ಹೊರವಲಯದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಮಲಿಯಾಬಾದ್ ಕೋಟೆ ಸುತ್ತಮುತ್ತ ಈಗ ಚಿರತೆ ಭಯ ಶುರುವಾಗಿದೆ. ಕಳೆದ ಆರು ತಿಂಗಳಿಂದ ಆಗಾಗ ಕಣ್ಣಿಗೆ ಬೀಳುತ್ತಿರುವ ಚಿರತೆ ಇಲ್ಲಿನ ಗೋಶಾಲೆಯ ಹಸುಗಳನ್ನ ಒಂದೊಂದಾಗೇ ಭೇಟೆಯಾಡುತ್ತಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಫೆ.15): ಹೊರವಲಯದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಮಲಿಯಾಬಾದ್ ಕೋಟೆ ಸುತ್ತಮುತ್ತ ಈಗ ಚಿರತೆ ಭಯ ಶುರುವಾಗಿದೆ. ಕಳೆದ ಆರು ತಿಂಗಳಿಂದ ಆಗಾಗ ಕಣ್ಣಿಗೆ ಬೀಳುತ್ತಿರುವ ಚಿರತೆ ಇಲ್ಲಿನ ಗೋಶಾಲೆಯ ಹಸುಗಳನ್ನ ಒಂದೊಂದಾಗೇ ಭೇಟೆಯಾಡುತ್ತಿದೆ. ಇನ್ನೊಂದೆಡೆ ಚಿರತೆ ಭಯಕ್ಕೆ ಜನ ,ರೈತರು ಬೆಟ್ಟದ ಬಳಿ ಸುಳಿಯಲು ಹೆದರುತ್ತಿದ್ದಾರೆ. ಮಲಿಯಾಬಾದ್ ಬೆಟ್ಟ ಅಂದ್ರೆ ವಿಜಯನಗರ ಸಾಮ್ರಾಜ್ಯದ ಕುರುಹುಗಳ ಮೂಲಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳವೇ ಮಲಿಯಾಬಾದ್ ಬೆಟ್ಟವಾಗಿದೆ. ಇಷ್ಟು ದಿನಗಳ ಕಾಲ ಈ ಬೆಟ್ಟದಲ್ಲಿ ಜನರು ನಿಧಿಗಾಗಿ ಮನಬಂದಂತೆ ಅಗೆದು ಹುಡುಕಾಟ ನಡೆಸುವುದು ಕೇಳಿಬರುತ್ತಿತ್ತು. ಆದ್ರೆ ಕಳೆದ ಆರು ತಿಂಗಳಿಂದ ಮಲಿಯಾಬಾದ್ ಬೆಟ್ಟ ಚಿರತೆ ಬೆಟ್ಟವಾಗಿ ಮಾರ್ಪಟ್ಟಿದೆ. ಕಳೆದ ಆರು ತಿಂಗಳಿಂದ ಚಿರತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
6 ತಿಂಗಳಲ್ಲಿ 6 ಹಸು ಕೊಂದ ಚಿರತೆ: ಮಲಿಯಾಬಾದ್ ಬೆಟ್ಟದಲ್ಲಿ ಗೋ ಶಾಲೆ ಇದೆ. ಈ ಗೋಶಾಲೆಯಲ್ಲಿ 700ಕ್ಕೂ ಅಧಿಕ ಗೋಗಳು ಇವೆ. ಕಳೆದ ಆರು ತಿಂಗಳಲ್ಲಿ ಚಿರತೆ ನಿರಂತರವಾಗಿ ದಾಳಿ ಮಾಡಿ ಆರು ಹಸು , ಎರಡು ಹಸುವಿನ ಕರು, ಎರಡು ಎತ್ತು, ಮೇಕೆಗಳು ಹಾಗೂ ನಾಲ್ಕೈದು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಅಷ್ಟೇ ಅಲ್ಲದೇ ಮೊನ್ನೆ ಅಷ್ಟೇ ಗೋಶಾಲೆಯ ಒಂದು ಹಸುವನ್ನ ಬಲಿ ಪಡೆದಿದ್ದು, ಗೋಪಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಹೀಗಾಗಿ ಸುತ್ತಮುತ್ತಲ ಗ್ರಾಮಗಳ ರೈತರು ಸಹ ತಮ್ನ ಜಮೀನುಗಳಿಗೆ ಹೋಗಲು ಹೆದರುವಂತಾಗಿದೆ. ರಾಯಚೂರು ನಗರದಿಂದ ಮಲಿಯಾಬಾದ್ ಬೆಟ್ಟ ಕೇವಲ ನಾಲ್ಕೈದು ಕಿ.ಮೀ. ದೂರದಲ್ಲಿರುವುದರಿಂದ ನಗರದ ಜನರಿಗೂ ಚಿರತೆ ಭಯ ಕಾಡುತ್ತಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಸೂಕ್ತವಾಗಿರುವ ಮಲಿಯಾಬಾದ್ ಬೆಟ್ಟ,ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದ್ರೆ ಚಿರತೆ ಭಯಕ್ಕೆ ರಜಾ ದಿನಗಳಲ್ಲಿಒ ಬರುತ್ತಿದ್ದ ಪ್ರವಾಸಿಗರು ಸಹ ಈಗ ಹೋಗಲು ಹಿಂದೇಟು ಹಾಕುವಂತ ವಾತಾವರಣ ಸೃಷ್ಟಿಯಾಗಿದೆ.
