ಅರಸೀಕೆರೆಗೆ ಸಂಸದ ಪ್ರಜ್ವಲ್ ರೇವಣ್ಣ ಕೊಡುಗೆ ಏನು: ಕಾಟಿಕೆರೆ ಉಮೇಶ್
ಶಾಸಕ ಕೆ.ಎಂ.ಶಿವಲಿಂಗೇಗೌಡ ಕ್ಷೇತ್ರಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕುಡಿಯುವ ನೀರು ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರಲ್ಲದೆ ಸದನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಅರಸೀಕೆರೆ (ಅ.29): ಶಾಸಕ ಕೆ.ಎಂ.ಶಿವಲಿಂಗೇಗೌಡ ಕ್ಷೇತ್ರಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕುಡಿಯುವ ನೀರು ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರಲ್ಲದೆ ಸದನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅರಸೀಕೆರೆ ಕ್ಷೇತ್ರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಕೊಡುಗೆ ಏನು.. ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಟಿಕೆರೆ ಉಮೇಶ್ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ಕ್ಷೇತ್ರದಲ್ಲಿ ಪ್ರಗತಿಯಾಗಿಲ್ಲ ಎಂಬ ಆರೋಪವನ್ನು ಶಾಸಕರ ಮೇಲೆ ಪ್ರಜ್ವಲ್ ರೇವಣ್ಣ ಮಾಡಿದ್ದಾರೆ.
ಅರಸೀಕೆರೆಗೆ ಹೇಮಾವತಿ ನೀರನ್ನು ತಂದಿದ್ದು ಯಾರು, ಎಂಜಿನಿಯರಿಂಗ್ ಕಾಲೇಜು ತಂದಿದ್ದು ಯಾರು, ಎತ್ತಿನಹೊಳೆ ಯೋಜನೆ ತಂದವರು ಯಾರು, ಕಾವೇರಿ ಬೇಸನ್ನಿಂದ ಕೃಷ್ಣಬೇಸನ್ನಿಗೆ ನೀರು ತರುವಲ್ಲಿ ನಮ್ಮ ಶಾಸಕರ ಪ್ರಯತ್ನ ಏನು ಎಂಬುದನ್ನು ಪ್ರಜ್ವಲ್ ರೇವಣ್ಣ ಅರಿಯಬೇಕು. ಯಾವುದೇ ಪಕ್ಷದ ಸಚಿವರು, ಶಾಸಕರ ಕಾರ್ಯ ದಕ್ಷತೆಯನ್ನು ಶ್ಲಾಘಿಸಿದ್ದಾರೆ. ಬರದ ಪಟ್ಟಿಯಿಂದ ಕೈ ಬಿಟ್ಟಿದ್ದ ಅರಸೀಕೆರೆ ತಾಲೂಕನ್ನು ಮತ್ತೆ ಬರದ ಪಟ್ಟಿಗೆ ಸೇರಿಸುವಲ್ಲಿ ಶಾಸಕರು ಹೆಚ್ಚಿನ ಶ್ರಮ ತೋರಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವರೆ ಮೊನ್ನೆಯಷ್ಟೇ ಜನತಾದರ್ಶನದಲ್ಲಿ ಹೇಳಿದ್ದಾರೆ.
ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್.ಡಿ.ರೇವಣ್ಣ
ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆಯಲ್ಲಿ ನಾವು ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲವನ್ನ ಸೂಚಿಸಿ ಅವರನ್ನ ಗೆಲ್ಲಿಸುವಲ್ಲಿ ಕಾಂಗ್ರೆಸ್ಸಿಗರ ಪಾತ್ರವಿತ್ತು. ಚುನಾವಣೆ ನಡೆದು ಇಷ್ಟು ವರ್ಷಗಳಾದರೂ ಸಹ ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಅಭಿನಂದನೆಯನ್ನು ಹೇಳುವಷ್ಟು ಸೌಜನ್ಯವೂ ಪ್ರಜ್ವಲ್ ರೇವಣ್ಣ ಅವರಲ್ಲಿ ಇಲ್ಲ. ಸುಮ್ಮ ಸುಮ್ಮನೆ ನಮ್ಮ ಶಾಸಕರ ಬಗ್ಗೆ ಆರೋಪ ಮಾಡಿದರೆ ನಮಗೆ ಸಹಿಸಲಾಗದು. ಇಂಥ ಹೇಳಿಕೆಗಳನ್ನು ಮುಂದಾದರೂ ಪ್ರಜ್ವಲ್ ರೇವಣ್ಣ ಬಿಡಬೇಕೆಂದು ತಿಳಿ ಹೇಳಿದರು.
