ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗುವ ಮಸೂದೆ ಅಂಗೀಕರಿಸಲಿ: ಸಂಸದ ಶ್ರೀನಿವಾಸ್ ಪ್ರಸಾದ್
ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆ, ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮಸೂದೆಯನ್ನು ಅಂಗೀಕರಿಸಬೇಕಾಗಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒತ್ತಾಯಿಸಿದ್ದಾರೆ.
ಮೈಸೂರು (ಅ.29): ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆ, ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮಸೂದೆಯನ್ನು ಅಂಗೀಕರಿಸಬೇಕಾಗಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ವಿಧಾನಸಭೆಯು 2015 ರಲ್ಲಿ ಬಿಜೆಪಿ ಸೇರಿದಂತೆ ರಾಜ್ಯದ ಎಲ್ಲಾ ಪಕ್ಷಗಳು ಒಪ್ಪಿ ಸರ್ವಾನುಮತದಿಂದ ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ. ಇದು ರಾಜ್ಯಪಾಲರ ಸಮ್ಮತಿಯೊಂದಿಗೆ 2017ರಲ್ಲಿ ರಾಷ್ಟ್ರಪತಿಗಳಿಗೆ ರವಾನೆಯಾಗಿದೆ.
ಅದನ್ನು ಶಿಫಾರಸ್ಸಿನೊಂದಿಗೆ ಕಳುಹಿಸಬೇಕಾದ ಕೇಂದ್ರ ಸರ್ಕಾರದ ಸಂಬಂಧಿ ಇಲಾಖೆ ಈವರೆಗೂ ಅವರಿಗೆ ಕಳುಹಿಸಿಲ್ಲ. ನೀವು ಮಾತೃಭಾಷಾ ಮಾಧ್ಯಮದ ಪ್ರಬಲ ಪ್ರತಿಪಾದಕರೆಂಬುದು ನನಗೆ ಗೊತ್ತು. ಆದ್ದರಿಂದ ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಇಲಾಖೆಯು ಅನಗತ್ಯವಾದ ಅಸಮಂಜಸವಾದ ಆಕ್ಷೇಪವನ್ನು ಪದೇ ಪದೇ ಪತ್ರದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಇದಕ್ಕೆ ರಾಜ್ಯ ಸರ್ಕಾರ ಉತ್ತರಿಸಿಲ್ಲ ಎಂದು ನೆಪ ಹೇಳಿ ಈಗ 2020ರಲ್ಲಿ ಆಕ್ಷೇಪಗಳಿಗೆ ಉತ್ತರ ಕೊಡದಿದ್ದರೆ ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಮಸೂದೆಯನ್ನು ಹಿಂತೆಗೆಲು ಒತ್ತಡ ಹೇರುತ್ತಿದೆ ಎಂಬ ಭಾವನೆಯನ್ನು ಭಿತ್ತಲಾಗುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಯ ಪತ್ರ ವ್ಯವಹಾರ ಆ ರೀತಿ ಭಾವನೆ ಮೂಡಿಸುವುದು ಸಹಜ. ಆದರೆ ನನಗೆ ತಿಳಿದಂತೆ ಕೇಂದ್ರ ಸರ್ಕಾರದ ನಿಲುವು ಹಾಗಿಲ್ಲ. ಇದು ಇಂಗ್ಲೀಷ್ ಶಾಲೆಯ ಹಿತಾಸಕ್ತಿಗಳ ಪರವಾಗಿರುವ ಕೇಂದ್ರ ಸರ್ಕಾರದ ಅಧಿಕಾರ ಶಾಹಿಯ ಕುತಂತ್ರ ಎಂಬುದು ನನ್ನ ಭಾವನೆ ಎಂದರು.
ಅರಸೀಕೆರೆಗೆ ಸಂಸದ ಪ್ರಜ್ವಲ್ ರೇವಣ್ಣ ಕೊಡುಗೆ ಏನು: ಕಾಟಿಕೆರೆ ಉಮೇಶ್
ಆದ್ದರಿಂದ ಇದನ್ನು ಕೂಡಲೇ ಗಮನಕ್ಕೆ ತಂದುಕೊಂಡು ತಮ್ಮ ಸಚಿವಾಲಯದ ಮೂಲಕ ಕೇಂದ್ರ ಶಿಕ್ಷಣ ಇಲಾಖೆಗೆ ಆಕ್ಷೇಪ ಹಿಂತೆ ತೆಗೆದುಕೊಂಡು ಮಸೂದೆಯನ್ನು ರಾಷ್ಟ್ರಪತಿಗಳಿಗೆ ಅಂಗೀಕಾರಕ್ಕಾಗಿ ಶಿಫಾರಸು ಮಾಡಿ ಕಳಿಸಬೇಕೆಂಬ ಆದೇಶವನ್ನು ಸಂಬಂಧ ಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ಬಗ್ಗೆ ವರದಿಯಲ್ಲಿ ಬಿಂಬಿತವಾದ ತಪ್ಪು ಭಾವನೆ ಹೋಗಲಾಡಿಸಿ, ಮಾತೃಭಾಷೆ ಶಿಕ್ಷಣ ಮಾಧ್ಯಮ ಆಗಬೇಕು ಎಂಬ ನಮ್ಮೆಲ್ಲರ ಆಶಯಕ್ಕೆ ಒತ್ತಾಸೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.