ಜಮೀನು ಸಿಗದ ದ್ವೇಷ: ದಾಯಾದಿಗಳ ಕಲಹಕ್ಕೆ ಬಡ ರೈತನ ಲಕ್ಷಾಂತರ ರೂ. ಬೆಳೆ ಹಾನಿ
ಬೋನ್ ಇಟ್ಟರೂ ಕೇರ್ ಮಾಡದೇ ಬಿಂದಾಸ್ ಆಗಿ ಚಿರತೆ ದಾಳಿ: ರಾಯಚೂರು ತಾಲೂಕಿನ ಮಲಿಯಾಬಾದ್ ಬೆಟ್ಟದಲ್ಲಿ ಶಿವನ ದೇವಸ್ಥಾನ, ದೇವಸ್ಥಾನ ಪಕ್ಕದಲ್ಲಿ ಕಲ್ಯಾಣಿ, ಗೋ ಶಾಲೆ ಇರುವುದರಿಂದ ಜನರು ರಜಾ ದಿನಗಳಲ್ಲಿ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡುತ್ತಿದ್ರು. ಆದ್ರೆ ಚಿರತೆ ಭಯದಿಂದ ಹೆದರಿದ ಜನರು ಮಲಿಯಾಬಾದ್ ಬೆಟ್ಟದ ಸಹವಾಸವೇ ಬೇಡವೆಂದು ಯಾರು ಬೆಟ್ಟದ ಕಡೆಗೆ ಹೋಗುತ್ತಿಲ್ಲ.
ಗೋಪಾಲಕರಿಗೆ ನಿತ್ಯವೂ ಕಾಡುತ್ತಿದೆ ಜೀವಭಯ!: ಮಲಿಯಾಬಾದ್ ಬೆಟ್ಟದಲ್ಲಿ ಗೋ ಶಾಲೆ ಇದೆ. ಸುಮಾರು 700ಕ್ಕೂ ಅಧಿಕ ಗೋಗಳು ಇವೆ. ಆ ಗೋಗಳಿಗೆ ನಿತ್ಯ ಮೇಯಿಸಲು ಬೆಟ್ಟವೇ ಆಧಾರವಾಗಿದೆ. ಬೆಟ್ಟದಲ್ಲಿ ಗೋಗಳನ್ನ ಮೇಯಿಸಲು ಕರೆತರುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಗೋವುಗಳಿಗೆ ಮೇವಿನ ಕೊರತೆ ಉಂಟಾಗುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ರೈತರು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಬೆಟ್ಟದ ಎರಡು ಕಡೆಗಳಲ್ಲಿ ಬೋನುಗಳನ್ನ ಇಟ್ಟಿದ್ದು ಸುಮ್ಮನೇ ಆಗಿದ್ದಾರೆ ಚಿರತೆ ಮಾತ್ರ ಇನ್ನೂ ಸೆರೆ ಸಿಕ್ಕಿಲ್ಲ. ಬೆಟ್ಟದಲ್ಲಿ ಒಂದೇ ಚಿರತೆ ಇದೆಯಾ ಅಥವಾ ಒಂದಕ್ಕಿಂತ ಹೆಚ್ಚು ಇವೆಯಾ ಅನ್ನೋ ಅನುಮಾನವು ಜನರನ್ನ ಕಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಅಗತ್ಯ ಕ್ರಮ ಕೈಗೊಂಡಿದ್ದೇವೆ , ಗೋಶಾಲೆ ಗೋಡೆ ಎತ್ತರಿಸಿ ಗೋವುಗಳನ್ನ ಕಾಪಾಡಿಕೊಳ್ಳಬೇಕು. ಬೋನುಗಳನ್ನ ಇಟ್ಟಿದ್ದೇವೆ ಚಿರತೆ ಸಿಗುತ್ತಿಲ್ಲ ಅಂತಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಇಲ್ಲ: ಸಚಿವ ಬೋಸರಾಜು
ಅರಣ್ಯ ಇಲಾಖೆಗೂ ತಲೆನೋವು ಆಗಿದೆ ಚಿರತೆ: ರಾಯಚೂರು ಜಿಲ್ಲೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ದಾಳಿ ದೊಡ್ಡ ತಲೆನೋವು ಆಗಿದೆ. ಕಳೆದ ವರ್ಷ ಅಷ್ಟೇ ದೇವದುರ್ಗ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆಗ ಗ್ರಾಮಸ್ಥರೇ ಚಿರತೆಯನ್ನ ಹೊಡೆದು ಕೊಂದು ಹಾಕಿದ್ರು. ಅದು ಆದ ಬಳಿಕ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಬೋನ್ ಇಟ್ಟಿದ್ದೇವೆ ಅಂತ ಹೇಳಿ, ಒಂದು- ಎರಡು ಚಿರತೆ ಸೆರೆಯೂ ಹಿಡಿದಿದ್ರು. ಆದ್ರೆ ಈಗ ಕಳೆದ ಆರು ತಿಂಗಳಿಂದ ಮಲಿಯಾಬಾದ್ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಬೋನುಗಳನ್ನ ಅಳವಡಿಸಿ, ಎಚ್ಚರಿಕೆಯ ಬ್ಯಾನರ್‌ಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ರೆ ಸಾರ್ವಜನಿಕರು ಮಾತ್ರ ಆದಷ್ಟು ಬೇಗ ಚಿರತೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನೂ ಮುಂದಾದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿದು ಜನರ ಭಯ ದೂರು ಮಾಡುತ್ತಾರೋ ಕಾದುನೋಡಬೇಕಾಗಿದೆ.
