನಮ್ಮ ಏರಿಯಾದಲ್ಲಿದ್ದ ಹುಡುಗ, ಲಗ್ಗೆರೆಯಲ್ಲಿದ್ದವನು ಎಂದು ಕುಸುಮಾ ಅಕ್ಕ ತುಂಬಾ ಸಪೋರ್ಟ್ ಮಾಡಿದರು. ಬಿಗ್‌ಬಾಸ್‌ನಿಂದ ಹೊರಗೆ ಬಂದ್ಮೇಲೆ ಈ ವಿಚಾರ ಗೊತ್ತಾಯ್ತು. ಅವರ ಈ ಸಹಕಾರವನ್ನು ನಾನು ಯಾವತ್ತೂ ಮರೆಯೋಕೆ ಆಗೋದಿಲ್ಲ. ಅವತ್ತೇ ನಾನು ಅವರನ್ನು ಭೇಟಿ ಆಗಬೇಕು ಅಂದುಕೊಂಡಿದ್ದೆ. ಆದರೆ ಆಗಿರಲಿಲ್ಲ. ಇವತ್ತು ಆಸರೆ ರಿಯಾಲ್ಟಿ ಕಾರ್ಯಕ್ರಮದ ಮೂಲಕ ಆ ಕಾಲ ಕೂಡಿ ಬಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮಾ ಎಚ್. ಆರ್.ಆರ್. ನಗರ ಕ್ಷೇತ್ರದ ಮಾಜಿ ಅಭ್ಯರ್ಥಿ ಕೂಡ ಹೌದು. ವಿಟಿಯುನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ. (2010) ಪದವಿ ಪಡೆದಿರುವ ಇವರು, ಅಮೆರಿಕದ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ಬೋಸ್ಟನ್‌ನಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್. (2018) ಪದವಿ ಪೂರೈಸಿದ್ದಾರೆ. ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸದ್ಯ ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಹನುಮಂತರಾಯಪ್ಪ ಅವರ ಪುತ್ರಿಯಾಗಿರುವ ಕುಸುಮಾ, ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ.

2020ರ ಆರ್.ಆರ್.ನಗರ ಉಪಚುನಾವಣೆ ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಸುಮಾ ಅವರು, ಬಿಜೆಪಿಯ ಎನ್. ಮುನಿರತ್ನ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.

View post on Instagram