ಪ್ರಜ್ವಲ್ ರೇವಣ್ಣ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳನ್ನ ನೋಡಿದ್ದಾರೆ ಯಾವ ಸಮಸ್ಯೆಗಳನ್ನ ಕಂಡಿದ್ದಾರೆ ಅವುಗಳನ್ನು ಸ್ಪಷ್ಟವಾಗಿ ಹೇಳಬೇಕಿತ್ತು. ನಮಗೆ ಗೊತ್ತಿರುವಂತೆ ಬಹುತೇಕ ಗ್ರಾಮದಲ್ಲಿ ಸಮುದಾಯ ಭವನಗಳು ಆಗಿದೆ. ಕುಡಿಯುವ ನೀರಿಗೆ ಕೊರತೆ ಇಲ್ಲ. ಕಾಂಕ್ರೀಟ್ ರಸ್ತೆಗಳಾಗಿವೆ. ಶೈಕ್ಷಣಿಕವಾಗಿ ವಸತಿ ಶಾಲೆಗಳು ಮೊದಲಾದ ಅಭಿವೃದ್ಧಿ ಕಾರ್ಯಗಳು ಆಗಿದೆ ಇವೆಲ್ಲವೂ ಪ್ರಗತಿ ಅಲ್ಲವೇ ಎಂದು ಅವರು ಮರು ಪ್ರಶ್ನಿಸಿದರು.
ಶಾಸಕರು ಮೂಲ ಕಾಂಗ್ರೆಸ್ಸಿನವರಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ ಎಲ್ಲಾ ಕಾಂಗ್ರೆಸಿಗರು ಸಂಪರ್ಕದಲ್ಲಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಎಲ್ಲರೂ ಕಾರ್ಯಕರ್ತರು ಅವುಗಳಲ್ಲಿ ಕೆಲವೊಮ್ಮೆ ಪಾಲ್ಗೊಳ್ಳಲು ಆಗುವುದಿಲ್ಲ ಅಗತ್ಯ ಬಿದ್ದಾಗ ಸಂಪರ್ಕಿಸುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಪಕ್ಷದಲ್ಲಿ ಇಲ್ಲ ಎಂದು ಉಮೇಶ್ ಸ್ಪಷ್ಟಪಡಿಸಿ ಶಾಸಕರು ಮಾಡುವ ಕಾರ್ಯಗಳನ್ನು ನಾವು ಒಪ್ಪಿಕೊಳ್ಳಲೇಬೇಕು ಇಂದು ನಮ್ಮ ಪಕ್ಷದಲ್ಲಿ ಇದ್ದಾರೆಂದು ಆರೋಪ ಮಾಡುವುದು ತರವಲ್ಲ, ಶಾಸಕರು ಕೆಲಸ ಮಾಡದಿದ್ದಲ್ಲಿ ಜನರೇ ಅವರನ್ನು ಪ್ರಶ್ನಿಸುತ್ತಾರೆ ಎಂದರು.
ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ
ನಗರಸಭೆ ಮಾಜಿ ಸದಸ್ಯ ಬಾಲಮುರುಗನ್ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ಸಿನ ಯಾರನ್ನು ದೂರ ಮಾಡಿಲ್ಲ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದಾರೆ ಎಂದರು. ಅಣ್ಣ ದೊರೆ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರು ಶಾಸಕರನ್ನು ಹೀಗೆ ದೊರುತ್ತಿದ್ದರೆ ನಾವು ಅದಕ್ಕೆ ತಕ್ಕ ಉತ್ತರವನ್ನು ಕೊಡಬೇಕಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೌಸ್ ಖಾನ್ ,ಅಣ್ಣಾ ದೊರೆ ಉಪಸಿತರಿದ್ದರು.