ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಚೆರ್ಚೆಯೇ ಇಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ರಾಯಚೂರು (ಫೆ.03): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಚೆರ್ಚೆಯೇ ಇಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ನವೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾವ ಅಕ್ಟೋಬರ್ ಇಲ್ಲ, ನವೆಂಬರ್ ಇಲ್ಲ, ನಮ್ಮಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ ಏನು ಹೇಳುತ್ತದೆಯೋ ಅದು ನಾವು ಕೇಳುತ್ತೇವೆ. ಈ ಬಗ್ಗೆ ಯಾಕೆ ವಿಪಕ್ಷದವರು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಆರ್.ಅಶೋಕಗೆ ಸಾಮಾನ್ಯ ಜ್ಞಾನ ಇದೆಯೇ? ಅವರು ಮಾತನಾಡುವುದಕ್ಕೆ ಏನಾದರೂ ಅರ್ಥ ಇದೆಯೇ? ಅವರ ಪಕ್ಷದ ಬಗ್ಗೆ ನಾವು ಮಾತನಾಡಬಾರದು, ಅಶೋಕ್ ಅವರು ಮೊದಲು ಅವರ ಪಕ್ಷದಲ್ಲಿ ಸಮಸ್ಯೆ ಮೊದಲು ಸರಿಪಡಿಸಲು ಹೇಳಿ, ನಮ್ಮ ಪಕ್ಷದ ಕುರಿತು ದಿನಾಂಕ ಕೊಡುವುದಕ್ಕೆ ನಾಚಿಕೆ ಆಗಬೇಕು, ವಿರೋಧ ಪಕ್ಷದಲ್ಲಿ ಇದ್ದು, ಆರು ಭಾಗ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಇದ್ದವರು ಏನು ಮಾಡಲಿಕ್ಕೆ ಆಗದಂತಹ ಪರಿಸ್ಥಿತಿ ಬಿಜೆಪಿಯಲ್ಲಿದೆ ಎಂದು ಗುಡುಗಿದರು.
ರಾಮುಲು, ರೆಡ್ಡಿ ನಾಯಕರಾಗಲು ಅರ್ಹರಲ್ಲ, ಬಿಜೆಪಿ, ಜೆಡಿಎಸ್‌ನಲ್ಲಿ ಒಳಜಗಳವಿದೆ: ಸಚಿವ ಬೋಸರಾಜು
ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರ ಉತ್ತರಿಸಿ, ಬಿ.ಆರ್. ಪಾಟೀಲ್ ಹಿರಿಯ ಶಾಸಕರಿದ್ದಾರೆ, ಮಹಾತ್ಮ ಗಾಂಧಿ ಸಿದ್ದಾಂತದವರಾಗಿದ್ದಾರೆ. ಸಿಎಂ ಹಾಗೂ ಖರ್ಗೆ ಅವರ ಆಪ್ತರೂ ಆಗಿದ್ದು, ಅನುದಾನ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ. ಅನುದಾನ ಅಂತ ಬಂದಾಗ ರಾಜ್ಯದೆಲ್ಲೆಡೆ ಪಿಡಬ್ಲ್ಯುಡಿಗೆ 4 ಸಾವಿರ ಕೋಟಿ ರು., ಆರ್ಡಿಪಿಎರ್ನಲ್ಲಿ 2 ಸಾವಿರ ಕೋಟಿ ರು. ಬಂದಿದೆ. 6 ಸಾವಿರ ಕೋಟಿ ರು. ಡಿಸೆಂಬರ್-ಜನವರಿಯಲ್ಲಿ ರಿಲೀಸ್ ಆಗಿದೆ. ಎಲ್ಲಾ ಕ್ಷೇತ್ರಗಳಿಗೂ ಕೊಡಲಾಗಿದೆ. ಎಲ್ಲಾ ಎಂಎಲ್ಎ, ಎಂಎಲ್ಸಿಗಳಿಗೂ 2 ಕೋಟಿ ರು. ರಿಲೀಸ್ ಆಗಿದೆ. ಆದರೂ ಅವರು ಮನಸ್ಸಿಗೆ ಹಚ್ಚಿಕೊಂಡಿರಬೇಕು. ಏಕಾಏಕಿ ಈ ತೀರ್ಮಾನಕ್ಕೆ ಏಕೆ ಬಂದಿದ್ದಾರೆಯೋ ಗೊತ್ತಿಲ್ಲ. ಅದು ಏನೇ ಇದ್ದರೂ ಸರಿಪಡಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು.
