ಮಂಗಳೂರಿನ ಎಸ್‌.ಸಿ‌.ಎಸ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವನ್ನಪ್ಪಿದ್ದು, ವೈದ್ಯಕೀಯ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೆರಿಗೆಗೆ ವ್ಯಾಕ್ಯೂಮ್ ಬಳಸಿದ್ದರಿಂದ ಮಗುವಿನ ತಲೆಗೆ ಗಾಯವಾಗಿ ಸಾವಾಗಿದೆ ಎಂದು ದೂರಿ, ತನಿಖೆಗೆ ಒತ್ತಾಯಿಸಿದ್ದಾರೆ.

ಮಂಗಳೂರು: ನಗರದ ಬೆಂದೂರುವೆಲ್‌ ಪ್ರದೇಶದ ಖಾಸಗಿ ಎಸ್‌.ಸಿ‌.ಎಸ್‌ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಶಿಶು ಸಾವನ್ನಪ್ಪಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಡಿಕಲ್ ನಿವಾಸಿಗಳಾದ ಅನಿಲ್ ಮತ್ತು ಪ್ರತೀಕ್ಷಾ ದಂಪತಿಯ ಮೊದಲ ಮಗುವಿನ ಹೆರಿಗೆಗಾಗಿ ಗರ್ಭಿಣಿ ಪ್ರತೀಕ್ಷಾ ಅವರನ್ನು ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಹೆರಿಗೆ ನಡೆದಿದ್ದು, ಕುಟುಂಬದವರ ಪ್ರಕಾರ ಮೊದಲಿಗೆ ಎಲ್ಲವೂ ಸಾಮಾನ್ಯವಾಗಿದ್ದಂತೆ ತಿಳಿಸಲಾಗಿದೆ. ಆದರೆ, ಬೆಳಿಗ್ಗೆ ವೈದ್ಯರು ಮಗು ಸಾವನ್ನಪ್ಪಿದ ವಿಚಾರವನ್ನು ತಿಳಿಸಿದಾಗ ಕುಟುಂಬಸ್ಥರು ಬೆಚ್ಚಿಬಿದ್ದರು.

ಮಗುವಿನ ತಲೆಯಲ್ಲಿ ಗಾಯ

ಆಸ್ಪತ್ರೆಯವರು ಮಗು ಸಾವಿಗೆ ವಿವಿಧ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿದರೂ, ಮಗು ತಲೆ ಭಾಗದಲ್ಲಿ ಕಂಡುಬಂದ ಗಾಯಗಳು ಅನುಮಾನಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಸಂಬಂಧಿಕರು, ಹೆರಿಗೆ ವೇಳೆ ವ್ಯಾಕ್ಯೂಮ್ ಉಪಕರಣವನ್ನು ಬಳಸುವಾಗ ತಲೆ ಭಾಗವನ್ನು ಜೋರಾಗಿ ಎಳೆದ ಪರಿಣಾಮವೇ ಮಗು ಸಾವಿಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ

ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಸೇವಾ ಗುಣಮಟ್ಟದ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.