ಜಮೀನು ಸಿಗದ ದ್ವೇಷ: ದಾಯಾದಿಗಳ ಕಲಹಕ್ಕೆ ಬಡ ರೈತನ ಲಕ್ಷಾಂತರ ರೂ. ಬೆಳೆ ಹಾನಿ
ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಅನ್ನೋ ಹಳೆಯ ಗಾದೆ ಮಾತಿದೆ. ಆದ್ರೆ ರಾಯಚೂರಿನಲ್ಲಿ ದಾಯಾದಿಗಳ ಜಮೀನು ಜಗಳದ ನಡುವೆ ಲೀಸ್ ಪಡೆದು ಉಳುಮೆ ಮಾಡುತ್ತಿದ್ದ ಬಡ ರೈತ ಬೆಳೆ ಹಾನಿಯಿಂದ ಸಾಲಗಾರನಾಗಿದ್ದಾನೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಫೆ.13): ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಅನ್ನೋ ಹಳೆಯ ಗಾದೆ ಮಾತಿದೆ. ಆದ್ರೆ ರಾಯಚೂರಿನಲ್ಲಿ ದಾಯಾದಿಗಳ ಜಮೀನು ಜಗಳದ ನಡುವೆ ಲೀಸ್ ಪಡೆದು ಉಳುಮೆ ಮಾಡುತ್ತಿದ್ದ ಬಡ ರೈತ ಬೆಳೆ ಹಾನಿಯಿಂದ ಸಾಲಗಾರನಾಗಿದ್ದಾನೆ. ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದ್ದಕ್ಕೆ ಕೈ ಸುಟ್ಟುಕೊಂಡು ಕಂಗಾಲಾಗಿದ್ದಾನೆ. ಈ ಘಟನೆ ನಡೆದಿದ್ದು, ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಕಳೆದ 10 ವರ್ಷದಿಂದ 9 ಎಕರೆ 30 ಗುಂಟೆ ಜಮೀನನ್ನ ಲೀಸ್ ಪಡೆದು ಉಳುಮೆ ಮಾಡುತ್ತಿದ್ದ ರೈತ ವಿರುಪಾಕ್ಷಪ್ಪ ಜಮೀನು ಮಾಲೀಕರ ದಾಯಾದಿ ಕಲಹಕ್ಕೆ ತನ್ನ ಲಕ್ಷಾಂತರ ರೂಪಾಯಿ ಬೆಳೆಯನ್ನು ಕಳೆದುಕೊಂಡಿದ್ದಾನೆ. ಜಮೀನು ವಿವಾದ ಹಿನ್ನೆಲೆ ದಾಯಾದಿಗಳ ಕಲಹ ಕಳೆದ ಎರಡು ವರ್ಷಗಳಿಂದ ಬೆಳೆಯನ್ನ ಹಾಳು ಮಾಡುತ್ತಲೇ ಬಂದಿದ್ದಾರೆ.
ಈ ವರ್ಷ ಭರ್ಜರಿಯಾಗಿ ಬೆಳೆದಿದ್ದ ಕಾಬೂಲ್ ಕಡಲೆ ಬೆಳೆಗೆ ರಾತ್ರೋರಾತ್ರಿ ಗ್ಲೈಫೋಸೇಟ್ ಕಳೆನಾಶಕ ಸಿಂಪಡಿಸಿದ್ದರಿಂದ ಸುಮಾರು 10 ಲಕ್ಷ ರೂಪಾಯಿ ಕಾಬೂಲ್ ಕಡಲೆ ಬೆಳೆ ಸಂಪೂರ್ಣ ಹಾಳಾಗಿದೆ. ಉಮಾದೇವಿ ಎನ್ನುವವರ ಹೆಸರಿನಲ್ಲಿರುವ ಜಮೀನನ್ನ ಅವರ ಮಗ ವಿರೂಪಾಕ್ಷಿ ನೋಡಿಕೊಳ್ಳುತ್ತಿದ್ದು, ವಿರುಪಾಕ್ಷಪ್ಪ ಎನ್ನುವ ರೈತನಿಗೆ ಎಕರೆಗೆ 20 ಸಾವಿರದಂತೆ ಲೀಸ್ ಗೆ ನೀಡಲಾಗಿದೆ. ಆದ್ರೆ ವಿರೂಪಾಕ್ಷಿಯ ಚಿಕ್ಕಪ್ಪ ಹಾಗೂ ಚಿಕ್ಕಪ್ಪನ ಮಕ್ಕಳು ಆಸ್ತಿ ವಿವಾದಕ್ಕೆ ಜಮೀನಿನಲ್ಲಿ ಬೆಳೆದ ಬೆಳೆಗೆ ರಾತ್ರೋ ರಾತ್ರಿ ಕಳೆನಾಶಕ ಔಷಧಿ ಸಿಂಪಡಿಸಿದ್ದಾರೆ. ಇದರಿಂದ ಗೊಬ್ಬರ ಎಣ್ಣೆ ಬೀಜ ಕೂಲಿ ಆಳುಗಳಿಗಾಗಿ ನಾಲ್ಕುವರೆ ಲಕ್ಷ ಖರ್ಚು ಬಂಡವಾಳ ಹಾಕಿ ರೈತ ವಿರೂಪಾಕ್ಷಿ ಕಂಗಾಲಾಗಿದ್ದಾನೆ.