ಕೇಂದ್ರದ ಬಜೆಟ್ ವಿರುದ್ಧ ಕಿಡಿಕಾರಿದ ಸಚಿವರು, ಇದು ರೈತರ ಪರ ಬಜೆಟ್ ಅಲ್ಲ, ರೈತರು ಮೈಕ್ರೋ ಫೈನಾನ್ಸ್ ಕಡೆ ಹೋಗುವ ಬಜೆಟ್ಟಾಗಿದೆ. ಮೈಕ್ರೋ ಫೈನಾನ್ಸ್ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಲೈನೆನ್ಸ್ ಕೊಟ್ಟಿದೆ. ಅದು ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಡಿಯಲ್ಲಿದೆ. ಇದನ್ನರಿಯದ ರಾಜ್ಯದ ಬಿಜೆಪಿ ನಾಯಕರು ಕೇಂದ್ರದಲ್ಲಿ ಲೋಪದೋಷ ಇದೆ, ಸರಿಪಡಿಸುತ್ತೇವೆ ಎನ್ನುವುದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಒತ್ತು: ಸಚಿವ ಎನ್.ಎಸ್.ಬೋಸರಾಜು
ಮೈಕ್ರೋ ಫೈನಾನ್ಸ್ ಪಡೆದವರುವ ಆತ್ಮಹತ್ಯೆ ಮಾಡಿಕೊಳ್ಳದೇ ಇರುವ ರೀತಿ ಮಾಡುವುದು ಕೇಂದ್ರದ ಜವಾಬ್ದಾರಿಯಾಗಿದೆ. ಶೇ.4 ಪರ್ಸೆಂಟ್‌ನಲ್ಲಿ ನಬಾರ್ಡ್ನಲ್ಲಿ ಸಾಲ ಬರುತ್ತದೆ. ಮೈಕ್ರೋ ಫೈನಾನ್ಸ್ಗಳಲ್ಲಿ ಶೇ.14 ಪರ್ಸೆಂಟ್‌ನಲ್ಲಿ ಏಕೆ ತೆಗೆದುಕೊಳ್ಳುತ್ತಾರೆ.ಸರ್ಕಾರಿ ಸೊಸೈಟಿಗಳಿಂದ ಸಾಲ ಸಿಗದೇ ಇದ್ದಾಗ ಮೈಕ್ರೋ ಫೈನಾನ್ಸ್ ಕಡೆ ಜನ ಹೋಗುತ್ತಾರೆ. ಸಾಲ ಮರುಪಾವತಿಗೆ ರೌಡಿಗಳನ್ನು ಬಳಕೆ ಮಾಡುತ್ತಾರೆ. ಅದಕ್ಕಾಗಿ ಆತ್ಮಹತ್ಯೆಗಳು ಆಗುತ್ತವೆ ಎಂದರು. ಬೆಳಿಗ್ಗೆ ಕೊಟ್ಟು ,ಸಂಜೆ ಸಾಲ ಮರು ಪಾವತಿ ಕೂಡ ಆಗುತ್ತದೆ. ಸಂಜೆ ಐದರ ಬಳಿಕ ಸಾಲ ವಸೂಲಿ ಮಾಡಲಿಕ್ಕೆ ಹೋಗಬಾರದು. ಇದಕ್ಕಾಗಿಯೇ ಸಹಾಯವಾಣಿ ಮಾಡಲಾಗಿದೆ ಎಂದು ಸಚಿವ ಬೋಸರಾಜು ತಿಳಿಸಿದರು.