ಸಹೋದರ ಕಿತ್ತಾಟದಲ್ಲಿ ಭೂಮಿ ಲೀಸ್ ಪಡೆದ ರೈತ ಸಾಲಗಾರ: ಈ ವರ್ಷ ಉತ್ತಮ ಮಳೆಯಾಗಿತ್ತು. ಕಪ್ಪು ಮಣ್ಣಿನಲ್ಲಿ ಭರ್ಜರಿಯಾಗಿ ಕಾಬೂಲ್ ಕಡಲೆ ಬೆಳೆಯಬಹುದು ಅಂತ ರೈತ ವಿರೂಪಾಕ್ಷಿ ಸಾಲ- ಸೂಲ ಮಾಡಿ ಜಮೀನಿನಲ್ಲಿ ಕಾಬೂಲ್ ಕಡಲೆ ಹಾಕಿದ್ದ, ಬೆಳೆಯೂ ಸಹ ಉತ್ತಮವಾಗಿ ಬಂದಿತ್ತು. ಕಡಲೆ ಕಾಯಿ ಕಟ್ಟಿಕೊಂಡು ಇಡೀ ಜಮೀನು ಹಚ್ಚಹಸಿರಿನಿಂದ ಕಂಗೋಳಿಸುತ್ತಿತ್ತು. ಆದ್ರೆ ಜಮೀನಿನ ಮಾಲೀಕ ವಿರೂಪಾಕ್ಷಿನ ಸಂಬಂಧಿಕರು ಏಕಾಏಕಿ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಇಡೀ ಜಮೀನಿನ ತುಂಬಾ ಕಳೆನಾಶಕ ಔಷಧಿ ಸಿಂಪಡಿಸಿದ್ದಾರೆ. ಇದರಿಂದಾಗಿ ಇಡೀ ಜಮೀನು ಹಳದಿ ಬಣ್ಣಕ್ಕೆ ತಿರುಗಿ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಫೈರ್‌ಲೈನ್: ಮುಂದಿನ 3 ತಿಂಗಳು ಬೆಂಕಿ ತಡೆಯೋದು ದೊಡ್ಡ ಟಾಸ್ಕ್!
ಇದರಿಂದಾಗಿ ನೊಂದ ಜಮೀನಿನ ಮಾಲೀಕ ವಿರೂಪಾಕ್ಷಿ ತನ್ನ ಚಿಕ್ಕಪ್ಪ ರಾಜಶೇಖರ ಹಾಗೂ ಚಿಕ್ಕಪ್ಪನ ಮಕ್ಕಳಾದ ಮಹೇಶ್ ,ಪ್ರವೀಣ್ ವಿರುದ್ದ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆ ಬಳಿಕ ಜಮೀನಿಗೆ ಭೇಟಿ ನೀಡಿದ ರಾಯಚೂರು ಕೃಷಿ ವಿವಿ ತಜ್ಞರ ತಂಡ ಜಮೀನಿನಲ್ಲಿನ ಬೆಳೆ ಪರೀಕ್ಷೆ ನಡೆಸಿ ಕಳೆನಾಶಕ ಸಿಂಪಡಣೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ನೀಡಿದ್ದಾರೆ. ಆದ್ರೂ ಆರೋಪಿಗಳ ವಿರುದ್ದ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಬೆಳೆನಾಶ ಮಾಡಿರುವುದನ್ನು ಒಪ್ಪಿಕೊಂಡರು ಕ್ರಮವಿಲ್ಲ, ಬೆಳೆಹಾನಿ ಪರಿಹಾರವನ್ನೂ ನೀಡುತ್ತಿಲ್ಲ. ತಪ್ಪಿತಸ್ಥರಿಂದ ಬೆಳೆ ಪರಿಹಾರ ಕೊಡಿಸಬೇಕು ಅಂತ ರೈತ ವಿರೂಪಾಕ್ಷಿ ಆಗ್ರಹಿಸಿದ್ದಾರೆ. ಒಟ್ಟಾರೆ ದಾಯಾದಿಗಳ ಕಲಹದಿಂದಾಗಿ ಕೈಗೆ ಬಂದ ತುತ್ತುಬಾಯಿಗೆ ಬರದಂತೆ ಆಗಿದೆ.